
ಬೆಂಗಳೂರು (ಸೆ.9): ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್ ತೂಗುದೀಪ ಅವರಿಗೆ ಮತ್ತೊಂದು ಕಾನೂನು ತೊಡಕು ಎದುರಾಗಿದೆ. ಮೈಸೂರಿನ ಟಿ.ನರಸೀಪುರ ತಾಲೂಕಿನಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ 'ಪಟ್ಟೆ ತಲೆ ಹೆಬ್ಬಾತುಗಳು' (Bar-headed Geese) ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಹೊರಡಿಸಿರುವ ಸಮನ್ಸ್ ರದ್ದುಗೊಳಿಸುವಂತೆ ಕೋರಿ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಟಿ.ನರಸೀಪುರ ನ್ಯಾಯಾಲಯ ಹೊರಡಿಸಿರುವ ಸಮನ್ಸ್ ಪ್ರಶ್ನಿಸಿ ನಟ ದರ್ಶನ್, ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಆಪ್ತ ನಾಗರಾಜ್ ಅವರು ಹೈಕೋರ್ಟ್‌ಗೆ ಜಂಟಿಯಾಗಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ಪ್ರಕರಣದ ತನಿಖಾಧಿಕಾರಿ ಹಾಗೂ ಮೈಸೂರು ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನು (DCF) ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಪ್ರಸ್ತುತ ಈ ರಿಟ್ ಅರ್ಜಿ ದಾಖಲಾಗಿದ್ದು, ಶೀಘ್ರದಲ್ಲೇ ವಿಚಾರಣೆಗೆ ಬರಲಿದೆ.
ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಫಾರ್ಮ್‌ಹೌಸ್‌ನಲ್ಲಿ ಪಕ್ಷಿಗಳು ಪತ್ತೆಯಾದ ಹಿನ್ನೆಲೆಯನ್ನು ವಿವರಿಸಿರುವ ದರ್ಶನ್, ನಮ್ಮ ಫಾರ್ಮ್‌ಹೌಸ್‌ನಲ್ಲಿ ವಿವಿಧ ತಳಿಯ ಸಾಕು ಹಕ್ಕಿ ಹಾಗೂ ಪ್ರಾಣಿಗಳಿದ್ದವು. ಆ ಹಕ್ಕಿಗಳ ಜೊತೆಗೆ ಎಲ್ಲೆಂದೋ ಹಾರಿ ಬಂದ 4 'ಪಟ್ಟೆ ತಲೆ ಹೆಬ್ಬಾತುಗಳು' ತಾವಾಗಿಯೇ ಬಂದು ಸೇರಿಕೊಂಡಿದ್ದವು. ಅರಣ್ಯ ಇಲಾಖೆ ಅಧಿಕಾರಿಗಳು ಫಾರ್ಮ್‌ಹೌಸ್‌ಗೆ ದಾಳಿ ನಡೆಸಿ ತಪಾಸಣೆ ನಡೆಸಿದ ಮೇಲಷ್ಟೇ ಆ ವಿದೇಶಿ ಮೂಲದ ಹೆಬ್ಬಾತುಗಳು ಅಲ್ಲಿರುವ ವಿಷಯ ನಮಗೂ ತಿಳಿದುಬಂದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಆ ನಾಲ್ಕು ಪಟ್ಟೆ ತಲೆ ಹೆಬ್ಬಾತುಗಳನ್ನು ನಾವು ಅಕ್ರಮವಾಗಿ ತಂದು ಸಾಕಿಲ್ಲ ಹಾಗೂ ನಮಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸುವ ಯಾವುದೇ ಉದ್ದೇಶವಿರಲಿಲ್ಲ. ಆದ್ದರಿಂದ ನಮ್ಮ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ದಾಖಲಿಸಲಾಗಿರುವ ಕ್ರಿಮಿನಲ್ ಪ್ರಕರಣ ಹಾಗೂ ವಿಚಾರಣಾ ನ್ಯಾಯಾಲಯ ನೀಡಿರುವ ಸಮನ್ಸ್ ಅನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮತ್ತು ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ, ಮೈಸೂರು ಫಾರ್ಮ್‌ಹೌಸ್‌ನಲ್ಲಿ ನಿಷೇಧಿತ/ಸಂರಕ್ಷಿತ ವನ್ಯಜೀವಿಗಳನ್ನು ಸಾಕಲಾಗುತ್ತಿತ್ತು ಎಂಬ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಸಮನ್ಸ್ ನೀಡಿರುವುದು ದರ್ಶನ್‌ಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.