ಕೊರೋನಾ ಲಾಕ್‌ಡೌನ್ ಬಳಿಕ ವಿದೇಶದಲ್ಲಿ ಬಾಕಿಯಾಗಿರುವ ಅನಿವಾಸಿ ಕನ್ನಡಿಗರನ್ನು ರಾಜ್ಯಕ್ಕೆ ಕರೆತರುವ ಕೇಂದ್ರ ಸರ್ಕಾರದ ವಂದೇ ಭಾರತ್ ಮಿಷನ್ ಕಾರ್ಯಾಚರಣೆಯ ಎರಡನೇ ಸರದಿಯ ವಿಮಾನ ಮಂಗಳವಾರ ರಾತ್ರಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಹೇಗಿತ್ತು ಆ ಸಂದರ್ಭ..? ಇಲ್ಲಿ ಓದಿ
ಮಂಗಳೂರು(ಮೇ 13): ಕೊರೋನಾ ಲಾಕ್‌ಡೌನ್ ಬಳಿಕ ವಿದೇಶದಲ್ಲಿ ಬಾಕಿಯಾಗಿರುವ ಅನಿವಾಸಿ ಕನ್ನಡಿಗರನ್ನು ರಾಜ್ಯಕ್ಕೆ ಕರೆತರುವ ಕೇಂದ್ರ ಸರ್ಕಾರದ ವಂದೇ ಭಾರತ್ ಮಿಷನ್ ಕಾರ್ಯಾಚರಣೆಯ ಎರಡನೇ ಸರದಿಯ ವಿಮಾನ ಮಂಗಳವಾರ ರಾತ್ರಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ.
undefined
ಇದರೊಂದಿಗೆ ಕರ್ನಾಟಕದಲ್ಲಿ ಬೆಂಗಳೂರು ಬಳಿಕ ಕನ್ನಡಿಗರನ್ನು ಹೊತ್ತು ಮಂಗಳೂರು ತಲುಪಿದ ಎರಡನೇ ವಿಮಾನ ಇದಾಗಿದೆ. ಕರಾವಳಿಗೆ ಸಂಬಂಧಿಸಿ ಮಂಗಳೂರಿಗೆ ದುಬೈನಿಂದ ಆಗಮಿಸಿದ ಮೊದಲ ವಿಮಾನ ಇದು. ಈ ವಿಮಾನದಲ್ಲಿ ಕರಾವಳಿ ಜಿಲ್ಲೆ ಮಾತ್ರವಲ್ಲ ಶಿವಮೊಗ್ಗ, ಬೆಂಗಳೂರಿನ ಪ್ರಯಾಣಿಕರೂ ಇದ್ದರು.
ದುಬೈನಿಂದ ಮಂಗಳವಾರ ಸಂಜೆ 5.10ಕ್ಕೆ ಹೊರಟ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಐಎಕ್ಸ್-384 ವಿಮಾನ ರಾತ್ರಿ 10.10ಕ್ಕೆ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಈ ವಿಮಾನದಲ್ಲಿ ಒಟ್ಟು 179 ಮಂದಿ ಪ್ರಯಾಣಿಕರಿದ್ದರು. ಇವರೆಲ್ಲರನ್ನು ಮಂಗಳೂರು ಹಾಗೂ ಉಡುಪಿಯ ನಿಗದಿತ ಸ್ಥಳಗಳಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ವಿಮಾನದಲ್ಲಿದ್ದ ಒಟ್ಟು 179 ಪ್ರಯಾಣಿಕರ ಪೈಕಿ 96 ಪುರುಷ ಹಾಗೂ 81 ಮಂದಿ ಮಹಿಳೆಯರು ಸೇರಿದ್ದಾರೆ. 12 ಮಂದಿ ವೈದ್ಯಕೀಯ ತುರ್ತು ಚಿಕಿತ್ಸೆಗೆ ಒಳಗಾಗಲಿದ್ದು, 38 ಮಂದಿ ಗರ್ಭಿಣಿಯರು, ಇಬ್ಬರು ಮಕ್ಕಳಿದ್ದಾರೆ. ಇವರಲ್ಲದೆ ಉದ್ಯೋಗ ಕಳಕೊಂಡವರು, ವೀಸಾ ರದ್ದತಿಗೆ ಒಳಗಾದವರು, ಕೌಟುಂಬಿಕ ತುರ್ತು ಅನಾರೋಗ್ಯ, ಟೂರಿಸ್ಟ್ ವೀಸಾದಲ್ಲಿ ತೆರಳಿದವರಿದ್ದಾರೆ ಎಂದು ದ.ಕ. ಜಿಲ್ಲಾಡಳಿತ ಮಾಹಿತಿ ನೀಡಿದೆ.
ಗರ್ಭಿಣಿಯರ ತವರು ತವಕ
ದುಬೈ ವಿಮಾನ ನಿಲ್ದಾಣದಲ್ಲಿ ತಾಯ್ನಾಡಿಗೆ ಮರಳಲು ಸುಮಾರು 150ಕ್ಕೂ ಅಧಿಕ ಮಂದಿ ಗರ್ಭಿಣಿಯರು ಹೆಸರು ನೋಂದಾಯಿಸಿದ್ದರು. ಆದರೆ ಐದು ತಿಂಗಳು ತುಂಬಿದವರಿಗೆ ಮೊದಲ ಆದ್ಯತೆ ನೀಡಲಾಗಿದ್ದು, ವೈದ್ಯಕೀಯ ಪ್ರಮಾಣ ಪತ್ರ ನೀಡಿದ ಬಳಿಕ ಇವರನ್ನು ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಉಳಿದ ಗರ್ಭಿಣಿಯರಿಗೆ ನಂತರದ ದಿನಗಳಲ್ಲಿ ತಾಯ್ನಾಡಿಗೆ ತೆರಳಲು ಅವಕಾಶ ಕಲ್ಪಿಸಲಾಗುವುದು ಎಂದು ಯುಎಇ ದೂತವಾಸದ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರಿಗರೇ ಗರಿಷ್ಠ:
ದುಬೈನಿಂದ ವಿಮಾನದಲ್ಲಿ ಆಗಮಿಸಿದವರಲ್ಲಿ ಮಂಗಳೂರಿಗರೇ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಸುಮಾರು 125 ಮಂದಿ ಮಂಗಳೂರಿಗರೇ ಇದ್ದು, ಉಳಿದಂತೆ 50 ಮಂದಿ ಉಡುಪಿ, 10 ಮಂದಿ ಕಾರವಾರ, ಶಿವಮೊಗ್ಗ, ಬೆಂಗಳೂರಿನವರೂ ಇದ್ದಾರೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.
14 ದಿನ ಕಡ್ಡಾಯ ಕ್ವಾರಂಟೈನ್
ದುಬೈನಿಂದ ತಾಯ್ನಾಡಿಗೆ ಆಗಮಿಸಿದ ಖುಷಿಯಲ್ಲಿದ್ದರೂ ಅದನ್ನು ಹಂಚಿಕೊಳ್ಳಲು ಅವಕಾಶ ಇರಲಿಲ್ಲ. ವಿಮಾನದಲ್ಲಿ ಆಗಮಿಸಿದ ಎಲ್ಲ ಪ್ರಯಾಣಿಕರನ್ನು ಮನೆಗೆ ಹೋಗಲು ಅವಕಾಶ ಕಲ್ಪಿಸದೆ ಕೊರೋನಾ ಭೀತಿ ಹಿನ್ನೆಲೆಯಲ್ಲಿ 14 ದಿನಗಳ ಕಡ್ಡಾಯ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಇದಕ್ಕಾಗಿ ಜಿಲ್ಲಾಡಳಿತ ಮಂಗಳೂರಿನಲ್ಲಿ ಕಾದಿರಿಸಿದ 17 ಹೊಟೇಲ್ ಹಾಗೂ 12 ಹಾಸ್ಟೆಲ್‌ಗಳಿಗೆ ಅವರನ್ನು ಕಳುಹಿಸಲಾಯಿತು. ಉಳಿದಂತೆ ಉಡುಪಿ ಹಾಗೂ ಕಾರವಾರದಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ.
ವಿಮಾನ ನಿಲ್ದಾಣದಲ್ಲೇ ತಪಾಸಣೆ:
ಕೊರೋನಾ ಸೋಂಕಿನ ಭೀತಿಯಿಂದ ಮುಂಜಾಗ್ರತಾ ಕ್ರಮವಾಗಿ ವಿಮಾನದ ಕ್ಯಾಪ್ಟನ್, ಸಿಬ್ಬಂದಿ ಸಹಿತ ಎಲ್ಲ ಪ್ರಯಾಣಿಕರ ದೇಹದ ಉಷ್ಣತೆಯ ಪರೀಕ್ಷೆಯನ್ನು ವಿಮಾನ ನಿಲ್ದಾಣದಲ್ಲೇ ನಡೆಸಲಾಯಿತು. ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಜ್ವರ ಹಾಗೂ ನೆಗಡಿಯಿಂದ ಬಳಲುತ್ತಿರುವ ಎ ವರ್ಗದವರಿಗೆ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಉಳಿದ ಬಿ ವರ್ಗದ ಆರೋಗ್ಯವಂತರನ್ನು ಪ್ರತ್ಯೇಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ. ಇವರೆಲ್ಲರನ್ನು ವಿಮಾನ ನಿಲ್ದಾಣದಿಂದ ವಸತಿಗೆ ಕರೆದುಕೊಂಡು ಬರಲು ಪ್ರತ್ಯೇಕ ವಾಹನ ವ್ಯವಸ್ಥೆಯನ್ನು ಮಾಡಲಾಗಿತ್ತು.
ಇನ್ನು ಇವರೆಲ್ಲರ ಗಂಟಲು ದ್ರವದ ಸ್ಯಾಂಪಲ್ ಪಡೆದು ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ. ಪ್ರಯಾಣಿಕರ ಪೈಕಿ ಉಡುಪಿ ಮತ್ತು ಕಾರವಾರದವರಿಗೆ ಅಲ್ಲಿಯೇ ಕ್ವಾರಂಟೈನ್ ಹಾಗೂ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ. ಬೆಂಗಳೂರು, ಮಂಗಳೂರು ಹಾಗೂ ಶಿವಮೊಗ್ಗದ ಪ್ರಯಾಣಿಕರಿಗೆ ಮಂಗಳೂರಿನಲ್ಲೇ ಕ್ವಾರಂಟೈನ್ ಹಾಗೂ ಪರೀಕ್ಷೆ ನಡೆಸಲಾಗುವುದು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಅನಿವಾಸಿ ಫೋರಂ ನೆರವು
ದುಬೈನಿಂದ ಭಾರತೀಯರನ್ನು ಅದರಲ್ಲೂ ಕನ್ನಡಿಗರನ್ನು ತಾಯ್ನಾಡಿಗೆ ಕಳುಹಿಸಲು ಅಲ್ಲಿನ ಎನ್‌ಆರ್‌ಐ ಫೋರಂನಡಿ ಅನಿವಾಸಿ ಭಾರತೀಯ ಸಮುದಾಯ ಯುಎಇ ಅಧ್ಯಕ್ಷ ಮೂಲತಃ ಉಡುಪಿ ಕುಂದಾಪುರದ ಪ್ರವೀಣ್ ಕುಮಾರ್ ಶೆಟ್ಟಿವಕ್ವಾಡಿ ಹಾಗೂ ದುಬೈ ಅನಿವಾಸಿ ಕನ್ನಡಿಗರ ಸಂಘಟನೆ ಅಧ್ಯಕ್ಷ ನವೀದ್ ಮಾಗುಂಡಿ ಬಹಳಷ್ಟುಶ್ರಮಿಸಿದ್ದರು. ಮಂಗಳವಾರ ಸಂಜೆ ದುಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕನ್ನಡಿಗರನ್ನು ಬೀಳ್ಕೊಟ್ಟರು. ಎರಡನೇ ಹಂತದಲ್ಲಿ ಮೇ 16ರಂದು ಇನ್ನೊಂದು ವಿಮಾನ ದುಬೈನಿಂದ ಮಂಗಳೂರಿಗೆ ಕನ್ನಡಿಗರನ್ನು ಕರೆತರುವ ನಿರೀಕ್ಷೆ ಇದೆ.
ಸ್ವಾಗತಕ್ಕೆ ಕುಟುಂಬಸ್ಥರಿಲ್ಲ, ಸೆಲ್ಫಿಗಷ್ಟೆಸೀಮಿತ
ತಾಯ್ನಾಡಿಗೆ ಆಗಮಿಸಿದ ಸಂತಸವನ್ನು ಹಂಚಿಕೊಳ್ಳಲು, ಇವರನ್ನು ಸ್ವಾಗತಿಸಲು ಅನಿವಾಸಿ ಕನ್ನಡಿಗರ ಕುಟುಂಬಗಳಿಗೆ ಅವಕಾಶ ಇರಲಿಲ್ಲ. ವಿಮಾನದಲ್ಲಿ ಬಂದವರೆಲ್ಲರನ್ನು ಪರೀಕ್ಷಿಸಿ ಕ್ವಾರಂಟೈನ್‌ಗೆ ಕಳುಹಿಸುವುದರಿಂದ ಕುಟುಂಬದವರು ಯಾರೂ ಬಾರದಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು.
ಕುಟುಂಬಸ್ಥರಿಗೆ ಕ್ವಾರಂಟೈನ್‌ಗೆ ಕೇಂದ್ರಗಳಿಗೂ ಸುಳಿಯದಂತೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಲಾಗಿದೆ. ಆದ್ದರಿಂದ ವಿಮಾನದಿಂದ ಇಳಿದ ಕೂಡಲೇ ಪ್ರಯಾಣಿಕರು ತಾಯ್ನೆಲವನ್ನು ಕಣ್ತುಂಬಿಕೊಂಡರಲ್ಲದೆ, ಸೆಲ್ಫಿ ತೆಗೆದು ಕುಟುಂಬಸ್ಥರಿಗೆ, ಸ್ನೇಹಿತರಿಗೆ ಕಳುಹಿಸಿದರು. ದುಬೈನಿಂದ ಕೊನೆಗೂ ಮಂಗಳೂರಿಗೆ ಕಾಲಿರಿಸಿದ ಧನ್ಯತಾ ಭಾವ, ಆನಂದಬಾಷ್ಪವನ್ನು ಹಲವು ಮಂದಿಯಲ್ಲಿ ಕಂಡುಬಂದರೆ, ಇನ್ನೂ ಕೆಲವರು ತಾಯ್ನೆಲಕ್ಕೆ ನಮಸ್ಕರಿಸಿ ಗೌರವ ಸೂಚಿಸಿದ ವಿದ್ಯಮಾನ ನಡೆಯಿತು.
ಮಂಗಳೂರಿಗೆ ಮೊದಲ ವಿಮಾನ!
ದೇಶಾದ್ಯಂತ ಲಾಕ್‌ಡೌನ್ ಆರಂಭವಾದ ಮಾ.22ರ ಬಳಿಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಒಂದೇ ಒಂದು ವಿಮಾನ ಹಾರಾಟ ನಡೆಸಿಲ್ಲ. ಇಲ್ಲಿಗೆ ಬೇರೆ ಕಡೆಯಿಂದ ವಿಮಾನಗಳೂ ಬಂದಿಲ್ಲ. ವಂದೇ ಭಾರತ್ ಮಿಷನ್ ಕಾರ್ಯಾಚರಣೆಯಲ್ಲಿ ಮಂಗಳವಾರ ಆಗಮಿಸಿದ ಲಾಕ್‌ಡೌನ್ ಅವಧಿಯ ಮೊದಲ ವಿಮಾನ ಇದಾಗಿದೆ ಎಂದು ಏರ್ ಇಂಡಿಯಾದ ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಮಾನ ಮಂಗಳವಾರ ಮಧ್ಯಾಹ್ನ ಯಾವುದೇ ಖಾಲಿ ಸೀಟಿನಲ್ಲಿ ಪೈಲಟ್ ಮತ್ತು ಸರ ಪೈಲಟ್ ಮಾತ್ರ ಮಧ್ಯಾಹ್ನ 1.45ಕ್ಕೆ ಮಂಗಳೂರಿನಿಂದ ಹೊರಟು ಸಂಜೆ 4.10ಕ್ಕೆ ದುಬೈ ತಲುಪಿತ್ತು. ಅಲ್ಲಿಂದ ಸಂಜೆ 5.10ಕ್ಕೆ ಹೊರಟು ರಾತ್ರಿ 10.10ಕ್ಕೆ ಮಂಗಳೂರು ತಲುಪಿದೆ. ಮಂಗಳೂರಿಗೆ ಆಗಮಿಸಿದ ಮೊದಲ ವಿಮಾನದ ಪೈಲಟ್ ಆಗಿ ದೆಹಲಿಯ ಪ್ರತೀಶ್ ವಾಜ್ ಹಾಗೂ ಸಹ ಪೈಲಟ್ ಆಗಿ ವೃಷಬ್ ಶುಕ್ಲ ವಿಮಾನ ಚಲಾಯಿಸಿದ್ದರು. ಇವರಲ್ಲದೆ ನಾಲ್ಕು ಮಂದಿ ಗಗನ ಸಖಿಯರು ವಿಮಾನದಲ್ಲಿ ಆಗಮಿಸಿದ್ದರು. ಇವರೆಲ್ಲರನ್ನು ಮತ್ತೆ ಮಂಗಳೂರಿನಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ವಿಮಾನವನ್ನು ಪೂರ್ತಿಯಾಗಿ ರಾಸಾಯನಿಕ ಬಳಸಿ ಸ್ವಚ್ಛಗೊಳಿಸಲಾಗುತ್ತದೆ. ಪಿಪಿಇ ಕಿಟ್, ಸ್ಯಾನಿಟೈಸರ್ ಬಳಸಿಕೊಂಡು ಪೈಲಟ್‌ಗಳ ಸಹಿತ ವಿಮಾನ ಸಿಬ್ಬಂದಿ ಆಗಮಿಸಿದ್ದು, ಪ್ರಯಾಣಿಕರು ಕೂಡ ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಆಗಮಿಸಿದ್ದಾರೆ ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ.
ಶಾಸಕರಿಗೆ ಜನತೆಯ ಸಮಾಧಾನಿಸುವ ಸವಾಲು
ವಿದೇಶದಿಂದ ಆಗಮಿಸುವವರಿಗೆ ನಗರದ ಕೊಡಿಯಾಲಗುತ್ತುವಿನ ಎಕ್ಸ್‌ಪರ್ಟ್ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ಗೆ ಹಾಕುವ ಬಗ್ಗೆ ಮಂಗಳವಾರ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ವಿದ್ಯಮಾನ ನಡೆಯಿತು. ಈ ವೇಳೆ ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೆ ಗುಂಪು ಸೇರಲಾರಂಭಿಸಿದರು.
ಈ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ಸ್ಥಳಕ್ಕೆ ಆಗಮಿಸಿ, ಇದರಿಂದ ಯಾರಿಗೂ ತೊಂದರೆ ಆಗುವುದಿಲ್ಲ ಎಂದು ಜನತೆಗೆ ಮನವರಿಕೆ ಮಾಡಿದರು. ಈ ಸಂದರ್ಭ ಪಾಲಿಕೆ ಸದಸ್ಯೆ ಲೀಲಾವತಿ, ಬರ್ಕೆ ಪೊಲೀಸರು ಇದ್ದರು. ಶಾಸಕರ ಮನಒಲಿಕೆ ಬಳಿಕ ಜನತೆ ಚದುರಿದರು.
ಇದೇ ರೀತಿ ನಗರದ ಕೆಲವು ಪ್ರದೇಶಗಳಲ್ಲಿ ಸ್ಥಳೀಯರು ವಿದೇಶದಿಂದ ಆಗಮಿಸುವವರಿಗೆ ಇಲ್ಲಿ ಕ್ವಾರಂಟೈನ್ ಮಾಡುವ ಬಗ್ಗೆ ವಿರೋಧಿಸುತ್ತಿದ್ದು, ಅಂತಹವರನ್ನು ಸಮಾಧಾನಿಸುವುದೇ ಶಾಸಕರಿಗೆ ಸವಾಲಾಗಿ ಪರಿಣಮಿಸಿದೆ.