* ಅಕ್ರಮ ಮರಳು ಸಾಗಾಣಿಕೆ ವಿರುದ್ಧ ಕ್ರಮಕೈಗೊಳ್ಳಲು ಸಚಿವ ಬಿ.ಸಿ. ಪಾಟೀಲ ಸೂಚನೆ
* ಇದರಿಂದ ಕೆರಳಿದ ಶಾಸಕ ಬಂಡಿ ಒಂದು ಬುಟ್ಟಿ ಗರ್ಸ ಬಿಡವಲ್ಲರಿ
* ಕೆಡಿಪಿ ಸಭೆಯಲ್ಲಿ ಸ್ಪಪಕ್ಷದ ಶಾಸಕ-ಸಚಿವರ ಮಧ್ಯೆ ವಾಗ್ವಾದ
ಗದಗ(ಏ.12): ‘ನೋಡ್ರೀ.. ನಾನೇನ್ ಬೇಕು ಅಂತೇಳಿ.. ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಪಡೆದುಕೊಂಡು ಬಂದಿಲ್ಲ. ಪಕ್ಷದ ವರಿಷ್ಠರು ಹಾಗೂ ನಮ್ಮ ಸಿಎಂ ಸೂಚನೆ ಮೇರೆಗೆ ನಾನು ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಯಾವುದೇ ಅಕ್ರಮಕ್ಕೂ ನಾನು ಅವಕಾಶ ಕೊಡಲ್ಲ.. ನಿಮ್ಗೆ ಅಸಮಾಧಾನವಿದ್ದರೆ ಹೋಗಿ ಸಿಎಂ ಹತ್ರ ಹೇಳಿ.. ಇವತ್ತೇ ಉಸ್ತುವಾರಿ ಚೇಂಜ್ ಮಾಡ್ಲಿ.. ಈಗಲೇ ಹೋಗ್ತಿರಿರ್ತಿನಿ..’- ಕೃಷಿ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ(BC Patil).
‘ಇದನ್ನೆಲ್ಲಾ ನನಗ್ ಹೇಳ್ ಬ್ಯಾಡ್ರಿ... ನಾನ್ ಕ್ಷೇತ್ರ ಜನತೆಗೆ ಉತ್ತರಾ ಕೊಡಬೇಕ್, ಮನಿ ಕಟ್ಟವ್ರು ಉಸುಕೇನ್ ಅಮೇರಿಕಾದಿಂದಾ ತರಬೇಕಾ.. ರಸ್ತೆ ನಿರ್ಮಾಣ ಮಾಡಾಕ್ ಒಂದು ಪುಟ್ಟಿಗರ್ಸ ಬಿಡವಲ್ರಿ.. ಹಿಂಗಾದ್ರ ಹ್ಯಾಂಗ್ರಿ.. ಐತೆನ್ ಇಲ್ಲ ರೋಣ ಶಾಸಕ ಕಳಕಪ್ಪ ಬಂಡಿ(Kalakappa Bandi).
ಬೆಲೆ ಏರಿಕೆ ಮುಚ್ಚಿಹಾಕಲು ಬಿಜೆಪಿಯಿಂದ ಕೋಮು ಗಲಭೆ ಸೃಷ್ಟಿ Mohammed Nalapad
ಇದು ಸೋಮವಾರ ಗದಗ(Gadag) ಜಿಲ್ಲಾಡಳಿತ ಭವನದಲ್ಲಿ ಜಿಪಂ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರ ವಿರುದ್ಧ ಸಚಿವರು, ಸಚಿವರ ವಿರುದ್ಧವೇ ಅವರ ಪಕ್ಷದ ಶಾಸಕರು ಅಧಿಕಾರಿಗಳ ಸಮ್ಮುಖದಲ್ಲಿಯೇ ಕಿತ್ತಾಡಿಕೊಂಡ ಪ್ರಸಂಗ.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯಲ್ಲಿ ಅಕ್ರಮ ಮರಳು(Illegal Sand) ಮತ್ತು ಮಣ್ಣು ಗಣಿಗಾರಿಕೆ ವಿಷಯದಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಎಸ್ಪಿ ಶಿವಪ್ರಕಾಶ ದೇವರಾಜ್ ಮಾಹಿತಿ ನೀಡುತ್ತಿದ್ದ ವೇಳೆಯಲ್ಲಿ ಇನ್ನಷ್ಟು ಬಿಗಿ ಕ್ರಮ ತೆಗೆದುಕೊಳ್ಳಿ ಎಂದು ಸಚಿವ ಬಿ.ಸಿ. ಪಾಟೀಲ ಎಸ್ಪಿಗೆ ಸೂಚಿಸುತ್ತಿದ್ದಂತೆ ಕೆಂಡಾಮಂಡಲವಾದ ರೋಣ ಶಾಸಕ ಕಳಕಪ್ಪ ಬಂಡಿ ‘ನೀವೇನ್ ಆಗಾಗ ಬಂದ್ ಹೇಳಿ ಹೋಗುತ್ತೀರಿ.. ಅಧಿಕಾರಿಗಳಿಗೆ ಅಷ್‌್ಟಬೇಕ್. ಎಲ್ಲಾ ಗಾಡಿಗಳನ್ನು ಹಿಡದ್ ಹಿಡಿದ್ ಒಳ್ಗ ಹಾಕಾತಾರಾ.. ನಿಮ್ಗ ಬಂಗಾರಾದ ಕೀರಿಟ ಕೊಡ್ತಾ.. ತೊಗೊಂಡ್ ಕುಂದ್ರಿ’ ಎಂದು ಸಚಿವರ ಸಮ್ಮುಖದಲ್ಲಿಯೇ ಎಸ್ಪಿಗೆ ತರಾಟೆಗೆ ತೆಗೆದುಕೊಂಡರು.
ಆಗ ಮಧ್ಯ ಪ್ರವೇಶಿಸಿದ ಸಚಿವ ಬಿ.ಸಿ. ಪಾಟೀಲ ನೀವು ಹೀಗೆ ತುಂಬಿದ ಸಭೆಯಲ್ಲಿ ಮಾತನಾಡುವುದು ಸರಿಯಲ್ಲ. ನನಗೆ ಸರ್ಕಾರ ವಹಿಸಿದ ಕೆಲಸ ಮಾಡೇ ಮಾಡುತ್ತೇನೆ. ಸರ್ಕಾರದ ನಿಯಮಾವಳಿಗಳ ಪ್ರಕಾರ ಕಾನೂನು ಬದ್ಧವಾಗಿ ಮಾಡ್ಲಿ ನಾನೆಲ್ಲಿ ಬೇಡ ಎಂದಿದ್ದೇನೆ. ಕಾನೂನು ಮೀರಿದ ಯಾವ ಕೆಲಸವನ್ನು ನಾನು ಮಾಡುವುದಿಲ್ಲ, ಇದರ ಬಗ್ಗೆ ನಿಮಗೆ ಆಕ್ಷೇಪಣೆ ಇದ್ದರೆ ಸಿಎಂ ಅವರಿಗೆ ಹೋಗಿ ಹೇಳಿ ಎಂದು ತುಂಬಿದ ಸಭೆಯಲ್ಲಿ ತೀಕ್ಷ$್ಣವಾಗಿಯೇ ಉತ್ತರಿಸಿದರು.
‘ಹೌದ್ರಿ.. ನೀವೇನ್ ಹೇಳತೀರಿ ಕ್ಷೇತ್ರದಲ್ಲಿದ್ದು ಜನರನ್ನು ಎದುರಿಸುವವರು ನಾವು.. ನಮ್ಮ ಸಮಸ್ಯೆ ಕೇಳುವವರು ಯಾರು?’ ಎಂದು ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಿದ್ದಂತೆ ಅಷ್ಟೊತ್ತು ಸುಮ್ಮನ್ನಿದ್ದ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಮಧ್ಯ ಪ್ರವೇಶಿಸಿ ಇಬ್ಬರನ್ನು ಸಮಾಧಾನ ಪಡಿಸಿ ಪರಿಸ್ಥಿತಿ ತಿಳಿಗೊಳಿಸಿ ಸಭೆ ಮುಂದುವರಿಸುವಂತೆ ಸೂಚಿಸಿದರು. ಆದರೆ ಅಕ್ರಮ ಮರಳು ದಂಧೆ ವಿಷಯವಾಗಿ ಆಡಳಿತಾರೂಢ ಪಕ್ಷದ ಸಚಿವ ಶಾಸಕರು ಅಧಿಕಾರಿಗಳ ಸಮ್ಮುಖದಲ್ಲಿ ಈ ರೀತಿ ವರ್ತಿಸಿದ್ದು ಆ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ತೋರಿಸುತ್ತಿತ್ತು.
ಮರಳು ದಂಧೆ ಹಿಡಿತಕ್ಕಾಗಿ ನಡೆಯಿತಾ ಜಟಾಪಟಿ?
ಸಭೆಯಲ್ಲಿ ರೋಣ ಶಾಸಕ ಕಳಕಪ್ಪ ಬಂಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ನಡುವೆ ಅಧಿಕಾರಿಗಳ ಸಮ್ಮುಖದಲ್ಲಿ ಜಟಾಪಟಿ ನಡೆದಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.
ಘಟನೆ ಹಿನ್ನೆಲೆ ಕೆಣಕುತ್ತಾ ಹೋದಾಗ ಗದಗ ಜಿಲ್ಲೆಯ ಮರಳಿಗೆ ಪಕ್ಕದ ಹುಬ್ಬಳ್ಳಿ -ಧಾರವಾಡ ಬಹು ದೊಡ್ಡ ಮಾರುಕಟ್ಟೆಇದೆ. ಪ್ರತಿ ವರ್ಷ ನೂರಾರು ಕೋಟಿ ವಹಿವಾಟು ನಡೆಯುತ್ತದೆ. ಆ ವಹಿವಾಟಿನ ಮೇಲೆ ಹಿಡಿತ ಸಾಧಿಸುವುದಕ್ಕಾಗಿ ನೂತನ ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚಿದ್ದಾರೆ. ಅದನ್ನು ಪಾಲಿಸುತ್ತಿರುವ ಅಧಿಕಾರಿಗಳ ಕ್ರಮ ಸಹಜವಾಗಿಯೇ ಮರಳು ದಂಧೆಯಲ್ಲಿ ತೊಡಗಿ ನಿತ್ಯವೂ ಲಕ್ಷಾಂತರ ಗಳಿಸುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ದೊಡ್ಡ ತೊಂದರೆಗೆ ಕಾರಣವಾಗಿ ಅವರೆಲ್ಲರ ಆದಾಯವೇ ಸ್ಥಗಿತಗೊಂಡಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅವರ ಹಿಂಬಾಲಕರು ಪರೋಕ್ಷವಾಗಿ ಮರಳು ದಂಧೆ ಮೇಲೆ ಹಿಡಿತ ಸಾಧಿಸುತ್ತಾರೆ. ಇದನ್ನು ಪ್ರಾರಂಭಿಕ ಹಂತದಲ್ಲಿಯೇ ವಿರೋಧಿಸದಿದ್ದರೆ ಮುಂದೆ ಬಹಳ ತೊಂದರೆಯಾಗುತ್ತದೆ ಎನ್ನುವ ವಿಷಯ ಬಹಳ ದಿನಗಳಿಂದ ಜಿಲ್ಲಾದ್ಯಂತ ಚರ್ಚೆಯಾಗುತ್ತಿತ್ತು. ಅದೇ ಚರ್ಚೆಗಳೇ ಅಂತಿಮ ಸ್ವರೂಪದ ಭಾಗವಾಗಿ ಸೋಮವಾರ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಳಕಪ್ಪ ಬಂಡಿ ಅವರ ಮೂಲಕ ಹೊರಗೆ ಬಂದಿದೆ. ಇದು ಮೇಲ್ನೋಟಕ್ಕೆ ಸಣ್ಣ ಜಟಾಪಟಿ ಎನ್ನಿಸಿದರೂ ಇದು ಮುಂದೆ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳಲಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸುವ ಸಾಧ್ಯತೆ ನಿಚ್ಚಳವಾಗಿ ಕಂಡು ಬರುತ್ತಿದೆ.