ಬಾಗಲಕೋಟೆ: ಅಂಗನವಾಡಿಗಳಿಗೆ ಬೇಕಿದೆ ಸ್ವಂತ ಕಟ್ಟಡ..!

By Kannadaprabha NewsFirst Published Feb 1, 2023, 8:30 PM IST
Highlights

ಬಾಗಲಕೋಟೆ ಜಿಲ್ಲೆಯಲ್ಲಿ 468 ಬಾಡಿಗೆ ಕಟ್ಟಡಗಳು, ಜಮಖಂಡಿಯೊಂದರಲ್ಲೇ 136 ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಣೆ

ಈಶ್ವರ ಶೆಟ್ಟರ್‌

ಬಾಗಲಕೋಟೆ(ಫೆ.01): ನಗರ ಮತ್ತು ಗ್ರಾಮೀಣ ಭಾಗದಲ್ಲಿನ ಜನರ ಆರೋಗ್ಯ ತಪಾಸಣೆ, ಶಾಲಾ ಪೂರ್ವ ಶಿಕ್ಷಣ ಕಲಿಕೆ, ಪೂರಕ ಪೌಷ್ಟಿಕ ಆಹಾರ ವಿತರಣೆ, ರೋಗ ನಿರೋಧಕ ಲಸಿಕೆ ನೀಡುವ ಜಿಲ್ಲೆಯಲ್ಲಿನ ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡವಿಲ್ಲದೇ ಅಪೌಷ್ಟಿಕತೆಯಂತೆ ಬಳಲುತ್ತಿವೆ ಎಂದರೆ ತಪ್ಪಾಗಲಾರದು.

ಹೌದು, ಜಿಲ್ಲೆಯಲ್ಲಿ 468 ಅಂಗನವಾಡಿ ಕೇಂದ್ರಗಳು ಇಂದಿಗೂ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿನ ಪುಟ್ಟಹೆಜ್ಜೆಗಳನ್ನಿಟ್ಟು ಅಂಗನವಾಡಿ ಕೇಂದ್ರಗಳಿಗೆ ಬರುವ ಮಕ್ಕಳಿಗೆ ಅಕ್ಷರದ ಅರಿವು ಮೂಡಿಸುವ ಜೊತೆಗೆ ಮಕ್ಕಳಿಗೆ ಬೇಕಿರುವ ಪೌಷ್ಟಿಕ ಆಹಾರ ನೀಡುತ್ತಿವೆ. ಜೊತೆಗೆ ತನ್ನ ವ್ಯಾಪ್ತಿಯಲ್ಲಿನ ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೂರಕ ಪೌಷ್ಟಿಕ ಆಹಾರ ನೀಡುತ್ತಿದೆ. ಜೊತೆಗೆ ಆರೋಗ್ಯದ ಬಗ್ಗೆ ತಾಯಂದಿರರಿಗೆ ಅರಿವು ಮೂಡಿಸುವುದು, ರೋಗ ನಿರೋಧಕ ಲಸಿಕೆ ನೀಡುವುದು ಸೇರಿದಂತೆ ಮಾಹಿತಿ ಸೇವೆಗಳನ್ನೂ ಒದಗಿಸುತ್ತದೆ. ಆದರೆ, ಇಂದಿಗೂ ಆ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲದಂತಾಗಿದೆ.

ಅಂಗನವಾಡಿ ಶಿಕ್ಷಣ ಅವಧಿ 3 ತಾಸು ಕಡಿತ: ಸರ್ಕಾರದಿಂದ ಆದೇಶ

ಅಂಗನವಾಡಿಗಳಿಗೆ ಮೂಲಸೌಕರ್ಯ ಒದಗಿಸಲಿ:

ಜಮಖಂಡಿಯಲ್ಲಿ 527, ಬಾದಾಮಿ 403, ಹುನಗುಂದ 398, ಮುಧೋಳ 358, ಬಾಗಲಕೋಟೆ ತಾಲೂಕಿನಲ್ಲಿ 327, ಬೀಳಗಿಯಲ್ಲಿ 208 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 2221 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಜಮಖಂಡಿಯಲ್ಲಿ 136, ಹುನಗುಂದದಲ್ಲಿ 111, ಬಾದಾಮಿಯಲ್ಲಿ 71, ಬಾಗಲಕೋಟೆಯಲ್ಲಿ 62, ಮುಧೋಳನಲ್ಲಿ 60, ಬೀಳಗಿಯಲ್ಲಿ 28 ಸೇರಿ ಒಟ್ಟು 468 ಅಂಗನವಾಡಿ ಕೇಂದ್ರಗಳು ಈಗಲೂ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಕೆಲವೊಂದು ಅಂಗನವಾಡಿ ಕೇಂದ್ರಗಳು ಮೂಲ ಸೌಕರ್ಯಗಳಿಲ್ಲದೇ ಕುಂಟುತ್ತಾ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಅಲ್ಲಿನ ಜನರಿಗೆ ಅಂಗನವಾಡಿ ಸೇವೆಗಳು ಸರಿಯಾಗಿ ತಲಪುತ್ತಿಲ್ಲ.

ಅಂಗನವಾಡಿಗಳಿಗೆ ಜಾಗದ ಸಮಸ್ಯೆ:

ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲದೆ ಇಂದಿಗೂ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಕೆಲ ನಗರ ಪ್ರದೇಶಗಳಲ್ಲಿ ಜಾಗದ ಸಮಸ್ಯೆ ಉಂಟಾಗುತ್ತಿವೆ. ಇದರಿಂದ ಕೆಲ ಅಂಗನವಾಡಿ ಕೇಂದ್ರಗಳ ಕಟ್ಟಡವಾಗದೇ ಬಾಡಿಗೆ ಕಟ್ಟಡಗಳಲ್ಲಿಯೇ ನಡೆಯುತ್ತಿವೆ. ಹಾಗಾಗಿ ಸ್ಥಳೀಯ ಶಾಸಕರು ಅಂಗನವಾಡಿ ಕೇಂದ್ರಗಳ ಕಟ್ಟಡಕ್ಕಾಗಿ ಜಾಗ ಗುರುತು ಮಾಡಿ, ಸ್ವಂತ ಕಟ್ಟಡ ಕಟ್ಟುವ ಕೆಲಸ ಮಾಡಲು ಅಣಿಯಾಗಬೇಕಿದೆ.
ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿರುವ ಸ್ಥಳಗಳು

ಕೋವಿಡ್‌ ವಾರಿಯರ್‌ ಎಂಬ ಚಪ್ಪಾಳೆ ಬೇಡ- ಬೇಡಿಕೆ ಈಡೇರಿಸಿ: ಅಂಗನವಾಡಿ ಕಾರ್ಯಕರ್ತೆಯರ ಪರ ವಹಿಸಿದ ನಟ ಚೇತನ್

ತಾಲೂಕು ಸ್ವಂತ ಪಂಚಾಯತ ಸಮುದಾಯ ಶಾಲೆ ಇತರೆ ಬಾಡಿಗೆ ಒಟ್ಟು

ಬಾಗಲಕೋಟೆ 217 3 13 29 2 62 327
ಬಾದಾಮಿ 299 3 12 16 2 71 403
ಬೀಳಗಿ 160 4 9 5 2 28 208
ಹುನಗುಂದ 229 2 24 26 6 111 398
ಮುಧೋಳ 252 3 25 18 0 60 358
ಜಮಖಂಡಿ 313 19 36 19 0 136 527
ಒಟ್ಟು 1470 34 119 113 12 468 2221

ಜಿಲ್ಲೆಯಲ್ಲಿ 2016 ರಿಂದ 2021-22ರವರೆಗೆ ವಿವಿಧ ಯೋಜನೆಗಳಡಿ 206 ಅಂಗನವಾಡಿ ಕೇಂದ್ರಗಳ ಕಟ್ಟಡದ ನಿರ್ಮಾಣಕ್ಕೆ ಒಟ್ಟು .1995 ಲಕ್ಷ ಬಿಡುಗಡೆಯಾಗಿದೆ. ಇದರಲ್ಲಿ ಈಗಾಗಲೇ 151 ಕಟ್ಟಡಗಳು ಪೂರ್ಣಗೊಂಡು ಅದರಲ್ಲಿಯೇ ಅಂಗನವಾಡಿ ಕೇಂದ್ರಗಳನ್ನು ನಡೆಸಲಾಗುತ್ತಿದೆ. ಉಳಿದ 55 ಅಂಗನವಾಡಿ ಕಟ್ಟಡಗಳು ಈಗ ಪ್ರಗತಿಯಲ್ಲಿದ್ದು, ಕೆಲವೊಂದು ಮುಕ್ತಾಯದ ಹಂತದಲ್ಲಿವೆ ಅಂತ ಬಾಗಲಕೋಟೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಅಕ್ಕಮಹಾದೇವಿ ಕೆ.ಎಚ್‌ ತಿಳಿಸಿದ್ದಾರೆ. 

click me!