ರಾಜಧಾನಿಯ ಎಲ್ಲಾ 243 ವಾರ್ಡ್‌ನ ಬೀದಿ ದೀಪಗಳನ್ನು ಎಲ್‌ಇಡಿ ಲೈಟ್‌ಗಳಾಗಿ ಪರಿರ್ವತಿಸಲು ಬಿಬಿಎಂಪಿ ಮುಂದಾಗಿದ್ದು, ಈ ನಿಟ್ಟಿನಲ್ಲಿ ಯಾವ ವಾರ್ಡ್‌ನಲ್ಲಿ ಎಷ್ಟುವಿದ್ಯುತ್ ದೀಪಗಳಿವೆ ಎಂದು ತಿಳಿಯುವುದಕ್ಕೆ ಸಮೀಕ್ಷೆ ಆರಂಭಿಸಿದೆ.
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು (ಡಿ.11): ರಾಜಧಾನಿಯ ಎಲ್ಲಾ 243 ವಾರ್ಡ್‌ನ ಬೀದಿ ದೀಪಗಳನ್ನು ಎಲ್‌ಇಡಿ ಲೈಟ್‌ಗಳಾಗಿ ಪರಿರ್ವತಿಸಲು ಬಿಬಿಎಂಪಿ ಮುಂದಾಗಿದ್ದು, ಈ ನಿಟ್ಟಿನಲ್ಲಿ ಯಾವ ವಾರ್ಡ್‌ನಲ್ಲಿ ಎಷ್ಟುವಿದ್ಯುತ್ ದೀಪಗಳಿವೆ ಎಂದು ತಿಳಿಯುವುದಕ್ಕೆ ಸಮೀಕ್ಷೆ ಆರಂಭಿಸಿದೆ. ರಾಜಧಾನಿ ಬೆಂಗಳೂರಿನ ರಸ್ತೆಗಳಿಗೆ ಎಲ್‌ಇಡಿ ಲೈಟ್ ಅಳವಡಿಕೆಗೆ 2018ರಿಂದ ಬಿಬಿಎಂಪಿ ಪ್ರಯತ್ನ ನಡೆಸುತ್ತಿದೆ. ಆದರೆ, ವಿವಿಧ ಕಾರಣದಿಂದ ಅನುಷ್ಠಾನ ಸಾಧ್ಯವಾಗಿಲ್ಲ. ಇದೀಗ ಬಿಬಿಎಂಪಿಯ ಎಲ್ಲಾ ವಾರ್ಡ್‌ನ 85,656 ರಸ್ತೆಗಳಲ್ಲಿ ಇರುವ ಬೀದಿ ದೀಪಗಳ ಸಂಖ್ಯೆಲೆಕ್ಕ ಹಾಕುವ ಮೂಲಕ ಎಲ್‌ಇಡಿ ಲೈಟ್ ಅಳವಡಿಕೆ ಯೋಜನೆಗೆ ಮರು ಜೀವ ನೀಡುವುದಕ್ಕೆ ಮುಂದಾಗಿದೆ.
ಬೀದಿ ದೀಪಗಳ ಸಂಖ್ಯೆ, ಎಷ್ಟು ವಿದ್ಯುತ್ ಬಳಕೆ ಆಗುತ್ತಿದೆ. ಎಲ್‌ಇಡಿ ಲೈಟ್ ಅಳವಡಿಕೆ ಮಾಡುವುದರಿಂದ ಎಷ್ಟುಪ್ರಮಾಣದ ವಿದ್ಯುತ್ ಉಳಿತಾಯವಾಗಲಿದೆ. ವಿದ್ಯುತ್ ಬಿಲ್‌ಗೆ ಪಾವತಿಸುವ ಮೊತ್ತ ಎಷ್ಟುಕಡಿತವಾಗಲಿದೆ. ಏಕ ಕಾಲಕ್ಕೆ ಎಲ್‌ಇಡಿ ಲೈಟ್ ಅಳವಡಿಕೆಗೆ ಆಗುವ ವೆಚ್ಚ ಎಷ್ಟು. ಒಂದು ವೇಳೆ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡುವುದಾದರೆ ಎಲ್‌ಇಡಿ ದೀಪ ಅಳವಡಿಕೆ ಹಾಗೂ ಸಿಸಿಎಂಎಸ್ ಸ್ಥಾಪಿಸುವುದಕ್ಕೆ ಎಷ್ಟುಸಮಯ ಬೇಕಾಗಲಿದೆ. ಗುತ್ತಿಗೆ ಸಂಸ್ಥೆಗೆ ಯಾವ ರೀತಿ ಗುತ್ತಿಗೆ ನೀಡುವುದು ಸೇರಿದಂತೆ ಅಳವಡಿಕೆಗೆ ಟೆಂಡರ್ ಆಹ್ವಾನಿಸುವುದಕ್ಕೆ ಬೇಕಾದ ತಾಂತ್ರಿಕ ಅಂಶಗಳನ್ನು ಒಳಗೊಂಡ ವಿಶ್ಲೇಷಣಾ ವರದಿ ಸಿದ್ಧಪಡಿಸಲು ಆಂಧ್ರಪ್ರದೇಶ ಮೂಲದ ಪಿಐಸಿ ಇಂಡಿಯಾ ಲಿ. ಎಂಬ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. 10 ವಾರದಲ್ಲಿ ಸಮೀಕ್ಷೆ ಪೂರ್ಣಗೊಳಿಸಿ ವರದಿ ನೀಡುವಂತೆ ಷರತ್ತು ವಿಧಿಸಲಾಗಿದೆ.
ಪ್ರಧಾನಿ ಮೋದಿ ಇನ್ನು 15 ದಿನಕ್ಕೊಮ್ಮೆ ರಾಜ್ಯಕ್ಕೆ ಬರುತ್ತಾರೆ: ಸಚಿವ ಅಶೋಕ್
7 ರಿಂದ 10 ವರ್ಷ ನಿರ್ವಹಣೆ ಷರತ್ತು: ಎಲ್‌ಇಡಿ ದೀಪ ಅಳವಡಿಕೆಗೆ ಮುಂದಾಗುವ ಗುತ್ತಿಗೆದಾರರು ಸೋಡಿಯಂ ದೀಪಗಳನ್ನು ಎಲ್‌ಇಡಿಗೆ ಬದಲಾವಣೆ ಮಾಡುವುದರೊಂದಿಗೆ 7 ರಿಂದ 10 ವರ್ಷ ನಿರ್ವಹಣೆ ಮಾಡಬೇಕಾಗಲಿದೆ. ಗುತ್ತಿಗೆ ಪಡೆದವರಿಗೆ ಬಿಬಿಎಂಪಿಯು ಮಾಸಿಕವಾಗಿ ಹಣ ನೀಡಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 5 ಲಕ್ಷ ಸೋಡಿಯಂ ದೀಪಗಳಿವೆ. ಪ್ರತಿ ತಿಂಗಳು ಸುಮಾರು 20 ರಿಂದ 22 ಕೋಟಿ ರು. ಅನ್ನು ಬೆಸ್ಕಾಂಗೆ ಪಾವತಿ ಮಾಡಲಾಗುತ್ತಿದೆ. ಎಲ್‌ಇಡಿ ದೀಪ ಅಳವಡಿಕೆ ಮಾಡಿ ಕೇಂದ್ರೀಕೃತ ನಿಯಂತ್ರಣ ವ್ಯವಸ್ಥೆ ಮಾಡುವುದರಿಂದ ವಿದ್ಯುತ್ ಬಳಕೆ ಕಡಿತಗೊಳಿಸುವ ಜತೆಗೆ ಶೇ.50 ರಷ್ಟುವಿದ್ಯುತ್ ಬಿಲ್ ಮೊತ್ತ ಕಡಿಮೆ ಮಾಡಬಹುದಾಗಿದೆ. ಕೇಂದ್ರೀಕೃತ ನಿರ್ವಹಣೆ ವ್ಯವಸ್ಥೆಯಿಂದ (ಸಿಸಿಎಂಎಸ್) ಬೀದಿ ದೀಪಗಳ ನಿರ್ವಹಣೆಯೂ ಸುಲಭವಾಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶೇ.60 ರಷ್ಟು ಲೈಟ್ ಬದಲಾವಣೆ ಬಾಕಿ: ಎಲ್‌ಇಡಿ ಬೀದಿ ದೀಪ ಅಳವಡಿಸುವ ಕಾರ್ಯಕ್ಕೆ ಬಿಬಿಎಂಪಿ 2018ರಲ್ಲಿ ಕೈ ಹಾಕಿತ್ತು. ಜಾಗತಿಕ ಮಟ್ಟದ ಟೆಂಡರ್ ಸಹ ಆಹ್ವಾನಿಸಿ ಗುತ್ತಿಗೆದಾರರನ್ನು ನಿಯೋಜನೆ ಸಹ ಮಾಡಿತ್ತು. ಆದರೆ, ಗುತ್ತಿಗೆದಾರ ಕಾಮಗಾರಿ ಆರಂಭಿಸದ ಹಿನ್ನೆಲೆಯಲ್ಲಿ ಯೋಜನೆ ವಿಫಲವಾಗಿತ್ತು. ಈ ನಾಲ್ಕೈದು ವರ್ಷದ ಅವಧಿಯಲ್ಲಿ ಬಿಬಿಎಂಪಿಯು ನಗರದ 2 ರಿಂದ 2.5 ಲಕ್ಷ ಸೋಡಿಯಂ ವಿದ್ಯುತ್ ದೀಪಗಳನ್ನು ವಿವಿಧ ಯೋಜನೆ, ನಿರ್ವಹಣೆ ಹೆಸರಿನಲ್ಲಿ ಎಲ್‌ಇಡಿ ದೀಪಗಳಿಗೆ ಬದಲಾಯಿಸಿದೆ. ಶೇ.30 ರಿಂದ 40 ಸೋಡಿಯಂ ದೀಪಗಳು ಈಗಾಗಲೇ ಎಲ್‌ಇಡಿ ದೀಪಗಳಿಗೆ ಬದಲಾಗಿದೆ. ಉಳಿದ ಶೇ.60 ರಿಂದ 70 ರಷ್ಟುದೀಪಗಳನ್ನು ಮಾತ್ರ ಎಲ್‌ಇಡಿಗೆ ಬದಲಾವಣೆ ಮಾಡಬೇಕಿದೆ.
19 ಕೋಟಿ ರು. ವೆಚ್ಚದಲ್ಲಿ ಪ್ರಯೋಗ: ಎಲ್‌ಇಡಿ ಲೈಟ್ ಟೆಂಡರ್ ವಿಳಂಬದಿಂದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ 9 ವಾರ್ಡ್‌ನಲ್ಲಿ ಬಿಬಿಎಂಪಿಯೇ 18 ಕೋಟಿ ರು. ವೆಚ್ಚದಲ್ಲಿ ಎಲ್‌ಇಡಿ ದೀಪ ಅಳವಡಿಕೆ ಗೆ ಕ್ರಮ ಕೈಗೊಂಡಿದೆ. 9 ವಾರ್ಡ್‌ನ 17,342 ಎಲ್‌ಇಡಿ ದೀಪ ಅಳವಡಿಕೆ ಮಾಡಿ ಎರಡು ವರ್ಷ ನಿರ್ವಹಣೆಗೆ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಈಗಾಗಲೇ ಶೇ.80 ರಷ್ಟುಎಲ್‌ಇಡಿ ದೀಪ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಶೇ.60 ರಷ್ಟುವಿದ್ಯುತ್ ಉಳಿತಾಯವಾಗಲಿದೆ. ವಾರ್ಷಿಕ 6 ಕೋಟಿ ರು. ವಿದ್ಯುತ್ ಬಿಲ್ ಮೊತ್ತ ಪಾಲಿಕೆಗೆ ಉಳಿತಾಯವಾಗಲಿದೆ.
ಕಲ್ಯಾಣ ಕ್ರಾಂತಿ ಮಾಡದೇ ಜನರಿಗೆ ಕಾಂಗ್ರೆಸ್ ಮೋಸ: ಸಚಿವ ಗೋವಿಂದ ಕಾರಜೋಳ
ಎಂಟು ವಲಯದಲ್ಲಿ ಸಮೀಕ್ಷೆಗೆ ಟೆಂಡರ್ ಕರೆಯಲಾಗಿತ್ತು. ಮಹದೇವಪುರ ವಲಯ ಹೊರತು ಪಡಿಸಿ ಏಳು ವಲಯದಲ್ಲಿ ಟೆಂಡರ್ ಅಂತಿಮಗೊಂಡಿದೆ. ಸಮೀಕ್ಷೆ ನಡೆಸಿ ವರದಿ ನೀಡುವುದಕ್ಕೆ 10 ವಾರ ಕಾಲಾವಕಾಶ ನೀಡಲಾಗಿದೆ. ಎಷ್ಟುವಿದ್ಯುತ್ ದೀಪ ಇವೆ, ಎಷ್ಟುವಿದ್ಯುತ್ ಬಳಕೆ ಆಗುತ್ತಿದೆ ಎಂಬ ಮಾಹಿತಿ ಲಭ್ಯವಾಗಲಿದೆ. ಈ ಆಧಾರದಲ್ಲಿ ಎಲ್‌ಇಡಿ ದೀಪ ಅಳವಡಿಕೆಗೆ ಟೆಂಡರ್ ಆಹ್ವಾನಿಸಲಾಗುವುದು.
- ಆನಂದ್, ಅಧೀಕ್ಷಕ ಎಂಜಿನಿಯರ್, ಬಿಬಿಎಂಪಿ ವಿದ್ಯುತ್ ವಿಭಾಗ