'ಫುಟ್‌ಪಾತಲ್ಲಿ ವಾಹನ ಪಾರ್ಕ್ ಮಾಡಿದ್ರೆ ಕ್ರಿಮಿನಲ್‌ ಕೇಸ್‌'

By Kannadaprabha NewsFirst Published Apr 22, 2021, 8:34 AM IST
Highlights

ದಂಡ ವಸೂಲಿ ಮಾಡಿ| ರಾಜ್ಯ ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ| ಪಾದಚಾರಿ ಮಾರ್ಗ ಇರೋದು ಪಾದಚಾರಿಗಳು ಯಾವುದೇ ಅಡೆತಡೆ ಇಲ್ಲದೆ ಸುರಕ್ಷಿತವಾಗಿ ನಡೆದಾಡುವುದಕ್ಕೆ. ಆ ಜಾಗದಲ್ಲಿ ವಾಹನಗಳ ಪಾರ್ಕಿಂಗ್‌ ಮಾಡುವುದು ಕಾನೂನು ಬಾಹಿರ| 

ಬೆಂಗಳೂರು(ಏ.22): ನಗರದ ಪಾದಚಾರಿ ಮಾರ್ಗಗಳ ಮೇಲೆ ವಾಹನ ನಿಲುಗಡೆ ಮಾಡುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಹಾಗೂ ದಂಡ ವಸೂಲಿ ಮಾಡಬೇಕು ಎಂದು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತು ಬೆಂಗಳೂರಿನ ವಕೀಲ ರಾಮಚಂದ್ರರೆಡ್ಡಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠ ಈ ಮಹತ್ವದ ಆದೇಶ ಮಾಡಿದೆ.
ಪಾದಚಾರಿ ಮಾರ್ಗ ಇರುವುದು ಪಾದಚಾರಿಗಳು ಯಾವುದೇ ಅಡೆತಡೆ ಇಲ್ಲದೆ ಸುರಕ್ಷಿತವಾಗಿ ನಡೆದಾಡುವುದಕ್ಕೆ. ಆ ಜಾಗದಲ್ಲಿ ವಾಹನಗಳ ಪಾರ್ಕಿಂಗ್‌ ಮಾಡುವುದು ಕಾನೂನುಬಾಹಿರ. ಸಂಚಾರಕ್ಕೆ ಅಡ್ಡಿಯಾಗುವಂತೆಯೂ ವಾಹನ ನಿಲುಗಡೆ ಮಾಡುವಂತಿಲ್ಲ. ಹೀಗಾಗಿ, ಪಾದಚಾರಿ ಮಾರ್ಗಗಳ ಮೇಲೆ ವಾಹನ ನಿಲುಗಡೆ ಮಾಡಿದವರ ವಿರುದ್ಧ ದಂಡ ವಿಧಿಸಬೇಕು. ಅಲ್ಲದೇ, ಮೋಟಾರು ವಾಹನ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಅಡಿ ಪೊಲೀಸರು ಕ್ರಿಮಿನಲ್‌ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳಲು ಪೊಲೀಸರಿಗೆ ಮತ್ತು ಬಿಬಿಎಂಪಿಗೆ ಸೂಚಿಸಿ ಸುತ್ತೋಲೆ ಹೊರಡಿಸಬೇಕು ಎಂದು ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶನ ನೀಡಿತು.

ರೋಷನ್‌ ಬೇಗ್‌ ಆಸ್ತಿ ಜಪ್ತಿಗೆ ವಿಳಂಬ: ಹೈಕೋರ್ಟ್‌ ಅಸಮಾಧಾನ

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ಕೆ.ಎನ್‌.ಪುಟ್ಟೇಗೌಡ ವಾದಿಸಿ, ಪಾದಚಾರಿ ಮಾರ್ಗಗಳು ರಸ್ತೆಯ ಭಾಗವಾಗಿದೆ, ಅವುಗಳ ಮೇಲೆ ವಾಹನ ನಿಲುಗಡೆ ಮಾಡುವಂತಿಲ್ಲ. ಸಂಚಾರ ಪೊಲೀಸರು ಹಾಗೂ ಪಾಲಿಕೆಯ ಅಧಿಕಾರಿಗಳು ಸೇರಿ ನಗರ ಹಲವು ಪ್ರದೇಶಗಳಲ್ಲಿ ಪಾರ್ಕಿಂಗ್‌ ವಲಯವನ್ನು ಗುರುತಿಸಿದ್ದಾರೆ. ಅಂತಹ ಕಡೆ ಮಾತ್ರ ವಾಹನಗಳನ್ನು ನಿಲುಗಡೆ ಮಾಡಬೇಕು ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಸರ್ಕಾರದ ವಕೀಲ ವಿಜಯಕುಮಾರ್‌ ಪಾಟೀಲ್‌, ಮೋಟಾರು ವಾಹನ ಕಾಯ್ದೆ ಹಾಗೂ ಕರ್ನಾಟಕ ಸಂಚಾರ ನಿಯಮ-1960 ಮತ್ತು ಭಾರತೀಯ ದಂಡ ಸಂಹಿತೆ ಪ್ರಕಾರ ಪಾದಚಾರಿ ಮಾರ್ಗದ ಮೇಲೆ ವಾಹನಗಳನ್ನು ನಿಲ್ಲಿಸುವಂತಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
 

click me!