ರಾಮಕೃಷ್ಣ ದಾಸರಿ
ರಾಯಚೂರು (ಜ.19) : ದೇಶದ ಪ್ರಧಾನಿ ಮಂತ್ರಿಯೊಬ್ಬರು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗಾಗಿ ಹಿಂದುಳಿದ ಪ್ರದೇಶವಾದ ಕಲ್ಯಾಣ ಕರ್ನಾಟಕ ಭಾಗಕ್ಕೆ ಬರುತ್ತಿರುವುದು ಇತಿಹಾಸದಲ್ಲಿಯೇ ಅಪರೂಪ. ಹಿಂದೆ ಬಸವಸಾಗರ, ಆರ್ಟಿಪಿಎಸ್ ಅಡಿಗಲ್ಲು ಸಮಾರಂಭ, ನೆರೆ ಸಮಯದಲ್ಲಿ ಅಂದಿನ ಪ್ರಧಾನಿಗಳಾಗಿದ್ದ ನೆಹರು, ಇಂದಿರಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರು ಈ ಭಾಗಕ್ಕೆ ಬಂದಿದ್ದರು. ಚುನಾವಣೆ ಸಮಯದಲ್ಲಿ ಮೋದಿ ಅನೇಕ ಬಾರಿ ಈ ಪ್ರದೇಶಕ್ಕೆ ಆಗಮಿಸಿದ್ದುಂಟು. ಆದರೆ, ಅಭಿವೃದ್ಧಿ ಕಾಮಗಾರಿಗಳ ಚಾಲನೆ ನೀಡಲು ಗುರುವಾರ ಪ್ರಧಾನಿ ಮೋದಿ ಆಗಮಿಸುತ್ತಿದ್ದು, ಇದರಿಂದ ಈ ಭಾಗದ ಜನರಲ್ಲಿ ಹೊಸ ಕನಸುಗಳು ಚಿಗುರಲು ಆರಂಭಿಸಿವೆ.
ಕಲ್ಯಾಣ ಭಾಗಕ್ಕೆ ಹೆಚ್ಚು ಒಲವು:
ಕೇಂದ್ರ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕರ್ನಾಟಕ(Karnataka) ಅದರಲ್ಲಿಯೂ ಕಲ್ಯಾಣ ಕರ್ನಾಟಕ(Kalyana karnataka) ಭಾಗದ ಪ್ರದೇಶಗಳೆಂದರೆ ಹೆಚ್ಚಿನ ಒಲವು. ಕೇಂದ್ರದ ನೀತಿ ಆಯೋಗದ ಮಹತ್ವಾಕಾಂಕ್ಷಿ ಜಿಲ್ಲೆ ಯೋಜನೆಯಡಿ ದೇಶದ 117 ಜಿಲ್ಲೆಗಳ ಪೈಕಿ ಈ ಭಾಗದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಸೇರಿಸಿ ಆಯ್ದ ಕ್ಷೇತ್ರಗಳ ಸುಧಾರಣೆ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಕಳೆದ ವರ್ಷ ಸಿರಿಧಾನ್ಯಗಳ ಸಮಾವೇಶವನ್ನು ರಾಯಚೂರು ಕೃಷಿ ವಿವಿಯಲ್ಲಿ ನಡೆಸಿ ಈ ಭಾಗವನ್ನು ಮಿಲ್ಲೆಟ್ ಹಬ್ ಮಾಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಘೋಷಿಸಿ ಹೋಗಿದ್ದರು. ಇದೀಗ ಗುರುವಾರ ಪಕ್ಕದ ಯಾದಗಿರಿ ಹಾಗೂ ಕಲಬುರಗಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರು ಬಸವಸಾಗರ ಜಲಾಶಯಕ್ಕೆ ಹೊಸ ತಂತ್ರಜ್ಞಾನ ಅಳವಡಿಸಿ ಜಮೀನುಗಳಿಗೆ ನೀರು ಹರಿಸುವ ವ್ಯವಸ್ಥೆಗೆ ಚಾಲನೆ ನೀಡಲಿದ್ದಾರೆ. ಇದರ ಜೊತೆಗೆ ಜಲಧಾರೆ ಯೋಜನೆಯಡಿ ನೀರು ಸಂಸ್ಕರಣ ಘಟಕ, ಭಾರತ ಮಾಲಾ ಯೋಜನೆಯಡಿಯಲ್ಲಿ 4 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಎರಡು ಪ್ಯಾಕೇಜ್‌ಗಳ ಜಾರಿಗೆ ಮತ್ತು ಕಲಬುರಗಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
Raichuru: ಏಮ್ಸ್ ಮಂಜೂರು ಮಾಡಲು ಒತ್ತಾಯಿಸಿ ಬೃಹತ್ ಪ್ರತಿಭಟನೆ
ಏಮ್ಸ್ ನಿರೀಕ್ಷೆ:
ರಾಯಚೂರು(Raichur) ಜಿಲ್ಲೆಗೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಯನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಕಳೆದ 251 ದಿನಗಳಿಂದ ನಿರಂತರವಾಗಿ ಹೋರಾಟ ನಡೆಸಲಾಗುತ್ತಿದೆ. ಈ ಬಗ್ಗೆ ಜಿಲ್ಲೆ ಸಂಸದರು, ಶಾಸಕರು, ಉಸ್ತುವಾರಿ ಸಚಿವರು ಹಾಗೂ ಸಿಎಂ ಅವರ ಗಮನಕ್ಕಿದ್ದರು ಸಹ ಇದುವರೆಗೂ ಯಾವುದೇ ರೀತಿಯ ಸ್ಪಂದನೆ ದೊರಕಿಲ್ಲ. ರಾಯಚೂರಿಗೆ ಏಮ್ಸ್ ನೀಡಬೇಕು ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕಾಗಿದ್ದು, ಆ ನಿಟ್ಟಿನಲ್ಲಿ ಗುರುವಾರ ಬರುತ್ತಿರುವ ಮೋದಿ ಅವರು ಏಮ್ಸ್ ವಿಚಾರವಾಗಿ ಈ ಭಾಗದ ಜನರಿಗೆ ಏನಾದರು ಗುಡ್‌ನ್ಯೂಸ್ ಕೊಡುತ್ತಾರೆ ಎನ್ನುವ ನಿರೀಕ್ಷೆಯನ್ನು ಹೊಂದಲಾಗಿದೆ.
Raichur: ಪ್ರತ್ಯೇಕ ಕೃಷಿ ತಾಂತ್ರಿಕ ನಿರ್ದೇಶನಾಲಯ ಸ್ಥಾಪನೆಗೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಅಹೋರಾತ್ರಿ ಧರಣಿ
ದೇಶದ ಪ್ರಧಾನಿಯೊಬ್ಬರು ಈ ಪ್ರದೇಶಕ್ಕೆ ಬರುವುದು ಅಪರೂಪ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಿಗೆ ಆಗಮಿಸಿ ಸಾವಿರಾರು ಕೋಟಿ ರು. ಯೋಜನೆಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವುದು ಐತಿಹಾಸಿಕ ನಡೆಯಾಗಿದೆ. ಇದರಿಂದ ಈ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ವಾತಾವರಣ ಲಭಿಸಲಿದೆ.
-ರಾಜಾ ಅಮರೇಶ್ವರ ನಾಯಕ, ಸಂಸದರು, ರಾಯಚೂರು