ಶಿವಮೊಗ್ಗ: 'ಸಚಿವ ಸ್ಥಾನ ನೀಡದಿರುವುದು ತೀವ್ರ ನೋವಾಗಿದೆ'

By Kannadaprabha News  |  First Published Aug 23, 2019, 10:29 AM IST

ಸಚಿವ ಸ್ಥಾನ ಸಿಗದಿರುವುದು ತೀವ್ರ ಬೇಸರವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ನನಗೆ ಯಾವ ನಿಗಮ ಮಂಡಳಿಗೂ ಬೇಕಾಗಿಲ್ಲ. ಅದು ಎಂದೂ ಸಚಿವ ಸ್ಥಾನಕ್ಕೆ ಪರಾರ‍ಯಯವೂ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಹಾಗೆಯೇ ಪಕ್ಷಕ್ಕೆ ಬದ್ಧವಾಗಿರುವುದಾಗಿ ಅವರು ತಿಳಿಸಿದರು.


ಶಿವಮೊಗ್ಗ(ಆ.23): ನನ್ನ ದೀರ್ಘ ಕಾಲದ ಪಕ್ಷನಿಷ್ಠೆಯ ರಾಜಕಾರಣ ಮತ್ತು ನಾಲ್ಕು ಬಾರಿ ಶಾಸಕನಾಗಿ ಕಾರ್ಯ ನಿರ್ವಹಿಸಿದ ಅನುಭವದ ಮೇಲೆ ಸಚಿವ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆಯಿತ್ತು. ಆದರೆ ಏಕೆ ಸಿಕ್ಕಿಲ್ಲ ಎಂದು ನನಗೆ ಸ್ಪಷ್ಟವಾಗಿ ಗೊತ್ತಿಲ್ಲವಾದರೂ, ಪಕ್ಷದ ಈ ತೀರ್ಮಾನದಿಂದ ತೀವ್ರ ನೋವಾಗಿದೆ ಎಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದಾರೆ.

 45 ವರ್ಷದ ನನ್ನ ವೈಯುಕ್ತಿಕ ಜೀವನ ಮರೆತು ಪಕ್ಷಕ್ಕಾಗಿ ದುಡಿದ ನನಗೆ ಮಾತ್ರವಲ್ಲ, ತೀರ್ಥಹಳ್ಳಿ ಕ್ಷೇತ್ರದ ಜನರಿಗೆ ಮತ್ತು ಮಲೆನಾಡಿನ ಎಲ್ಲರಿಗೂ ಬೇಸರವಾಗಿದೆ. ಸೈದ್ಧಾಂತಿಕವಾಗಿ ಬಿಜೆಪಿಯನ್ನು ವಿರೋಧಿಸುವ ಸಂಘಟನೆಯ ನೇತೃತ್ವದಲ್ಲಿ ಈ ಕಾರಣಕ್ಕಾಗಿಯೇ ಪ್ರತಿಭಟನೆ ನಡೆದಿದೆ ಎಂದರೆ ಜನರ ಭಾವನೆಯನ್ನು ಅರ್ಥ ಮಾಡಿಕೊಳ್ಳಬಹುದು.

Tap to resize

Latest Videos

ಯಾವ ಲಾಬಿಯೂ ಮಾಡಿಲ್ಲ:

ಸಚಿವ ಸ್ಥಾನ ಸಿಗಬೇಕೆಂದು ನಾನು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿಲ್ಲ. ಒಮ್ಮೆಯೂ ಕೇಳಲಿಲ್ಲ. ಯಾವ ಲಾಬಿಯೂ ಮಾಡಲಿಲ್ಲ. ಇದು ಅಗತ್ಯ ಎಂದು ನನಗೆ ಅನಿಸಿಯೂ ಇಲ್ಲ. ಯಡಿಯೂರಪ್ಪನವರಿಗೆ ನನ್ನ ಪಕ್ಷ ನಿಷ್ಠೆ, ಬದ್ಧತೆ, ನೈತಿಕತೆ, ಜನರ ಜೊತೆಗಿನ ಸಂಪರ್ಕ ಎಲ್ಲವೂ ಗೊತ್ತಿದೆ. ಆದರೂ ಸಿಕ್ಕಿಲ್ಲ. ಈ ನೋವನ್ನು ನಾವು ಯಡಿಯೂರಪ್ಪ ಅವರ ಜೊತೆ ವ್ಯಕ್ತಪಡಿಸುತ್ತೇನೆ. ಆ ಸಲಿಗೆ ನನಗಿದೆ ಎಂದು ಹೇಳಿಕೊಂಡರು. 45 ವರ್ಷ ನನ್ನ ವೈಯುಕ್ತಿಕ ಬದುಕನ್ನು ಪಕ್ಷಕ್ಕಾಗಿ ನೀಡಿ ಅದನ್ನು ಈ ಕ್ಷೇತ್ರದಲ್ಲಿ ಬೆಳೆಸಿದ್ದೇನೆ. ಇದನ್ನು ಪಕ್ಷವೇ ಗುರುತಿಸಬೇಕೇ ಹೊರತು ನಾನು ಯಾಕೆ ಲಾಬಿ ಮಾಡಬೇಕು. ಅವರು ಗುರುತಿಸುತ್ತಾರೆ ಎಂಬ ಭರವಸೆ ನನ್ನಲ್ಲಿತ್ತು.

ಶಾಲೆ ಛಾವಣಿ ಕುಸಿತ: ಮಕ್ಕಳ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ನನ್ನ ಕ್ಷೇತ್ರದ ಜನರಿಗೆ ಇದೆಲ್ಲ ಮುಖ್ಯವಾಗುವುದಿಲ್ಲ. ನನ್ನ ಸುದೀರ್ಘ ರಾಜಕಾರಣದ ಬಳಿಕವೂ ನನಗೆ ಸಚಿವ ಸ್ಥಾನ ನೀಡಿಲ್ಲ ಎಂಬುದಷ್ಟೇ ಮುಖ್ಯವಾಗುತ್ತದೆ. ಈಗ ಅವರನ್ನು ಸಮಾಧಾನಪಡಿಸುವ ಹೊಣೆ ನನ್ನದಾಗಿದೆ. ಇದು ಸುಲಭವಲ್ಲವಾದರೂ ಅನಿವಾರ್ಯ. ಈಗ ಸಿಕ್ಕಿಲ್ಲ ಎಂದರೂ, ಮುಂದೆ ಸಿಗಬಹುದು ಎಂಬ ನಿರೀಕ್ಷೆ, ಆಶಾವಾದ ನನಗಿದೆ. ಸಚಿವ ಸ್ಥಾನದಿಂದಲೇ ಜನರ ಸೇವೆ ಮಾಡಬಹುದು ಎಂದು ನಾನು ಅಂದುಕೊಂಡಿಲ್ಲವಾದರೂ, ಈ ವ್ಯವಸ್ಥೆಯಲ್ಲಿ ಸಚಿವ ಸ್ಥಾನ ಎಂಬುದು ಹಿರಿತನಕ್ಕೆ ಸಿಗಬಹುದಾದ ಬೆಲೆ, ಗೌರವ ಎಂದು ಭಾವಿಸುತ್ತೇನೆ ಎಂದು ಹೇಳಿದರು.

ಜಾತಿ, ಲಾಬಿ ಗೊತ್ತಿಲ್ಲ:

ಲಾಬಿ, ಜಾತಿ ರಾಜಕಾರಣ ನನಗೆ ಗೊತ್ತಿಲ್ಲ. ನಾನು ಆ ರೀತಿ ಬೆಳೆದಿಲ್ಲ. ನಿದ್ದೆಗಣ್ಣಿನಲ್ಲಿಯೂ ನಾನು ಆ ರೀತಿ ಯೋಚಿಸುವವನಲ್ಲ. ನಾನು ವಿದ್ಯಾರ್ಥಿ ದಿಸೆಯಿಂದಲೂ ಸಂಘ ಪರಿವಾರದ ನಿಷ್ಠಾವಂತ ಕಾರ್ಯಕರ್ತ. ದೇಶ ಸೇವೆ, ದೇಶ ಭಕ್ತಿ ಇತ್ಯಾದಿಗಳಷ್ಟೇ ನನಗೆ ಮುಖ್ಯ. ಜಾತಿಯನ್ನು ನಾನೆಂದು ಅಸ್ತ್ರವನ್ನಾಗಿ, ಗುರಾಣಿಯನ್ನಾಗಿ ಮಾಡಿಕೊಳ್ಳಲಿಲ್ಲ ಎಂದು ಆರಗ ಹೇಳಿದರು.

ನಿಗಮ ಮಂಡಳಿಗಳ ಬಗ್ಗೆ ಆಸಕ್ತಿಯಿಲ್ಲ:

ನನಗೆ ಯಾವ ನಿಗಮ ಮಂಡಳಿಗೂ ಬೇಕಾಗಿಲ್ಲ. ಅದು ಎಂದೂ ಸಚಿವ ಸ್ಥಾನಕ್ಕೆ ಪರಾರ‍ಯಯವೂ ಅಲ್ಲ. ನನಗೆ ಒಳ್ಳೆಯ ಮಂಡಳಿ ಸಿಗಬೇಕು, ಅದರಿಂದ ಏನೋ ಮಾಡಬೇಕು ಎಂಬ ಭಾವನೆ, ಮನಸ್ಸು ನನಗಿಲ್ಲ. ಹಿಂದೆ ನನಗೆ ಎಂಪಿಎಂ ಅಧ್ಯಕ್ಷ ಸ್ಥಾನ ನೀಡಿದ್ದೇ ಸಾಕಾಗಿ ಹೋಗಿದೆ. ಅಷ್ಟುಅವಧಿ ನನಗೆ ತೃಪ್ತಿ ತರಲಿಲ್ಲ. ಹೀಗಿರುವಾಗ ಅಂತಹ ಮಂಡಳಿಗಳ ಬಗ್ಗೆ ನನಗೆ ಆಲೋಚನೆಯೂ ಇಲ್ಲ.

ಸಿಎಂ ತವರಿನಲ್ಲಿದೆ 10 ವರ್ಷದಿಂದ ಡಾಂಬರು ಕಾಣದ ರಸ್ತೆ, ಬಸ್‌ ಸಂಚಾರವಿಲ್ಲದ ಊರು

ನನ್ನ ಗುರಿ ಅಧಿಕಾರ ಹಿಡಿಯುವುದೇ ಅಲ್ಲ. ನನಗೆ ನ್ಯಾಯೋಚಿತವಾದ ಸ್ಥಾನಮಾನವನ್ನು ಸರಿಯಾದ ಮಾರ್ಗದಲ್ಲಿಯೇ ಹಿರಿಯರಿಗೆ ಮನದಟ್ಟು ಮಾಡಿ ಪಡೆಯುತ್ತೇನೆ. ಸಂಘ ಪರಿವಾರ ಸಚಿವ ಸ್ಥಾನ ಹಂಚಿಕೆಯಲ್ಲಿ ಕೈ ಹಾಕಿಲ್ಲ. ಒಂದು ಪಕ್ಷ ಹಾಗೆ ಹಾಕಿದ್ದರೆ ಖಂಡಿತವಾಗಿಯೂ ನನಗೆ ಸಿಗುತ್ತಿತ್ತು ಎನ್ನುತ್ತಾರೆ ಜ್ಞಾನೇಂದ್ರ. ನನ್ನ ಪಕ್ಷ ನಿಷ್ಠೆ ಈಗಲೂ ಬದಲಾಗುವುದಿಲ್ಲ. ಸಚಿವ ಸ್ಥಾನ ಸಿಗದಿದ್ದರೂ, ಕ್ಷೇತ್ರದ ಕೆಲಸ ಮಾಡಲು ಯಾವುದೇ ತೊಡಕಾಗುವುದಿಲ್ಲ. ಸರ್ಕಾರವನ್ನು ಬಳಸಿಕೊಳ್ಳುತ್ತೇನೆ. ಎಲ್ಲ ಸಚಿವರೂ ನನ್ನ ಸ್ನೇಹಿತರು. ಅಭಿವೃದ್ಧಿಗೆ ತೊಡಕಾಗುವುದಿಲ್ಲ. ಹುದ್ದೆ ಸಿಗಲಿಲ್ಲ ಎಂದು ಬಿಟ್ಟರೆ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ರೀತಿಯ ತೊಡಗಾಗುವುದಿಲ್ಲ ಎಂದು ಸಮಾಧಾನದ ಮಾತುಗಳನ್ನು ಹೇಳಿಕೊಂಡರು.

-ಗೋಪಾಲ್‌ ಯಡಗೆರೆ

click me!