ಅಪೌಷ್ಟಿಕತೆ ನಿವಾರಣೆಗೆ ಸರ್ಕಾರ ಯೋಜನೆ ರೂಪಿಸಿದ್ದು ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಅಪೌಷ್ಟಿಕ ಮುಕ್ತ ಸಮಾಜ ನಿರ್ಮಿಸಬೇಕೆಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.
ತಿಪಟೂರು: ಅಪೌಷ್ಟಿಕತೆ ನಿವಾರಣೆಗೆ ಸರ್ಕಾರ ಯೋಜನೆ ರೂಪಿಸಿದ್ದು ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಅಪೌಷ್ಟಿಕ ಮುಕ್ತ ಸಮಾಜ ನಿರ್ಮಿಸಬೇಕೆಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.
ಗಾಂಧಿನಗರದ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್, ಜಿಲ್ಲಾಡಳಿತ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಿದ್ದ ಅಪೌಷ್ಟಿಕ ಮಕ್ಕಳು ಮತ್ತು ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಕಿಟ್ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯಡಿ ಪಾಸ್ ಪುಸ್ತಕ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗರ್ಭೀಣಿಯರು, ಬಾಣಂತಿಯರು, ಮಕ್ಕಳು ಆರೋಗ್ಯದ ಮೇಲೆ ಹೆಚ್ಚು ಕಾಳಜಿ ಹೊಂದಬೇಕು. ಆರೋಗ್ಯಕ್ಕಾಗಿ ಸರ್ಕಾರ ಕೋಟ್ಯಾಂತರ ಹಣ ಖರ್ಚು ಮಾಡುತ್ತಿದ್ದು, ಯೋಜನೆಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಪ್ರಚಾರ ಮೂಲಕ ತಿಳಿಸುತ್ತಿದ್ದು, ಗರ್ಭಿಣಿಯರು ಮತ್ತು ಬಾಣಂತಿಯರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
undefined
ಶಿಶು ಅಭಿವೃದ್ದಿ ಯೋಜನಾಧಿಕಾರಿ ಜಿ.ಟಿ. ಅಶೋಕ್ ಮಾತನಾಡಿ, ಅಪೌಷ್ಟಿಕತೆ ನಿವಾರಣೆಗೆ ಪೋಷಣ್ ಅಭಿಯಾನ ಸೇರಿದಂತೆ ಹಲವಾರು ಕಾರ್ಯಕ್ರಮ ಹಮ್ಮಿಕೊಂಡು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಅರ್ಹ ಫಲಾನುಭವಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ತಾಯಂದಿರು ಫಾಸ್ಟ್‌ಫುಡ್‌ನತ್ತ ಒಲವು ತೋರದೆ ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರ ನೀಡಬೇಕು. ಮಕ್ಕಳ ಅಪೌಷ್ಠಿಕತೆ ತಡೆಯಲು ಸ್ಪಿರುಲಿನಾ ನ್ಯೂಟ್ರಿ ಚಿಕ್ಕಿ ನೆರವಾಗಲಿ ಎಂದರು. ನಂದಿನಿ ಪ್ರಾಡಕ್ಟ್ ಕಿಟ್‌ನಲ್ಲಿ ತುಪ್ಪ, ಬಿಸ್ಕತ್ತು ಹಾಗೂ ಪೌಷ್ಟಿಕ ಆಹಾರಗಳಿದ್ದು, ಗರ್ಭಿಣಿಯರು ಉಪಯೋಗಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದರು.
ವೈದ್ಯರಾದ ರೋಹಿತ್ ಮಾತನಾಡಿ, ಪ್ರತಿಯೊಬ್ಬರು ಆರೋಗ್ಯ ಮತ್ತು ಸ್ವಚ್ಚತೆಗೆ ಹೆಚ್ಚು ಒತ್ತು ಕೊಡಬೇಕು. ಗರ್ಭಿಣಿ ಸ್ತ್ರೀಯರಲ್ಲಿ ಹಿಮೋಗ್ಲೋಬಿನ್ ಕೂರತೆಯಿದ್ದು ವಾರದಲ್ಲಿ 2 ಬಾರಿ ಅಂಗನವಾಡಿಗಳಿಗೆ ಭೇಟಿ ನೀಡುತ್ತಿದ್ದು, ಗರ್ಭಿಣಿಯರು ಪರೀಕ್ಷಿಸಿಕೊಳ್ಳಬೇಕೆಂದರು.
ಅಂಗನವಾಡಿ ಕಾರ್ಯಕರ್ತೆ ಶಿವಮ್ಮ ಮಾತನಾಡಿ, ಗರ್ಭಿಣಿಯರ ಚಿಕಿತ್ಸೆ ಮತ್ತು ಶುಶ್ರೂಶೆಗಾಗಿ ತುಮಕೂರಿಗೆ ಕರೆದುಕೊಂಡು ಹೋಗಬೇಕಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಿಕೂಡುವಂತೆ ಶಾಸಕರಿಗೆ ಮನವಿ ಮಾಡಿದರು.
ಜಿಲ್ಲಾ ಖನಿಜಾ ಪ್ರತಿಷ್ಠಾನ ಟ್ರಸ್ಟ್ ಯೋಜನೆಯಡಿ ಅಪೌಷ್ಠಿಕ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಪೌಷ್ಠಿಕಾಂಶಯುಕ್ತ ಕಿಟ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಸೊಪ್ಪು ಗಣೇಶ್, ಸದಸ್ಯರಾದ ಭಾರತಿ ಮಂಜುನಾಥ್, ಆಶೀಫಾಬಾನು, ಹೂರ್‌ಬಾನು, ಮಹಮ್ಮದ್ ಗೌಸ್, ಸೈಯದ್ ಪಾಷಾ, ಅಂಗನವಾಡಿ ಕಾರ್ಯಕರ್ತೆಯರು ತಾಯಂದಿರು, ಮಕ್ಕಳು ಭಾಗವಹಿಸಿದ್ದರು.
ಪೌಷ್ಟಿಕ ಆಹಾರ ಅತ್ಯಗತ್ಯ
ತಿಪಟೂರು : ಅಪೌಷ್ಟಿಕತೆ ನಿವಾರಣೆಗೆ ಪೌಷ್ಟಿಕಾಂಶವುಳ್ಳ ಆಹಾರ ಅತ್ಯವಶ್ಯಕವಾಗಿದ್ದು, ಪ್ರತಿಯೊಬ್ಬರು ಪೌಷ್ಟಿಕ ಆಹಾರ ಸೇವನೆ ಮಾಡುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ರೋಗಮುಕ್ತ ಸಮಾಜವನ್ನಾಗಿ ನಿರ್ಮಿಸಬೇಕೆಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿ. ದೀಪಾ ತಿಳಿಸಿದರು.
ತಾಲೂಕಿನ ಕೊನೇಹಳ್ಳಿ ಕೃಷಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ಆರೋಗ್ಯ ಇಲಾಖೆ, ತಾಲೂಕು ಸ್ತ್ರೀಶಕ್ತಿ ಒಕ್ಕೂಟ ಸಂಯುಕ್ತಾಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಹಾಗೂ ಪೋಷಣ್ ಮಾಸಾಚರಣೆ ಜನಾಂದೋಲನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪೌಷ್ಟಿಕ ಆಹಾರ ಪ್ರತಿಯೊಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾಗಿದ್ದು, ದಿನನಿತ್ಯ ಸೇವಿಸುವ ಆಹಾರದಲ್ಲಿ ಸೊಪ್ಪು, ತರಕಾರಿ, ಮೊಳಕೆಕಾಳು, ಬೇಳೆಕಾಳು, ದ್ವಿದಳ ಧಾನ್ಯಗಳು, ಹಣ್ಣು ಹಂಪಲುಗಳನ್ನು ಸೇವಿಸುವುದರಿಂದ ಉತ್ತಮ ಪೌಷ್ಟಿಕಾಂಶಗಳು ದೊರೆಯಲಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ತುಮಕೂರು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ನಂದಕುಮಾರ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯಕರ ಜೀವನಕ್ಕೆ ಬೇಕಾಗಿರುವ ಸಮತೋಲನ ಆಹಾರವನ್ನು ಸೇವಿಸಬೇಕು. ಸ್ಥಳೀಯವಾಗಿ ಸಿಗುವ ಸೊಪ್ಪು, ತರಕಾರಿ, ಗೆಡ್ಡೆ ಗೆಣಸುಗಳು ಮತ್ತು ಗಳ ಬಳಕೆಯಿಂದ ಉತ್ತಮ ಆರೋಗ್ಯ ನಿಮ್ಮದಾಗಲಿದೆ ಎಂದರು.
ತಾಲೂಕು ಕಾನೂನು ಸೇವಾ ಸಮಿಸಿಯ ಕೆ.ಎಸ್. ಮಮತಾ ಮಾತನಾಡಿ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ ಸೇವನೆಯಿಂದ ನಮ್ಮ ಆರೋಗ್ಯ ವೃದ್ದಿಸಲಿದ್ದು ಪ್ರತಿಯೊಬ್ಬರು ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕೆಂದು ತಿಳಿಸಿದರು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಎಸ್. ಗೋಪಾಲಪ್ಪ ಮಾತನಾಡಿ, ಪ್ರತಿ ವರ್ಷ ಸೆ. ೧ರಿಂದ ೭ರವರೆಗೆ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹವನ್ನು ಆಚರಿಸಲಾಗುತ್ತದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ವಿವಿಧ ರೋಗಗಳನ್ನು ತಡೆಗಟ್ಟುವಲ್ಲಿ ಪೌಷ್ಟಿಕಾಂಶಗಳ ಪಾತ್ರ ಮಹತ್ವದಾಗಿದೆ. ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸಿ ಉತ್ಪಾದನೆ ಮಾಡುವ ಆಹಾರ ಪದಾರ್ಥಗಳ ಸೇವನೆಯಿಂದ ಆಗುತ್ತಿರುವ ಅನಾರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಸಿದರು.