ಅಂದು ದಿನಗೂಲಿ ನೌಕರ ಇಂದು ಡಿಸಿಎಂ: ಡ್ಯಾಶಿಂಗ್ ಕಾರಜೋಳ ಕಹಾನಿ!

By Web DeskFirst Published Sep 1, 2019, 7:28 PM IST
Highlights

ಅಂದು ದಿನಗೂಲಿ ನೌಕರ ಇಂದು ರಾಜ್ಯದ ಉಪಮುಖ್ಯಮಂತ್ರಿ| ಪಿಡಬ್ಲ್ಯೂಡಿಯಲ್ಲಿ ಸ್ಟೋರ್‌ಕೀಪರ್ ಆಗಿದ್ದವರು ಈಗ ಅದೇ ಇಲಾಖೆಯ ಮಂತ್ರಿ| ಂದು ಸರ್ಕಾರಿ ನೌಕರಿ ಬಿಟ್ಟಿದ್ದ ಗೋವಿಂದ ಕಾರಜೋಳ ಇಂದು ರಾಜ್ಯದ ಉಪಮುಖ್ಯಮಂತ್ರಿ| ಸಾಮಾನ್ಯ ಕುಟುಂಬದಿಂದ ರಾಜ್ಯದ ಡಿಸಿಎಂ ಪದವಿಗೆ ಕಾರಜೋಳ|

ಮಲ್ಲಿಕಾರ್ಜುನ ಹೊಸಮನಿ

ಬಾಗಲಕೋಟೆ(ಸೆ.01): ಆ ವ್ಯಕ್ತಿ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದವರು. ಇದ್ದಿದ್ದರಲ್ಲಿ ಒಂದು ಹಂತದ ಶಿಕ್ಷಣ ಮುಗಿಸಿ 70ರ ದಶಕದಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡಿದ್ದವರು. 

ಇನ್ನೇನು ಲೋಕೋಪಯೋಗಿ ಇಲಾಖೆಯಲ್ಲಿ ನೌಕರಿ ಖಾಯಂ ಆಗುವಷ್ಟರಲ್ಲಿ ರಾಮಕೃಷ್ಣ ಹೆಗಡೆಯವರ ಪ್ರಭಾವದಿಂದ ಇದ್ದ ನೌಕರಿಯನ್ನು ಬಿಟ್ಟು ರಾಜಕಾರಣಕ್ಕೆ ಧುಮಿಕಿದವರು. 

ಇದರ ಪರಿಣಾಮ ಅಂದು ರಾಜ್ಯದ ದಿನಗೂಲಿ ನೌಕರ ಇದೀಗ ರಾಜ್ಯದ ಡಿಸಿಎಂ ಆಗಿದ್ದಾರೆ. ಇನ್ನೊಂದು ವಿಚಿತ್ರ ಅಂದರೆ ಅಂದು ದಿನಗೂಲಿ ನೌಕರನಾಗಿ ಕೆಲಸ ಮಾಡಿದ ಲೋಕೋಪಯೋಗಿ ಇಲಾಖೆಗೆ ಇಂದು ಮಂತ್ರಿ ಕೂಡ ಆಗಿದ್ದಾರೆ. ಅವರೇ ಹಿರಿಯ ರಾಜಕಾರಣಿ ಗೋವಿಂದ ಕಾರಜೋಳ.

"

ರಾಜ್ಯ ಬಿಜೆಪಿಯ ಹಿರಿಯ ನಾಯಕರಲ್ಲಿ ಗೋವಿಂದ ಕಾರಜೋಳ ಕೂಡ ಒಬ್ಬರು. ಬಾಗಲಕೋಟೆ ಜಿಲ್ಲೆಯ ಮುಧೋಳ ಮೀಸಲು ವಿಧಾನಸಭಾ ಮತಕ್ಷೇತ್ರದಿಂದ 5 ಬಾರಿ ಆಯ್ಕೆಯಾಗಿರುವ ಬಿಜೆಪಿ ಶಾಸಕ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ಗೋವಿಂದ ಕಾರಜೋಳ ಓದಿದ್ದು ಐಟಿಐ ಡಿಪ್ಲೋಮಾ. 

70ರ ದಶಕದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ದಿನಗೂಲಿ ನೌಕರನಾಗಿ ಕಾರಜೋಳ ಸೇರಿಕೊಂಡಿದ್ದರು. ಹಲವು ವರ್ಷಗಳವರೆಗೆ ದುಡಿದ ಬಳಿಕ ಅದೇ ಇಲಾಖೆಯಲ್ಲಿ ಸ್ಟೋರ್ ಕೀಪರ್ ಆಗಿ ಖಾಯಂ ನೌಕರನನ್ನಾಗಿ ಸೇರಿಸಿಕೊಳ್ಳಲಾಯಿತು. 

ಹೀಗೆ ಸರ್ಕಾರಿ ಕೆಲಸ ಮಾಡಿದ ಗೋವಿಂದ ಕಾರಜೋಳ ತಮ್ಮ ಸಂಬಂಧಿ, ಸಂಸದ ರಮೇಶ ಜಿಗಜಿಣಗಿ ಅವರ ಬೆಂಬಲದಿಂದ ಅಂದಿನ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಪರಿಚಯವಾಗಿ 1993ರಲ್ಲಿ ಸರ್ಕಾರಿ ನೌಕರಿಗೆ ಸ್ವಯಂ ನಿವೃತ್ತಿ ಪಡೆದರು.

1994ರಲ್ಲಿ ಮುಧೋಳ ಮತಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆಲವು ಕಂಡರು. ಅಂದಿನಿಂದ ಇಂದಿನವರೆಗೆ ಒಟ್ಟು 5 ಬಾರಿ ಗೆಲವು ಕಂಡಿರುವ ಕಾರಜೋಳ, ಹೆಗಡೆ ನಿಧನದ ಬಳಿಕ ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ಅನಂತಕುಮಾರ ಅವರ ನೇತೃತ್ವದಲ್ಲಿ ಬಿಜೆಪಿ ಸೇರಿದರು. 

ಮುಂದೆ ಯಡಿಯೂರಪ್ಪ ಸಂಪುಟದಲ್ಲಿ ಕಾರಜೋಳ ಎರಡು ಬಾರಿ ಸಚಿವರಾಗಿ ಇಂದು ಪ್ರಭಾವಿ ನಾಯಕರಾಗಿ ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದಾರೆ.

"

ಇನ್ನೊಂದು ವಿಶೇಷ ಅಂದರೆ ಕಾರಜೋಳ ದಿನಗೂಲಿ ಮತ್ತು ಖಾಯಂ ನೌಕರನಾಗಿ ಕೆಲಸ ಮಾಡಿದ್ದೂ ಕೂಡ ಲೋಕೋಪಯೋಗಿ ಇಲಾಖೆಯಲ್ಲಿ. ಕಾಕತಾಳೀಯ ಎಂಬಂತೆ ಇಂದು ಕಾರಜೋಳ ಲೋಕೋಪಯೋಗಿ ಇಲಾಖೆಯ ಸಚಿವರಾಗಿದ್ದಾರೆ. 

ಜಿಲ್ಲೆಯಲ್ಲಿ ಸಮಸ್ಯೆಗಳು ಎದುರಾದಾಗ ತಮ್ಮ ರಾಜಕೀಯ ನಿಪುಣತೆಯಿಂದಲೇ ಸಮಸ್ಯೆ ಬಗೆಹರಿಸಿ ಹಿರಿತನ ಮೆರೆದಿರುವ ಗೋವಿಂದ ಕಾರಜೋಳ ಇಂದು ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದಾರೆ.  

ಇದರಿಂದ ಬಾಗಲಕೋಟೆ ಜಿಲ್ಲೆಯ ಜನ ತಮ್ಮ ಜಿಲ್ಲೆಯ ಕಬ್ಬು ಬೆಳೆಗಾರರ ಸಮಸ್ಯೆ, ಆಲಮಟ್ಟಿ ಹಿನ್ನೀರಿನ ಸಂತ್ರಸ್ಥರ ಸಮಸ್ಯೆ, ನೇಕಾರರ ಸಮಸ್ಯೆ ಸೇರಿದಂತೆ ಇನ್ನಿತರ ಜ್ವಲಂತ ಸಮಸ್ಯೆಗಳಿಗೆ ಈಗಲಾದ್ರೂ ಪರಿಹಾರ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ.

"

ಒಟ್ಟಿನಲ್ಲಿ ಜೀವನದಲ್ಲಿ ವ್ಯಕ್ತಿಗೆ ಜನಮನ್ನಣೆ ಜೊತೆಗೆ ದೈವಬಲವೂ ಇದ್ದರೆ ಎಂತಹ ಹುದ್ದೆಯನ್ನಾದರೂ ಪಡೆಯಬಹುದು ಅನ್ನೋದಕ್ಕೆ ಡಿಸಿಎಂ ಗೋವಿಂದ ಕಾರಜೋಳ ಸಾಕ್ಷಿಯಾಗಿದ್ದಾರೆ. ಕಾರಜೋಳ ತಮಗೆ ಸಿಕ್ಕ ಅವಕಾಶವನ್ನು ಜನೋಪಯೋಗಿ ಕಾರ್ಯದ ಮೂಲಕ ಸದುಪಯೋಗಪಡಿಸಿಕೊಳ್ಳಲಿ ಎಂಬುದೇ ಎಲ್ಲರ ಆಶಯ.

click me!