ಬಾಗಲಕೋಟೆ: ಬರಗಾಲದ ಮಧ್ಯೆ ಬೆಳೆ ಕಾಯೋಕೆ ಹೊಲದಲ್ಲಿಯೇ ಟೆಂಟ್​ ಹಾಕಿದ ಅನ್ನದಾತರು..!

By Girish Goudar  |  First Published Dec 1, 2023, 1:00 AM IST

ಕೆಂಪು ಮೆಣಸಿನಕಾಯಿ ಬೆಳೆಗೆ ಉತ್ತಮ ಬೆಲೆಯ ಮಧ್ಯೆ ನಿಲ್ಲದ ಕಳ್ಳಕಾಕರ ಭಯ. ರಾತ್ರಿ ಗಸ್ತು ತಿರುಗಲು ಮುಂದಾದ ರೈತರು, ಜಿಲ್ಲೆಯ ಬೆನಕಟ್ಟಿ, ಮನ್ನಿಕಟ್ಟಿ, ಹಳ್ಳೂರು, ಬೇವೂರ ಸೇರಿದಂತೆ ವಿವಿಧ ಗ್ರಾಮಗಳ ರೈತರಿಂದ ಟೆಂಟ್​ ಹಾಕಿ ಬೆಳೆ ರಕ್ಷಣೆ, ಬೆಳೆ ಕಾಯೋಕೆ ಹೆಚ್ಚುವರಿ ಪೋಲಿಸ್‌ ಗಸ್ತು ಕ್ರಮಕ್ಕೆ ರೈತರ ಆಗ್ರಹ. 


ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ(ಡಿ.01): ರಾಜ್ಯದಲ್ಲಿ ಎಲ್ಲೆಡೆ ಬರಗಾಲ ಬಿದ್ದು ರೈತರು ಸಂಕಷ್ಟ ಪಡುತ್ತಿದ್ದು, ಇವುಗಳ ಮಧ್ಯೆ ಇದ್ದಷ್ಟು ಬೆಳೆಯನ್ನಾದ್ರೂ ಪಡೆಯೋಣ ಅಂದ್ರೆ ಈ ರೈತರಿಗೆ ಕಳ್ಳಕಾಕರ ಭಯ ಶುರುವಾಗಿದೆ. ಕೆಂಪು ಮೆಣಸಿನಕಾಯಿ ಬೆಳೆದಿರೋ ರೈತ್ರು ಬೆಳೆ ರಕ್ಷಣೆಗಾಗಿ ಹೊಲದಲ್ಲಿಯೇ ಟೆಂಟ್​ ಹಾಕಿ ರಾತ್ರಿಯಿಡೀ ಕೋಲು ಹಿಡಿದು ಓಡಾಡೋ ಪರಿಸ್ಥಿತಿ ಬಂದೊದಗಿದೆ. ಹಾಗಾದ್ರೆ ಇಂತಹ ಸಂಕಷ್ಟ ಎದುರಿಸುತ್ತಿರೋ ರೈತರು ಎಲ್ಲಿಯವರು? ಏನಾಗಿದೆ, ಅಂತೀರಾ? ಈ ಕುರಿತ ವರದಿ ಇಲ್ಲಿದೆ..

Tap to resize

Latest Videos

undefined

ಒಂದೆಡೆ ಉತ್ತಮವಾಗಿ ಬೆಳೆದು ನಿಂತಿರೋ ಕೆಂಪು ಮೆಣಸು ಬೆಳೆ, ಮತ್ತೊಂದೆಡೆ ಬೆಳೆಯ ರಕ್ಷಣೆಗಾಗಿ ಹೊಲಗದ್ದೆಗಳಲ್ಲಿ ವಾಸಕ್ಕಾಗಿ ಹಾಕಿರೋ ಟೆಂಟ್​ಗಳು, ಇವುಗಳ ಮಧ್ಯೆ ಹಗಲು ರಾತ್ರಿ ಎನ್ನದೇ ಕೋಲು ಹಿಡಿದು ಬೆಳೆ ರಕ್ಷಣೆಗೆ ಮುಂದಾಗುತ್ತಿರೋ  ಅನ್ನದಾತರು. ಅಂದಹಾಗೆ ಇಂತಹವೊಂದು ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲೆಯಲ್ಲಿ. ಹೌದು. ರಾಜ್ಯದಲ್ಲಿ ಬರಗಾಲ ಬಿದ್ದಿರೋ ಬೆನ್ನಲ್ಲೆ ಬಾಗಲಕೋಟೆ ಜಿಲ್ಲೆಯಲ್ಲೂ ಬರದ ಛಾಯೆ ಮೂಡಿದ್ದು, ಇದ್ದುದ್ದರಲ್ಲಿಯೇ ಈ ಭಾಗದ ರೈತರು ಕೆಂಪು ಮೆಣಸಿನಕಾಯಿ ಬೆಳೆಯನ್ನ ಬೆಳೆದುಕೊಂಡಿದ್ದಾರೆ. ಆದರೆ ಈ ಬೆಳೆಯನ್ನ ಕಾಪಾಡಿಕೊಳ್ಳೋದೆ ಈ ರೈತರಿಗೆ ಸವಾಲಾಗಿ ಪರಿಣಮಿಸಿದೆ. ಯಾಕಂದ್ರೆ ಕಳ್ಳ ಕಾಕರ ಭಯವೊಂದು ಶುರುವಾಗಿದೆ. ರಾತ್ರಿ ಲಗ್ಗೆ ಇಡ್ತಿರೋ ಕಳ್ಳರು ಹೊಲದಲ್ಲಿರೋ ಕೆಂಪು ಮೆಣಸು ಬೆಳೆಯನ್ನ ಕದ್ದೊಯ್ಯುತ್ತಿದ್ದಾರೆ. ಕ್ವಿಂಟಲ್​ಗೆ 7 ಸಾವಿರ ರೂಪಾಯಿ ಬೆಲೆಯುಳ್ಳ ಕೆಂಪು ಮೆಣಸಿನಕಾಯಿಯನ್ನ ಇದೀಗ ರಕ್ಷಣೆ ಮಾಡೋಕೆ ರೈತರು ತಮ್ಮ ತಮ್ಮ ಹೊಲಗದ್ದೆಗಳಲ್ಲಿಯೇ ಟೆಂಟ್​ ಹಾಕಿ ಅಲ್ಲಿಯೇ ವಾಸ ಮಾಡೋಕೆ ಶುರು ಮಾಡಿದ್ದಾರೆ ಅಂತಾರೆ ಬೆನಕಟ್ಟಿ ಗ್ರಾಮದ ರೈತ ರಂಗಣ್ಣವರ.

ಬಾಗಲಕೋಟೆ: ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗದು, ಡಿಸಿ ಜಾನಕಿ

ಭಯದ ಮಧ್ಯೆಯೇ ಕೈಯಲ್ಲಿ ಕೋಲು ಹಿಡಿದು ಹಗಲು ರಾತ್ರಿ ಗಸ್ತು ತಿರುಗುವ ರೈತರು 

ಇನ್ನು ಈ ಭಾಗದಲ್ಲಿ ಅಂದಾಜು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೆಂಪು ಮೆಣಸಿನಕಾಯಿ ಬೆಳೆಯನ್ನ ರೈತರು ಬೆಳೆದಿದ್ದಾರೆ. ಆದ್ರೆ ಹೊಲದಲ್ಲಿನ ಬೆಳೆಯನ್ನ ಕಳ್ಳರು ಕದ್ದೊಯ್ಯಲು ಮುಂದಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರೋ ರೈತರು ಹೊಲದಲ್ಲಿಯೇ ಟೆಂಟ್​ ಹಾಕಿ ಕೈಯಲ್ಲಿ ಕೋಲು ಹಿಡಿದು ಹಗಲು ರಾತ್ರಿ ಎನ್ನದೇ ಭಯದ ನೆರಳಲ್ಲೇ ಹೊಲದಲ್ಲಿ ತಿರುಗುತ್ತಿದ್ದಾರೆ. ಮುಖ್ಯವಾಗಿ ಜಿಲ್ಲೆಯ ಬೆನಕಟ್ಟಿ, ಮನ್ನಿಕಟ್ಟಿ, ಕಿರಸೂರು, ಹಳ್ಳೂರು, ಬೇವೂರು, ಭಗವತಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಕೆಂಪು ಮೆಣಸಿನಕಾಯಿ ಬೆಳೆಯನ್ನ ಬೆಳೆದಿದ್ದು, ಇನ್ನೇನು ಒಳ್ಳೆಯ ಬೆಲೆ ಬರಬಹುದು ಅನ್ನೋ ಲೆಕ್ಕಾಚಾರ ಇರೋವಾಗಲೆ ಈ ರೀತಿ ಕಳ್ಳತನ ಹೆಚ್ಚಾಗಿರೋದು ಆತಂಕ ಮೂಡಿಸಿದೆ. ಇನ್ನು ಟೆಂಟ್​ನಲ್ಲಿ ಮನೆಯ ಸದಸ್ಯರು ಪಾಳೆಯ ಪ್ರಕಾರ ಬಂದು ಕಾಯ್ದು ಹೋಗುತ್ತಿದ್ದು, ಕಳ್ಳರ ಬಗ್ಗೆ ಭಯಭೀತರಾಗಿದ್ದಾರೆ. ಮೊದಲೇ ಬರಗಾಲದಿಂದ ತತ್ತರಿಸಿರೋ ನಮಗೆ ಕಳ್ಳಕಾಕರ ಭಯ ಗಾಯದ ಮೇಲೆ ಬರೆ ಎಳೆದಂತಾಗಿದೆ ಅಂತಾರೆ ಮನ್ನಿಕಟ್ಟಿ ಗ್ರಾಮದ ರೈತರಾದ ಶಂಕರ್.               

ಒಟ್ಟಿನಲ್ಲಿ ಬರದ ಛಾಯೆಯ ಮಧ್ಯೆ ರೈತರು ಕಷ್ಟಪಟ್ಟು ಬೆಳೆದಿರೋ ಅಲ್ಪಸ್ವಲ್ಪ ಬೆಳೆಯನ್ನೂ ಸಹ ರಕ್ಷಿಸಿಕೊಳ್ಳೋಕೆ ಹರಸಾಹಸಪಡುತ್ತಿದ್ದು, ಇನ್ನಾದ್ರೂ ಸಹ ಜಿಲ್ಲಾಡಳಿತ ಪೋಲಿಸ ಇಲಾಖೆ ಮೂಲಕ ಹೆಚ್ಚುವರಿ ಪೋಲಿಸರನ್ನ ನಿಯೋಜಿಸುವ ಮೂಲಕ ರೈತರ ಆತಂಕ ದೂರ ಮಾಡಿ ನೆಮ್ಮದಿ ತರ್ತಾರಾ ಅಂತ ಕಾದು ನೋಡಬೇಕಿದೆ.

click me!