ತುಳುನಾಡಿನ ಆರಾಧ್ಯ ದೈವ ಗುಳಿಗನ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ(Araga jnanedra) ಅವರು ತೀರ್ಥಹಳ್ಳಿಯಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಅಪಮಾನ ಮಾಡಿದ್ದು, ಅವರು ತುಳುನಾಡಿಗೆ ಬಂದು ಬೇಷರತ್ ಕ್ಷಮೆ ಕೇಳಬೇಕು ಎಂದು ತುಳುನಾಡು ಜನರು ಆಗ್ರಹಿಸಿದ್ದಾರೆ.
ಮಂಗಳೂರು (ಮಾ.19) : ತುಳುನಾಡಿನ ಆರಾಧ್ಯ ದೈವ ಗುಳಿಗನ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ(Araga jnanedra) ಅವರು ತೀರ್ಥಹಳ್ಳಿಯಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಅಪಮಾನ ಮಾಡಿದ್ದು, ಅವರು ತುಳುನಾಡಿಗೆ ಬಂದು ಬೇಷರತ್ ಕ್ಷಮೆ ಕೇಳಬೇಕು ಎಂದು ಬೆಳ್ತಂಗಡಿಯ ನಲಿಕೆಯವರ ಸಮಾಜ ಸೇವಾ ಸಂಘ ಆಗ್ರಹಿಸಿದೆ. ಒಂದು ವಾರದೊಳಗೆ ಕ್ಷಮೆ ಕೇಳದಿದ್ದರೆ, ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಸಂಘದ ಅಧ್ಯಕ್ಷ ಎಸ್.ಪ್ರಭಾಕರ್ ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ಗುಳಿಗ ದೈವಕ್ಕೆ ಅವಮಾನ ಮಾಡಿರುವುದು ತುಳುನಾಡಿನ ದೈವಾರಾಧಕರು ಹಾಗೂ ತುಳು ಜನತೆಗೆ ಮಾಡಿದ ಅಪಮಾನವಾಗಿದೆ. ಇತ್ತೀಚೆಗೆ ಉಡುಪಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಪಂಜುರ್ಲಿ, ಗುಳಿಗ ಎಲ್ಲ ದೈವಗಳು ಬಿಜೆಪಿ ಪರವಾಗಿವೆ ಎಂದು ಮಾತನಾಡಿದ್ದಾರೆ. ಕಾಂತಾರ ಸಿನಿಮಾದಿಂದ ನಮ್ಮ ಮೂಲ ದೈವಾರಾಧಣೆಗೆ ಎಲ್ಲ ಕಡೆಗಳಲ್ಲಿ ಸಭೆ, ಸಮಾರಂಭಗಳಲ್ಲಿ ಅವಮಾನ ಆಗುತ್ತಲೇ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗುಳಿಗ ದೈವದ ಬಗ್ಗೆ ನಾನು ಎಲ್ಲೂ ಟೀಕೆ ಮಾಡಿಲ್ಲ: ಆರಗ ಜ್ಞಾನೇಂದ್ರ
ಈಡೇರದ ಪಿಂಚಣಿ ಭರವಸೆ:
ಕರಾವಳಿಯಲ್ಲಿ ನಡೆದ ಭೂತಕೋಲದಲ್ಲಿ ಸ್ವಾಮೀಜಿಯೊಬ್ಬರು ಭೂತಕ್ಕೆ ಮಾಲೆ ಹಾಕುವ ಸಂದರ್ಭ ಅದನ್ನು ದೂರದಿಂದಲೇ ದೈವಕ್ಕೆ ಬಿಸಾಕಿ ಅಪಮಾನ ಮಾಡಿದ್ದಾರೆ. ಕಾಂತಾರ ಸಿನಿಮಾ ಇಮೇಜ್‌ನಿಂದ ದೈವ ನರ್ತಕರಿಗೆ ಮಾಸಿಕ 2 ಸಾವಿರ ರು. ಪಿಂಚಣಿ ಬಗ್ಗೆ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಭರವಸೆ ನೀಡಿದ್ದರು. ಈ ಭರವಸೆ ದೊರೆತು ಆರು ತಿಂಗಳು ಕಳೆದರೂ ಇನ್ನೂ ಈಡೇರಿಲ್ಲ. ಇದು ಕೂಡ ದೈವನರ್ತಕರಿಗೆ ಮಾಡುವ ಅವಮಾನವಾಗಿದೆ ಎಂದರು.
ಯಕ್ಷಗಾನ, ನಾಟಕಗಳಲ್ಲಿ ದೈವ ತರಬೇಡಿ:
ಇತ್ತೀಚಿನ ದಿನಗಳಲ್ಲಿ ಕೊರಗಜ್ಜನ ಕಟ್ಟೆಮಾಡಿ ಹರಕೆಯ ರೂಪದಲ್ಲಿ ದುಡ್ಡು ಮಾಡುವ ದಂಧೆ ಜಾಸ್ತಿಯಾಗಿದೆ. ಯಕ್ಷಗಾನ, ನಾಟಕಗಳಲ್ಲಿ ಕೊರಗಜ್ಜನಿಗೆ ಅವಮಾನವಾಗಿದೆ. ಆದ್ದರಿಂದ ನಾಟಕ, ಯಕ್ಷಗಾನಗಳಲ್ಲಿ ದೈವಕ್ಕೆ ಸಂಬಂಧಿತ ವಿಷಯಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.
ವಿಜಯ ಕುಮಾರ್ ಕೊಡಿಯಾಲಬೈಲ್ ನಿರ್ದೇಶನದ 'ಶಿವದೂತೆ ಗುಳಿಗೆ' ಮಸ್ಕತ್ ನಲ್ಲಿ ಮೇ 12ರಂದು ಪ್ರದರ್ಶನ
ಈ ಕುರಿತು ನಾವು ಜಿಲ್ಲೆಯಲ್ಲಿ ದೈವಾರಾಧಕರ ಸಮಾವೇಶ ಏರ್ಪಡಿಸಿ ಇಂತಹ ಅಪಮಾನ, ಅವಮಾನಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಪೊಲೀಸ್ ಇಲಾಖೆ ಹಾಗೂ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.