Bellary Utsav: ಹಷೋದ್ಗಾರದ ನಡುವೆ ಉದ್ಘಾಟನೆಗೊಂಡ ಕಲಾ-ಸಾಂಸ್ಕೃತಿ ಉತ್ಸವ

By Kannadaprabha News  |  First Published Jan 22, 2023, 8:37 AM IST

ಗಣಿ ಜಿಲ್ಲೆಯ ಕಲಾ ಪರಂಪರೆ ವೈಭವಕ್ಕೆ ಮುನ್ನುಡಿ ಬರೆದ ಬಳ್ಳಾರಿ ಉತ್ಸವಕ್ಕೆ ಶನಿವಾರ ರಾತ್ರಿ ಸಹಸ್ರಾರು ಜನರ ಹರ್ಷೋದ್ಘಾರದ ನಡುವೆ ವಿದ್ಯುಕ್ತ ಚಾಲನೆ ದೊರೆಯಿತು. ಪ್ರತಿವರ್ಷ ಹಂಪಿ ಉತ್ಸವ ಮಾದರಿಯಲ್ಲಿ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದರು.


ಬಳ್ಳಾರಿ (ಜ.22) : ಗಣಿ ಜಿಲ್ಲೆಯ ಕಲಾ ಪರಂಪರೆ ವೈಭವಕ್ಕೆ ಮುನ್ನುಡಿ ಬರೆದ ಬಳ್ಳಾರಿ ಉತ್ಸವಕ್ಕೆ ಶನಿವಾರ ರಾತ್ರಿ ಸಹಸ್ರಾರು ಜನರ ಹರ್ಷೋದ್ಘಾರದ ನಡುವೆ ವಿದ್ಯುಕ್ತ ಚಾಲನೆ ದೊರೆಯಿತು.

ಉತ್ಸವ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು(B Sriramulu), ‘ಬಳ್ಳಾರಿ ಉತ್ಸವ’(Bellary Utsav)ವನ್ನು ಹಂಪಿ ಉತ್ಸವ ಮಾದರಿಯಲ್ಲಿ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಈ ವರ್ಷದಿಂದ ಬಳ್ಳಾರಿ ಉತ್ಸವಕ್ಕೆ ಆರಂಭ ದೊರೆತಿದ್ದು, ಇನ್ನು ಮುಂದೆ ಉತ್ಸವ ಶಾಶ್ವತವಾಗಿ ಮುಂದುವರಿಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

Tap to resize

Latest Videos

undefined

Bellary Utsav 2023: ಇಂದು ಬಳ್ಳಾರಿ ಉತ್ಸವದ ಸಮಾರೋಪ ಸಮಾರಂಭ

ಬಳ್ಳಾರಿ ಜಿಲ್ಲೆ ವಿಭಜನೆಗೊಂಡ ಬಳಿಕ ಬಳ್ಳಾರಿಗೆಂದೇ ಒಂದು ಉತ್ಸವ ಮಾಡಬೇಕು. ಈ ಭಾಗದ ಕಲೆ, ಸಾಹಿತ್ಯ, ಸಂಸ್ಕೃತಿಯ ಅನಾವರಣ ಹಾಗೂ ಕಲಾ ಪರಂಪರೆಯ ವೈಭವಕ್ಕೆ ಮುನ್ನುಡಿ ಬರೆಯಬೇಕು ಎಂಬ ಆಶಯ ಹೊತ್ತು ಉತ್ಸವ ಆರಂಭಿಸಿದ್ದೇವೆ. ವರ್ಷದಿಂದ ವರ್ಷಕ್ಕೆ ಬಳ್ಳಾರಿ ಉತ್ಸವ ಹೆಚ್ಚುಹೆಚ್ಚು ವಿಜೃಂಭಿಣಿಗೊಳ್ಳಲಿದೆ. ಜನರ ನಿರೀಕ್ಷೆಯಂತೆಯೇ ಅರ್ಥಪೂರ್ಣವಾಗಿಸುವ ದಿಸೆಯಲ್ಲಿಯೇ ನಾವು ಉತ್ಸವದ ರೂಪುರೇಷ ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.

ಇದೇ ವೇಳೆ ಬಳ್ಳಾರಿ ಜಿಲ್ಲೆಯಲ್ಲಾಗುತ್ತಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಸ್ತಾಪಿಸಿ ಮಾತನಾಡಿದ ಸಚಿವ ಶ್ರೀರಾಮುಲು, ಬಳ್ಳಾರಿ ನಗರ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಈ ಮಹಾನಗರಕ್ಕೆ ಬೇಕಾಗುವ ಎಲ್ಲ ಸೌಕರ್ಯಗಳನ್ನು ಕಲ್ಪಿಸಲು ನಾವು ಶ್ರಮಿಸುತ್ತಿದ್ದೇವೆ. ಶೀಘ್ರದಲ್ಲಿಯೇ ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ಆರಂಭವಾಗಲಿದೆ. ಅತ್ಯಾಕರ್ಷಕವಾದ ಗಡಿಯಾರ ಗೋಪುರ ನಿರ್ಮಾಣವಾಗಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್‌, ಬಳ್ಳಾರಿ ಜಿಲ್ಲೆ ಐತಿಹಾಸಿಕ ಹಿನ್ನೆಲೆ ಇರುವ ನಗರವಾಗಿದ್ದು, ಇಲ್ಲಿಯ ಜನರು ಕಲೆ, ಸಾಹಿತ್ಯ, ರಂಗಭೂಮಿ, ಸಿನಿಮಾಗಳಿಗೆ ಹೆಚ್ಚು ಉತ್ತೇಜನ ನೀಡುವ ಕಲಾ ಪ್ರಿಯರಾಗಿದ್ದಾರೆ ಎಂದು ಬಣ್ಣಿಸಿದರು.

ಬಳಿಕ ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ಎಂಬ ಗೀತೆ ಹಾಡುವ ಮೂಲಕ ಅಗಲಿದ ಸಹೋದರ ಪುನೀತ್‌ರಾಜ್‌ಕುಮಾರ್‌ ಅವರನ್ನು ಸ್ಮರಿಸಿದರು. ದಿ.ಪುನೀತ್‌ರಾಜ್‌ಕುಮಾರ್‌ ಪತ್ನಿ ಅಶ್ವಿನಿ ಪುನೀತ್‌ರಾಜ್‌ಕುಮಾರ್‌, ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಮೇಯರ್‌ ರಾಜೇಶ್ವರಿ, ಗುತ್ತಿಗನೂರು ವಿರುಪಾಕ್ಷಗೌಡ, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್‌, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಇತರರಿದ್ದರು. ಎಂ.ವಿನೋದ್‌ ಕುಮಾರ್‌ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭದಲ್ಲಿ ಕಾಂಗ್ರೆಸ್‌ ಮುಖಂಡರು ಗೈರಾಗಿದ್ದರು.

ಮೊದಲ ದಿನ ಬಳ್ಳಾರಿ ಉತ್ಸವಕ್ಕೆ ಜನಸಾಗರ: 

- ಕೆ.ಎಂ.ಮಂಜುನಾಥ್‌

ಕಲೆ-ಸಾಹಿತ್ಯ-ಸಂಸ್ಕೃತಿ ಪರಂಪರೆಯನ್ನು ಗಟ್ಟಿಗೊಳಿಸುವ ಹಾಗೂ ಸಾಮಾಜಿಕ ಬದಲಾವಣೆಗೆ ಸ್ಪೂರ್ತಿ ತುಂಬುವ ಉದ್ದೇಶ ಹೊತ್ತು ಆಯೋಜಿಸಿರುವ ಎರಡು ದಿನಗಳ ‘ಬಳ್ಳಾರಿ ಉತ್ಸವ’ಕ್ಕೆ ಮೊದಲ ದಿನ ಉತ್ತಮ ಸ್ಪಂದನೆ ಸಿಕ್ಕಿದ್ದು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಜನರು ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಉತ್ಸವ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಆಯೋಜಿಸಿದ್ದ ಕ್ರೀಡಾ, ಸಾಹಸ ಸ್ಪರ್ಧೆಗಳು, ಆಹಾರಮೇಳ, ಮತ್ಸ್ಯಮೇಳ, ಫಲಪುಷ್ಪ ಪ್ರದರ್ಶನ, ಮರಳುಶಿಲ್ಪಕಲೆ ಪ್ರದರ್ಶನ, ಪಾರಂಪರಿಕ ಕೃಷಿ ಪರಿಕರಗಳ ಪ್ರದರ್ಶನಗಳಲ್ಲಿ ಜನ ಕಿಕ್ಕಿರಿದು ಸೇರಿದ್ದರು. ಸಂಜೆಯಾಗುತ್ತಿದ್ದಂತೆಯೇ ಜನಾಗಮನ ಹೆಚ್ಚಾಯಿತು. ಇದರಿಂದ ಮುನ್ಸಿಪಲ್‌ ಕಾಲೇಜು ಮೈದಾನ ಜನರಿಂದ ಭರ್ತಿಗೊಂಡು, ಕಾಲಿಡಲು ಸಾಧ್ಯವಾಗದಂತಾಯಿತು.

Karnataka Tourism: ಪ್ರವಾಸಿ ಗೈಡ್‌ಗಳಿಗೆ ಸರ್ಕಾರದ ಭಾರಿ ಬಂಪರ್‌!

ಉತ್ಸವದಲ್ಲಿ ಹೆಚ್ಚು ಗಮನ ಸೆಳೆದದ್ದು ಫಲಪುಷ್ಪ ಪ್ರದರ್ಶನ ಹಾಗೂ ಮತ್ಸ್ಯಮೇಳ. ವಿವಿಧ ಹಣ್ಣುಗಳಲ್ಲಿ ಮೂಡಿ ಬಂದ ಅನೇಕ ಸಾಧಕರ ಕಲಾಕೃತಿಗಳು ವಿಸ್ಮಯಗೊಳಿಸಿದವು. ಮತ್ಸ್ಯಮೇಳದಲ್ಲಿ ದೇಶ-ವಿದೇಶಗಳ ಮೀನುಗಳನ್ನು ವೀಕ್ಷಿಸಿದ ಪ್ರೇಕ್ಷಕರು ಸಂತಸಗೊಂಡರು. ನೂರಾರು ಬಗೆಯ ಬಣ್ಣಬಣ್ಣದ ಮೀನುಗಳನ್ನು ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿತ್ತು. ಹತ್ತಾರು ತಳಿಯ ಮತ್ಸ್ಯಗಳನ್ನು ವೀಕ್ಷಿಸಿದ ಜನರು ಮೀನಿನ ವಿಸ್ಮಯ ಲೋಕ ಕಂಡು ಅಚ್ಚರಿಗೊಂಡರು.

ಮರಳಿನಲ್ಲಿ ಅರಳಿದವು ಶಿಲ್ಪಕಲೆಗಳು:

ಮುನ್ಸಿಪಲ್‌ ಕಾಲೇಜು ಮೈದಾನದ ವಾಲಿಬಾಲ್‌ ಅಂಗಳದಲ್ಲಿ ಆಯೋಜಿಸಿರುವ ಮರಳುಶಿಲ್ಪಕಲೆ ಪ್ರದರ್ಶನ ಹೆಚ್ಚು ಆಕರ್ಷಣೀಯವಾಗಿತ್ತು. ನಾಡಿನ ಹಾಗೂ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳು, ದೇಶದ ಅನೇಕ ಸಾಧಕರು, ಬಳ್ಳಾರಿಯ ಐತಿಹಾಸಿಕ ಕೋಟೆ, ಸಂಡೂರಿನ ಕುಮಾರಸ್ವಾಮಿ ದೇವಾಲಯ ಹೀಗೆ ಅನೇಕ ಕಲಾ ಕೃತಿಗಳು ಮರಳಿನಲ್ಲಿ ಅರಳಿದ್ದವು. ಮರಳು ಶಿಲ್ಪ ಕಲಾವಿದರ ಕೈ ಚಳಕ ಕಂಡು ನಿಬ್ಬೆರಗಾಗುವಂತೆ ನೋಡುತ್ತಿದ್ದ ಜನರು ಮರಳು ಶಿಲ್ಪಕಲಾಕೃತಿಗಳ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಮೇಳದಲ್ಲಿ ಏಳು ಮಳಿಗೆಗಳಲ್ಲಿ ಪುಸ್ತಕ ಪ್ರದರ್ಶನವಿತ್ತು. ಕೇಂದ್ರ ಗ್ರಂಥಾಲಯ ಸೇರಿದಂತೆ ಜಿಲ್ಲೆಯ ವಿವಿಧ ಪ್ರಕಾಶಕರು ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಆದರೆ, ಪುಸ್ತಕದ ವ್ಯಾಪಾರ ವಹಿವಾಟು ಕಂಡು ಬರಲಿಲ್ಲ. ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳ ಕುರಿತು ಮನವರಿಕೆ ಮಾಡಿಕೊಡಲು ವಿವಿಧ ಇಲಾಖೆಗಳು ಮಳಿಗೆಗಳನ್ನು ಹಾಕಿದ್ದವು. ಆದರೆ, ಸರ್ಕಾರ ಇಲಾಖೆಯ ಮಳಿಗೆ ಕಡೆ ಜನರು ಹೆಚ್ಚಾಗಿರಲಿಲ್ಲ.

ವಗ್ಗರಣಿ ಮಿರ್ಚಿ ಭರ್ಜರಿ ವ್ಯಾಪಾರ:

ವಾಣಿಜ್ಯ ಮಳಿಗೆಗಳಲ್ಲಿ ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸಿದ ಬಣ್ಣಬಣ್ಣದ ಕೈಚೀಲ, ಹೂವಿನಹಾರ,ಸಿದ್ಧ ಉಡುಪುಗಳು, ಕೈಮಗ್ಗದ ಸೀರೆಗಳು, ಅಲಂಕಾರಿಕ ವಸ್ತುಗಳು, ಮನೆಯಲ್ಲಿಯೇ ತಯಾರಿಸಿದ ವಿವಿಧ ಬಗೆಯ ಖಾದ್ಯಗಳು ಉತ್ಸವದಲ್ಲಿ ಮಾರಾಟಕ್ಕಿದ್ದವು. ಬೆಳಗ್ಗೆ ಜನರಿಲ್ಲದೆ ಬೇಸರಗೊಂಡಿದ್ದ ಸ್ವಸಹಾಯ ಗುಂಪುಗಳು ಮಧ್ಯಾಹ್ನದ ಬಳಿಕ ಜಮಾಯಿಸಿದ ಜನರ ಖರೀದಿಯಿಂದ ಸಂತಸಗೊಂಡರು.

ಆಹಾರ ಮೇಳದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನಗರದ ಹೋಟೆಲ್‌ ಮಾಲೀಕರು ಆಹಾರ ಮೇಳದಲ್ಲಿ ಬಗೆಬಗೆಯ ತಿಂಡಿ-ತಿನಸುಗಳನ್ನು ತಯಾರಿಸಿ ವ್ಯಾಪಾರಕ್ಕಿಟ್ಟಿದ್ದರು. ಈ ಮಳೆಗಳಿಗಳ ಮುಂದೆ ಜಮಾಯಿಸಿದ್ದ ಜನರು ತಮಗೆ ಇಷ್ಟದ ಆಹಾರ ಪದಾರ್ಥಗಳನ್ನು ಖರೀದಿಸುತ್ತಿರುವ ದೃಶ್ಯಗಳು ಕಂಡು ಬಂದವು. ಬಳ್ಳಾರಿ ಜನರ ಫೆವರೇಟ್‌ ವಗ್ಗರಣೆ, ಮಿರ್ಚಿ ಭರ್ಜರಿ ವ್ಯಾಪಾರ ಕಂಡಿತು. ಕೆಎಂಎಫ್‌ ಸೇರಿದಂತೆ ಅನೇಕ ಆಹಾರ ಉತ್ಪನ್ನ ಸಂಸ್ಥೆಗಳು ಆಹಾರ ಮೇಳದಲ್ಲಿದ್ದವು.

ಅಂಗೈನಲ್ಲಿ ಮೂಡಿ ಬಂದ ಕಲಾತ್ಮಕ ಚಿತ್ತಾರ:

ಉತ್ಸವದ ಅಂಗವಾಗಿ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಮೆಹಂದಿ ಸ್ಪರ್ಧೆಯಲ್ಲಿ ನೂರಾರು ಯುವತಿಯರು ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ 70ಕ್ಕೂ ಹೆಚ್ಚು ಯುವತಿಯರು ಭಾಗವಹಿಸಿ ತಮ್ಮ ಕೈ ಚಳಕ ತೋರಿಸಿದರು. ಮೇಯರ್‌ ರಾಜೇಶ್ವರಿ ಸ್ಪರ್ಧೆ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ,ಯುವತಿಯರನ್ನು ಪೋ›ತ್ಸಾಹಿಸಿದರು. ಇದೇ ವೇಳೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶಕೀನಾ ಅವರು ಮೇಯರ್‌ ರಾಜೇಶ್ವರಿ ಅವರ ಅಂಗೈಗೆ ಮೆಹಂದಿ ಬಿಡಿಸಿದರು.

ನಗರದ ಕೋಟೆ ಪ್ರದೇಶದಲ್ಲಿ ಸಾಹಸ ಕ್ರೀಡೆ ಪ್ಯಾರಾಸೇಲಿಂಗ್‌, ಜಿಪ್‌ಲೈನ್‌, ರಾಕ್‌ ಕ್ಲೈಂಬಿಂಗ್‌ ಸ್ಪರ್ಧೆ ಜರುಗಿತು. ಬೆಳಗ್ಗೆ 9ಗಂಟೆಯಿಂದಲೇ ಸಾಹಸ ಕ್ರೀಡೆಗಳಿಗೆ ಚಾಲನೆ ದೊರೆಯಿತು. ಅನೇಕ ವಿದ್ಯಾರ್ಥಿ-ಯುವಜನರು ಭಾಗವಹಿಸಿ, ಕ್ರೀಡಾಸ್ಪೂರ್ತಿ ಮೆರೆದರು. ಜಿಲ್ಲಾಡಳಿತ ಭವನ ಆವರಣದಲ್ಲಿ ಜರುಗಿದ ಬೈಕ್‌ಸ್ಟಂಟ್‌, ಸಾಹಸ ಕ್ರೀಡೆಯ ಮತ್ತೊಂದು ಮಗ್ಗಲನ್ನು ಪರಿಚಯಿಸಿದಂತಿತ್ತು. ಗೋವಾ, ಉಡುಪಿ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಬೈಕ್‌ ಸ್ಟಂಟರ್‌ಗಳು ನಾನಾ ಬಗೆಯ ಸ್ಟಂಟ್‌ಗಳ ಮೂಲಕ ನೋಡುಗರನ್ನು ರೋಮಾಂಚನಗೊಳಿಸಿದರು. ಬೈಕ್‌ ಸ್ಟಂಟ್‌ ಕಣ್ತುಂಬಿಕೊಳ್ಳಲು ನೂರಾರು ಯುವಕರು ಜಮಾಯಿಸಿದ್ದರು.

ಕಬಡ್ಡಿ ಪಂದ್ಯಾವಳಿಯ ನೋಡುಗರ ಕೊರತೆ:

ಉತ್ಸವದಲ್ಲಿ ಗ್ರಾಮೀಣ ಕ್ರೀಡಾಕೂಟಗಳಿಗೂ ಆದ್ಯತೆ ಸಿಕ್ಕಿತ್ತು. ನಗರದ ವಿಮ್ಸ್‌ ಮೈದಾನದಲ್ಲಿ ಜರುಗಿದ ಕಬಡ್ಡಿ ಪಂದ್ಯಾವಳಿಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ತಂಡಗಳು ಭಾಗವಹಿಸಿ,ಗ್ರಾಮೀಣ ಕ್ರೀಡೆಯ ಮಜಲನ್ನು ಪರಿಚಯಿಸಿದವು. ಒಟ್ಟು 34 ಪುರುಷ ಹಾಗೂ 12 ಮಹಿಳಾ ತಂಡಗಳು ಸ್ಪರ್ಧೆಯಲ್ಲಿದ್ದವು. ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ ನೀಡಿ, ಕ್ರೀಡಾಪಟುಗಳನ್ನು ಹುರಿದುಂಬಿಸಿದರು. ಆದರೆ, ಕಬಡ್ಡಿ ವೀಕ್ಷಕರ ಕೊರತೆ ಎದ್ದು ಕಂಡುಬಂತು.

ಬಳ್ಳಾರಿ BY-SKY ಗೆ ಬಂತು ಭಾರೀ ಬೇಡಿಕೆ: ಟಿಕೆಟ್ ದುಬಾರಿಯಾದ್ರೂ ಮುಗಿಬಿದ್ದ ಜನರು!

ಸಾಹಸ ಕ್ರೀಡೆಗಳು, ಗ್ರಾಮೀಣ ಕ್ರೀಡೆಗಳು ನಿರ್ದಿಷ್ಟಸಮಯಕ್ಕೆ ಶುರುಗೊಳ್ಳಲಿಲ್ಲ. ಹೀಗಾಗಿ ಆಸಕ್ತಿಯಿಂದ ಆಗಮಿಸಿದ್ದ ಜನರು ಆಯೋಜಕರ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುತ್ತಿರುವ ದೃಶ್ಯಗಳು ಕಂಡು ಬಂದವು. ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ, ಮೇಯರ್‌ ರಾಜೇಶ್ವರಿ, ಕಂಪ್ಲಿ ಶಾಸಕ ಸುರೇಶ್‌ಬಾಬು, ಸಿರುಗುಪ್ಪ ಶಾಸಕ ಎಂ.ಎಸ್‌. ಸೋಮಲಿಂಗಪ್ಪ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಉತ್ಸವ ವಿವಿಧ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದರು.

click me!