ಕಲ್ಯಾಣ ಕರ್ನಾಟಕ ವಿಮೋಚನೆಗಿಂದು 75 ವರ್ಷ: ಕಲಬುರಗಿಯಲ್ಲಿ ಹಬ್ಬದ ಕಳೆ

By Kannadaprabha News  |  First Published Sep 17, 2022, 7:41 AM IST

ಇಂದು ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ, 75ನೇ ವಿಮೋಚನಾ ದಿನದ ಸಂಭ್ರಮ, ಕಲಬುರಗಿಯಲ್ಲಿ ಹಬ್ಬದ ಕಳೆ, ಬೊಮ್ಮಾಯಿ ಅವರಿಂದ ಧ್ವಜಾರೋಹಣ


ಕಲಬುರಗಿ(ಸೆ.17):  ಸೆ.17 ಕಲಬುರಗಿ ಸೇರಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಪಾಲಿಗೆ ವಿಶೇಷ ದಿನ. ಇದು ನಿಜಾಮರ ಆಡಳಿತದಿಂದ ವಿಮೋಚನೆಗೊಂಡ ದಿನ. ಈ ಬಾರಿ ಈ ವಿಮೋಚನಾ ದಿನದ ಸಂಭ್ರಮ 75ನೇ ವರ್ಷಕ್ಕೆ ಕಾಲಿಡುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದ ಕೇಂದ್ರ ಸ್ಥಾನವಾದ ಕಲಬುರಗಿಯಲ್ಲಿ ಹಬ್ಬದ ಕಳೆ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲ್ಯಾಣ ಕರ್ನಾಟಕದ ಈ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಮೋಚನಾ ದಿನದ ಭಾಗವಾಗಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಶನಿವಾರ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಬೊಮ್ಮಾಯಿ ಅವರು, ಬೆಳಗ್ಗೆ 8.45 ಗಂಟೆಗೆ ನಗರದ ಎಸ್‌.ವಿ.ಪಿ. ವೃತ್ತದಲ್ಲಿ ಹೈದರಾಬಾದ್‌ ಕರ್ನಾಟಕ ವಿಮೋಚನೆಯ ರೂವಾರಿ ಸರ್ದಾರ ವಲ್ಲಭ್‌ಭಾಯ್‌ ಪಟೇಲ್‌ರವರ ಪುತ್ಥಳಿಗೆ ಮಾಲಾರ್ಪಣೆ ಮಾಡುವರು. ನಂತರ 9.15ಕ್ಕೆ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ದಿನಾಚರಣೆ ಅಂಗವಾಗಿ ನಗರದ ಜಿಲ್ಲಾ ಪೊಲೀಸ್‌ ಪರೇಡ್‌ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು. ಬೆಳಗ್ಗೆ 11ಕ್ಕೆ ನಗರದ ಪೊಲೀಸ್‌ ಆಯುಕ್ತಾಲಯದಲ್ಲಿ ನೂತನ ಕಟ್ಟಡ ಉದ್ಘಾಟಿಸುವರು.

Tap to resize

Latest Videos

Bidar: ಕಲ್ಯಾಣ ಕರ್ನಾಟಕ ಉತ್ಸವ: ಬೀದರ್‌ನಲ್ಲಿ ಆಕ್ಷೇಪ

ಬೆಳಗ್ಗೆ 11.30ಕ್ಕೆ ನಗರದ ಎನ್‌.ವಿ.ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಉದ್ಘಾಟಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವರು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸಾಕ್ಷ್ಯಚಿತ್ರ ಬಿಡುಗಡೆ, ಕಲ್ಯಾಣ ಕರ್ನಾಟಕ ಸಾಹಿತ್ಯ ಸಂಸ್ಕೃತಿ ಮಾಲೆಯ ಗ್ರಂಥಗಳ ಬಿಡುಗಡೆ ಹಾಗೂ ದಿ.ಚಂದ್ರಶೇಖರ ಪಾಟೀಲ ಮಹಾಗಾಂವ್‌ ಅವರ ಜೀವನ ಚರಿತ್ರೆ ಬಿಡುಗಡೆ, ತೊಗರಿ ಅಭಿವೃದ್ಧಿ ಮಂಡಳಿಯಿಂದ ‘ಭೀಮಾ ಪಲ್ಸ್‌’ ತೊಗರಿ ಬ್ರ್ಯಾಂಡ್‌ ಬಿಡುಗಡೆ ಮಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳನ್ನೂ ವಿತರಿಸಲಿದ್ದಾರೆ.

ನಂತರ ಮಧ್ಯಾಹ್ನ 2 ಗಂಟೆಗೆ ನಗರದ ಸೂಪರ್‌ ಮಾರ್ಕೆಟ್‌ನ ವಾಣಿಜ್ಯ ಕಟ್ಟಡದ 2ನೇ ಮಹಡಿಯಲ್ಲಿ ಹೈದರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯನ್ನು ‘ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ’ ಎಂದು ಮರು ನಾಮಕರಣ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಅಪರಾಹ್ನ 3.15ಕ್ಕೆ ವಿಶೇಷ ವಿಮಾನದ ಮೂಲಕ ಅವರು ಬೆಂಗಳೂರಿಗೆ ವಾಪಸಾಗುವರು.

ಇಡೀ ವರ್ಷ ಆಚರಣೆ

ಈ ಬಾರಿ ವಿಮೋಚನಾ ದಿನವನ್ನು ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವವನ್ನಾಗಿ ಇಡೀ ವರ್ಷ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಇಡೀ ವರ್ಷ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಸೆ.17ರಂದು ನಡೆಯಲಿರುವ ಕಾರ್ಯಕ್ರಮದ ಭಾಗವಾಗಿ ಕಲಬುರಗಿ ನಗರದಲ್ಲಿ ಮುಖ್ಯ ರಸ್ತೆಯಲ್ಲಿ ಸ್ವಾಗತ ಕಮಾನುಗಳನ್ನು ಕಟ್ಟಿಸಿಂಗರಿಸಲಾಗಿದೆ. ಸರ್ದಾರ್‌ ಪಟೇಲ್‌ ಪುತ್ಥಳಿ ಇರುವ ವೃತ್ತದಲ್ಲಿ ಶನಿವಾರ ಬೃಹತ್‌ ಕಾರ್ಯಕ್ರಮ ಆಯೋಜಿಸಲಾಗಿದೆ. ಇದಲ್ಲದೆ ಜಿಲ್ಲಾದ್ಯಂತ ವಿಮೋಚನೆ ದಿನಾಚರಣೆ ಭಾಗವಾಗಿ ಅಲ್ಲಲ್ಲಿ ರಾಷ್ರಧ್ವಜಾರೋಹಣ ನಡೆಯಲಿವೆ. ಅನೇಕ ರಚನಾತ್ಮಕ, ಸಾಮಾಜಿಕ ಕಾರ್ಯಗಳು ಈ ದಿನ ನಡೆಯಲಿವೆ. ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್‌ ರೇವೂರ್‌ ನೇತೃತ್ವದಲ್ಲಿ ವಿಮೋಚನಾ ದಿನದ ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
 

click me!