ಹಾವೇರಿಗೆ ಸಿಕ್ಕಿತ್ತು 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯ ಭಾಗ್ಯ| ಕೊರೋನಾ ನಿಯಂತ್ರಣಕ್ಕೆ ಬಾರದ ಹೊರತು ಸಮ್ಮೇಳನ ನಡೆಸುವುದು ಅಸಾಧ್ಯ| ಕೊರೋನಾ ವೈರಸ್ ಹರಡುವಿಕೆ ಹೆಚ್ಚುತ್ತಲೇ ಇದೆ| ಮುಂಬರುವ ತಿಂಗಳುಗಳಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆಯೂ ಇದೆ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಸಮ್ಮೇಳನ ಅತಂತ್ರ|
ನಾರಾಯಣ ಹೆಗಡೆ
ಹಾವೇರಿ(ಜೂ.18): ಆರು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ‘ಅಖಿಲ ಭಾರತ ಸಾಹಿತ್ಯ ಸಮ್ಮೇಳನ’ ನಡೆಸುವ ಅವಕಾಶ ಸಿಕ್ಕರೂ ಸ್ಥಳೀಯರ ಭಿನ್ನಾಭಿಪ್ರಾಯದಿಂದ ಕೈತಪ್ಪಿತ್ತು. ಈಗ 86ನೇ ಸಮ್ಮೇಳನದ ಆತಿಥ್ಯ ಭಾಗ್ಯ ಸಿಕ್ಕರೂ ಕೊರೋನಾ ಕಾಟ ಎದುರಾಗಿದೆ. ಇದರಿಂದ ಜಿಲ್ಲೆಯ ಜನರ ಅಕ್ಷರ ಜಾತ್ರೆ ಕನಸು ಸದ್ಯಕ್ಕೆ ನನಸಾಗುವ ಸಾಧ್ಯತೆಯಿಲ್ಲ.
ಕಲಬುರಗಿಯಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಮುಂದಿನ ‘ಸಮ್ಮೇಳನದ ಆತಿಥ್ಯ’ವನ್ನು ಹಾವೇರಿಗೆ ನೀಡಲಾಗಿತ್ತು. 2020ನೇ ಇಸ್ವಿಯಲ್ಲೇ ಸಮ್ಮೇಳನ ನಡೆಸಬೇಕು ಎಂಬ ನಿಟ್ಟಿನಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ ತಯಾರಿ ನಡೆಸಿತ್ತು. ಆದರೆ, ಮಾಚ್‌ರ್ ತಿಂಗಳಿಂದ ಆರಂಭವಾದ ಕೊರೋನಾ ಕಾಟ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಕೊರೋನಾ ಆರ್ಭಟ ಎಲ್ಲೆಡೆ ಹೆಚ್ಚುತ್ತಿರುವುದರಿಂದ ಮೊದಲು ಜೀವ, ಬಳಿಕ ಉಳಿದದ್ದು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೋನಾ ಸೋಂಕು ಹರಡುವುದು ನಿಯಂತ್ರಣಕ್ಕೆ ಬಾರದ ಹೊರತು ಸಮ್ಮೇಳನ ನಡೆಸಲು ಅವಕಾಶವೂ ಸಿಗದು. ಇದರಿಂದ ಕನ್ನಡ ತೇರನೆಳೆಯುವ ಜಿಲ್ಲೆಯ ಜನರ ಉತ್ಸಾಹಕ್ಕೆ ತಣ್ಣೀರೆರಚಿದಂತಾಗಿದೆ.
ಹಾವೇರಿ: ಜುಲೈನಲ್ಲಿ ಕೊರೋನಾ ಸ್ಫೋಟ, 3 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಕೇಸ್!
ಸಿಕ್ಕಿದ್ದನ್ನು ಬಿಟ್ಟಿದ್ದರು
81ನೇ ಅಖಿಲ ಭಾರತ ಸಮ್ಮೇಳನದ ಆತಿಥ್ಯ ಸಿಕ್ಕರೂ ಹಾವೇರಿ ಮತ್ತು ರಾಣಿಬೆನ್ನೂರು ಜನರ ನಡುವೆ ಸ್ಥಳಕ್ಕಾಗಿ ಹಗ್ಗಜಗ್ಗಾಟ ನಡೆಯುವಂತಾಗಿತ್ತು. ಎರಡೂ ಕಡೆಯವರು ತಮ್ಮಲ್ಲೇ ಸಮ್ಮೇಳನವಾಗಬೇಕು ಎಂಬ ಹಠಕ್ಕೆ ಬಿದ್ದರು. ಕಸಾಪ ಅಂದಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರೇ ಬಂದು ಸಭೆ ನಡೆಸಿ ಅಭಿಪ್ರಾಯ ಪಡೆದರು. ಆದರೆ, ಜಿಲ್ಲೆಯ ಜನರಲ್ಲೇ ಒಮ್ಮತ ಏರ್ಪಡಲಿಲ್ಲ. ಸಮ್ಮೇಳನ ಬೇರೆ ಜಿಲ್ಲೆಯ ಪಾಲಾದರೂ ಪರವಾಗಿಲ್ಲ, ಆದರೆ ನಮ್ಮಲ್ಲೇ ಆಗಬೇಕು ಎಂಬ ತೀರ್ಮಾನಕ್ಕೆ ಹಾವೇರಿ ಮತ್ತು ರಾಣಿಬೆನ್ನೂರು ಜನತೆ ಬಂದಿದ್ದರು. ಇದು ತೀವ್ರತರಕ್ಕೆ ಹೋಗಿ ಜಿಲ್ಲೆಯ ಸಾಹಿತ್ಯಿಕ ಮನಸ್ಸುಗಳೇ ಒಡೆಯುವಂಥ ಹಂತಕ್ಕೆ ತಲುಪಿತು. ಇದರಿಂದ ಆತಂಕಗೊಂಡ ಕಸಾಪ ಪದಾಧಿಕಾರಿಗಳು ಜಿಲ್ಲೆಗೆ ಕೊಟ್ಟಅವಕಾಶವನ್ನು ವಾಪಸ್ ಪಡೆದರು. ಒಮ್ಮೆ ಸಿಕ್ಕ ಅವಕಾಶ ಕೈಚೆಲ್ಲಿದ ತಪ್ಪಿಗಾಗಿ 5 ವರ್ಷ ಕಾಯುವಂತಾಯಿತು. ಈಗ 86ನೇ ಸಮ್ಮೇಳನದ ಆತಿಥ್ಯದ ಭಾಗ್ಯ ಸಿಕ್ಕರೂ ಸಮ್ಮೇಳನ ನಡೆಸುವ ಭಾಗ್ಯಕ್ಕಾಗಿ ಕಾಯುವಂತಾಗಿದೆ.
ಈ ವರ್ಷ ಸಾಧ್ಯವೇ ಇಲ್ಲ
ಈ ವರ್ಷದ ಡಿಸೆಂಬರ್ ಅಥವಾ ಮುಂದಿನ ಜನವರಿ ತಿಂಗಳಲ್ಲಿ ಹಾವೇರಿ ನಗರದಲ್ಲಿ ಸಮ್ಮೇಳನ ನಡೆಸಬೇಕು ಎಂಬ ನಿಟ್ಟಿನಲ್ಲಿ ಕಸಾಪ ಪದಾಧಿಕಾರಿಗಳು ತಯಾರಿ ನಡೆಸಿದ್ದರು. ಅದಕ್ಕಾಗಿ ಸ್ಥಳ ಪರಿಶೀಲನೆ ನಡೆಸಿ ಜಿಎಚ್ ಕಾಲೇಜು ಹಿಂಭಾಗದ ಹೊಲದಲ್ಲಿ ಪ್ರಧಾನ ವೇದಿಕೆ ಮಾಡಬೇಕು ಎಂಬ ಚರ್ಚೆಯಾಗಿತ್ತು. ವಸತಿ ಸಮಸ್ಯೆ ಎದುರಾಗಬಾರದು ಎಂಬ ಕಾರಣಕ್ಕೆ ಸುತ್ತಮುತ್ತಲಿನ ಪಟ್ಟಣಗಳಲ್ಲೂ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಕೊರೋನಾ ವಕ್ಕರಿಸಿದ್ದರಿಂದ ಎಲ್ಲ ಪ್ರಕ್ರಿಯೆಯೂ ಸ್ಥಗಿತಗೊಳ್ಳುವಂತಾಯಿತು. ಕೊರೋನಾ ವೈರಸ್ ಹರಡುವಿಕೆ ಹೆಚ್ಚುತ್ತಲೇ ಇದೆ. ಮುಂಬರುವ ತಿಂಗಳುಗಳಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆಯೂ ಇದೆ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಸಮ್ಮೇಳನ ಅತಂತ್ರವಾಗಿದೆ. ಲಕ್ಷಾಂತರ ಜನ ಸೇರುವ ಸಮ್ಮೇಳನದಲ್ಲಿ ಸುರಕ್ಷತಾ ಕ್ರಮ ಪಾಲಿಸುವುದೂ ಕಷ್ಟ. ಆದ್ದರಿಂದ ಸಮ್ಮೇಳನ ಯಾವಾಗ ನಡೆಯಬಹುದು ಎಂಬುದನ್ನು ಊಹೆ ಮಾಡುವ ಸ್ಥಿತಿಯೂ ಇಲ್ಲ. ಕೊರೋನಾ ನಿಯಂತ್ರಣ ಬಂದ ಮೇಲೆಯೇ ಸಮ್ಮೇಳನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ.
ಈಗಿನ ಅಧ್ಯಕ್ಷರ ಅಧಿಕಾರಾವಧಿ ಮಾರ್ಚ್‌ವರೆಗೆ
ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿರುವ ಮನು ಬಳಿಗಾರ, ಕೇಂದ್ರ ಪರಿಷತ್ ಪದಾಧಿಕಾರಿಗಳು, ಜಿಲ್ಲಾ ಸಮಿತಿಯ ಈಗಿನ ಪದಾಧಿಕಾರಿಗಳ ಅಧಿಕಾರ 2012ರ ಮಾಚ್‌ರ್‍ಗೆ ಮುಗಿಯಲಿದೆ. ಹಾವೇರಿಗೆ ಸಮ್ಮೇಳನ ತರಲು ಪ್ರಯತ್ನಿಸಿದವರಿಗೆ ಸಮ್ಮೇಳನ ನಡೆಸುವ ಭಾಗ್ಯ ದೊರೆಯುವ ಸಾಧ್ಯತೆ ಕಡಿಮೆ. ಜನವರಿ ವೇಳೆಗೆ ಕೊರೋನಾ ಹಾವಳಿ ಕಡಿಮೆಯಾದರೆ ಸರಳವಾಗಿ ಸಮ್ಮೇಳನ ನಡೆಸಬಹುದೇ ಹೊರತು ಇದೇ ಸ್ಥಿತಿ ಮುಂದುವರಿದರೆ ಈಗಿನ ಕಸಾಪ ಪದಾಧಿಕಾರಿಗಳು ಸಮ್ಮೇಳನ ನಡೆಸುವ ಅವಕಾಶದಿಂದ ವಂಚಿತರಾಗಲಿದ್ದಾರೆ.
ಕೊರೋನಾ ಸೋಂಕು ಹೆಚ್ಚುತ್ತಲೇ ಇದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟುಹೆಚ್ಚುವ ಭೀತಿಯೂ ಇದೆ. ಈಗಿನ ಪರಿಸ್ಥಿತಿಯಲ್ಲಿ ಅಖಿಲ ಭಾರತ ಸಮ್ಮೇಳನದ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ. ಸೋಂಕು ನಿಯಂತ್ರಣಕ್ಕೆ ಬಂದ ಮೇಲೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ನಮ್ಮ ಅವಧಿಯಲ್ಲೇ ಸಮ್ಮೇಳನ ನಡೆಸುವ ಅವಕಾಶ ಸಿಕ್ಕರೆ ಖುಷಿ ಎಂದು ಕಸಾಪ ಅಧ್ಯಕ್ಷ ಮನು ಬಳಿಗಾರ ಅವರು ಹೇಳಿದ್ದಾರೆ.