ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ 05 ಕೆಜಿ ಅಕ್ಕಿ ಜತೆಗೆ ಉಳಿದ 05 ಕೆಜಿ ಅಕ್ಕಿಗೆ ಪ್ರತಿ ಕೆಜಿಗೆ 34 ರೂ.ನಂತೆ ದರ ನಿಗದಿಪಡಿಸಿದಂತೆ ಪಡಿತರ ಚೀಟಿಯಲ್ಲಿರುವ ಪ್ರತಿ ಸದಸ್ಯನಿಗೆ ತಲಾ170 ರೂ. ಹಣವನ್ನು ಡಿಬಿಟಿ ಮೂಲಕ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ಪಾವತಿಗೆ ರಾಜ್ಯ ಸರ್ಕಾರವು ಈಗಾಗಲೇ ಚಾಲನೆ ನೀಡಿದ್ದು, ಧಾರವಾಡ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ (ಜು.14): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಡಿ 05 ಕೆಜಿ ಅಕ್ಕಿ ಜತೆಗೆ ಉಳಿದ 05 ಕೆಜಿ ಅಕ್ಕಿಗೆ ಪ್ರತಿ ಕೆಜಿಗೆ 34 ರೂ.ನಂತೆ ದರ ನಿಗದಿಪಡಿಸಿದಂತೆ ಪಡಿತರ ಚೀಟಿಯಲ್ಲಿರುವ ಪ್ರತಿ ಸದಸ್ಯನಿಗೆ ತಲಾ170 ರೂ. ಹಣವನ್ನು ಡಿಬಿಟಿ ಮೂಲಕ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ಪಾವತಿಗೆ ರಾಜ್ಯ ಸರ್ಕಾರವು ಈಗಾಗಲೇ ಚಾಲನೆ ನೀಡಿದ್ದು, ಇದಕ್ಕಾಗಿ ಧಾರವಾಡ ಜಿಲ್ಲೆಯಲ್ಲಿ ಸಹ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆ ಜಾರಿ ಮಾಡಿ ರಾಜ್ಯದಲ್ಲಿರುವ ಅಂತ್ಯೋದಯ ಅನ್ನಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿಗಳ (ಬಿಪಿಎಲ್) ಪ್ರತಿ ಫಲಾನುಭವಿಗೆ ರಾಷ್ಟೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ ಐದು ಕೆಜಿ ಆಹಾರಧಾನ್ಯಯೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ ಐದು ಕೆಜಿ ಆಹಾರ ಧಾನ್ಯ ಸೇರಿಸಿ ಪ್ರತಿ ಮಾಹೆ ಪ್ರತಿ ಫಲಾನುಭವಿಗೆ ಹತ್ತು ಕೆಜಿ ಆಹಾರಧಾನ್ಯವನ್ನು ಉಚಿತವಾಗಿ ವಿತರಿಸಲು ಸರ್ಕಾರವು ನಿರ್ಧರಿಸಿದಂತೆ ಕ್ರಮ ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಅಂತ್ಯೋದಯ ಅನ್ನಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು 05 ಕೆ.ಜಿ ಆಹಾರಧಾನ್ಯದ ಬದಲಾಗಿ ಪ್ರತಿ ಕೆಜಿಗೆ 34 ರೂ ದಂತೆ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್‍ಚಖಾತೆಗೆ ಡಿಬಿಟಿ ಮೂಲಕ ಹಣವನ್ನು ವರ್ಗಾಯಿಸಲು ಆದೇಶಿಸಲಾಗಿದೆ.
5 ಕೆಜಿ ಅಕ್ಕಿ ಬದಲು ಹಣಭಾಗ್ಯ: 3ನೇ ಗ್ಯಾರಂಟಿ ಇಂದು ಆರಂಭ
ಜಿಲ್ಲೆಗೆ 20.77 ಕೋಟಿ ರೂ ಬಿಡುಗಡೆ ಜಿಲ್ಲೆಯಲ್ಲಿರುವ ಅಂತ್ಯೋದಯ ಅನ್ನಭಾಗ್ಯ ಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿ (ಬಿಪಿಎಲ್) ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು 05 ಕೆಜಿ ಆಹಾರಧಾನ್ಯದ ಬದಲಿಗೆ ಕೆಜಿಗೆ 34 ರೂ.ದಂತೆ ಪಡಿತರ ಚೀಟಿಯಲ್ಲಿರುವ ಕುಟುಂಬ ಮುಖ್ಯಸ್ಥರ ಬ್ಯಾಂಕ್‍ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ಪಾವತಿಸಲು ರಾಜ್ಯ ಸರ್ಕಾರವು ಜಿಲ್ಲೆಗೆ ಬರೋಬ್ಬರಿ 20.77 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದು, ಈಗಾಗಲೇ 16.67 ಕೋಟಿ ರೂ.ಗಳನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲು ಜಿಲ್ಲಾ ಖಜಾನೆಗೆ ಕಳಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಪಡಿತರ ಚೀಟಿದಾರರ ಮುಖ್ಯಸ್ಥರು ಹೊಂದಿರುವ ಬ್ಯಾಂಕ್‍ಖ್ಯಾತೆಗೆ ಈ ಹಣವು ವರ್ಗಾವಣೆಯಾಗಲಿದೆ. ಉಳಿದಂತೆ ಬ್ಯಾಂಕ್ ಖಾತೆ ಸರಿಪಡಿಸಿಕೊಳ್ಳುವ ಪಡಿತರ ಫಲಾನುಭವಿಗಳಿಗೂ ಹಣ ಜಮೆ ಆಗಲಿದೆ ಎಂದು ಅವರು ತಿಳಿಸಿದ್ದಾರೆ.
3,87,124 ಲಕ್ಷ ಪಡಿತರ ಚೀಟಿಗಳು: ಜಿಲ್ಲೆಯಲ್ಲಿಒಟ್ಟು 3,57,340 ಆದ್ಯತಾ ಪಡಿತರ ಚೀಟಿಗಳು (ಬಿಪಿಎಲ್), 29,784 ಅಂತ್ಯೋದಯ (ಎಎವೈ) ಪಡಿತರ ಚೀಟಿಗಳಿದ್ದು, ಒಟ್ಟು 13,45,504 ಮಂದಿ ಫಲಾನುಭವಿಗಳಿದ್ದಾರೆ. ಜಿಲ್ಲಾದ್ಯಂತ ಒಟ್ಟು 34,603 ಪಡಿತರ ಚೀಟಿದಾರರಿಗೆ ಬ್ಯಾಂಕ್ ಖಾತೆ ಇಲ್ಲ. ಈಗಾಗಲೇ ಬ್ಯಾಂಕ್‍ಖಾತೆ ಇಲ್ಲದ ಹಾಗೂ ಆಧಾರ್ ಲಿಂಕ್ ಆಗದ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿ ಬ್ಯಾಂಕ್ ಖಾತೆ ಮಾಡಿಸುವಂತೆ ಆದೇಶಿಸಲಾಗಿದೆ. ಮತ್ತು ಬ್ಯಾಂಕ್ ಖಾತೆ ಮಾಡಿಸದ, ಆಧಾರ್ ಲಿಂಕ್ ಮಾಡಿಸದ ಹಾಗೂ ಇನ್ ಆಕ್ಟೀವ್ ಆಗಿರುವ (ಚಾಲನೆ ಇಲ್ಲದ) ಪಡಿತರ ಚೀಟಿದಾರರ ಮಾಹಿತಿಯನ್ನು ಆಯಾ ಪಡಿತರ ಅಂಗಡಿಗಳಿಗೆ ಕಳಿಸಲಾಗಿದ್ದು, ನೇರ ಹಣ ಜಮೆ ಆಗದವರು ಪರಿಶೀಲಿಸಬಹುದು.
ಕೆಲವರು ಬ್ಯಾಂಕ್ ಖಾತೆ ಮಾಡಿಸಿಕೊಂಡಿದ್ದರೂ ಆಧಾರ್ ಲಿಂಕ್ ಆಗದ ಕಾರಣ ಡಿಬಿಟಿ ಮೂಲಕ ನೇರ ನಗದು ವರ್ಗಾವಣೆ ಸಾಧ್ಯವಿಲ್ಲ ಎಂಬುದು ಆಹಾರ ಇಲಾಖೆ ಅಧಿಕಾರಿಗಳ ಪರಿಶೀಲನೆ ವೇಳೆ ಕಂಡು ಬಂದಿದೆ. ಬ್ಯಾಂಕ್ ಖಾತೆ ಇಲ್ಲದವರು ಹಾಗೂ ಬ್ಯಾಂಕ್ ಖಾತೆ ಇದ್ದರೂ ಆಧಾರ್ ಲಿಂಕ್ ಆಗದ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿರುವ ಆಹಾರ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಬ್ಯಾಂಕ್‍ಖಾತೆ ಮಾಡಿಸುವಂತೆ ಸ್ಥಳೀಯ ಅಧಿಕಾರಿಗಳ ಹಾಗೂ ನ್ಯಾಯ ಬೆಲೆ ಅಂಗಡಿಗಳ ಮೂಲಕ ಫಲಾನುಭವಿಗಳಿಗೆ ಸೂಚಿಸಲಾಗಿದೆ.
ಸಾರ್ವಜನಿಕರಿಗೆ ಸೂಚನೆ: ಆಧಾರ್ ಲಿಂಕ್ ಆಗದೇ ಇರುವ ಸಕ್ರೀಯ ಬ್ಯಾಂಕ್‍ಖಾತೆ ಇಲ್ಲದೇ ಇರುವ ಮತ್ತು ಬ್ಯಾಂಕ್ ಇ-ಕೆವೈಸಿ ಆಗದೇ ಇರುವ ಅಂತ್ಯೋದಯ ಅನ್ನಭಾಗ್ಯ ಯೋಜನೆ (ಎಎವೈ) ಮತ್ತು ಆದ್ಯತಾ ಪಡಿತರ ಚೀಟಿ (ಬಿಪಿಎಲ್) ಫಲಾನುಭವಿಗಳು ಜುಲೈ20, 2023ರೊಳಗಾಗಿ ಸರಿಪಡಿಸಿಕೊಳ್ಳಲು ಆಹಾರ ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಅವರು ಎಲ್ಲ ಪಡಿತರ ಅಂಗಡಿ ಮೂಲಕ ಫಲಾಬವಿಗಳಿಗೆ ಸೂಚಿಸಿದ್ದಾರೆ. ಈ ಕುರಿತು ಕ್ರಮವಹಿಸಿ, ತಮ್ಮ ಸಮೀಪದ ರಾಷ್ಟ್ರೀಕೃತ ಬ್ಯಾಂಕ್ ದಲ್ಲಿ ಅಥವಾ ಅಂಚೆಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ದುಡ್ಡಿನ ಭಾಗ್ಯ: ಅಕ್ಕಿ ಬದಲು ಹಣ ನೀಡಿಕೆಗೆ ನಾಳೆ ಚಾಲನೆ
ಡಿಬಿಟಿ ಮೂಲಕ ಹಣ ಜಮೆ ಬಗ್ಗೆ ಪರಿಶೀಲನೆ: ಪಡಿತರ ಚೀಟಿದಾರ ಕುಟುಂಬ ಮುಖ್ಯಸ್ಥರ ಬ್ಯಾಂಕಖಾತೆಗೆ ನೇರ ವರ್ಗಾವಣೆ ಡಿಬಿಟಿ ಮೂಲಕ ಹಣ ಜಮೆ ಆದ ಬಗ್ಗೆ ಪರಿಶೀಲಿಸಲು ಪಡಿತರ ಚೀಟಿದಾರರು https://ahara.kar.nic.in/status_of_dbt.aspx ದಲ್ಲಿ ತಮ್ಮ ಕಾರ್ಡ್ ಸಂಖ್ಯೆ ನಮೂದಿಸಿ ತಿಳಿಯಬಹುದಾಗಿದೆ. ಹಣ ಜಮೆ ಆಗಿರದಿದ್ದಲ್ಲಿ ತಮ್ಮ ಪಡಿತರ ಚೀಟಿಯೊಂದಿಗೆ ಪಡಿತರ ವಿತರಣಾ ಕೇಂದ್ರಕ್ಕೆ ಹಾಗೂ ಖಾತೆ ಹೊಂದಿರುವ ಬ್ಯಾಂಕ್ ಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಳ್ಳಬೇಕು. ಯಾವುದೇ ದಲ್ಲಾಳಿ ಅಥವಾ ಮದ್ಯವರ್ತಿಗಳ ಮೊರೆ ಹೋಗದೇ ನೈರವಾಗಿ ಆಹಾರ ಇಲಾಖೆ ಅಧಿಕಾರಿಗಳನ್ಬು ಭೇಟಿ ಮಾಡಿ, ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ