ಒಡವೆ ಮಾರಿ ಕೊಡ್ತೀವೆ ಎಂದರೂ ಕೇಳಲಿಲ್ಲ| ಕೋವಿಡ್‌ಗೆ ಬಲಿಯಾದ ವ್ಯಕ್ತಿ ಪುತ್ರಿ ಗೋಳು| ಪೀಣ್ಯದ ಚಿತಾಗಾರದ ಬಳಿ ನಡೆದ ಘಟನೆ| ಹಣ ಕೊಟ್ಟರಷ್ಟೇ ಮೃತದೇಹ ಸಾಗಿಸುವುದಾಗಿ ಹೇಳಿದ ಆ್ಯಂಬುಲೆನ್ಸ್ ಚಾಲಕ| ಯಾರಿಗೂ ಇಂತಹ ಕಷ್ಟಬಾರದಿರಲಿ ಎಂದು ಉಮ್ಮಳಿಸಿ ಬರುತ್ತಿದ್ದ ದುಃಖದ ನಡುವೆ ಕೈ ಮುಗಿದು ಪ್ರಾರ್ಥಿಸಿದ ಭವ್ಯಾ|
ಬೆಂಗಳೂರು(ಏ.22): ಸಕಾಲಕ್ಕೆ ಐಸಿಯು ಬೆಡ್ ಸಿಗದೆ ಮೃತಪಟ್ಟ ಕೊರೋನಾ ಸೋಂಕಿತರೊಬ್ಬರ ಮೃತದೇಹ ಸಾಗಿಸಲು ಆ್ಯಂಬುಲೆನ್ಸ್ ಚಾಲಕ 60 ಸಾವಿರ ರು.ಗೆ ಬೇಡಿಕೆ ಇರಿಸಿದ ಅಮಾನವೀಯ ಘಟನೆ ನಡೆದಿದೆ.
ಪೀಣ್ಯದ ಚಿತಾಗಾರದ ಬಳಿ ಮೃತರ ಪುತ್ರಿ ಭವ್ಯಾ ಅವರ ಗೋಳಾಟ ನೋಡುಗರ ಕಣ್ಣುಗಳಲ್ಲಿ ನೀರು ತರಿಸಿತು. ಮೂರು ದಿನದ ಹಿಂದೆ ತಂದೆಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಮಣಿಪಾಲ್, ಕೊಲಂಬಿಯಾ ಏಷಿಯಾ, ಎಂ.ಎಸ್.ರಾಮಯ್ಯ, ಫೋರ್ಟಿಸ್ ಸೇರಿದಂತೆ ಪ್ರಮುಖ ಆಸ್ಪತ್ರೆಗಳಿಂದ ಹಿಡಿದು ಸಣ್ಣ ಆಸ್ಪತ್ರೆಗಳವರೆಗೂ ಹತ್ತಾರು ಆಸ್ಪತ್ರೆಗೆ ಅಲೆದಾಡಿದರೂ ಒಂದೇ ಒಂದು ಐಸಿಯು ಬೆಡ್ ಸಿಗಲಿಲ್ಲ. ಕೆಲ ಆಸ್ಪತ್ರೆಗಳಲ್ಲಿ ಬೆಡ್ ಇದ್ದರೂ ಆಕ್ಸಿಜನ್ ಇರಲಿಲ್ಲ. ಆಕ್ಸಿಜನ್ ಇರುವ ಆಸ್ಪತ್ರೆಯಲ್ಲಿ ಬೆಡ್ ಇರಲಿಲ್ಲ. ಕಡೆಗೆ ಉಸಿರಾಟದ ಸಮಸ್ಯೆ ಹೆಚ್ಚಾಗಿ ತಂದೆ ಕೊನೆಯುಸಿರೆಳೆದರು. ಸಕಾಲಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ತಂದೆ ಬದುಕುತ್ತಿದ್ದರು ಕಣ್ಣೀರಿಟ್ಟರು.
ತಾಯಿ ಅಂತ್ಯಕ್ರಿಯೆಗೆ ಆಕ್ಸಿಜನ್ ಸಿಲಿಂಡರ್ ಹೊತ್ತು ಬಂದ ಮಗ..!
ಅಲ್ಲದೆ, ತಂದೆಯ ಮೃತದೇಹವನ್ನು ಚಿತಾಗಾರಕ್ಕೆ ಸಾಗಿಸಲು ಆ್ಯಂಬುಲೆನ್ಸ್ ಚಾಲಕ 60 ಸಾವಿರ ರು.ಗೆ ಬೇಡಿಕೆ ಇರಿಸಿದ್ದರು. ದುಡ್ಡು ಕೊಟ್ಟರಷ್ಟೇ ಮೃತದೇಹ ಸಾಗಿಸುತ್ತೇವೆ. ಇಲ್ಲವಾದರೆ, ರಸ್ತೆಯ ಮೇಲೆ ಮೃತದೇಹ ಬಿಟ್ಟು ಹೋಗುತ್ತೇವೆ ಎಂದು ಬೆದರಿಸಿದರು. ಸದ್ಯಕ್ಕೆ ನಮ್ಮ ಬಳಿ ಅಷ್ಟೊಂದು ಹಣವಿಲ್ಲ. ಬಂಗಾರದ ಒಡವೆಗಳನ್ನು ಮಾರಾಟ ಮಾಡಿಯಾದರೂ ಹಣ ಕೊಡುತ್ತೇವೆ. ಮೃತದೇಹವನ್ನು ಚಿತಾಗಾರಕ್ಕೆ ಸಾಗಿಸಿ ಎಂದು ಕೈ ಮುಗಿದು ಬೇಡಿಕೊಂಡೆವು. ಆದರೂ ಆತ ಹಣ ಕೊಟ್ಟರಷ್ಟೇ ಮೃತದೇಹ ಸಾಗಿಸುವುದಾಗಿ ಪುನರುಚ್ಚರಿಸಿದರು. ಯಾರಿಗೂ ಇಂತಹ ಕಷ್ಟಬಾರದಿರಲಿ ಎಂದು ಭವ್ಯಾ ಅವರು ಉಮ್ಮಳಿಸಿ ಬರುತ್ತಿದ್ದ ದುಃಖದ ನಡುವೆ ಕೈ ಮುಗಿದು ಪ್ರಾರ್ಥಿಸಿದರು.