ಪಂಚಮಸಾಲಿಗೆ 2ಎ ಮೀಸಲಾತಿ: ಡಿ.5 ರಂದು ಸರ್ವಪಕ್ಷ ಶಾಸಕರ ಸಭೆ, ಕೂಡಲ ಶ್ರೀ

By Kannadaprabha News  |  First Published Dec 1, 2023, 2:00 AM IST

ನಮ್ಮ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕಳೆದ 3 ವರ್ಷಗಳಿಂದ ಐತಿಹಾಸಿಕ ಹೋರಾಟಮಾಡುತ್ತ ಬಂದಿದ್ದರೂ ನಮಗೆ ನ್ಯಾಯ ಸಿಕ್ಕಿಲ್ಲ. ಹಾಗಾಗಿ ಡಿ.5 ರಂದು ಸರ್ವಪಕ್ಷಗಳ ಶಾಸಕರ ಸಭೆ ಕರೆಯಲು ತೀರ್ಮಾನಿಸಲಾಗಿದೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ 


ಬೆಳಗಾವಿ(ಡಿ.01): ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಸಂಬಂಧ ಡಿ.5 ರಂದು ಬೆಳಗಾವಿಯಲ್ಲಿ ಸರ್ವಪಕ್ಷ ಶಾಸಕರ ಸಭೆ ಕರೆಯಲು ತೀರ್ಮಾನಿಸಲಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನುಡಿದರು.

ನಗರದಲ್ಲಿ ಗುರುವಾರ ಪಂಚಮಸಾಲಿ ಸಮಾಜದ ರಾಜ್ಯ ಕಾರ್ಯಕಾರಣಿಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಕಳೆದ 3 ವರ್ಷಗಳಿಂದ ಐತಿಹಾಸಿಕ ಹೋರಾಟಮಾಡುತ್ತ ಬಂದಿದ್ದರೂ ನಮಗೆ ನ್ಯಾಯ ಸಿಕ್ಕಿಲ್ಲ. ಹಾಗಾಗಿ ಡಿ.5 ರಂದು ಸರ್ವಪಕ್ಷಗಳ ಶಾಸಕರ ಸಭೆ ಕರೆಯಲು ತೀರ್ಮಾನಿಸಲಾಗಿದೆ. ಇದರ ಜವಾಬ್ದಾರಿಯನ್ನು ಸಚಿವರಾದ ಲಕ್ಷ್ಮೀ ಹೆಬ್ಬಾಳಕರ, ಶಿವಾನಂದ ಪಾಟೀಲ, ಶಾಸಕರಾದ ವಿಜಯಾನಂದ ಕಾಶಪ್ಪನವರ, ವಿನಯ ಕುಲಕರ್ಣಿ ಮತ್ತು ಎ.ಬಿ.ಪಾಟೀಲ ಅವರಿಗೆ ವಹಿಸಲಾಗಿದೆ. ಈ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿ, ಸುದೀರ್ಘ ಚರ್ಚೆ ನಡೆಸಿ, ನಮ್ಮ ಹೋರಾಟಕ್ಕೆ ತಾರ್ಕಿತ ಅಂತ್ಯಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.

Tap to resize

Latest Videos

ನಮಗೆ ನ್ಯಾಯ ಕೊಡದೆ ಹೋದ್ರೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುದೊಡ್ಡ ಸಮಸ್ಯೆ: ಕೂಡಲ ಶ್ರೀ

ಬೆಳಗಾವಿ ವಿಧಾನಸೌಧ ಅಧಿವೇಶನ ನಡೆಯುವ ಹಿನ್ನೆಲೆಯಲ್ಲಿ ಒಂದು ದಿನ ಸುವರ್ಣ ವಿಧಾನಸೌಧದ ಎದುರು ಹೋರಾಟ ಮಾಡಲು ತೀರ್ಮಾನಿಸಲಾಗಿದ್ದು, ಇನ್ನು ಅಂತಿಮ ದಿನಾಂಕ ನಿಗದಿಯಾಗಿಲ್ಲ. ಕಳೆದ ಸರ್ಕಾರದ ಅವಧಿಯಲ್ಲಿ ನಮ್ಮ ಹೋರಾಟ ತೀವ್ರಗೊಳಿಸಲಾಗಿತ್ತು. ಸರ್ಕಾರ 2ಡಿ ಮೀಸಲಾತಿ ನೀಡಿತ್ತು. ಆದರೆ, ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅದು ಜಾರಿಯಾಗಲಿಲ್ಲ. ಹಾಗಾಗಿ, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ವೇಳೆ ಬಜೆಟ್‌ ಅಧಿವೇಶನದ ಬಳಿಕ ಕಾನೂನು ತಜ್ಞರ ಸಭೆ ಕರೆಯುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸದಿದ್ದರೇ ರಾಜ್ಯಾದ್ಯಂತ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ನಡೆಸಿ ಹೋರಾಟ ಮಾಡಿದ್ದೇವೆ. ಡಿಸೆಂಬರ್‌ ತಿಂಗಳಲ್ಲಿ ಬೆಳಗಾವಿ ಇಲ್ಲವೇ ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗುವುದು. ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ಹಾಗೂ ಲಿಂಗಾಯತ ಎಲ್ಲ ಒಳಪಂಗಡಗಳಿಗೆ ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆಗೆ ಕೂಡಲೇ ಕಾನೂನು ಬಲಕೊಟ್ಟು ನ್ಯಾಯ ಕೊಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಶಶಿಕಾಂತ ನಾಯಿಕ, ಸಿದನಗೌಡ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.

click me!