ಕುಡಿಯುವವರು ಕೆಟ್ಟವರಲ್ಲ, ಕುಡಿತ ಕೆಟ್ಟದ್ದು: ಡಾ. ವೀರೇಂದ್ರ ಹೆಗ್ಗಡೆ

By Kannadaprabha NewsFirst Published Jul 14, 2023, 1:08 PM IST
Highlights

  ಕುಡಿತದ ಚಟ ಇರುವವರು ಕೆಟ್ಟವರಲ್ಲ, ಅವರ ಕುಡಿತ ಕೆಟ್ಟದ್ದು ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಬೆಳ್ತಂಗಡಿ (ಜು.14) :  ಕುಡಿತದ ಚಟ ಇರುವವರು ಕೆಟ್ಟವರಲ್ಲ, ಅವರ ಕುಡಿತ ಕೆಟ್ಟದ್ದು ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಉಜಿರೆ, ಲೌಲದ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ನಡೆಯುತ್ತಿರುವ 204ನೇ ವಿಶೇಷ ಮದ್ಯವರ್ಜನ ಶಿಬಿರದ 6ನೇ ದಿನದಂದು ಆಗಮಿಸಿ ಮಾರ್ಗದರ್ಶನ ನೀಡಿದರು.

ಆಸೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಯಾವುದೇ ರೀತಿಯ ದುಶ್ಚಟಕ್ಕೆ ಬಲಿಯಾಗಲು ಸಾಧ್ಯವಿಲ್ಲ. ಮದ್ಯವ್ಯಸನಿ ಅಮಲೆಂಬ ರೋಗಕ್ಕೆ ಬಲಿಯಾಗಿದ್ದಾನೆ ಎಂದು ಒಪ್ಪಿಕೊಂಡಾಗ ಮಾತ್ರ ಪರಿವರ್ತನೆಯಾಗಲು ಸಾಧ್ಯವಿದೆ. ಸಾಧನೆ ಮತ್ತು ಪ್ರಯತ್ನದಿಂದ ಹಾಗೂ ದೇವರ ಮುಂದೆ ನಿಜವಾದ ಸಂಕಲ್ಪವನ್ನು ಮಾಡಿದಾಗ ನಮಗೆ ಬೇಡಿದೆಲ್ಲವನ್ನು ಆ ಭಗವಂತ ನೀಡುತ್ತಾನೆ. ನಾವು ಸೇವಿಸುವ ಆಹಾರದಲ್ಲಿ ಸಾತ್ವಿಕರಾಗಬಹುದು ಅಥವಾ ತಾಮಸಿಕರಾಗಬಹುದು. ಆದರೆ ಶುದ್ಧವಾದ ಆಹಾರವನ್ನು ಸೇವಿಸಿದಾಗ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಎಂದರು.

ಶಕ್ತಿ ಯೋಜನೆಗೆ ವೀರೇಂದ್ರ ಹೆಗ್ಗಡೆ ಭಾರಿ ಮೆಚ್ಚುಗೆ: ಧರ್ಮಸ್ಥಳಕ್ಕೆ ಸಿದ್ದರಾಮಯ್ಯಗೆ ಆಹ್ವಾನ

ಶಿಬಿರದಲ್ಲಿ ವಿವಿಧ ಜಿಲ್ಲೆಗಳ 75 ಮಂದಿ ಶಿಬಿರಾರ್ಥಿಗಳು ದಾಖಲಾಗಿದ್ದರು. ಶಿಬಿರವನ್ನು 8 ದಿನಗಳ ಕಾಲ ನಡೆಸಲಾಗಿದ್ದು, ವೈಯಕ್ತಿಕ ಸಲಹೆ ಹಾಗೂ ಕೌಟುಂಬಿಕ ಸಲಹೆಯ ಮೂಲಕ ವ್ಯಸನಿಗಳ ವಿಚಾರಗಳನ್ನು ತಿಳಿದು ಮನಃಪರಿವರ್ತನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಶಿಬಿರದಲ್ಲಿ ಯೋಗ, ಧ್ಯಾನ, ವ್ಯಾಯಾಮ, ಪ್ರಾಣಾಯಾಮವನ್ನು ಶ್ರೀ ಧರ್ಮಸ್ಥಳ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಡಾ. ಅಭಿಷೇಕ್‌, ಮನೋವೈದ್ಯಕೀಯ ಚಿಕಿತ್ಸೆಯನ್ನು ಸುಮನ್‌ ಪಿಂಟೋ, ಡಾ. ಜೋನಾಥನ್‌ ಮತ್ತು ಡಾ. ಮನಾಲಿ ನೀಡಿದರು. ವೈದ್ಯಾಧಿಕಾರಿಯಾಗಿ ಧರ್ಮಸ್ಥಳ ಆಸ್ಪತ್ರೆ ಉಜಿರೆಯ ಡಾ. ಬಾಲಕೃಷ್ಣ ಭಟ್‌, ಡಾ. ಮೋಹನ್‌ದಾಸ್‌ ಸಹಕಾರ ನೀಡಿದರು.

ಆಲ್ಕೋಹಾಲ್ ಜೊತೆ ಸೋಡಾ, ಕೋಲ್ಡ್ ಡ್ರಿಂಕ್ಸ್ ಮಿಕ್ಸ್ ಮಾಡ್ತೀರಾ? ತಪ್ಪು ತಪ್ಪು

ಶಿಬಿರದಲ್ಲಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್‌ ವಿ. ಪೌಸ್‌, ಯೋಜನಾಧಿಕಾರಿ ಮೋಹನ್‌, ಶಿಬಿರಾಧಿಕಾರಿ ರಾಜೇಶ್‌, ಆರೋಗ್ಯ ಸಹಾಯಕಿ ಪ್ರೆಸಿಲ್ಲಾ ಡಿಸೋಜ ಸಹಕರಿಸಿದರು. ಕಾರ್ಯಕ್ರಮದಲ್ಲಿ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿಉಪಸ್ಥಿತರಿದ್ದರು. ಮುಂದಿನ ವಿಶೇಷ ಶಿಬಿರವು ಜುಲೈ 17ರಂದು ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.

click me!