ಪರ್ಯಾಯ ಹಳಿ; ಒಂದೆರಡು ದಿನದಲ್ಲಿ ಮಂಗಳೂರು-ಮುಂಬಯಿ ರೈಲು ಪುನಾರಂಭ

By Kannadaprabha News  |  First Published Aug 29, 2019, 11:16 AM IST

ಗುಡ್ಡ ಕುಸಿತ, ಮಳೆಯಿಂದಾಗಿ ರದ್ದಾಗಿದ್ದ ಮಂಗಳೂರು-ಮಂಬಯಿ ನೇರ ರೈಲು ಸಂಚಾರ ಇನ್ನೆರಡು ದಿನಗಳಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಕೊಂಕಣ ಮಾರ್ಗವನ್ನು ಸಂಪರ್ಕಿಸುವ ಮಂಗಳೂರು ಪಡೀಲಿನಲ್ಲಿ ಹಳಿಗೆ ಗುಡ್ಡಜರಿದು ಮಣ್ಣು ಬಿದ್ದ ಸ್ಥಳದಲ್ಲಿ ಸಮಾನಾಂತರವಾಗಿ ಇನ್ನೊಂದು ಹಳಿಯನ್ನು ತ್ವರಿತವಾಗಿ ನಿರ್ಮಾಣ ಮಾಡಲು ಉದ್ದೇಶಿಸಿದೆ.


ಮಂಗಳೂರು(ಆ.29): ಕೊಂಕಣ ಮಾರ್ಗವನ್ನು ಸಂಪರ್ಕಿಸುವ ಮಂಗಳೂರು ಪಡೀಲಿನಲ್ಲಿ ಹಳಿಗೆ ಗುಡ್ಡಜರಿದು ಮಣ್ಣು ಬಿದ್ದ ಸ್ಥಳದಲ್ಲಿ ಸಮಾನಾಂತರವಾಗಿ ಇನ್ನೊಂದು ಹಳಿಯನ್ನು ತ್ವರಿತವಾಗಿ ನಿರ್ಮಾಣ ಮಾಡಲು ಉದ್ದೇಶಿಸಿದೆ. ಕಳೆದ ಒಂದು ವಾರದಿಂದ ಇಲ್ಲಿ ಗುಡ್ಡ ಜರಿದು ಕೇರಳ-ಮಂಗಳೂರು-ಮುಂಬೈ ರೈಲು ಸಂಪರ್ಕ ಕಡಿತಗೊಂಡಿದೆ.

ಇದಕ್ಕೆ ಬೇಕಾದ ಸಿಮೆಂಟ್‌ ಪರಿಕರ, ಟ್ರ್ಯಾಕ್‌ಗಳನ್ನು ಸ್ಥಳದಲ್ಲಿ ತಂದುಹಾಕಲಾಗಿದ್ದು, ಹಳಿಯನ್ನು ಅಳವಡಿಸುವ ಕಾರ್ಯ ಬುಧವಾರ ಆರಂಭಗೊಂಡಿದೆ. ಇದೇ ವೇಳೆ ಸಮೀಪದಲ್ಲೇ ಗುಡ್ಡ ಜರಿದು ಹಳಿಯಿಂದ ಮಣ್ಣು ತೆರವುಗೊಳಿಸುವ ಕೆಲಸ ನಡೆಯುತ್ತಿದೆ. ಆದರೆ ಮಳೆ ಬಂದರೆ ಪದೇ ಪದೇ ಗುಡ್ಡ ಕುಸಿಯುತ್ತಿದ್ದು, ಇದರಿಂದಾಗಿ ಹಾಲಿ ಹಳಿಯನ್ನು ಉಳಿಸಿಕೊಂಡರೂ ಯಾವಾಗ ಬೇಕಾದರೂ ಮತ್ತೆ ಗುಡ್ಡ ಕುಸಿದು ರೈಲು ಸಂಚಾರಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇದೆ.

Latest Videos

undefined

ಮಂಗಳೂರು : ನವೆಂಬರ್15ರೊಳಗೆ ಚುನಾವಣೆ , ಫಲಿತಾಂಶ

ಈ ಹಿನ್ನೆಲೆಯಲ್ಲಿ ಸಮಾನಾಂತರ ಹಳಿ ನಿರ್ಮಾಣಕ್ಕೆ ಫಾಲ್ಘಾಟ್‌ ರೈಲ್ವೆ ವಿಭಾಗದ ಡಿಆರ್‌ಎಂ ಪ್ರತಾಪ್‌ ಸಿಂಗ್‌ ಶಾಮಿ ಬುಧವಾರ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಬೆಳಗ್ಗೆ ಭಾರಿ ಮಳೆ ಸುರಿದ ಕಾರಣ ಸಮಾನಾಂತರ ಹಳಿ ಅಳವಡಿಸುವ ಕೆಲಸಕ್ಕೆ ತೊಡಕಾಗಿದೆ. ಸಂಜೆ ವೇಳೆಗೆ ಕೆಲಸಕ್ಕೆ ವೇಗ ದೊರೆತಿದೆ ಎಂದರು.

ಪರ್ಯಾಯ ಹಳಿ:

ಆರಂಭದಲ್ಲಿ ಸಮಾನಾಂತರ 200 ಮೀಟರ್‌ವರೆಗೆ ಸಮಾನಾಂತರ ಹಳಿಯನ್ನು ರಚಿಸಲಾಗುತ್ತದೆ. ಬಳಿಕ ಮತ್ತೆ 200 ಮೀಟರ್‌ ಸೇರಿ ಒಟ್ಟು 400 ಮೀಟರ್‌ ಉದ್ದದ ಸಮಾನಾಂತರ ಹಳಿ ರಚನೆಯಾಗಲಿದೆ. ಎಲ್ಲ ಸಲಕರಣೆಗಳೂ ಸಿದ್ಧವಾಗಿರುವುದರಿಂದ ಆದಷ್ಟುಶೀಘ್ರದಲ್ಲಿ ಸಮಾನಾಂತರ ಹಳಿ ನಿರ್ಮಾಣವಾಗಲಿದೆ. ಹಾಲಿ ಹಳಿಯ ಪಕ್ಕದಲ್ಲೇ ಈ ಹಳಿಯನ್ನು ನಿರ್ಮಿಸಲಾಗುತ್ತಿದೆ.

ಕುಸಿಯುವ ಗುಡ್ಡಕ್ಕೆ ತಡೆಗೋಡೆ:

ಹಾಲಿ ಹಳಿಗೆ ಕುಸಿದು ಬೀಳುವ ಹಂತದಲ್ಲಿರುವ ಗುಡ್ಡಕ್ಕೆ ತಡೆಗೋಡೆ ರೀತಿಯಲ್ಲಿ ಮರಳು ಚೀಲಗಳ ರಕ್ಷಾ ಕವಚವನ್ನು ನಿರ್ಮಿಸಲಾಗುತ್ತಿದೆ. ಗುಡ್ಡ ಪ್ರದೇಶವನ್ನು ಇಳಿಜಾರು ಮಾಡಿದ್ದು, ಆದರೂ ಮೃದು ಮಣ್ಣು ಮತ್ತೆ ಹಳಿಗೆ ಬೀಳುವ ಸಂಭವ ಇದೆ. ಹಾಗಾಗಿ ಈ ಮಾರ್ಗದಲ್ಲಿ ಒಂದೆರಡು ದಿನಗಳಲ್ಲಿ ಮತ್ತೆ ರೈಲು ಸಂಚಾರ ಹಳಿಗೆ ತರಲಾಗುವುದು ಎಂದು ಡಿಆರ್‌ಎಂ ಪ್ರತಾಪ್‌ ಸಿಂಗ್‌ ತಿಳಿಸಿದ್ದಾರೆ.

ಇಂದೂ ರೈಲು ರದ್ದು:

ಬೆಂಗಳೂರು-ಮಂಗಳೂರು ಮಧ್ಯೆ ಸಂಚರಿಸುವ ರೈಲನ್ನು ಮಂಗಳೂರು-ಕಾರವಾರ ನಡುವೆ ಗುರುವಾರವೂ ರದ್ದುಪಡಿಸಲಾಗಿದೆ. ಅಲ್ಲದೆ ಗುರುವಾರದ ಕೇರಳ-ಮಂಗಳೂರು-ಮುಂಬಯಿ ನಡುವಿನ ರೈಲು ಸಂಚಾರ ರದ್ದುಪಡಿಸಲಾಗಿದೆ. ಮುಂಬಯಿ ರೈಲುಗಳು ಸುರತ್ಕಲ್‌ ನಿಲ್ದಾಣವರೆಗೆ ಬಂದು ಸಂಚರಿಸುತ್ತಿವೆ ಎಂದು ರೈಲ್ವೆ ಮೂಲಗಳು ತಿಳಿಸಿದೆ.

click me!