* ಸಾಮಾಜಿಕ ಅಂತರ, ಮಾಸ್ಕ್ ಮರೆತು ಲಸಿಕೆಗಾಗಿ ಜನಜಂಗುಳಿ
* ಕಳೆದ ಮೂರು ದಿನಗಳಿಂದ ಎಲ್ಲೆಡೆ ರಶ್
* ತಜ್ಞರು, ಪ್ರಜ್ಞಾವಂತರಲ್ಲಿ ಆತಂಕ ಸೃಷ್ಟಿಸಿದ ಲಸಿಕಾ ಕೇಂದ್ರ
ಶಿವಾನಂದ ಗೊಂಬಿ
ಹುಬ್ಬಳ್ಳಿ(ಮೇ.13): ಕೊರೋನಾ ನಿಯಂತ್ರಣಕ್ಕಾಗಿ ಜನರಿಗೆ ಹಾಕಲಾಗುತ್ತಿರುವ ಲಸಿಕಾ ಕೇಂದ್ರಗಳೇ ಕೋವಿಡ್ ಹಾಟ್‌ಸ್ಪಾಟ್‌ಗಳಾಗುತ್ತಿವೆಯಾ?
undefined
ಲಸಿಕಾ ಕೇಂದ್ರಗಳನ್ನು ನೋಡಿದರೆ ಈ ಪ್ರಶ್ನೆ ಕೇಳಿ ಬರುತ್ತಿದೆ. ಕೊರೋನಾ ಹತೋಟಿಗೆ ತರುವ ಉದ್ದೇಶದಿಂದ ಕೋವಿಶೀಲ್ಡ್, ಕೋವ್ಯಾಕ್ಸಿನ್ ಕೊಡಲಾಗುತ್ತಿದೆ. ಇಷ್ಟು ದಿನ ಲಸಿಕೆಯ ಸಮಸ್ಯೆಯಿರಲಿಲ್ಲ. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಲಸಿಕೆ ಕೊರತೆ ಸಾಕಷ್ಟು ಕಾಡುತ್ತಿದೆ. ಅದರಲ್ಲೂ 18ರಿಂದ 44 ವರ್ಷದವರಿಗೆ ಕೊಡಲು ಶುರು ಮಾಡಿದ ಮೇಲೆ ಲಸಿಕೆ ಕೊರತೆ ವಿಪರೀತವಾಗಿದೆ.
58 ಕೇಂದ್ರಗಳು
ಧಾರವಾಡ ಜಿಲ್ಲೆಯಲ್ಲಿ ಒಟ್ಟು 58 ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಇವುಗಳಲ್ಲಿ 32 ಪ್ರಾಥಮಿಕ ಆರೋಗ್ಯ ಕೇಂದ್ರ, ಚಿಟಗುಪ್ಪಿ ಆಸ್ಪತ್ರೆ ಸೇರಿದಂತೆ 20 ನಗರ ಸಮುದಾಯ ಆರೋಗ್ಯ ಕೇಂದ್ರ, 3 ತಾಲೂಕಾಸ್ಪತ್ರೆ, ಕಿಮ್ಸ್, ಜಿಲ್ಲಾಸ್ಪತ್ರೆ ಹಾಗೂ ರೈಲ್ವೆ ಆಸ್ಪತ್ರೆ ಹೀಗೆ ಒಟ್ಟು 58 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಈ ಮೊದಲು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿತ್ತು. ಆದರೆ ಇದೀಗ ಲಸಿಕೆ ಕೊರತೆಯಿರುವ ಕಾರಣ ಮೇ 1ರಿಂದ ಖಾಸಗಿ ಆಸ್ಪತ್ರೆಗಳಲ್ಲಿನ ಲಸಿಕಾ ಕೇಂದ್ರಗಳನ್ನು ಮುಚ್ಚಲಾಗಿದೆ. ಇದೀಗ ಬರೀ ಈ 58 ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಲಾಗುತ್ತಿದೆ. ಇಲ್ಲಿನ 45 ವರ್ಷ ಮೇಲ್ಪಟ್ಟವರಿಗೆ ಹಾಗೂ ಎರಡನೆಯ ಡೋಸ್ ನೀಡಬೇಕಾದ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ಇನ್ನೂ ಕಳೆದ ನಾಲ್ಕು ದಿನಗಳ ಹಿಂದೆ ಪ್ರಾರಂಭವಾದ 18 ವರ್ಷದಿಂದ 45 ವರ್ಷದೊಳಗಿನ ಯುವಸಮೂಹಕ್ಕೆ ಜಿಲ್ಲಾಸ್ಪತ್ರೆ, ಕಿಮ್ಸ್ ಹಾಗೂ 3 ತಾಲೂಕಾಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುತ್ತಿದೆ.
ಹುಬ್ಬಳ್ಳಿ: ಲೈಫ್‌ಲೈನ್‌ಲ್ಲಿ ಐವರ ಸಾವು ಪ್ರಕರಣ, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ ಡಿಎಚ್‌ಒ
ಜನಜಂಗುಳಿ:
ಇದೀಗ ಜಿಲ್ಲೆಯಲ್ಲಿ ಲಸಿಕೆ ಕೊರತೆಯಾಗುತ್ತಿರುವ ಕಾರಣ ಲಸಿಕಾ ಕೇಂದ್ರಗಳಲ್ಲಿ ಜನಜಂಗುಳಿ ಸೇರುತ್ತಿದೆ. 58 ಕೇಂದ್ರಗಳ ಪೈಕಿ ಕೊಂಚ ಕಿಮ್ಸ್‌ನಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಪರಿಪಾಲನೆಯಾಗುತ್ತಿದೆ. ಉಳಿದಂತೆ ಯಾವ ಲಸಿಕಾ ಕೇಂದ್ರಗಳಲ್ಲೂ ಜನತೆ ಗುಂಪು ಗುಂಪಾಗಿ ಸೇರಿ ಸಾಮಾಜಿಕ ಅಂತರ, ಮಾಸ್ಕ್ ಮರೆತು ಲಸಿಕೆ ಪಡೆಯುವುದು ಗೋಚರವಾಗುತ್ತದೆ. ಚಿತ್ರಮಂದಿರದ ಬಳಿ ಹೊಸ ಚಿತ್ರ ಬಂದಾಗ ಟಿಕೆಟ್‌ಗಾಗಿ ಸೇರುವ ಜನರಂತೆ ಲಸಿಕೆ ಕೇಂದ್ರಗಳಲ್ಲಿ ಕಂಡು ಬರುತ್ತಿದೆ. ಕೊರೋನಾ ಬಾರದಿರಲಿ ಅಥವಾ ನಿಯಂತ್ರಣವಾಗಲಿ ಎಂಬ ಉದ್ದೇಶದಿಂದ ಲಸಿಕೆ ಹಾಕಲಾಗುತ್ತಿದೆ. ಲಸಿಕೆ ಹಾಕಿಸಿಕೊಳ್ಳಲು ತೆರಳುವ ಜನತೆ ಕೂಡ ಲಸಿಕೆ ಹಾಕಿಸಿಕೊಳ್ಳುವಾಗ ಮಾತ್ರ ಮಾಸ್ಕ್ ಧರಿಸಿಕೊಳ್ಳುತ್ತಾರೆಯೇ ಹೊರತು ಲಸಿಕೆಗಾಗಿ ಸರತಿ ಸಾಲಿನಲ್ಲಿ ನಿಂತಾಗ ಮಾಸ್ಕ್ ಹಾಕಿಕೊಳ್ಳುವುದಿಲ್ಲ. ಈ ಸನ್ನಿವೇಶಗಳನ್ನೆಲ್ಲ ನೋಡಿದರೆ ಲಸಿಕಾ ಕೇಂದ್ರಗಳೇ ಕೊರೋನಾ ಹಾಟ್‌ಸ್ಪಾಟ್‌ಗಳಾಗುತ್ತಿವೆಯೇ? ಎಂಬ ಸಂಶಯ ಬರಲಾರಂಭಿಸಿದೆ.
ಸ್ಥಳಾಂತರ ಮಾಡಿ:
ಲಸಿಕಾ ಕೇಂದ್ರಗಳಲ್ಲಿನ ಜನಜಂಗುಳಿ ತಪ್ಪಿಸಬೇಕೆಂದರೆ ಸರ್ಕಾರಿ ಶಾಲೆ ಅಥವಾ ಸರ್ಕಾರಿ ಕಟ್ಟಡಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಬೇಕು ಎಂಬ ಸಲಹೆ ಪ್ರಜ್ಞಾವಂತರದ್ದು. ಆದರೆ ಹೀಗೆ ತೆರೆಯಬೇಕೆಂದರೆ ಲಸಿಕೆ ಲಭ್ಯತೆ ಕೂಡ ನೋಡಿಕೊಳ್ಳಬೇಕಾಗುತ್ತದೆ. ಸದ್ಯ ಈಗಿರುವ ಕೇಂದ್ರಗಳಿಗೆ ಸಮರ್ಪಕವಾಗಿ ಲಸಿಕೆಗಳನ್ನು ಪೂರೈಕೆ ಮಾಡಲು ಆಗುತ್ತಿಲ್ಲ. ಈ ಕಾರಣದಿಂದ ಲಸಿಕಾ ಕೇಂದ್ರಗಳು ರಶ್ ಆಗುತ್ತಿವೆ. ಸರ್ಕಾರ ಲಸಿಕೆಗಳನ್ನು ಸಮರ್ಪಕವಾಗಿ ಪೂರೈಸಿದರೆ ಲಸಿಕಾ ಕೇಂದ್ರಗಳಲ್ಲಿ ಜನಜಂಗುಳಿ ತಾನಾಗಿಯೇ ಕಡಿಮೆಯಾಗುತ್ತದೆ ಎಂಬ ಅಭಿಪ್ರಾಯ ಅಧಿಕಾರಿ ವರ್ಗದ್ದು.
ಒಟ್ಟಿನಲ್ಲಿ ಲಸಿಕಾ ಕೇಂದ್ರಗಳು ಕೂಡ ಕೊರೋನಾ ಹಾಟ್‌ಸ್ಪಾಟ್‌ಗಳಂತೆ ಭಾಸವಾಗುತ್ತಿರುವುದಂತೂ ಸತ್ಯ. ಇನ್ನಾದರೂ ಲಸಿಕಾ ಕೇಂದ್ರಗಳಲ್ಲಿ ರಶ್ ಆಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಆಗ್ರಹ.
ಜನತೆ ಲಸಿಕೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಲಸಿಕಾ ಕೇಂದ್ರಗಳಲ್ಲಿ ಸ್ವಲ್ಪ ರಶ್ ಆಗುತ್ತಿದೆ. ಆದರೂ ನಾವು ಜನಜಂಗುಳಿ ಆಗದಂತೆ ನೋಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಧಾರವಾಡ ಜಿಲ್ಲೆ ವ್ಯಾಕ್ಸಿನ್ ಉಸ್ತುವಾರಿ ಡಾ. ಹೊನಕೇರಿ ತಿಳಿಸಿದ್ದಾರೆ.
ಜಿಲ್ಲೆಗೆ ಅಗತ್ಯವಿರುವಷ್ಟುಲಸಿಕೆ ಪೂರೈಕೆ ಮಾಡಬೇಕು. ಹೆಚ್ಚೆಚ್ಚು ಲಸಿಕಾ ಕೇಂದ್ರಗಳನ್ನು ತೆರೆಯಬೇಕು. ಮಾರುಕಟ್ಟೆಯೆನ್ನೆಲ್ಲ ಬಂದ್ ಮಾಡಿದ್ದಾರೆ. ಲಸಿಕಾ ಕೇಂದ್ರಗಳಲ್ಲಿ ಜನತೆ ಗುಂಪುಗೂಡಿ ನಿಂತಿರುತ್ತದೆ. ಇದರಿಂದ ಲಸಿಕಾ ಕೇಂದ್ರಗಳೇ ಹಾಟ್‌ಸ್ಪಾಟ್‌ನಂತೆ ಭಾಸವಾಗುತ್ತಿವೆ ಎಂದು ನಾಗರಿಕ ಮಂಜುನಾಥ ಪಾಟೀಲ ಹೇಳಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona