ಮನುಷ್ಯ ಕಾಮ, ಕ್ರೋಧ, ಮದ, ಮತ್ಸರಗಳಷ್ಟೇ ಅಲ್ಲ ಮದ್ಯಪಾನದಿಂದ ದೂರವಿದ್ದು, ಉತ್ತಮ ಬದುಕು ಕಟ್ಟಿಕೊಳ್ಳುವ ಮೂಲಕ ಸಮಾಜಲ್ಲಿ ಗೌರವಯುತ ವ್ಯಕ್ತಿಯಾಗಿ ಸದೃಢ ಸಮಾಜದ ನಿರ್ಮಾಣ ಮಾಡುವ ಸಂಕಲ್ಪ ತೊಡಬೇಕೆಂದು ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಡಾ. ಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ತಿಳಿಸಿದರು.
ತಿಪಟೂರು: ಮನುಷ್ಯ ಕಾಮ, ಕ್ರೋಧ, ಮದ, ಮತ್ಸರಗಳಷ್ಟೇ ಅಲ್ಲ ಮದ್ಯಪಾನದಿಂದ ದೂರವಿದ್ದು, ಉತ್ತಮ ಬದುಕು ಕಟ್ಟಿಕೊಳ್ಳುವ ಮೂಲಕ ಸಮಾಜಲ್ಲಿ ಗೌರವಯುತ ವ್ಯಕ್ತಿಯಾಗಿ ಸದೃಢ ಸಮಾಜದ ನಿರ್ಮಾಣ ಮಾಡುವ ಸಂಕಲ್ಪ ತೊಡಬೇಕೆಂದು ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಡಾ. ಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ತಿಳಿಸಿದರು.
ನೊಣವಿನಕೆರೆ ಶ್ರೀ ಉಡಿಸಲಮ್ಮ ಕೆಂಪಮ್ಮದೇವಿ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಗಾಂಧಿಸ್ಮರಣೆ ಮತ್ತು ಪಾನಮುಕ್ತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಪೂರ್ವಿಕರು ಮಾದರಿ ನಡೆಸುವ ಮೂಲಕ ಎಲ್ಲರಿಗೂ ಮಾರ್ಗದರ್ಶಕರಾಗಿ ಜೀವನ ನಡೆಸಿ ಇತಿಹಾಸ ಸೃಷ್ಟಿಸಿದ್ದಾರೆ. ಇಂದಿನ ಸಮಾಜದಲ್ಲಿ ಜನರು ದುಶ್ಚಟಗಳಿಂದ ದೂರವಾಗಿ ಮಾದರಿ ಜೀವನ ನಡೆಸಬೇಕು. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಪಾನಮುಕ್ತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಕುಡಿತದ ಚಟದಿಂದ ಅದೆಷ್ಟೋ ಪುರುಷರು ಕುಟುಂಬದಿಂದ, ಸಮಾಜದಿಂದ ನಿರ್ಲಕ್ಷ್ಯಕ್ಕೊಳಗಾಗಿ ಗೌರವ, ಮರ್ಯಾದೆ ಕಳೆದುಕೊಳ್ಳುತ್ತಿದ್ದಾರೆ. ಇಂತಹವರನ್ನು ಸರಿದಾರಿಗೆ ತರಲು ಮದ್ಯವರ್ಜನ ಶಿಬಿರಗಳು ಸಹಕಾರಿ. ಇದರ ಪ್ರಯೋಜನ ಪಡೆದುಕೊಂಡು ಪಾನಮುಕ್ತರಾಗಿ ಆರ್ಥಿಕ ಮತ್ತು ಸಾಮಾಜಿಕವಾಗಿ ಸಬಲರಾಗಬೇಕೆಂದರು.
undefined
ಶಾಸಕ ಕೆ.ಷಡಕ್ಷರಿ ಮಾತನಾಡಿ, ಶ್ರೀಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆಯು ತಾಲೂಕಿನಲ್ಲಿ ೧೫೦ ಕೋಟಿ ರು. ಸಾಲ ನೀಡಿರುವುದಲ್ಲದೆ ಗ್ರಾಮೀಣ ಅಭಿವೃದ್ಧಿಗೆ ಪೂರಕವಾದ ಹಲವು ಕಾರ್ಯಕ್ರಮ ಆಯೋಜಿಸಿ ಎಲ್ಲರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಮಹಾತ್ಮ ಗಾಂಧೀಜಿ ಅಹಿಂಸೆ ಮೂಲಕ ಸ್ವತಂತ್ರ ಚಳುವಳಿ ಹಮ್ಮಿಕೊಂಡು ಸ್ವಾತಂತ್ರ್ಯ ತಂದುಕೊಡುವುದಷ್ಟೇ ಅಲ್ಲದೆ ಸಾಮಾಜಿಕ ಬದುಕಿನಲ್ಲಿ ಮೂಢನಂಬಿಕೆ, ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಕನಸು ಕಂಡಿದ್ದರು. ಬದಲಾದ ಕಾಲಘಟ್ಟದಲ್ಲಿ ವೀರೇಂದ್ರ ಹೆಗ್ಗಡೆ ಅವರು ಪಾನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸುತಿದ್ದಾರೆ. ಬಡವರು, ಮಧ್ಯಮ ವರ್ಗದವರು, ಮಹಿಳೆಯರು, ಮಕ್ಕಳು, ವಯಸ್ಸಾದವರು ಸೇರಿದಂತೆ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಸಾಲ ಸೌಲಭ್ಯಗಳನ್ನು ಕೊಡುವ ಮೂಲಕ ಹತ್ತಾರು ಯೋಜನೆ ಜಾರಿಗೆ ತಂದು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಿದ್ದಾರೆ ಎಂದರು.
ಯೋಜನೆಯ ಜಿಲ್ಲಾ ಹಿರಿಯ ನಿರ್ದೇಶಕರಾದ ದಯಾಶೀಲಾ ಮಾತನಾಡಿ, ರಾಜ್ಯಾದ್ಯಂತ ಸಾವಿರಾರು ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ ಕುಡಿತದ ದಾಸರಾಗಿದ್ದವರನ್ನು ಕುಡಿತ ಬಿಡಿಸಿ ಸಮಾಜದಲ್ಲಿ ಯೋಗ್ಯ ವ್ಯಕ್ತಿಯನ್ನಾಗಿ ಮಾಡಲಾಗಿದೆ. ಕುಡಿತ ಬಿಟ್ಟ ಅದೇಷ್ಟೋ ಜನರು ಉತ್ತಮ ಬದುಕು ಕಟ್ಟಿಕೊಂಡು ಕುಟುಂಬದೊಂದಿಗೆ ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ನಿಮ್ಮ ಬದುಕು ಬೇರೆಯವರಿಗೆ ಪ್ರೇರಣೆಯಾಗುವಂತೆ ಬದುಕು ನಡೆಸಿ ಎಂದು ಹಾರೈಸಿದರು.
ಗ್ರಾಮಾಂತರ ಯೋಜನಾಧಿಕಾರಿ ಕೆ. ಸುರೇಶ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಮಹಿಳೆಯರನ್ನು, ಶ್ರೀಸಾಮಾನ್ಯರನ್ನು ಮೇಲೆತ್ತುವ ಕೆಲಸ ಮಾಡುತ್ತಿದೆ. ಮದ್ಯವರ್ಜನ ಶಿಬಿರ ಅತ್ಯುತ್ತಮ ಕಾರ್ಯವಾಗಿದ್ದು, ತಾಲೂಕಿನಲ್ಲಿ ಶಿಬಿರಗಳನ್ನು ಏರ್ಪಡಿಸಿ ಕುಡಿತದ ದಾಸರಾಗಿರುವವರ ಮನಸ್ಸನ್ನು ಪರಿವರ್ತಿಸಿ, ನವ ಜೀವನ ಕಟ್ಟಿಕೊಡುತ್ತಿವೆ. ಪಾನಮುಕ್ತರು ಮುಂದೆ ಉತ್ತಮ ಜೀವನ ನಡೆಸಿ ಇತರರಿಗೆ ಮಾದರಿಯಾಗಬೇಕೆಂದರು.
ಜನಮಂಗಲ ಕಾರ್ಯಕ್ರಮದಡಿ ಅಂಗವಿಕಲರಿಗೆ ವೀಲ್‌ಚೇರ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ತಿಮ್ಮಯ್ಯನಾಯಕ್, ಪ್ರಾಂಶುಪಾಲ ಎಂ.ಡಿ. ಶಿವಕುಮಾರ್, ತಾ.ಪಂ ಮಾಜಿ ಉಪಾಧ್ಯಕ್ಷ ಶಂಕರ್ ಸೇರಿದಂತೆ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು, ಸಂಘದ ಸದಸ್ಯರು ಭಾಗವಹಿಸಿದ್ದರು.
ಫೋಟೋ 12-ಟಿಪಿಟಿ2ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ಕಾರ್ಯಕ್ರಮ ಉದ್ಘಾಟಿಸಿದ ಕಾಡಸಿದ್ದೇಶ್ವರ ಮಠದ ಡಾ. ಶ್ರೀ ಕರಿವೃ?ಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಶಾಸಕ ಕೆ.ಷಡಕ್ಷರಿ ಮತ್ತಿತರರು.