ಮಳೆ ಕೊರತೆ, ನದಿಯಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿರುವುದರಿಂದ ರಬಕವಿ-ಬನಹಟ್ಟಿ ತಾಲೂಕಿನ ಮಹಿಷವಾಡಗಿ ಬ್ಯಾರೇಜ್ ಹತ್ತಿರದ ಕೃಷ್ಣೆಯು ಬಯಲಲ್ಲಿದ್ದು ಸಾವಿರಾರು ಮೀನುಗಳು ನಿತ್ಯ ಸಾವನ್ನಪ್ಪುತ್ತಿವೆ. ನೀರು ಸಂಪೂರ್ಣ ಖಾಲಿಯಾಗಿರುವುದರಿಂದ ಇರುವ ನೀರು ಕೊಳಚೆಯಾಗಿ ದುರ್ವಾಸನೆ ಬೀರುತ್ತಿದೆ. ನದಿಯೊಳಗೆ ಅಲ್ಲಲ್ಲಿ ಓಯಾಸಿಸ್‌ನಂತೆ ನಿಂತ ನೀರಿನ ಸುತ್ತ ಸತ್ತ ಮೀನುಗಳು ಎಲ್ಲೆಂದರಲ್ಲಿ ಬಿದ್ದಿವೆ.
ಶಿವಾನಂದ ಮಹಾಬಲಶೆಟ್ಟಿ
ರಬಕವಿ-ಬನಹಟ್ಟಿ(ಜೂ.28): ಮಳೆಯಾಗದ ಹಿನ್ನೆಲೆಯಲ್ಲಿ ಎಲ್ಲೆಡೆ ನೀರಿಗಾಗಿ ಹಾಹಾಕಾರ ಉಂಟಾಗುತ್ತಿದೆ. ಜನರು ನೀರಿಗಾಗಿ ಪರಿತಪಿಸುತ್ತಿದ್ದರೆ, ಜಲಚರಗಳು ನೀರಿಲ್ಲದೇ ಅಸುನೀಗುತ್ತಿವೆ. ಇತ್ತ ಅಂತರ್ಜಲ ಮಟ್ಟಕುಸಿದು ರೈತರ ಹೊಲದ ಬಾವಿಗಳು ಬತ್ತಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
undefined
ಹೌದು, ಮಳೆ ಕೊರತೆ, ನದಿಯಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿರುವುದರಿಂದ ತಾಲೂಕಿನ ಮಹಿಷವಾಡಗಿ ಬ್ಯಾರೇಜ್ ಹತ್ತಿರದ ಕೃಷ್ಣೆಯು ಬಯಲಲ್ಲಿದ್ದು ಸಾವಿರಾರು ಮೀನುಗಳು ನಿತ್ಯ ಸಾವನ್ನಪ್ಪುತ್ತಿವೆ. ನೀರು ಸಂಪೂರ್ಣ ಖಾಲಿಯಾಗಿರುವುದರಿಂದ ಇರುವ ನೀರು ಕೊಳಚೆಯಾಗಿ ದುರ್ವಾಸನೆ ಬೀರುತ್ತಿದೆ. ನದಿಯೊಳಗೆ ಅಲ್ಲಲ್ಲಿ ಓಯಾಸಿಸ್‌ನಂತೆ ನಿಂತ ನೀರಿನ ಸುತ್ತ ಸತ್ತ ಮೀನುಗಳು ಎಲ್ಲೆಂದರಲ್ಲಿ ಬಿದ್ದಿವೆ.
ಬಾಗಲಕೋಟೆ: ಬಾರದ ಮುಂಗಾರು ಮಳೆ, ಆಕಾಶದತ್ತ ಅನ್ನದಾತರ ಚಿತ್ತ..!
ನದಿ ದಡದಲ್ಲಿನ ಕಲ್ಲುಗಳ ಸಂದಿಗಳಲ್ಲಿ, ಕೆಸರಿನಲ್ಲಿ ಮೀನುಗಳು ನೀರಿಲ್ಲದೇ ಸಾವನ್ನಪ್ಪುತ್ತಿವೆ. ಈಗ ನದಿ ಪಾತ್ರದಲ್ಲಿ ಜನರು ಹೋದರೆ ಮೀನುಗಳ ಸತ್ತ ದುರ್ವಾಸನೆ ಹರಡುತ್ತಿದೆ. ನದಿ ಸಂಪೂರ್ಣ ಬರಿದಾಗಿದೆ. ನೀರನ್ನೇ ನಂಬಿದ ಅದೇಷ್ಟೋ ಸರಿಸೃಪಗಳು ಕೃಷ್ಣೆಯ ಮಡಿಲಲ್ಲಿ ಸಾವನ್ನಪ್ಪುತ್ತಿವೆ.
ಸ್ವಲ್ಪ ನೀರಿನಲ್ಲಿನ ಮೀನುಗಳು ಬದುಕುಳಿಯಲು ಬಡಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿರುದನ್ನು ನೋಡಿದರೆ ಎಂತಹ ಕಟುಕನೂ ಕೂಡ ಮಮ್ಮಲ ಮರುಕ ಪಡುತ್ತಾನೆ ಮತ್ತು ನೋವಾಗುತ್ತದೆ. ಮೀನುಗಳು ಕೊಳೆಯಲಾರಂಭಿಸಿದ್ದು, ಇಡೀ ನದಿಯ ಜಲನಯನ ಪ್ರದೇಶವು ದುರ್ವಾಸನೆ ಬೀರುತ್ತಿರುವುದದರಿಂದ ನದಿಯ ಬಳಿ ಒಂದು ನಿಮಿಷಕ್ಕೂ ಹೆಚ್ಚು ಕಾಲ ನಿಲ್ಲುವುದು ಕಷ್ಟವಾಗಿದೆ.
ಬತ್ತಿದ ಬಾವಿಗಳು:
ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದ್ದು, ಬನಹಟ್ಟಿಯ ಕೆರೆಯಲ್ಲಿ ನೀರು ಖಾಲಿಯಾಗಿದೆ. ಜಿಎಲ್‌ಬಿಸಿ ಕಾಲುವೆಗಳಿಗೆ ನೀರು ಬಿಡದೇ ಇರುವುದು, ಕೆರೆ ತುಂಬಿ ಹರಿಯಬೇಕಾದ ಹೆಚ್ಚುವರಿ ನೀರು ಹರಿಯದೇ ಇರುವುದು, ಹಳ್ಳಕ್ಕೆ ನಿರ್ಮಾಣ ಮಾಡಲಾದ ಬಾಂದಾರಗಳು ಸಂಪೂರ್ಣವಾಗಿ ಒಣಗಿರುವುದರಿಂದ ಎಲ್ಲಕ್ಕಿಂತ ಮುಖ್ಯವಾಗಿ ಜೂನ್ ಮುಕ್ತಾಯಕ್ಕೆ ಬಂದರೂ ಮಳೆಯಾಗದೆ ಇರುವುದರಿಂದ ಈ ಭಾಗದಲ್ಲಿ ಅಂತರ್ಜಲ ಮಟ್ಟಸಂಪೂರ್ಣವಾಗಿ ಕುಸಿದಿದ್ದರಿಂದ ಕೊಳವೆ ಬಾವಿ ಮತ್ತು ತೋಟದ ಬಾವಿಗಳಲ್ಲಿಯ ನೀರು ಪೂರ್ತಿಯಾಗಿ ಬತ್ತಿ ಹೋಗುತ್ತಿದ್ದು, ರೈತರು ಮತ್ತು ಜನತೆ ಆತಂಕದಲ್ಲಿದ್ದಾರೆ.
ಬಾರದ ಮುಂಗಾರು, ಮುಧೋಳದಲ್ಲಿ ಜಲಮೂಲಗಳು ಖಾಲಿ ಖಾಲಿ
ಇದರಿಂದ ರೈತರ ನೀರಿನ ಮೂಲಗಳಾದ ಬಾವಿಗಳು ಒಣಗಿರುವುದರಿಂದ ಬೆಳೆಗಳಿಗೆ ನೀರು ಹಾಯಿಸುವುದು ಕಷ್ಟವಾಗಿದೆ. ಈಗಾಗಲೇ ಬಿತ್ತನೆ ಮಾಡಿದ ಬೆಳೆಗಳಿಗೆ ನೀರು ಹಾಯಿಸದೇ ಇರುವುದರಿಂದ ಅವು ಕೂಡಾ ಒಣಗಿವೆ. ಇನ್ನೂ ನಾಟಿ ಮಾಡುವ ಕಾರ್ಯ ಅರ್ಧಕ್ಕೆ ನಿಂತಿದೆ. ಮಳೆಯಾಗದೆ, ಬಾವಿ, ಕೊಳವೆ ಬಾವಿಯಲ್ಲಿ ನೀರು ಇಲ್ಲದೆ ಇರುವುದು ಈ ಬಾರಿ ರೈತರನ್ನು ಸಂಕಷ್ಟಕ್ಕೆ ಇಡುಮಾಡಿದೆ. ಮುಂದಿನ ದಿನಗಳಲ್ಲಿ ರೈತರ ಪರಿಸ್ಥಿತಿ ಇನ್ನಷ್ಟು ಚಿಂತಾಜನಕವಾಗಲಿದೆ ಎನ್ನುತ್ತಾರೆ ರೈತರಾದ ಸಿದ್ದು ಗೌಡಪ್ಪನವರ, ಅಪ್ಪು ಪಾಟೀಲ ಅಂತರ್ಜಲ ಕುಸಿತದ ಕಾರಣಕ್ಕೆ ಕುಡಿಯಲು ನೀರು ಸಿಗದ ಸ್ಥಿತಿ ನಿರ್ಮಾಣವಾದರೆ ಹೇಗೆ? ಎಂಬ ಆತಂಕದಲ್ಲಿ ನಾಗರಿಕರಿದ್ದಾರೆ.
ಮತ್ತೊಂದೆಡೆ ನದಿ ನೀರನ್ನೇ ಅವಲಂಬಿಸಿದ್ದ ಜನರು ಕಳೆದ ಕೆಲ ದಿನಗಳಿಂದ ಕುಡಿಯಲು ಒಂದು ಮಡಿಕೆ ನೀರಿಲ್ಲದೆ ಪರದಾಡುತ್ತಿದ್ದಾರೆ. ಈ ನದಿಯಲ್ಲಿ ಮತ್ತೆ ಮೀನುಗಳ ಆವಾಸ ಸ್ಥಾನವನ್ನು ಅಭಿವೃದ್ಧಿಪಡಿಸಲು ಕನಿಷ್ಠ 5 ವರ್ಷಗಳಾದರೂ ಬೇಕು. ನಮ್ಮ ಕಣ್ಣಿಗೆ ಸಾಯುತ್ತಿರುವ ಮೀನುಗಳನ್ನು ನೋಡಲಾಗದೆ ತೀವ್ರ ನೋವುಂಟು ಮಾಡುತ್ತಿದೆ ಅಂತ ಜಮಖಂಡಿ ಸಾರ್ವಜನಿಕ ಡಾ. ರವಿ ತಿಳಿಸಿದ್ದಾರೆ.