ಕಳೆದ ಮೂರು ತಿಂಗಳಿಂದ ಕೊರೋನಾ ಮಹಾಮಾರಿ ರಾಜ್ಯವನ್ನು ಇನ್ನಷ್ಟು ತೊಂದರೆಗೆ ಸಿಲುಕಿಸಿದೆ. ಆದಾಗ್ಯೂ ಮುಖ್ಯಮಂತ್ರಿಗಳು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸಾರ್ವಜನಿಕರ ಯಾವುದೇ ಕೆಲಸಕ್ಕೂ ತೊಂದರೆಯಾಗದಂತೆ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಹೊಳೆಹೊನ್ನೂರು(ಜೂ.18): ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು. ಅವರು ಪಟ್ಟಣದಲ್ಲಿ ಮಂಗಳವಾರ ನಡೆದ ವೀರಭದ್ರಸ್ವಾಮಿ ದೇವಾಲಯದ ರು. 30 ಲಕ್ಷದ ಸಮುದಾಯ ಭವನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಯಡಿಯೂರಪ್ಪ ಮುಖ್ಯಮಂತ್ರಿಯಾದಗಿನಿಂದ ಇಲ್ಲಿಯವರೆಗೂ ರಾಜ್ಯ ಒಂದಿಲ್ಲೊಂದು ಸಂಕಷ್ಟವನ್ನು ಎದುರಿಸುತ್ತಿದೆ. ಕಳೆದ ವರ್ಷ ಅತಿವೃಷ್ಟಿಯಿಂದ ಕೋಟ್ಯಂತರ ರುಪಾಯಿಗಳ ಆಸ್ತಿಪಾಸ್ತಿ ನಾಶವಾಗಿದ್ದು, ಈ ಬಾರಿ ಕಳೆದ ಮೂರು ತಿಂಗಳಿಂದ ಕೊರೋನಾ ಮಹಾಮಾರಿ ರಾಜ್ಯವನ್ನು ಇನ್ನಷ್ಟು ತೊಂದರೆಗೆ ಸಿಲುಕಿಸಿದೆ. ಆದಾಗ್ಯೂ ಮುಖ್ಯಮಂತ್ರಿಗಳು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸಾರ್ವಜನಿಕರ ಯಾವುದೇ ಕೆಲಸಕ್ಕೂ ತೊಂದರೆಯಾಗದಂತೆ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು.
ಶಿವಮೊಗ್ಗ ತಾ. ಸೋಗಾನೆಯಲ್ಲಿ ರು. 220 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಹಲವಾರು ಯೋಜನೆಗಳಲ್ಲಿ ಜಿಲ್ಲೆಗೆ ಹೊಸ ರೈಲುಗಳನ್ನು ನೀಡಲಾಗಿದೆ. ಪ್ರಧಾನಿ ಮೋದಿಯವರು ರು. 20 ಲಕ್ಷ ಕೋಟಿ ವಿಶೇಷ ಅನದಾನದಲ್ಲಿ ಬಡವರಿಗೆ ಹಾಗೂ ಹಿಂದುಳಿದ ವರ್ಗದವರಿಗೆ, ಸಣ್ಣ ಉದ್ದಿಮೆದಾರರಿಗೆ, ರೈತರಿಗೆ, ಮಹಿಳೆಯರಿಗೆ, ಕೂಲಿ ಕಾರ್ಮಿಕರಿಗೆ ಅನೇಕ ಯೋಜನೆ ನೀಡಿದ್ದಾರೆ ಎಂದರು.
ಪಿಯುಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಶಿವಮೊಗ್ಗ ಸಕಲ ಸಜ್ಜು
ಹೊಳೆಹೊನ್ನೂರು ಗ್ರಾಮ ಪಂಚಾಯ್ತಿ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆ ಏರಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿಲಾಗಿದ್ದು, ತಾಂತ್ರಿಕ ತೊಂದರೆಗಳಿಂದಾಗಿ ಅದು ಹಿನ್ನಡೆಯಾಗಿದೆ. ಮುಂದಿನ ದಿನಗಳಲ್ಲಿ ಶಾಸಕರ ಸಹಕಾರದೊಂದಿಗೆ ಇದನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಗ್ರಾಮಾಂತರ ಶಾಸಕ ಕೆ.ಬಿ. ಅಶೋಕನಾಯ್ಕ ಮಾತನಾಡಿ, ಸಂಸದ ರಾಘವೇಂದ್ರ ಜಿಲ್ಲೆಯ ಅಭಿವೃದ್ಧಿ ಹರಿಕಾರರಲ್ಲಿ ಒಬ್ಬರಾಗಿದ್ದು, ಸದಾ ಜನರ ಕಷ್ಟಸುಖಗಳಿಗೆ ಸ್ಪಂದಿಸಿ ಅವರ ಆಶಾ ಭಾವನೆಗಳನ್ನು ಈಡೇರಿಸುವಲ್ಲಿ ಮುತವರ್ಜಿ ವಹಿಸುತ್ತಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಮತದಾರರ ಅಭಿಲಾಷೆಯಂತೆ ಕೇಂದ್ರದ ರೈಲ್ವೆ ಸಚಿವರಾಗಲೆಂದು ಹಾರೈಸಿದರು.
ತಹಸೀಲ್ದಾರ್ ಶಿವಕುಮಾರ್, ಜಿಪಂ ಸದಸ್ಯೆ ರೇಖಾ ಉಮೇಶ್, ವೀರಭದ್ರಪ್ಪ ಪೂಜಾರ್, ತಾಪಂ ಸದಸ್ಯ ತಿಪ್ಪೇಶ್ ರಾವ್, ಎಪಿಎಂಸಿ ಸದಸ್ಯ ಶ್ರೀನಿವಾಸ್, ಎ.ಕೆ. ಮಹದೇವಪ್ಪ, ಶಾಂತಮ್ಮ, ಮಂಡಲ ಪ್ರಧಾನ ಕಾರ್ಯದರ್ಶಿ ಮಲ್ಲೇಶಪ್ಪ ಇತರರಿದ್ದರು.