ಸರ್ಕಾರ ರೈತರಿಗೆ ನೆರವು ನೀಡುವ ಬದಲಿಗೆ ರೈತರನ್ನೇ ಬೀದಿಪಾಲು ಮಾಡುವಂತಹ ಕರ್ನಾಟಕ ಭೂ ಸುಧಾರಣಾ ಕಾಯ್ದೆಯನ್ನು ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ಮಾಡಲು ಹೊರಟಿರುವುದು ರೈತಾಪಿ ವರ್ಗದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದನ್ನು ಕೈ ಬಿಡಬೇಕು ಎಂದು ಸರ್ಕಾರಕ್ಕೆ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಚಿಕ್ಕಮಗಳೂರು ಘಟಕ ಆಗ್ರಹಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚಿಕ್ಕಮಗಳೂರು(ಜೂ.18): ರಾಜ್ಯದ ರೈತರಿಗೆ ಮಾರಕವಾದ, ಬಂಡವಾಳಗಾರರ ಪರವಾಗಿರುವ ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಕೈ ಬಿಡಬೇಕೆಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ) ಜಿಲ್ಲಾ ಘಟಕ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಈ ಸಂಬಂಧ ಸಮಿತಿಯ ಮುಖಂಡರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ಗೆ ಬುಧವಾರ ಮನವಿಯನ್ನು ಸಲ್ಲಿಸಿ ರಾಜ್ಯ ಸರ್ಕಾರ ಕಾಯ್ದೆ ತಿದ್ದುಪಡಿಗೆ ತರಲು ಹೊರಟಿರುವ ಸುಗ್ರಿವಾಜ್ಞೆಯನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು.
undefined
ಕೊರೋನಾ ಸಾಂಕ್ರಮಿಕ ರೋಗ ತೀವ್ರವಾಗಿ ಹರಡುತ್ತಿದೆ. ಇದರಿಂದ ಲಕ್ಷಾಂತರ ಜನರ ಸಾವು, ನೋವುಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ರೋಗ ನಿಯಂತ್ರಣ ಮಾಡುವ ಸಲುವಾಗಿ ಸರ್ಕಾರಗಳು ಜಾರಿ ಮಾಡಿದ ಲಾಕ್‌ಡೌನ್ ಮತ್ತಿತರೆ ಕ್ರಮಗಳಿಂದಾಗಿ ಈಗಾಗಲೇ ತೀವ್ರಬಿಕ್ಕಟ್ಟನ್ನು ಎದುರಿಸುತ್ತಿದ್ದ ರೈತಾಪಿ ವರ್ಗದ ಸಂಕಷ್ಟ ಮತ್ತಷ್ಟು ತೀವ್ರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ರೈತರಿಗೆ ನೆರವು ನೀಡುವ ಬದಲಿಗೆ ರೈತರನ್ನೇ ಬೀದಿಪಾಲು ಮಾಡುವಂತಹ ಕರ್ನಾಟಕ ಭೂ ಸುಧಾರಣಾ ಕಾಯ್ದೆಯನ್ನು ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ಮಾಡಲು ಹೊರಟಿರುವುದು ರೈತಾಪಿ ವರ್ಗದ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರದ ಈ ಕ್ರಮ ರೈತ ವಿರೋಧಿ, ಜನವಿರೋಧಿಯಾಗಿದ್ದು, ಬಹುರಾಷ್ಟ್ರೀಯ ಕಂಪನಿಗಳಿಗೆ ಮತ್ತು ಅವರ ದಲ್ಲಾಳಿಗಳಾಗಿರುವ ಈ ದೇಶದ ಬಂಡವಾಳಶಾಹಿಗಳಿಗೆ, ಕಾರ್ಪೊರೇಟ್‌ಶಕ್ತಿಗಳಿಗೆ ಅನುಕೂಲ ಮಾಡಿಕೊಡಲಿದೆ. ಇದರಿಂದಾಗಿ ರಾಜ್ಯದ ರೈತರು ಅದರಲ್ಲೂ ಬಡ ಮತ್ತು ಮಧ್ಯಮ ರೈತರು ಇರುವ ತುಂಡು ಭೂಮಿಯನ್ನೂ ಕಳೆದುಕೊಂಡು ಬೀದಿಗೆ ತಳ್ಳಲ್ಪಡುವ ಅಪಾಯವಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗ: ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಖಂಡನೀಯ
ಕರ್ನಾಟಕದ ಮಲೆನಾಡಿನ ನೆಲದಲ್ಲಿ ಉಳುವವನೇ ಹೊಲದೊಡೆಯ ಘೋಷಣೆಯೊಂದಿಗೆ ಮೊಳಗಿದ ರೈತರ ಐತಿಹಾಸಿಕ ಕಾಗೋಡು ಸತ್ಯಾಗ್ರಹ ಅಂದಿನ ದೇವರಾಜಅರಸು ಅವರ ಸರ್ಕಾರವನ್ನು ನಡುಗಿಸಿತ್ತು. ಆಗ ಭೂಮಿಯ ಬಹುಪಾಲು ಒಡೆತನ ಭೂಮಿಯಲ್ಲಿ ದುಡಿಯದ ದೊಡ್ಡ ಭೂಮಾಲಿಕ ವರ್ಗದ ಹಿಡಿತದಲ್ಲಿತ್ತು. ರೈತರ ಹೋರಾಟಕ್ಕೆ ಮಣಿದ ಅಂದಿನ ಸರ್ಕಾರ ‘ಉಳುವವನೆ ಹೊಲದೊಡೆಯ’ ಎಂಬ ಘೋಷಣೆಗೆ ಭೂಸುಧಾರಣೆ ಕಾಯ್ದೆ ಮೂಲಕ ಸಂಧಾನಿಕ ಮಾನ್ಯತೆ ಕೊಟ್ಟಿತ್ತು. ಅದರ ಪಲವಾಗಿ ಗೇಣಿದಾರರಿಗೆ ಮಾತ್ರ ಭೂಮಿ ಸಿಕ್ಕಿತ್ತು. ಆದರೆ, ಜೀವನ ಪರ್ಯಂತ ಭೂಮಿಯಲ್ಲೇ ದುಡಿಯುವ ರೈತ ಕೂಲಿಗಳಿಗೆ, ದಲಿತರಿಗೆ ಇಂದಿಗೂ ಭೂಮಿ ಸಿಗಲಿಲ್ಲ. ಭೂಮಿ ಮತ್ತು ವಸತಿ ವಂಚಿತರ ಲಕ್ಷಾಂತರ ಅರ್ಜಿಗಳು ಇಂದು ಸರ್ಕಾರದ ಮುಂದಿದೆ. ಮತ್ತೊಂದೆಡೆ ಇಂದಿಗೂ ನೂರಾರು ಎಕರೆ ಭೂಮಿ ದೊಡ್ಡ ಭೂಮಾಲಿಕರ ಕಬ್ಜದಲ್ಲಿದೆ.
ರಾಜ್ಯ ಸರ್ಕಾರ ಇದರ ಸಮರ್ಥನೆಗಾಗಿ ‘ರೈತರ ಭೂಮಿಗೆ ಉತ್ತಮ ಬೆಲೆ ಸಿಗಲಿದೆ, ಕೃಷಿ ಚಟುವಟಿಕೆ ಹೆಚ್ಚಳಕ್ಕೂ ಅನುಕೂಲ, ಕೈಗಾರಿಕೆ ಸ್ಥಾಪನೆ ಮಾಡುವವರಿಗೆ ಭೂಮಿ ಖರೀದಿ ಇನ್ನೂ ಸುಲಭ ಅದಕ್ಕಾಗಿ ಸುಗ್ರಿವಾಜ್ಞೆ ತರಲು ಹೊರಟಿದ್ದೇವೆ’ ಎಂದು ಬಾಲಿಶ ಪ್ರಚಾರದಲ್ಲಿ ತೊಡಗಿರುವುದು ಜನರನ್ನು ನಂಬಿಸಿ, ವಂಚಿಸುವ ಪ್ರವೃತ್ತಿಯನ್ನು ತೋರಿಸುತ್ತಿದೆ ಎಂದು ಆರೋಪಿಸಿದರಲ್ಲದೆ, ಅನ್ನದಾತರನ್ನು ವಂಚಿಸಿ ಕಾರ್ಪೊರೇಟ್ ಶಕ್ತಿಗಳಿಗೆ ಮಣೆಹಾಕುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಸುಗ್ರಿವಾಜ್ಞೆಯನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಒಕ್ಕೂಟದ ಮುಖಂಡರಾದ ಗೌಸ್‌ಮೊಹಿದ್ದೀನ್, ಮಂಜುನಾಥ್, ಕೃಷ್ಣಮೂರ್ತಿ, ನೀಲುಗುಳಿ ಪದ್ಮನಾಭ, ಕೆ.ಕೆ.ಕೃಷ್ಣೆಗೌಡ, ಮಂಜುನಾಥ್, ವೆಂಕಟೇಶ್ ಹಾಜರಿದ್ದರು.