ಸಿದ್ದು ಸರ್ಕಾರದ ಮಹತ್ವಾಕಾಂಕ್ಷಿ ಕ್ಷೀರಭಾಗ್ಯ ಯೋಜನೆ 5 ತಿಂಗಳಿಂದ ಸ್ಥಗಿತ..!

By Kannadaprabha News  |  First Published Feb 4, 2024, 4:00 AM IST

ಕರ್ನಾಟಕ ಮಿಲ್ಕ್ ಫೆರಡೇಶನ್ (ಕೆಎಂಎಫ್)ನಿಂದ ಜಿಲ್ಲೆಯ ಅಂಗನವಾಡಿಗಳಿಗೆ ಹಾಲಿನ ಪೌಡರ್ ನೀಡಲಾಗುತ್ತಿತ್ತು. ಆದರೆ ಕಳೆದ ೫ ತಿಂಗಳಿನಿಂದ ಪೂರೈಕೆ ಸ್ಥಗಿತವಾಗಿದ್ದು, ಅಂಗನವಾಡಿ ಮಕ್ಕಳಿಗೆ ಹಾಲು ಇಲ್ಲದಂತಾಗಿದೆ.


ಜಿ.ಡಿ. ಹೆಗಡೆ

ಕಾರವಾರ(ಫೆ.04): ಅಂಗನವಾಡಿಯ ೩ರಿಂದ ೬ ವರ್ಷದ ಮಕ್ಕಳಿಗೆ ಹಾಲು ಪೂರೈಸುತ್ತಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಕ್ಷೀರಭಾಗ್ಯ ಯೋಜನೆ ಕಳೆದ ಐದು ತಿಂಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಥಗಿತವಾಗಿದೆ! ಕರ್ನಾಟಕ ಮಿಲ್ಕ್ ಫೆರಡೇಶನ್ (ಕೆಎಂಎಫ್)ನಿಂದ ಜಿಲ್ಲೆಯ ಅಂಗನವಾಡಿಗಳಿಗೆ ಹಾಲಿನ ಪೌಡರ್ ನೀಡಲಾಗುತ್ತಿತ್ತು. ಆದರೆ ಕಳೆದ ೫ ತಿಂಗಳಿನಿಂದ ಪೂರೈಕೆ ಸ್ಥಗಿತವಾಗಿದ್ದು, ಅಂಗನವಾಡಿ ಮಕ್ಕಳಿಗೆ ಹಾಲು ಇಲ್ಲದಂತಾಗಿದೆ.

Latest Videos

undefined

ಕೆಎಂಎಫ್ ಧಾರವಾಡ ಘಟಕವು ಹಾವೇರಿ, ಗದಗ, ಉತ್ತರ ಕನ್ನಡ, ಹುಬ್ಬಳ್ಳಿ-ಧಾರವಾಡದಿಂದ ಹಾಲನ್ನು ಸಂಗ್ರಹಿಸಿ ಸಂಸ್ಕರಣೆ ಮಾಡಿ ವಿವಿಧ ಉತ್ಪನಗಳನ್ನು ತಯಾರಿಸುತ್ತದೆ. ಅದರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಅಂಗವಾಡಿಗಳಿಗೆ ಬರುವ ೩ರಿಂದ ೬ ವರ್ಷದ ಮಕ್ಕಳಿಗೆ ನೀಡಲಾಗುವ ಮಿಲ್ಕ್ ಪೌಡರ್ ಕೂಡಾ ಒಂದು. ಕಳೆದ ೫ ತಿಂಗಳಿನಿಂದ ಕೆಎಂಎಫ್‌ನಿಂದ ಪೌಡರ್ ಪೂರೈಕೆ ನಿಲ್ಲಿಸಲಾಗಿದೆ. ಆಗಸ್ಟ್‌ ೨೦೨೩ಕ್ಕೆ ಪೂರೈಕೆಯಾಗಿರುವುದು ಕೊನೆ.

ಪಂಚಗಂಗಾ ಎಕ್ಸ್‌ಪ್ರೆಸ್‌ಗೆ ಇನ್ನೂ 8 ಕೋಚ್‌ಗಳನ್ನು ಸೇರಿಸಿ: ಶಿವಮೊಗ್ಗ ಸಂಸದರ ಆಗ್ರಹ!

ಜಿಲ್ಲೆಯಲ್ಲಿ ೯೬ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಮುಖ್ಯವಾಗಿ ಅಪೌಷ್ಟಿಕತೆ ಇರುವ ಮಕ್ಕಳಿಗೆ ಅದರಿಂದ ಹೊರಬರಲು ಮೊಟ್ಟೆ, ಶೇಂಗಾ ಚಿಕ್ಕಿ, ಮೊಳಕೆ ಕಾಳು ಜತೆಗೆ ವಾರದಲ್ಲಿ ೫ ದಿನ ಪ್ರತಿ ಮಗುವಿಗೆ ೨೦೦ ಮಿ.ಲೀ. ಹಾಲನ್ನು ನೀಡುವ ಕಾರ್ಯಕ್ರಮ ಜಾರಿಗೆಯಲ್ಲಿದೆ. ಆದರೆ, ಕಳೆದ ಸೆಪ್ಟೆಂಬರ್ ೨೦೨೩ರಿಂದ ಹಾಲಿನ ಪೌಡರ್ ಕೆಎಂಎಫ್‌ನಿಂದ ಸಂಬಂಧಿಸಿದ ಇಲಾಖೆಗೆ ಪೂರೈಕೆ ಆಗಿಲ್ಲ. ಕೆಲವು ಮಕ್ಕಳಿಗೆ ಮೊಟ್ಟೆ ಸೇವನೆ ಅಭ್ಯಾಸವಿರುವುದಿಲ್ಲ. ಅಂಥವರಿಗೆ ಹಾಲು, ಮೊಳಕೆ ಕಾಳು ಬಹುಮುಖ್ಯವಾಗಿದ್ದು, ಹಾಲು ಅಥವಾ ಹಾಲಿನ ಪೌಡರ್‌ ಪೂರೈಕೆ ಮಾಡದೇ ಇದ್ದರೆ ಅಂಗನವಾಡಿಗಳಲ್ಲಿ ಮಕ್ಕಳಿಗೆ ಹಾಲು ನೀಡಲು ಸಾಧ್ಯವಾಗುವುದಿಲ್ಲ.

ಮೂರು ವರ್ಷಗಳ ಆನಂತರ ಅಂಗನವಾಡಿಗೆ ಬರುವ ಮಗುವಿನ ಬೆಳವಣಿಗೆಯಾಗಲು, ರೋಗನಿರೋಧಕ ಶಕ್ತಿ ಹೆಚ್ಚಾಗಲು ವಾರದಲ್ಲಿ ೫ ದಿನ ಹಾಲಿನ ಪೌಡರ್‌ನಿಂದ ತಯಾರಿಸಿದ ಹಾಲನ್ನು ನೀಡಲಾಗುತ್ತಿತ್ತು. ಹಾಲಿನ ಪೌಡರ್ ಪೂರೈಕೆ ಸ್ಥಗಿತವಾದ ಕಾರಣ ಸರ್ಕಾರದ ಮಹಾತ್ವಾಕಾಂಕ್ಷಿ ಕ್ಷೀರಭಾಗ್ಯ ಯೋಜನೆಗೆ ಗ್ರಹಣ ಹಿಡಿದಂತಾಗಿದೆ.

ಬೇರೆಯವರ ಅನುಕರಣೆಯಿಂದ ಬ್ರಾಹ್ಮಣರು ತಮ್ಮತನ ಕಳೆದುಕೊಳ್ಳುತ್ತಿದ್ದಾರೆ: ಸ್ವರ್ಣವಲ್ಲಿ ಶ್ರೀಗಳು ಕಳವಳ

ಹಾಲು, ಮೊಸರಿಗೆ ಹೆಚ್ಚಿನ ಬೇಡಿಕೆ...

ಕನ್ನಡಪ್ರಭದೊಂದಿಗೆ ಮಾತನಾಡಿದ ಕೆಎಂಎಫ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಅಂಗನವಾಡಿಗಳಿಗೆ ಪೌಡರ್ ಪೂರೈಕೆ ಆಗದೇ ಇರುವ ಬಗ್ಗೆ ಗಮನಕ್ಕೆ ಬಂದಿದೆ. ಹಾಲಿನ ಉತ್ಪಾದನೆಯ ಕೊರತೆಯಾದ ಕಾರಣ ಪೌಡರ್ ತಯಾರಿಸುವ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಮಹಾಮಂಡಳದಿಂದಲೂ ಪೂರೈಕೆಯಾಗುತ್ತಿಲ್ಲ. ಧಾರವಾಡ ವಿಭಾಗಕ್ಕೆ ೧.೩೨ ಲಕ್ಷ ಲೀ. ಹೈನುಗಾರರದಿಂದ ಬರುತ್ತದೆ. ಆದರೆ ಮಾರುಕಟ್ಟೆಯಲ್ಲಿ ೧.೮೦ ಲಕ್ಷ ಲೀ. ಹಾಲು, ಮೊಸರಿಗೆ ಬೇಡಿಕೆಯಿದೆ. ಹೀಗಾಗಿ ವ್ಯತ್ಯಯ ಉಂಟಾಗಿದೆ. ಆದಷ್ಟು ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದರು.

ಜಿಲ್ಲೆಗೆ ಆಗಸ್ಟ್‌ ತಿಂಗಳ ಆನಂತರ ಕೆಎಂಎಫ್‌ನಿಂದ ಹಾಲಿನ ಪೌಡರ್ ಪೂರೈಕೆ ಆಗಿಲ್ಲ. ಎಲ್ಲ ಕಡೆ ಈ ಸಮಸ್ಯೆ ಆಗಿರುವ ಬಗ್ಗೆ ತಿಳಿದು ಬಂದಿದೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಡಾ. ಎಚ್.ಎಚ್. ಕುಕ್ನೂರ್ ತಿಳಿಸಿದ್ದಾರೆ. 

click me!