ನಿಗದಿತ ಸಮಯಕ್ಕೆ ತಕ್ಕಂತೆ ಸಾಲ ಮರು ಪಾವತಿ ಮಾಡುತ್ತಿದ್ದರೂ ಬ್ಯಾಂಕ್ ಅಧಿಕಾರಿಗಳಿಂದ ವಿನಃಕಾರಣ ಮಾನಸಿಕ ಹಿಂಸೆಗೊಳಗಾಗುತ್ತಿದ್ದು, ತನಗೆ ದಯಾಮರಣಕ್ಕೆ ಅವಕಾಶ ನೀಡಲು ವಯೋವೃದ್ಧೆಯೊಬ್ಬರು ತಾಲೂಕು ಆಡಳಿತದ ಮೊರೆ ಹೋಗಿದ್ದಾರೆ.
ಹುಣಸೂರು (ನ.13): ನಿಗದಿತ ಸಮಯಕ್ಕೆ ತಕ್ಕಂತೆ ಸಾಲ ಮರು ಪಾವತಿ ಮಾಡುತ್ತಿದ್ದರೂ ಬ್ಯಾಂಕ್ ಅಧಿಕಾರಿಗಳಿಂದ ವಿನಃಕಾರಣ ಮಾನಸಿಕ ಹಿಂಸೆಗೊಳಗಾಗುತ್ತಿದ್ದು, ತನಗೆ ದಯಾಮರಣಕ್ಕೆ ಅವಕಾಶ ನೀಡಲು ವಯೋವೃದ್ಧೆಯೊಬ್ಬರು ತಾಲೂಕು ಆಡಳಿತದ ಮೊರೆ ಹೋಗಿದ್ದಾರೆ.
ಪಟ್ಟಣದ ನರಸಿಂಹಸ್ವಾಮಿ ತಿಟ್ಟು ಬಡಾವಣೆಯ ನಿವಾಸಿ ತಾಲೂಕು ಸವಿತಾ ಸಮಾಜದ ಮಾಜಿ ಅಧ್ಯಕ್ಷ ದೇವರಾಜ್ ಅವರ ತಾಯಿ ಜಯಮ್ಮ (65) ದಯಾಮರಣಕ್ಕಾಗಿ ಅರ್ಜಿ ಸಲ್ಲಿಸಿರುವರು. (Bank Of Baroda) ಬ್ಯಾಂಕಿನ (Hunasur) ನಗರ ಶಾಖೆಯ ವ್ಯವಸ್ಥಾಪಕರು ತಮ್ಮ ಪುತ್ರನಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಘಟನೆ ವಿವರ: ದೇವರಾಜ್ 2018ರಲ್ಲಿ 11.20 ಲಕ್ಷ ರು. ಗಳ ಗೃಹಸಾಲ ಸೌಲಭ್ಯ ಪಡೆದಿದ್ದಾರೆ. ಅಲ್ಲದೇ ನಂತರದ ದಿನಗಳಲ್ಲಿ ಮತ್ತೆ 3 ಲಕ್ಷ ರು. ಹೆಚ್ವುವರಿಯಾಗಿ ಸಾಲ ಸೌಲಭ್ಯ ಪಡೆದಿದ್ದಾರೆ. ಸಾಲ ಮರುಪಾವತಿಗಾಗಿ 15 ವರ್ಷಗಳ ಕಾಲಾವಕಾಶವನ್ನು ಪಡೆದಿದ್ದಾರೆ. ಪ್ರತಿ ತಿಂಗಳು ಬ್ಯಾಂಕ್ ನಿರ್ಧರಿಸಿರುವಂತೆ ಇಎಂಐ ಕಟ್ಟುತ್ತಿದ್ದು, ಈವರೆಗೆ 6 ಲಕ್ಷ ರು. ಗಳ ಸಾಲ ಮರುಪಾವತಿ ಮಾಡಿದ್ದಾರೆ. ಕಳೆದ ಮಾಚ್‌ರ್ ತಿಂಗಳಿನಲ್ಲಿ ಬ್ಯಾಂಕಿನಿಂದ ಕೂಡಲೇ 1 ಲಕ್ಷ ರು. ಪಾವತಿಸಿ ನಿಮ್ಮ ಲೋನ್‌ನನ್ನು ಒಂದೇ ಕಂತಿನಲ್ಲಿ ಅಸಲು ಮೊತ್ತ (ಒಟಿಎಸ್) ಪಾವತಿಸುವ ಅವಕಾಶ ಪಡೆದುಕೊಳ್ಳಲು ಒತ್ತಾಯಿಸಿದ್ದಾರೆ. ಇದಕ್ಕೂ ದೇವರಾಜ್ ಒಪ್ಪಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಂದ ಕೂಡ ಗ್ರಾಹಕರಿಗೆ ಒಟಿಎಸ್ ಸೌಲಭ್ಯ ಕಲ್ಪಿಸಲು ಸೂಚನೆ ಬಂದಿದೆ.
ಉಲ್ಟಾಹೊಡೆದ ಬ್ಯಾಂಕ್: ಆದರೆ ಇದ್ದಕ್ಕಿದ್ದಂತೆ ಬ್ಯಾಂಕ್ ಅಧಿಕಾರಿಗಳು ಉಲ್ಟಾಹೊಡೆದು ನೀವು ಒಟಿಎಸ್ ಪಡೆಯಲು ಸಾಧ್ಯವಿಲ್ಲ. ಕೂಡಲೇ 1.80 ಲಕ್ಷ ರು. ಪಾವತಿಸಿರೆಂದು ಒತ್ತಾಯಿಸಲು ಆರಂಭಿಸಿದರು. ಇದಕ್ಕೆ ದೇವರಾಜ್ ಒಪ್ಪಲಿಲ್ಲ. ವಿಚಿತ್ರವೆಂದರೆ ಕಳೆದ ಎರಡು ತಿಂಗಳಿನಿಂದ ಎರಡೆರಡು ಬಾರಿ ಮನೆ ಬಾಗಿಲಿಗೆ ಕೃಷಿ ಸಾಲ ಮರುಪಾವತಿ ಮಾಡಿರೆಂದು ನೋಟೀಸ್ ಅಂಟಿಸಿ ಹೋಗಿದ್ದಾರೆ. ಅಲ್ಲದೇ ಬ್ಯಾಂಕ್ ಅಧಿಕಾರಿಗಳು ಮನೆಬಾಗಿಲಿಗೆ ಬಂದು ನೀವು ಮನೆ ಮಾರುತ್ತಿದ್ದೀರಂತಲ್ಲ, ನಮ್ಮ ಸಾಲ ತೀರಿಸಿ ಎಂದು ಸುಳ್ಳು ಆರೋಪ ಹೊರಿಸಿ ಮಾನಸಿಕವಾಗಿ ಕುಗ್ಗಿಸುತ್ತಿದ್ದಾರೆ. ನನ್ನ ಪುತ್ರ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡುತ್ತಿದ್ದರೂ ಈ ಹಿಂಸೆ ನನ್ನಿಂದ ನೋಡಲಾಗುತ್ತಿಲ್ಲ. ದಯವಿಟ್ಟು ನನಗೆ ದಯಾಮರಣಕ್ಕೆ ಅವಕಾಶ ಕೊಡಿರೆಂದು ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿರುವ ಜಯಮ್ಮ ತಮ್ಮ ದಯಾಮರಣ ಅರ್ಜಿಯಲ್ಲಿ ಸರ್ಕಾರವನ್ನು ಕೋರಿದ್ದಾರೆ. ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುತ್ತಿದ್ದರೂ ಈ ರೀತಿಯ ಹಿಂಸೆ ಯಾವ ನ್ಯಾಯ ಎಂದು ದೇವರಾಜ ಪ್ರಶ್ನಿಸುತ್ತಾರೆ.
ತಹಸೀಲ್ದಾರ್ ಡಾ.ಎಸ್.ಯು. ಅಶೋಕ್ ಮಾತನಾಡಿ, ದಯಾಮರಣಕ್ಕಾಗಿ ಅರ್ಜಿ ಸಲ್ಲಿಕೆಯಾಗಿದ್ದು, ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಅಧಿಕಾರ ಚಲಾಯಿಸಲು ಸಾಧ್ಯವಾಗದ ಕಾರಣ ಹಿರಿಯ ಅಧಿಕಾರಿಗಳಿಗೆ ಅರ್ಜಿಯನ್ನು ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ.
ದಯಾಮರಣಕ್ಕಾಗಿ ವಿದೇಶಕ್ಕೆ ಹೊರಟವನ ವಿರುದ್ಧ ಗೆಳತಿ ಕೋರ್ಟ್‌ಗೆ
ನವದೆಹಲಿ: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ಭಾರತದಲ್ಲಿ ದಯಾಮರಣ ಕಾನೂನುಬದ್ಧವಲ್ಲದ ಕಾರಣ ಸ್ವಿಜರ್‌ಲೆಂಡ್‌ಗೆ ಹೋಗಿ ವೈದ್ಯಕೀಯ ನೆರವು ಪಡೆದು ಆತ್ಮಹತ್ಯೆಗೆ ಮುಂದಾಗಿದ್ದು, ಆತನನ್ನು ತಡೆಯುವಂತೆ ಬೆಂಗಳೂರು ಮೂಲದ ಅವರ ಗೆಳತಿ ದೆಹಲಿ ಹೈಕೋರ್ಚ್‌ನ ಮೊರೆ ಹೋಗಿದ್ದಾರೆ.
ನೋಯ್ಡಾದ 48 ವರ್ಷದ ವ್ಯಕ್ತಿ ಮಿಯಾಲ್ಜಿಕ್ ಎನ್ಸೆಫಲೋಮಿಲಿಟಿಸ್ ಎಂಬ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದಕ್ಕೆ ಸರಿಯಾದ ಚಿಕಿತ್ಸೆ ಲಭ್ಯವಿಲ್ಲ. ಅವರೀಗ ಹೆಚ್ಚುಕಮ್ಮಿ ಹಾಸಿಗೆಗೆ ಸೀಮಿತವಾಗಿದ್ದಾರೆ. 2014ರಿಂದ ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆ ವ್ಯಕ್ತಿಗೆ ಕೊರೋನಾದ ನಂತರ ದಾನಿಗಳು ಕೂಡ ದೊರೆಯುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ಆತ ಸ್ವಿಜರ್‌ಲೆಂಡ್‌ಗೆ ಒಮ್ಮೆ ಹೋಗಿ ಅಲ್ಲಿನ ಜೂರಿಚ್‌ನಲ್ಲಿ ದಯಾಮರಣದ ಸೇವೆ ಒದಗಿಸುವ ಡಿಗ್ನಿಟಾಸ್ ಎಂಬ ಸಂಸ್ಥೆಯ ಜೊತೆ ಮಾತನಾಡಿಕೊಂಡು ಬಂದಿದ್ದಾರೆ. ಅದರ ಮಾಹಿತಿ ತಿಳಿದ ಆತನ ಗೆಳತಿಯೊಬ್ಬರು ಇನ್ನೊಮ್ಮೆ ಆತ ಸ್ವಿಜರ್‌ಲೆಂಡ್‌ಗೆ ಹೋಗಲು ವಲಸೆ ವಿಭಾಗದವರು ಅನುಮತಿ ನಿರಾಕರಿಸುವಂತೆ ಆದೇಶಿಸಬೇಕೆಂದು ಕೋರಿ ದೆಹಲಿ ಹೈಕೋರ್ಚ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮುಂದಿನ ವಾರ ಅದರ ವಿಚಾರಣೆ ನಡೆಯಲಿದೆ.
ಸ್ವಿಜರ್‌ಲೆಂಡಿಗೆ ತೆರಳಲು ವೀಸಾಕ್ಕಾಗಿ ನೀಡಿದ ದಾಖಲೆಯಲ್ಲಿ ತನ್ನ ಸ್ನೇಹಿತ ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ಕಾರಣ ನೀಡಿ ಆತನ ವೀಸಾ ರದ್ದುಪಡಿಸುವಂತೆ ಮಹಿಳೆ ಕೋರಿದ್ದಾರೆ. ಅಲ್ಲದೆ ಆತನಿಗೆ ನಮ್ಮ ದೇಶದಲ್ಲೇ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದೂ ಮನವಿ ಮಾಡಿದ್ದಾರೆ.