
ಅರಸೀಕೆರೆ (ಸೆ.10): ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊ ಲೆ ಮಾಡಿದ್ದ ಪ್ರಕರಣವನ್ನು ಗಂಡಸಿ ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಅರಸೀಕೆರೆ ಗ್ರಾಮಾಂತರ ವ್ಯಾಪ್ತಿಯ ಬಸವನಟ್ಟಿ ಗ್ರಾಮದ ನಿವಾಸಿ ಚೋತ ಬೋವಿ ಅವರ ಪುತ್ರ ಮೋಹನ್ ಕೊಲೆಯಾದ ವ್ಯಕ್ತಿ. ಮೋಹನ್ ಅವರು ಬಸವೇಶ್ವರ ನಗರದ ರಂಗಪ್ಪ ಎಂಬುವರ ಜಮೀನಿನಲ್ಲಿ ಶುಂಠಿ ಬೆಳೆ ಬೆಳೆದಿದ್ದರು. ಪ್ರತಿದಿನ ರಾತ್ರಿ ಜಮೀನಿಗೆ ತೆರಳಿ ನೀರು ಹಾಯಿಸುತ್ತಿದ್ದರು. ಅದೇ ರೀತಿ ಸೆಪ್ಟೆಂಬರ್ 4ರಂದು ರಾತ್ರಿ ಸುಮಾರು 9 ಗಂಟೆಗೆ ಮನೆಯಿಂದ ಜಮೀನಿನತ್ತ ತೆರಳಿದ್ದ ಮೋಹನ್, ರಾತ್ರಿ 9.45ರ ವೇಳೆಗೆ ಜಮೀನಿನ ಸಮೀಪ ತಲೆಗೆ ತೀವ್ರವಾಗಿ ಹೊಡೆದ ಗಾಯಗಳೊಂದಿಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಕುರಿತು ಮೋಹನ್ ಅವರ ಪತ್ನಿ ಜಯಲಕ್ಷ್ಮಿ ಗಂಡಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಪೊಲೀಸರು ಮೃತದೇಹವನ್ನು ಹಾಸನದ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ವಿಧಿವಿಜ್ಞಾನ ತಜ್ಞರ ತಂಡದೊಂದಿಗೆ ಸ್ಥಳ ಮಹಜರು ನಡೆಸಿ, ವಿವಿಧ ಸಾಕ್ಷ್ಯ ಹಾಗೂ ಮಾದರಿಗಳನ್ನು ಸಂಗ್ರಹಿಸಿದ್ದರು.
ಈ ನಡುವೆ ಸೆಪ್ಟೆಂಬರ್ 7ರಂದು ಮೋಹನ್ ಅವರ ಸಹೋದರ ಗಂಡಸಿ ಪೊಲೀಸ್ ಠಾಣೆಗೆ ಮತ್ತೊಂದು ದೂರು ಸಲ್ಲಿಸಿದ್ದರು. ಮೋಹನ್ ಅವರ ಪತ್ನಿ ಜಯಲಕ್ಷ್ಮಿಗೆ ಧನಂಜಯಮೂರ್ತಿ ಎಂಬುವರೊಂದಿಗೆ ಅಕ್ರಮ ಸಂಬಂಧವಿತ್ತು ಎಂಬ ಅನುಮಾನ ಹಾಗೂ ಈ ವಿಚಾರವಾಗಿ ಧನಂಜಯಮೂರ್ತಿ ಮತ್ತು ಆತನ ಸ್ನೇಹಿತ ಜಗದೀಶ್ ಸೇರಿ ಮೋಹನ್ ಅವರನ್ನು ಕೊಲೆ ಮಾಡಿರಬಹುದು ಎಂಬ ಶಂಕೆಯನ್ನು ದೂರಿನಲ್ಲಿ ವ್ಯಕ್ತಪಡಿಸಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಧನಂಜಯಮೂರ್ತಿ ಮತ್ತು ಜಗದೀಶ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಪ್ರಕರಣದ ಕುರಿತು ಮಹತ್ವದ ಮಾಹಿತಿ ಹೊರಬಂದಿದೆ ಎನ್ನಲಾಗಿದೆ.
ವಿಚಾರಣೆಯಲ್ಲಿ ಧನಂಜಯಮೂರ್ತಿ, ಜಗದೀಶ್, ಪುಟ್ಟರಾಜು ಹಾಗೂ ಮೃತ ಮೋಹನ್ ಅವರ ಪತ್ನಿ ಜಯಲಕ್ಷ್ಮಿ ಸೇರಿ ನಾಲ್ವರು ಕೊಲೆಗೆ ಸಂಚು ರೂಪಿಸಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಆರೋಪಿಗಳು ಜಮೀನಿನಲ್ಲಿದ್ದ ಶೆಡ್‌ನಲ್ಲಿ ಕುಳಿತು ಮೋಹನ್ ಅವರನ್ನು ಕೊಲೆ ಮಾಡುವ ಬಗ್ಗೆ ಚರ್ಚಿಸಿದ್ದರು. ಸೆಪ್ಟೆಂಬರ್ 3ರಂದು ಕೊಲೆ ಮಾಡಲು ಯೋಜನೆ ರೂಪಿಸಿದ್ದರೂ, ಅಂದು ಜಮೀನಿನಲ್ಲಿ ಮತ್ತೊಬ್ಬ ವ್ಯಕ್ತಿ ಇದ್ದ ಕಾರಣ ಯೋಜನೆಯನ್ನು ಮುಂದೂಡಿದ್ದರು ಎನ್ನಲಾಗಿದೆ.
ನಂತರ ಸೆಪ್ಟೆಂಬರ್ 4ರಂದು ಪೂರ್ವನಿಯೋಜಿತ ಯೋಜನೆಯಂತೆ ಜಗದೀಶ್, ಮೋಹನ್ ಶುಂಠಿ ತೋಟಕ್ಕೆ ಬರುವುದನ್ನು ಕಾಯ್ದು, ಅವರೊಂದಿಗೆ ಮಾತನಾಡುತ್ತಾ ಗಮನ ಬೇರೆಡೆ ಸೆಳೆದಿದ್ದಾನೆ. ಇದೇ ಸಂದರ್ಭದಲ್ಲಿ ಪುಟ್ಟರಾಜು ಮತ್ತು ಧನಂಜಯಮೂರ್ತಿ ಕಬ್ಬಿಣದ ರಾಡ್‌ನಿಂದ ಮೋಹನ್ ಅವರ ತಲೆಗೆ ಹೊಡೆದಿದ್ದಾರೆ. ಬಳಿಕ ಜಗದೀಶ್ ಕೂಡ ಅದೇ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಮೋಹನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಇದೀಗ ನಾಲ್ವರು ಆರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ತನಿಖೆಯಲ್ಲಿ ಅರಸೀಕೆರೆ ಗ್ರಾಮಾಂತರ ವೃತ್ತ ನಿರೀಕ್ಷಕ ಅರುಣ್ ಕುಮಾರ್ ಎಚ್.ವಿ.,ಗಂಡಸಿ ಪೊಲೀಸ್ ಠಾಣೆಯ ಪಿಎಸ್ಐ ಅರುಣ್,ಹಾಗೂ ಸಿಬ್ಬಂದಿಗಳಾದ ರಘು, ಗುರುಪ್ರಸಾದ್, ಪಾಂಡು, ಜಗದೀಶ್ ಮೂರ್ತಿ, ಬಸವರಾಜ್, ನಾಗೇಂದ್ರ ಸೇರಿದಂತೆ ಪೊಲೀಸ್ ಸಿಬ್ಬಂದಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆರೋಪಿಗಳನ್ನು ತ್ವರಿತವಾಗಿ ಪತ್ತೆಹಚ್ಚಿ ಪ್ರಕರಣ ಭೇದಿಸುವಲ್ಲಿ ತಂಡದ ಕಾರ್ಯಾಚರಣೆ ಯಶಸ್ವಿಯಾಗಿದೆ.