ಆತಂಕ ಸೃಷ್ಟಿಸಿದ ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನ ಸೋಂಕಿತನ ಟ್ರಾವೆಲ್ ಹಿಸ್ಟರಿ| ಮುನಿರಾಬಾದಿಗೆ ಜಿಂದಾಲ್ ನೌಕರನ ಮೂಲಕ ಕೊರೋನಾ ಪ್ರವೇಶ| ಕ್ವಾರಂಟೈನ್ನಲ್ಲಿದ್ದವ ಡ್ಯಾಮ್‌ನ ನಿಷೇಧಿತ ಪ್ರದೇಶದಲ್ಲಿ ಪಾರ್ಟಿ ಮಾಡಿದ್ದ?|
ಮುನಿರಾಬಾದ್(ಜೂ.24): ಗ್ರಾಮದಲ್ಲಿ ವಾಸವಾಗಿರುವ ಜಿಂದಾಲ್ ಉದ್ಯೋಗಿಯೊಬ್ಬರಿಗೆ ಸೋಮವಾರ ಕೋವಿಡ್-19 ದೃಢಪಟ್ಟಿದ್ದು, ಅವರ ಟ್ರಾವೆಲ್ ಹಿಸ್ಟರಿ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಜಿಂದಾಲ್ ಉದ್ಯೋಗಿಯನ್ನು ಕೊಪ್ಪಳದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಮನೆ ಮತ್ತು 5ನೇ ವಾರ್ಡಿನ ಸುತ್ತಮುತ್ತಲಿನ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಇದು ಮುನಿರಾಬಾದ್‌ನ ಮೊದಲ ಕೊರೋನಾ ಸೋಂಕಿನ ಪ್ರಕರಣವಾಗಿದೆ.
ಈ ಸೋಂಕಿತ ತುಂಗಭದ್ರಾ ಅಣೆಕಟ್ಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಯು ವಿಹಾರ ಮಾಡಿದ್ದು ಮಾತ್ರವಲ್ಲದೇ ಐದು ದಿನದ ಹಿಂದೆ ತನ್ನ 10 ಸ್ನೇಹಿತರ ಜೊತೆ ನಿಷೇಧಿತ ಪ್ರದೇಶವಾದ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಪಾರ್ಟಿ ಆಯೋಜಿಸಿದ್ದ ಎನ್ನಲಾಗಿದೆ. ಇದರಲ್ಲಿ 10 ಜನರು ಪಾಲ್ಗೊಂಡಿದ್ದು ಅವರಲ್ಲಿ 8 ಜನ ಗದಗ ಜಿಲ್ಲೆಯವರು, ಉಳಿದಿಬ್ಬರು ಮುನಿರಾಬಾದಿನ ಹಳೇ ಪೊಲೀಸ್ ಠಾಣೆಯ ಹಿಂದೆ ವಾಸವಾಗಿದ್ದು ಅವರನ್ನು ಕ್ವಾರಂಟೈನ್ ಮಾಡಲಾಗಿದೆ.
ಕೊಪ್ಪಳ: 8 ಕೊರೋನಾ ಕೇಸ್ ಪತ್ತೆ, ಅರ್ಧಶತಕದತ್ತ ಮುಖ ಮಾಡಿದ ಮಹಾಮಾರಿ..!
ಜಿಂದಾಲ್‌ನಲ್ಲಿ ಕೊರೋನಾ ಸ್ಫೋಟಗೊಂಡಾಗ ಮುನಿರಾಬಾದ್‌ನಲ್ಲಿರುವ 25 ಜಿಂದಾಲ್ ನೌಕರರನ್ನು ಗ್ರಾಮ ಪಂಚಾಯತಿ ವತಿಯಿಂದ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಇದೀಗ ಸೋಂಕಿಗೊಳಗಾದ ವ್ಯಕ್ತಿ ಕ್ವಾರಂಟೈನ್‌ನಲ್ಲಿದ್ದರೂ ಪ್ರತಿ ದಿನ ತನ್ನ ನಾಯಿಯೊಂದಿಗೆ ಡ್ಯಾಂನಲ್ಲಿ ವಾಯುವಿಹಾರಕ್ಕೆ ಹೋಗುತ್ತಿದ್ದ. ಸುಮಾರು 200 ಜನರು ಇವರ ಸಂಪರ್ಕಕ್ಕೆ ಬಂದಿರಬಹುದೆಂದು ಹೇಳಲಾಗುತ್ತಿದೆ.
ಭದ್ರತಾ ಲೋಪ?:
ನಿಷೇಧಿತ ಪ್ರದೇಶದಲ್ಲಿ ಮದ್ಯದ ಪಾರ್ಟಿ ಆಯೋಜಿಸಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದು ತುಂಗಭದ್ರಾ ಜಲಾಶಯದ ಭದ್ರತೆಯಲ್ಲಿನ ಭಾರಿ ಲೋಪವನ್ನು ತೋರಿಸುತ್ತದೆ. ಭದ್ರತೆ ವಿಚಾರದಲ್ಲಿ ಇಷ್ಟೊಂದು ನಿರ್ಲಕ್ಷ್ಯ ವಹಿಸಿದರೆ ಹೇಗೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ನಾಳೆ ಏನಾದರೂ ಅವಘಡ ಸಂಭವಿಸಿದೆ ಯಾರು ಹೊಣೆ ಎಂದು ಕೇಳುತ್ತಿದ್ದಾರೆ.
ಕ್ವಾರಂಟೈನಲ್ಲಿದ್ದ ವ್ಯಕ್ತಿ ಪ್ರತಿದಿನ ವಾಯುವಿಹಾರ ಮಾಡಿದ್ದೂ ಅಲ್ಲದೆ, ಗುಂಡಿನ ಪಾರ್ಟಿ ಮಾಡಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಜಿಂದಾಲ್‌ನ ಇನ್ನೂ 20 ಸಿಬ್ಬಂದಿ ವರದಿ ಬರಬೇಕಾಗಿದೆ. ಅವರಲ್ಲಿ ಎಷ್ಟುಮಂದಿಗೆ ಸೋಂಕು ದೃಢಪಡಲಿದೆಯೋ ಎಂಬ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ.
ಸೋಂಕು ಹರಡಿದ ವಿಷಯ ತಿಳಿಯುತ್ತಿದ್ದಂತೆ ಮುನಿರಾಬಾದ್‌ನಲ್ಲಿರುವ ಜಿಂದಾಲ್‌ನ 24 ಜನ ಸಿಬ್ಬಂದಿಗೆ ಹೋಂ ಕ್ವಾರಂಟೈನ್ನಲ್ಲಿರಲು ನೋಟಿಸ್ ನೀಡಿದ್ದೇವು. ಅಲ್ಲದೆ, ಎಲ್ಲರ ಕೈಗೆ ಸೀಲ್ ಹಾಕಲಾಗಿತ್ತು. ಆದರೂ, ಸೋಂಕಿತ ವ್ಯಕ್ತಿ ನೋಟಿಸ್ ಪರಿಗಣಿಸದೆ ವಾಯುವಿಹಾರ ಮಾಡಿದ್ದಾರೆ. ಅಲ್ಲದೆ, ಗೆಳೆಯರೊಂದಿಗೆ ಪಾರ್ಟಿ ಮಾಡಿರುವುದನ್ನು ಅವರೇ ಹೇಳಿದ್ದಾರೆ ಎಂದು ಮುನಿರಾಬಾದ್ ಪಿಡಿಒ ಜಯಲಕ್ಷ್ಮಿ ಅವರು ಹೇಳಿದ್ದಾರೆ.