ಅನುಗ್ರಹ ಯೋಜನೆಗೆ ಸರ್ಕಾರದ ಅನುಗ್ರಹವಿಲ್ಲ, ಕುರಿ-ಮೇಕೆಗಳ ಸಾವು: ₹1.86 ಕೋಟಿ ಪರಿಹಾರ ಬಾಕಿ!

Published : Jun 22, 2023, 01:45 PM IST
ಅನುಗ್ರಹ ಯೋಜನೆಗೆ ಸರ್ಕಾರದ ಅನುಗ್ರಹವಿಲ್ಲ, ಕುರಿ-ಮೇಕೆಗಳ ಸಾವು: ₹1.86 ಕೋಟಿ ಪರಿಹಾರ ಬಾಕಿ!

ಸಾರಾಂಶ

ಅನುಗ್ರಹ ಯೋಜನೆಗೆ ಸರ್ಕಾರದ ಅನುಗ್ರಹವಿಲ್ಲ - ಕುರಿ-ಮೇಕೆಗಳ ಸಾವು: .1.86 ಕೋಟಿ ಪರಿಹಾರ ಬಾಕಿ - ಹೊಸ ಅರ್ಜಿ ಸ್ವೀಕರಿಸದಂತೆ ಸರ್ಕಾರದ ಅದೇಶ

ಮಂಡ್ಯ ಮಂಜುನಾಥ

ಮಂಡ್ಯ (ಜೂ.22) ಕುರಿ-ಮೇಕೆ ಸಾವನ್ನಪ್ಪಿದರೆ ಪರಿಹಾರ ನೀಡುವ ಅನುಗ್ರಹ ಯೋಜನೆಗೆ ಸರ್ಕಾರ ಅನುಗ್ರಹ ತೋರುತ್ತಿಲ್ಲ. ವರ್ಷದಿಂದ ಸಾವಿರಾರು ಕುರಿ-ಮೇಕೆಗಳು ಸಾವನ್ನಪ್ಪಿದ್ದರೂ ಬಿಡುಗಾಸು ಪರಿಹಾರದ ಹಣವನ್ನು ಬಿಡುಗಡೆ ಮಾಡಿಲ್ಲ. ಬಿಜೆಪಿ ಸರ್ಕಾರ ಪರಿಹಾರದ ಹಣ ಬಿಡುಗಡೆ ಮಾಡದೆ ಬಾಕಿ ಉಳಿಸಿದ್ದರೆ, ಹೊಸದಾಗಿ ರಚನೆಯಾಗಿರುವ ಕಾಂಗ್ರೆಸ್‌ ಸರ್ಕಾರ ಅರ್ಜಿಗಳನ್ನೇ ಸ್ವೀಕರಿಸದಂತೆ ತಡೆಹಿಡಿದಿದೆ.

ಜಿಲ್ಲೆಯಲ್ಲಿ 3481 ಕುರಿ-ಮೇಕೆಗಳು ಹಾಗೂ 343 ಕುರಿ-ಮೇಕೆ ಮರಿಗಳು ಸಾವನ್ನಪ್ಪಿವೆ. ಇವುಗಳ ಒಟ್ಟು ಪರಿಹಾರ ಹಣ 1.86 ಕೋಟಿ ರು. ಬಾಕಿ ಇದ್ದರೂ ಕಳೆದೊಂದು ವರ್ಷದಿಂದ ಹಣ ಬಿಡುಗಡೆ ಮಾಡಿಲ್ಲ. ಇದರಿಂದ ಕುರಿ-ಮೇಕೆ ಸಾಕಣೆದಾರರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಅಸಹಜವಾಗಿ ಮೃತಪಡುವ ಕುರಿಗಳ ಪರಿಹಾರ ಮೊತ್ತ ಹೆಚ್ಚಳ: ಪ್ರಭು ಚವ್ಹಾಣ್

ರಾಜ್ಯ ಸರ್ಕಾರದ ಅನುಗ್ರಹ ಯೋಜನೆಯಡಿ 3ರಿಂದ 6 ತಿಂಗಳ ಕುರಿ-ಮೇಕೆ ಮರಿಗಳು ಸಾವನ್ನಪ್ಪಿದರೆ 3 ಸಾವಿರ ರು. ಹಾಗೂ 6 ತಿಂಗಳ ಮೇಲ್ಪಟ್ಟು ಕುರಿ-ಮೇಕೆಗಳು ಸಾವನ್ನಪ್ಪಿದರೆ 5 ಸಾವಿರ ರು. ಪರಿಹಾರ ನೀಡಲಾಗುತ್ತಿತ್ತು. 2022ರ ಬಜೆಟ್‌ನಲ್ಲಿ ಅನುಗ್ರಹ ಯೋಜನೆಗೆ ಒಪ್ಪಿಗೆ ದೊರೆತಿದ್ದರೂ ಹಣ ಮಾತ್ರ ಇದುವರೆಗೂ ಬಿಡುಗಡೆಯಾಗಿಲ್ಲ. ಪರಿಹಾರ ಹಣಕ್ಕಾಗಿ 3407 ಫಲಾನುಭವಿಗಳು ಚಾತಕ ಪಕ್ಷಿಗಳಂತೆ ಎದುರುನೋಡುತ್ತಿದ್ದಾರೆ.

1 ಏಪ್ರಿಲ್‌ 2022ರಿಂದ 30 ಮಾಚ್‌ರ್‍ 2023ರವರೆಗೆ ಜಿಲ್ಲೆಯಲ್ಲಿ 1862 ಕುರಿಗಳು, 1619 ಮೇಕೆಗಳು, 100 ಕುರಿ ಮರಿಗಳು, 243 ಮೇಕೆ ಮರಿಗಳು ಸಾವನ್ನಪ್ಪಿವೆ. ಪರಿಹಾರ ಹಣ ಬಾರದಿರುವುದು ಹಾಗೂ ಕಳೆದ ಮಾಚ್‌ರ್‍ನಿಂದ ಕುರಿ-ಮೇಕೆಗಳು ಸಾವನ್ನಪ್ಪಿದ್ದರೂ ಅವುಗಳಿಗೆ ಅರ್ಜಿ ಸ್ವೀಕರಿಸದಂತೆ ತಡೆಹಿಡಿದಿರುವುದರಿಂದ ಸಾಕಣೆದಾರರು ನಷ್ಟಅನುಭವಿಸುತ್ತಿದ್ದಾರೆ.

ನಾಯಿಗಳು-ಚಿರತೆಗಳ ದಾಳಿ:

ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚು ಕುರಿ-ಮೇಕೆಗಳು ಬೀದಿ ನಾಯಿಗಳು, ಚಿರತೆಗಳ ದಾಳಿಗೆ ಬಲಿಯಾಗುತ್ತಿವೆ. ಕೆಲವು ಬಾರಿ ಸಿಡಿಲು ಬಡಿದು ಮೃತಪಟ್ಟಿರುವ ಉದಾಹರಣೆಗಳೂ ಇವೆ. ಕೆಲವೇ ಕೆಲವು ಮಾತ್ರ ರೋಗಗಳಿಂದ ಸಾವನ್ನಪ್ಪುತ್ತಿವೆ.

ಹಳ್ಳಿಗಾಡಿನಲ್ಲಿ ಬೀದಿ ನಾಯಿಗಳ ದಾಳಿಯಿಂದ ಕುರಿ-ಮೇಕೆಗಳನ್ನು ರಕ್ಷಣೆ ಮಾಡುವುದು ಸವಾಲಾಗಿದೆ. ನಾಯಿಗಳ ಹಿಂಡೇ ಕುರಿ-ಮೇಕೆ ಮಂದೆಗಳ ಮೇಲೆ ದಾಳಿ ನಡೆಸುವುದರಿಂದ ಸಾಕಣೆದಾರರು ನಾಯಿಗಳ ಭಯದಲ್ಲೇ ಕುರಿ-ಮೇಕೆಗಳನ್ನು ಕಾಯುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ.

ಚಿರತೆಗಳ ಹಾವಳಿಯೂ ಹೆಚ್ಚಾಗಿದ್ದು, ರಾತ್ರಿ ವೇಳೆ ಕೊಟ್ಟಿಗೆಗೆ ನುಗ್ಗಿ ಕುರಿ-ಮೇಕೆಗಳ ರಕ್ತ ಹೀರುತ್ತಿವೆ. ಚಿರತೆಗಳ ದಾಳಿಯಿಂದಲೂ ಸಾಕಣೆದಾರರು ಕುರಿ-ಮೇಕೆಗಳನ್ನು ಕಳೆದುಕೊಂಡು ನಷ್ಟಅನುಭವಿಸಿದ್ದಾರೆ. ಸರ್ಕಾರದಿಂದ ಸಿಗುವ ಅಲ್ಪಸ್ವಲ್ಪ ಪರಿಹಾರ ಹಣ ಕುರಿ-ಮೇಕೆಗಳ ಸಾವಿನಿಂದ ಉಂಟಾಗುವ ಸಂಪೂರ್ಣ ನಷ್ಟವನ್ನು ತುಂಬಿಕೊಡಲಾಗದಿದ್ದರೂ ಆ ಸಮಯಕ್ಕೆ ಸಾಕಣೆ ಮಾಡುವವರಿಗೆ ಸ್ವಲ್ಪವಾದರೂ ನೆರವಿಗೆ ಬರುತ್ತಿತ್ತು. ಈಗ ಅದಕ್ಕೂ ಸರ್ಕಾರ ಬ್ರೇಕ್‌ ಹಾಕಿ ಸಾಕಣೆದಾರರನ್ನು ಬರಿಗೈ ಮಾಡಿ ಕೂರಿಸಿದೆ.

ಕುಂಟುತ್ತಾ ಸಾಗುತ್ತಾ ಬಂದ ಯೋಜನೆ:

2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಅನುಗ್ರಹ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆರಂಭದ ಒಂದಷ್ಟುವರ್ಷ ಯೋಜನೆ ಉತ್ತಮವಾಗಿ ನಡೆಯಿತು. ಆ ನಂತರದಲ್ಲಿ ಬಿಟ್ಟು ಬಿಟ್ಟು ಯೋಜನೆಯನ್ನು ಮುನ್ನಡೆಸಿಕೊಂಡು ಬರಲಾಯಿತು.

ಸಿದ್ದರಾಮಯ್ಯ ನಂತರ ರಚನೆಯಾದ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರೂ ಯೋಜನೆ ಮುನ್ನಡೆಸಿಕೊಂಡು ಬಂದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದಾಗಲೂ ಯೋಜನೆ ಜಾರಿಯಲ್ಲಿತ್ತು. ಆದರೆ, ಕಳೆದ ವರ್ಷ ಮಾತ್ರ ಈ ಯೋಜನೆಯಡಿ ಫಲಾನುಭವಿಗಳಿಗೆ ನೀಡಬೇಕಾದ 1.86 ಕೋಟಿ ರು. ಪರಿಹಾರ ಹಣವನ್ನು ಬಿಡುಗಡೆ ಮಾಡದೆ ಸರ್ಕಾರ ಬಾಕಿ ಉಳಿಸಿದೆ.

 

ಮಳೆಯಿಂದ ತಪ್ಪಿಸಿಕೊಳ್ಳಲು ಆಸರೆಗೆ ನಿಂತ ಕುರಿಗಳ ಮೇಲೆ ಹರಿದ ರೈಲು, 96 ಕುರಿ ಸಾವು

ಅರ್ಜಿ ಸ್ವೀಕರಿಸಬೇಡಿ:

ನೂತನವಾಗಿ ರಚನೆಯಾಗಿರುವ ಕಾಂಗ್ರೆಸ್‌ ಸರ್ಕಾರ ಕುರಿ-ಮೇಕೆ ಸಾವಿಗೆ ಸಂಬಂಧಿಸಿದಂತೆ ಹೊಸದಾಗಿ ಯಾವುದೇ ಅರ್ಜಿ ಸ್ವೀಕರಿಸಬೇಡಿ ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಆದೇಶಿಸಿದೆ. ಅದರಂತೆ ಹೊಸದಾಗಿ ಯಾವುದೇ ಅರ್ಜಿ ಸ್ವೀಕರಿಸುತ್ತಿಲ್ಲ. ಹಳೆ ಬಾಕಿಯನ್ನೂ ಬಿಡುಗಡೆ ಮಾಡಿಲ್ಲ.

ಪ್ರತಿ ತಿಂಗಳು ನೂರಾರು ಕುರಿ-ಮೇಕೆಗಳು ವಿವಿಧ ಕಾರಣಗಳಿಂದ ಸಾವನ್ನಪ್ಪುತ್ತಿವೆ. ಸಾಕಣೆದಾರರು ಆರ್ಥಿಕವಾಗಿ ನಷ್ಟಅನುಭವಿಸುತ್ತಿದ್ದರೂ ಸರ್ಕಾರ ಅವರ ನೆರವಿಗೆ ನಿಲ್ಲುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಅನುಗ್ರಹ ಯೋಜನೆಗೆ ಈಗ ಅವರೇ ಮುಖ್ಯಮಂತ್ರಿಯಾಗಿದ್ದರೂ ತಡೆಹಿಡಿದಿರುವುದು ವಿಪರ್ಯಾಸದ ಸಂಗತಿ.

ಜಿಲ್ಲೆಯಲ್ಲಿ ಕುರಿ-ಮೇಕೆಗಳ ಸಾವಿನ ವಿವರ

ತಿಂಗಳು ಅರ್ಜಿಗಳು ಕುರಿಗಳು ಮೇಕೆಗಳು ಒಟ್ಟು ಕುರಿಮರಿ ಮೇಕೆಮರಿ ಒಟ್ಟು ಮೊತ್ತ

  • ಏಪ್ರಿಲ್‌-22 177 124 77 201 04 08 12 1047000
  • ಮೇ 180 108 76 184 11 06 17 979500
  • ಜೂನ್‌ 240 121 123 244 08 23 31 1328500
  • ಜುಲೈ 278 156 108 264 12 31 43 1470500
  • ಆಗಸ್ಟ್‌ 301 175 145 320 14 39 53 1785500
  • ಸೆಪ್ಟೆಂಬರ್‌ 382 191 190 381 12 34 46 2066000
  • ಅಕ್ಟೋಬರ್‌ 303 164 150 314 07 16 23 1650500
  • ನವೆಂಬರ್‌ 345 170 178 348 03 26 29 1841500
  • ಡಿಸೆಂಬರ್‌ 380 210 186 396 06 21 27 2074500
  • ಜನವರಿ -23 316 168 141 309 12 17 29 1646500
  • ಫೆಬ್ರವರಿ 252 128 117 245 04 09 13 1279500
  • ಮಾಚ್‌ರ್‍ 253 147 128 275 07 13 20 1445000
  • ಒಟ್ಟು 3407 1862 1619 3481 100 243 343 18605500

ಅನುಗ್ರಹ ಯೋಜನೆಯಡಿ ಕಳೆದೊಂದು ವರ್ಷದಿಂದ ಕುರಿ-ಮೇಕೆಗಳ ಸಾವಿಗೆ ಪರಿಹಾರ ಹಣ ಬಿಡುಗಡೆಯಾಗಬೇಕಿದೆ. ಸುಮಾರು 1.86 ಕೋಟಿ ರು. ಪರಿಹಾರ ವಿತರಿಸುವುದು ಬಾಕಿ ಇದೆ. ಸರ್ಕಾರದಿಂದ ಇದುವರೆಗೆ ಹಣ ಬಿಡುಗಡೆಯಾಗಿಲ್ಲ. ಹೊಸ ಅರ್ಜಿಗಳನ್ನು ಸ್ವೀಕರಿಸದಂತೆ ಸರ್ಕಾರ ಆದೇಶಿಸಿದೆ.

- ಡಾ.ಸಿದ್ದರಾಮು, ಸಹಾಯಕ ನಿರ್ದೇಶಕರು, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ

 

PREV
Read more Articles on
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ