ಬೆಂಗಳೂರು ಟೆಕ್ಕಿಯ ದುರಂತ ಅಂತ್ಯ; ಕ್ರಾಕ್ಸ್ ಚಪ್ಪಲಿ ಧರಿಸಿ ಪ್ರಾಣ ಕಳೆದುಕೊಂಡ ದುರ್ದೈವಿ!

Published : Aug 30, 2025, 05:24 PM IST
Bannerghatta man dies from snake bite

ಸಾರಾಂಶ

ಬನ್ನೇರುಘಟ್ಟದಲ್ಲಿ ಚಪ್ಪಲಿಯೊಳಗೆ ಅಡಗಿದ್ದ ಕೊಳಕು ಮಂಡಲ ಹಾವು ಕಚ್ಚಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಕಾಲಿನ ಸ್ಪರ್ಶಶಕ್ತಿ ಕಳೆದುಕೊಂಡಿದ್ದರಿಂದ ಹಾವು ಕಚ್ಚಿದ್ದನ್ನು ಗಮನಿಸಲಾಗದೆ ದುರಂತ ಸಂಭವಿಸಿದೆ. ಮನೆಯ ಹೊರಗೆ ಇಡುವ ಚಪ್ಪಲಿಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ತಜ್ಞರು ಸೂಚಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ: ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟದ ರಂಗನಾಥ ಬಡಾವಣೆಯಲ್ಲಿ ಭಾನುವಾರ ನಡೆದ ದುರ್ಘಟನೆ ಒಂದು ಕುಟುಂಬವನ್ನು ಕಂಗಾಲು ಮಾಡಿದೆ. ಮನೆಯಲ್ಲೇ ನಿರಾಳವಾಗಿ ಬದುಕುತ್ತಿದ್ದ ಮಂಜು ಪ್ರಕಾಶ್ (41) ಎಂಬ ನಿವಾಸಿ, ಚಪ್ಪಲಿಯೊಳಗೆ ಅಡಗಿಕೊಂಡಿದ್ದ ಕೊಳಕು ಮಂಡಲ ಹಾವು ಕಚ್ಚಿದ ಪರಿಣಾಮ ದುರಂತವಾಗಿ ಸಾವನ್ನಪ್ಪಿದ್ದಾರೆ. ಮಂಜು ಪ್ರಕಾಶ್ ಅವರು ಬೆಳಗ್ಗೆ ಮನೆಯ ಹೊರಗೆ ಹೋಗಲು ಸಿದ್ಧವಾಗುತ್ತಿದ್ದರು. ಸಾಮಾನ್ಯವಾಗಿ ಬಳಸುವ ಕ್ರಾಕ್ಸ್ ಚಪ್ಪಲಿ ಮನೆಯ ಅಂಗಳದಲ್ಲೇ ಇಟ್ಟುಕೊಂಡಿದ್ದರು. ಅಲ್ಲಿ ಯಾರಿಗೂ ಗಮನಿಸದಂತೆ ಕೊಳಕು ಮಂಡಲ ಹಾವು ಒಳನುಗ್ಗಿ ಚಪ್ಪಲಿಯೊಳಗೆ ಅಡಗಿಕೊಂಡಿತ್ತು. ಮಂಜು ಪ್ರಕಾಶ್ ಅವರು ಇದನ್ನು ತಿಳಿಯದೆ ಆ ಚಪ್ಪಲಿಯನ್ನು ಧರಿಸಿ ಹೊರಗೆ ಹೋಗಿದ್ದಾರೆ. ಕೆಲವು ಸಮಯದ ನಂತರ ಅವರು ಮನೆಗೆ ಮರಳಿ ಬಂದು ವಿಶ್ರಾಂತಿಗಾಗಿ ಹಾಸಿಗೆಯ ಮೇಲೆ ಮಲಗಿದ್ದರು. ಆಗಲೇ ಚಪ್ಪಲಿಯೊಳಗೆ ಅಡಗಿದ್ದ ಹಾವು ಕಚ್ಚಿದ ಪರಿಣಾಮ ಅವರ ದೇಹದಲ್ಲಿ ವಿಷ ಏರಿಕೆಯಾಗಿತ್ತು.

ನೆರೆಮನೆಯವರಿಂದ ಗೊತ್ತಾಯ್ತಾ?

ಸ್ವಲ್ಪ ಹೊತ್ತಿನಲ್ಲೇ ನೆರೆಮನೆಯ ನಿವಾಸಿಯೊಬ್ಬರು ಚಪ್ಪಲಿಯನ್ನು ಗಮನಿಸಿದಾಗ, ಅದರೊಳಗೆ ಹಾವು ಸತ್ತಿರುವುದನ್ನು ಕಂಡು ಬೆಚ್ಚಿಬಿದ್ದರು. ಅವರು ತಕ್ಷಣ ಮಂಜು ಪ್ರಕಾಶ್ ಅವರ ಮನೆಯಲ್ಲಿ ಮಾಹಿತಿ ನೀಡಿದರು. ಆದರೆ ಆ ವೇಳೆಗೆ ಮಂಜು ಪ್ರಕಾಶ್ ಮಲಗಿದ್ದ ಹಾಸಿಗೆಯ ಮೇಲೆಯೇ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದರು. ಮನೆಯವರು ಬಂದು ನೋಡಿದಾಗ ಅದಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಕಾಲಿನ ಸ್ಪರ್ಶಶಕ್ತಿ ಕಳೆದುಕೊಂಡಿದ್ದ ಮೃತ ದುರ್ದೈವಿ!

ಮೃತರಾದ ಮಂಜು ಪ್ರಕಾಶ್ ಅವರು ಕಳೆದ ಕೆಲವು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ತಮ್ಮ ಕಾಲಿನ ಸ್ಪರ್ಶಶಕ್ತಿಯನ್ನು ಕಳೆದುಕೊಂಡಿದ್ದರು. ಆಕಸ್ಮಿಕವಾಗಿ ಹಾವು ಕಚ್ಚಿದ ಸಂದರ್ಭದಲ್ಲಿಯೂ ಅವರಿಗೆ ಏನಾಗಿದೆ ಎಂಬುದೇ ತಿಳಿದುಬಂದಿರಲಿಲ್ಲ. ಇದನ್ನು ಅರಿಯದೇ ಹಾಸಿಗೆಯಲ್ಲೇ ಕುಸಿದುಬಿದ್ದಿರುವ ಸಾಧ್ಯತೆ ಹೆಚ್ಚಿದೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಗ್ರಾಮೀಣ ಹಾಗೂ ನಗರದ ಹೊರವಲಯ ಪ್ರದೇಶಗಳಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗುತ್ತಿರುವ ಹಿನ್ನೆಲೆಯಲ್ಲಿ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಮನೆ ಅಂಗಳದಲ್ಲಿಟ್ಟಿರುವ ಚಪ್ಪಲಿ ಅಥವಾ ಶೂಗಳನ್ನು ಧರಿಸುವ ಮೊದಲು ಅವುಗಳನ್ನು ತಲೆಕೆಳಗಾಗಿ ಬಿಸಾಡಿ, ಒಮ್ಮೆ ಚೆನ್ನಾಗಿ ಪರಿಶೀಲಿಸುವುದು ಅತ್ಯಂತ ಅವಶ್ಯಕ. ಹಾವುಗಳು ಮಳೆಗಾಲದಲ್ಲಿ ಹಾಗೂ ತಂಪಾದ ಸ್ಥಳಗಳಲ್ಲಿ ಅಡಗಿಕೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ಎಲ್ಲರೂ ಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಲಾಗಿದೆ.

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ