ಅಂಜನಾದ್ರಿಯನ್ನು ತಿರುಪತಿ ತಿಮ್ಮಪ್ಪನ ದೇಗುಲ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಾಗಿ ಗಂಗಾವತಿ ನೂತನ ಶಾಸಕ ಜನಾರ್ದನ ರೆಡ್ಡಿ ಹೇಳಿದರು.
ಗಂಗಾವತಿ (ಮೇ.29) : ಅಂಜನಾದ್ರಿಯನ್ನು ತಿರುಪತಿ ತಿಮ್ಮಪ್ಪನ ದೇಗುಲ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಾಗಿ ಗಂಗಾವತಿ ನೂತನ ಶಾಸಕ ಜನಾರ್ದನ ರೆಡ್ಡಿ ಹೇಳಿದರು.
ಕನಕಗಿರಿ ರಸ್ತೆಯ ಕೆಆರ್‌ಪಿಪಿ ಕಚೇರಿಯಲ್ಲಿ ಜರುಗಿದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
undefined
ಅಂಜನಾದ್ರಿ ದೇವಸ್ಥಾನ(Anjanadri betta)ವನ್ನು ತಿರುಪತಿ(Tirupati temple) ತಿಮ್ಮಪ್ಪನ ದೇವಸ್ಥಾನದ ಮಾದರಿಯಲ್ಲಿ ಅಭಿವೃದ್ಧಿ ಪಡಿಸುತ್ತೇನೆ. ಕ್ಷೇತ್ರದ ಜನರಿಗೆ ಮನೆ ಕಟ್ಟಿಸಿ ಕೊಡಲಾಗುತ್ತದೆ. ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು ಗಂಗಾವತಿ ತಾಲೂಕಿನ ಇರಕಲಗಡ, ಕಿನ್ನಾಳ, ಆನೆಗೊಂದಿ ಹಾಗೂ ವೆಂಕಟಗಿರಿ ಗ್ರಾಮಗಳಲ್ಲಿ ಶಾಸಕರ ಕಚೇರಿ ಆರಂಭಿಸುತ್ತೇನೆ. ಈ ಮೂಲಕ ಜನರು ಪದೇ ಪದೇ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುತ್ತೇನೆ ಎಂದರು.
ಸಿದ್ದರಾಮಯ್ಯ ಸಿಎಂ ಆಗುವ ಸಾಧ್ಯತೆ ಇದ್ದರೆ ಬೆಂಬಲ: ಜನಾರ್ದನ ರೆಡ್ಡಿ
ಈ ಬಾರಿಯ ಚುನಾವಣೆಯಲ್ಲಿ ಜನರು ಕಾಂಗ್ರೆಸ್ಸಿಗೆ ಮತ ಹಾಕಲಿಲ್ಲ, ಅವರ ಗ್ಯಾರಂಟಿಗಳಿಗೆ ಮತ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಅಭಿವೃದ್ಧಿ ನೋಡಿ ಎಲ್ಲರೂ ನಮಗೆ ಮತ ಹಾಕಬೇಕು, ಹಾಗೆ ಕೆಲಸ ಮಾಡಿ ತೋರಿಸುತ್ತೇನೆ ಎಂದು ರೆಡ್ಡಿ ಭರವಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೆಆರ್‌ಪಿಪಿ ಕೊಪ್ಪಳ ಜಿಲ್ಲಾಧ್ಯಕ್ಷ ಮನೋಹರಗೌಡ, ಗ್ರಾಮೀಣ ಅಧ್ಯಕ್ಷ ದುರ್ಗಪ್ಪ, ವೀರೇಶ್ ಬಲಕುಂದಿ ಮಾತನಾಡಿದರು. ಯಮನೂರು ಚೌಡಕಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಲೋಕಲ್ ಎಲೆಕ್ಷನ್‌ಗೆ ರೆಡ್ಡಿ ಸಿದ್ಧತೆ!
ಕೆ.ಎಂ. ಮಂಜುನಾಥ್
ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದಿಂದ ಪತ್ನಿಯನ್ನು ಅಖಾಡಕ್ಕೆ ಇಳಿಸಿದ್ದ ಕೆಆರ್‌ಪಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ, ಮುಂಬರುವ ಜಿಲ್ಲಾ ಹಾಗೂ ತಾಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಕಣಕ್ಕಿಳಿಸಲು ಮುಂದಾಗಿದ್ದಾರೆ. ಚುನಾವಣೆಯಲ್ಲಿ ಕೆಆರ್‌ಪಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಂಡು ಸ್ಥಳೀಯ ಸಂಸ್ಥೆಗಳನ್ನು ಸಂಪೂರ್ಣ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂದು ರೆಡ್ಡಿ ನಿರ್ಧರಿಸಿದ್ದು, ಈ ಸಂಬಂಧ ಮತ್ತೊಂದು ಚುನಾವಣಾ ವ್ಯೂಹ ರಚಿಸಲು ಮುಂದಾಗಿದ್ದಾರೆ.
ಅಕ್ರಮ ಗಣಿಗಾರಿಕೆ ಆರೋಪದಡಿ ಚುನಾವಣೆ ರಾಜಕೀಯದಿಂದ ದೂರ ಉಳಿದ ಜನಾರ್ದನ ರೆಡ್ಡಿ ರಾಜಕೀಯದಿಂದ ಮರೆಯಾದರು ಎಂದುಕೊಳ್ಳುತ್ತಿರುವಾಗಲೇ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಗಿಳಿದು ಗೆಲುವು ಪಡೆದರಲ್ಲದೆ, ಬಳ್ಳಾರಿ ಜಿಲ್ಲೆಯ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಮತಗಳನ್ನು ಪಡೆದು ಗಮನ ಸೆಳೆದರು.
ಇದು ರೆಡ್ಡಿಗೆ ಜಿಲ್ಲೆಯಲ್ಲಿ ತನ್ನ ರಾಜಕೀಯ ಶಕ್ತಿಯನ್ನು ವಿಸ್ತರಿಸಿಕೊಳ್ಳಲು ಪ್ರೇರಣೆ ನೀಡಿದಂತಾಗಿದ್ದು, ಇನ್ನು ಮುಂದೆ ಬರುವ ಎಲ್ಲ ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ಯೋಚನೆ ಮಾಡಿದ್ದಾರೆ.
ಮತ್ತೆ ಸಾಮೂಹಿಕ ವಿವಾಹ:
ತಮ್ಮ ರಾಜಕೀಯ ಬೆಳವಣಿಗೆಗೆ ವರಮಹಾಲಕ್ಷ್ಮೇ ಪೂಜೆಯೇ ದೊಡ್ಡ ಶಕ್ತಿ ನೀಡಿತು ಎಂದರಿತಿರುವ ಜನಾರ್ದನ ರೆಡ್ಡಿ, ಈ ವರ್ಷದಿಂದ ಪ್ರತಿಬಾರಿ ವರಮಹಾಲಕ್ಷ್ಮೇ ಪೂಜೆ ಹಾಗೂ ನೂರಾರು ಉಚಿತ ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಮೂಲಕ ಹಳೆಯ ವೈಭವ ಮರುಕಳಿಸುವ ಕಾರ್ಯಕ್ಕೆ ಸಜ್ಜಾಗಿದ್ದಾರೆ.
ಸಾಮೂಹಿಕ ವಿವಾಹ ಹಿನ್ನೆಲೆ ಬಳ್ಳಾರಿಗೆ ತೆರಳಲು ಅವಕಾಶ ನೀಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿರುವ ರೆಡ್ಡಿ, ತೆರೆಮರೆಯಲ್ಲಿಯೇ ಉಚಿತ ಸಾಮೂಹಿಕ ವಿವಾಹಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ನ್ಯಾಯಾಲಯ ರೆಡ್ಡಿ ಅವರಿಗೆ ಬಳ್ಳಾರಿಗೆ ಬರಲು ಅವಕಾಶ ನೀಡದಿದ್ದಲ್ಲಿ ಪತ್ನಿ ಲಕ್ಷ್ಮೇಅರುಣಾ ಅವರ ನೇತೃತ್ವದಲ್ಲಿಯೇ ಈ ಕಾರ್ಯಕ್ರಮ ಜರುಗಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಇತ್ತೀಚೆಗೆ ಗಂಗಾವತಿಯಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿರುವ ಜನಾರ್ದನ ರೆಡ್ಡಿ, ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳನ್ನು ಆರಂಭಗೊಳಿಸಿ, ಗಣಿ ಜಿಲ್ಲೆಯ ಗತವೈಭವದ ಪುನರಾರಂಭಕ್ಕೆ ಚಾಲನೆ ನೀಡಲಾಗುವುದು. ಮುಂಬರುವ ವರಮಹಾಲಕ್ಷ್ಮೇ ಹಬ್ಬದ ದಿನದಂದು ಸಾಮೂಹಿಕ ವಿವಾಹ ಏರ್ಪಡಿಸಲಾಗುವುದು. ಬಳ್ಳಾರಿ ಜನತೆ ಯಾರಿಗೂ ಹೆದರುವ ಅಗತ್ಯವಿಲ್ಲ ಎಂದು ಘೋಷಿಸಿದ್ದಾರೆ.
ಕೆಆರ್‌ಪಿಪಿ ಬಾಗಿಲಿಗೆ ಕಾಂಗ್ರೆಸ್, ಬಿಜೆಪಿ ಸದಸ್ಯರು: ನಗರಸಭೆ ತೆಕ್ಕೆಗೆ ತೆಗೆದುಕೊಳ್ಳಲು ರೆಡ್ಡಿ ಪ್ಲಾನ್!
ಬಳ್ಳಾರಿಯಲ್ಲಿ ಉಚಿತ ಸಾಮೂಹಿಕ ವಿವಾಹ ಕೈಗೊಳ್ಳುವ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಕರೆದು ವರಮಹಾಲಕ್ಷ್ಮೇ ಪೂಜೆ ಹಾಗೂ ಸಾಮೂಹಿಕ ವಿವಾಹದ ಸಿದ್ಧತೆ ಕುರಿತು ಚರ್ಚಿಸಿ, ಜವಾಬ್ದಾರಿ ಹಂಚಿಕೆ ಮಾಡುತ್ತೇವೆ. ಮುಂಬರುವ ಜಿಲ್ಲಾ ಹಾಗೂ ತಾಪಂ ಚುನಾವಣೆಗೆ ಸಿದ್ಧರಾಗುತ್ತಿದ್ದೇವೆ.
ರಾಜಶೇಖರಗೌಡ ಗೋನಾಳ್, ಜಿಲ್ಲಾಧ್ಯಕ್ಷ, ಕೆಆರ್‌ಪಿಪಿ, ಬಳ್ಳಾರಿ