ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಬೊಳ್ಳೂರು ಸಮೀಪದ ಅತ್ತೂರು ಸಂರಕ್ಷಿತಾ ಅರಣ್ಯದ ವ್ಯಾಪ್ತಿಯಲ್ಲಿ ಇದ್ದ ಕೆರೆಯಲ್ಲಿ ನೂರಾರು ಲೋಡ್ ಮಣ್ಣು ತೆಗೆದು ಅದನ್ನು ಖಾಸಗಿ ಬಡಾವಣೆ ನಿರ್ಮಾಣಕ್ಕೆ ಸಾಗಿಸಿರುವ ಆರೋಪ ತಡವಾಗಿ ಕೇಳಿ ಬಂದಿದೆ.
ವರದಿ: ರವಿ. ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ಆ.30): ಅಕ್ರಮವಾಗಿ ಅರಣ್ಯದಲ್ಲಿರುವ ಮರಗಳನ್ನು ಕಡಿದು ಸಾಗಿಸುವುದನ್ನು ನೋಡಿಯೇ ಇರುತ್ತೇವೆ ಅಲ್ವಾ?, ಆದರೆ ಇಲ್ಲಿ ಅರಣ್ಯದೊಳಗಿರುವ ಕೆರೆಯ ಮಣ್ಣನ್ನೇ ಖದೀಮರು ನುಂಗಿ ನೀರು ಕುಡಿದಿದ್ದಾರೆ. ಕೆರೆ ಮಣ್ಣನ್ನು ಯಾರಾದ್ರು ತಿನ್ನುತ್ತಾರಾ ಎನ್ನುವ ಅಚ್ಚರಿ ನಿಮಗೆ ಆಗುತ್ತಿರಬಹುದ ಅಲ್ವಾ.
ಹೌದು, ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಬೊಳ್ಳೂರು ಸಮೀಪದ ಅತ್ತೂರು ಸಂರಕ್ಷಿತಾ ಅರಣ್ಯದ ವ್ಯಾಪ್ತಿಯಲ್ಲಿ ಇದ್ದ ಕೆರೆಯಲ್ಲಿ ನೂರಾರು ಲೋಡ್ ಮಣ್ಣು ತೆಗೆದು ಅದನ್ನು ಖಾಸಗಿ ಬಡಾವಣೆ ನಿರ್ಮಾಣಕ್ಕೆ ಸಾಗಿಸಿರುವ ಆರೋಪ ತಡವಾಗಿ ಕೇಳಿ ಬಂದಿದೆ. ಹೌದು ಅತ್ತೂರು ಅರಣ್ಯ ವ್ಯಾಪ್ತಿಯಲ್ಲಿ ಇರುವ ಈ ಕೆರೆಯಲ್ಲಿ ತುಂಬುವ ನೀರನ್ನೇ ಈ ಅರಣ್ಯದ ಪ್ರಾಣಿಗಳು ಅವಲಂಬಿಸಿದ್ದವು. ಕಾಡು ಪ್ರಾಣಿಗಳ ಕುಡಿಯುವ ನೀರಿಗಾಗಿ ಈ ಕೆರೆಯನ್ನು ನಿರ್ಮಿಸಲಾಗಿದೆ. ಆದರೆ ಕಳೆದ ವರ್ಷ ತೀವ್ರ ಬರಗಾಲ ಎದುರಾಗಿದ್ದರಿಂದ ಬೇಸಿಗೆಯ ಸಂದರ್ಭದಲ್ಲಿ ಕೆರೆ ಸಂಪೂರ್ಣ ಬತ್ತಿ ಹೋಗಿತ್ತು. ಇದನ್ನೇ ದುರ್ಬಳಕೆ ಮಾಡಿಕೊಂಡ ಕಿಡಿಗೇಡಿಗಳು ಕೆರೆಯಿಂದ ಏಳರಿಂದ ಎಂಟು ಅಡಿ ಆಳದವರೆಗೆ ಗುಂಡಿ ತೆಗೆದು ಆ ಮಣ್ಣನ್ನು ಖಾಸಗಿ ವ್ಯಕ್ತಿಯೊಬ್ಬರು ನಿರ್ಮಿಸುತ್ತಿದ್ದ ಬಡಾವಣೆಯ ತಗ್ಗು ಪ್ರದೇಶಗಳಿಗೆ ಮಣ್ಣು ತುಂಬಿದ್ದಾರೆ ಎನ್ನಲಾಗಿದೆ. ಕೆರೆಯಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣು ತೆಗೆದಿರುವುದರಿಂದ ನೀರು ಕುಡಿಯಲು ಬರುವ ಕಾಡು ಪ್ರಾಣಿಗಳು ಆಕಸ್ಮಿಕವಾಗಿ ಅದರಲ್ಲಿ ಬಿದ್ದು ಸಾವನ್ನಪ್ಪುವ ಸಾಧ್ಯತೆ ಇದೆ.
ಕೊಡಗು: ಕುಸಿದುಬಿದ್ದು 2 ವರ್ಷವಾದ್ರೂ ಬ್ರಿಡ್ಜ್ ನಿರ್ಮಿಸದ ಜಿಲ್ಲಾಡಳಿತ, ಸ್ವತಃ ಕಾಲು ಸೇತುವೆ ನಿರ್ಮಿಸಿದ ಜನ..!
ಇನ್ನು ಕೆರೆಯ ನಡುವೆಯೇ ಅಲ್ಲಲ್ಲಿ ಇದ್ದ ಬಿದಿರಿನ ಮೆಳೆಗಳನ್ನೇ ಸಂಪೂರ್ಣ ನೆಲಸಮಗೊಳಿಸಿ ಕೆರೆಯ ಮಣ್ಣನ್ನು ಸಾಗಿಸಲಾಗಿದೆ. ಅಷ್ಟೇ ಅಲ್ಲ ಕೆರೆಯ ಮಧ್ಯದಲ್ಲಿ ಹಾದು ಹೋಗಿದ್ದ ವಿದ್ಯುತ್ ಲೈನಿನ ವಿದ್ಯುತ್ ಕಂಬಗಳೇ ಉರುಳಿ ಬೀಳುತ್ತಿವೆ. ಆದರೆ ಕೆಲವು ಸ್ಥಳೀಯರು ಮಾತ್ರ ಕೆರೆಯಲ್ಲಿ ಭಾರಿ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದ್ದರಿಂದ ನಾವೇ ಹೂಳು ತೆಗೆದಿದ್ದೇವೆ ಸ್ಥಳೀಯರಾದ ಅಭಿಷೇಕ್ ಹೇಳಿದ್ದಾರೆ.
ತೆಗೆದ ಹೂಳನ್ನು ನಮ್ಮ ಜಮೀನುಗಳಿಗೆ ಹಾಕಿಕೊಂಡಿದ್ದೇವೆ. ಯಾವುದೇ ಕಾರಣಕ್ಕೂ ಖಾಸಗಿ ಲೇಔಟಿಗೆ ಮಣ್ಣನ್ನು ಸಾಗಿಸಿಲ್ಲ ಎಂದು ದಿನು ಎಂಬುವರು ಹೇಳಿದ್ದಾರೆ. ಅರಣ್ಯ ಇಲಾಖೆ ಮಡಿಕೇರಿ ಡಿಎಫ್ಓ ಭಾಸ್ಕರ್ ಅವರನ್ನು ಕೇಳಿದರೆ ಈ ಕುರಿತು ದೂರು ಬಂದಿದೆ. ಹೀಗಾಗಿ ಎಸಿಎಫ್ ಅವರಿಗೆ ತನಿಖೆ ಮಾಡಿ ವರದಿ ನೀಡಲು ಸೂಚನೆ ನೀಡಿದ್ದೇನೆ. ವರದಿ ಬಂದ ಬಳಿಕ ಅಲ್ಲಿ ನಿಜವಾಗಿಯೂ ಮಣ್ಣನ್ನು ತೆಗೆದು ಖಾಸಗಿ ಲೇಔಟಿಗೆ ಸಾಗಿಸಲಾಗಿದೆಯಾ ಎಂಬುದನ್ನು ಪರಿಶೀಲಿಸಿ ನಂತರ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಏನೇ ಆಗಲಿ ಅರಣ್ಯದ ವ್ಯಾಪ್ತಿಯಲ್ಲಿ ಇರುವ ಕೆರೆಯಿಂದ ನೂರಾರು ಲೋಡ್ ಮಣ್ಣು ತೆಗೆದು ಸಾಗಿಸಿದ್ದರೂ ಅರಣ್ಯ ಇಲಾಖೆ ಗಮನಕ್ಕೆ ಬಾರದೇ ಇರುವುದು ನಿಜಕ್ಕೂ ಸಾಕಷ್ಟು ಅನುಮಾನಗಳು ಮೂಡುವಂತೆ ಮಾಡಿದೆ.