Chitradurga : ಮಠದ ಕೆರೆನೀರು ಮೋಟಾರು ಪಂಪ್‌ ಇಟ್ಟು ಖಾಲಿ ಮಾಡ್ತಾರಂತೆ!

By Kannadaprabha News  |  First Published Jan 19, 2023, 6:46 AM IST

ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರ ಮಳೆಯಿಂದ ತುಂಬಿ ಕೋಡಿ ಬಿದ್ದ ಮುರುಘಾ ಮಠದ ಮುಂಭಾಗದ ಕೆರೆಯ ನೀರನ್ನು ಮೋಟಾರು ಪಂಪುಗಳಿಟ್ಟು ಖಾಲಿ ಮಾಡಿ ಅಭಿವೃದ್ಧಿಪಡಿಸುತ್ತಿದೆ. ಅದಕ್ಕಾಗಿ  ಲೇಕ್‌ ಡೆವಲಪ್‌ಮೆಂಟ್‌ನ 4.30 ಕೋಟಿ ರುಪಾಯಿ ಅನುದಾನ ಲಭ್ಯವಿದ್ದು, ಇದನ್ನು ಖರ್ಚು ಮಾಡಲು ಕೆರೆ ನೀರು ಖಾಲಿ ಮಾಡುವ ಘನಂದಾರಿ ಕೆಲಸಕ್ಕೆ ಮುಂದಾಗಿದೆ.


ಚಿಕ್ಕಪ್ಪನಹಳ್ಳಿ ಷಣ್ಮುಖ

ಚಿತ್ರದುರ್ಗ (ಜ.19) : ಚಿತ್ರದುರ್ಗವೆಂದಾಕ್ಷಣ ಬರದ ಸೀಮೆ, ಅಂತರ್ಜಲ ಕುಸಿತ, ಕುಡಿವ ನೀರಿನ ಅಭಾವ ಎಂಬಿತ್ಯಾದಿ ವಾಸ್ತವದ ದೃಶ್ಯಗಳು ಕಣ್ಣ ಮುಂದೆ ಹಾದು ಹೋಗುತ್ತವೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಸಾವಿರಾರು ಕೋಟಿ ರುಪಾಯಿ ಖರ್ಚು ಮಾಡಿ ಕೆರೆಗಳನ್ನು ತುಂಬಿಸಲಾಗುತ್ತದೆ. ಇಂತಹ ಕಟು ವಾಸ್ತವದ ನಡುವೆ ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರ ಮಳೆಯಿಂದ ತುಂಬಿ ಕೋಡಿ ಬಿದ್ದ ಮುರುಘಾ ಮಠದ ಮುಂಭಾಗದ ಕೆರೆಯ ನೀರನ್ನು ಮೋಟಾರು ಪಂಪುಗಳಿಟ್ಟು ಖಾಲಿ ಮಾಡಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಮುಂದಾಗಿದೆ.

Latest Videos

undefined

ಯಾವುದೇ ನಗರಾಭಿವೃದ್ಧಿ ಪ್ರಾಧಿಕಾರ ಕ್ರೋಡೀಕರಿಸಿಕೊಂಡ ಸಂಪನ್ಮೂಲದಲ್ಲಿ ಲೇಕ್‌ ಡೆವಲಪ್‌ಮೆಂಟ್‌ಗೆಂದು ಒಂದಿಷ್ಟುಅನುದಾನ ಕಾಯ್ದರಿಸುತ್ತದೆ. ಇದನ್ನು ಬೇರೆ ಯಾವುದೇ ಬಾಬತ್ತುಗಳಿಗೆ ಬಳಸುವಂತಿಲ್ಲ. ಲೇಕ್‌ ಡೆವಲಪ್‌ಮೆಂಟ್‌ನ 4.30 ಕೋಟಿ ರುಪಾಯಿ ಅನುದಾನ ಲಭ್ಯವಿದ್ದು, ಇದನ್ನು ಖರ್ಚು ಮಾಡಲು ಕೆರೆ ನೀರು ಖಾಲಿ ಮಾಡುವ ಘನಂದಾರಿ ಕೆಲಸಕ್ಕೆ ಮುಂದಾಗಿದೆ.

Chitradurga: ಮುರುಘಾ ಶ್ರೀ ವಿರುದ್ದ ಪಿತೂರಿ ಪ್ರಕರಣ, ಮಾಜಿ ಶಾಸಕ ಬಸವರಾಜನ್ ಜೈಲಿನಿಂದ ಬಿಡುಗಡೆ

ಮುರುಘಾಮಠದ ಮುಂಭಾಗದ ಅರಸನ ಕೆರೆ ಅಭಿವೃದ್ಧಿಗೆ ಈಗಾಗಲೇ ಶಾಸಕ ತಿಪ್ಪಾರೆಡ್ಡಿ ಭೂಮಿ ಪೂಜೆ ನೆರವೇರಿಸಿದ್ದು, ಕಾಮಗಾರಿ ಆರಂಭಿಸುವುದು ಮಾತ್ರಬಾಕಿ ಇದೆ. ಬೆಂಗಳೂರಿನ ನಿಹಾರಿಕ ಎಂಟರ್‌ಪ್ರೈಸಸ್‌ನವರಿಗೆ 4.30 ಕೋಟಿ ರು. ಅಭಿವೃದ್ಧಿ ಕಾಮಗಾರಿಗಳ ಜವಾಬ್ದಾರಿ ವಹಿಸಲಾಗಿದ್ದು, ಚಿತ್ರದುರ್ಗದ ವಿಜಯ್‌ಕುಮಾರ್‌ ಎಂಬುವವರಿಗೆ ಕೆರೆ ನೀರು ಖಾಲಿ ಮಾಡುವ ಗುತ್ತಿಗೆ ನೀಡಲಾಗಿದೆ. ಇದಕ್ಕಾಗಿ 10 ಲಕ್ಷ ರುಪಾಯಿ ವೆಚ್ಚ ಮಾಡಲಾಗುತ್ತಿದೆ.

ಒಳಚರಂಡಿ ನೀರು ಸಂಗ್ರಹ:

ಮುರುಘಾಮಠದ ಮುಂಭಾಗದ ಕೆರೆಯಲ್ಲಿನÜ ನೀರು ಪೂರ್ಣ ಪ್ರಮಾಣದಲ್ಲಿ ಮಳೆಯಿಂದ ಸಂಗ್ರಹವಾದದ್ದು ಅಲ್ಲ. ಗಾರೆಹಟ್ಟಿಪ್ರದೇಶದಲ್ಲಿರುವ ಚರಂಡಿ ಹಾಗೂ ಒಳಚರಂಡಿಗಳು ತುಂಬಿ ನೇರವಾಗಿ ಕೆರೆಗೆ ಹರಿದು ಬಂದಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಈ ಕೆರೆ ಇರುವುದರಿಂದ ರಸ್ತೆ ಮೇಲೆ ಹೋಗುವ ವಾಹನ ಸವಾರರು, ಪ್ರಯಾಣಿಕರ ಮೂಗಿಗೆ ದುರ್ನಾತ ಬಂದು ರಾಚುತ್ತದೆ. ಕೆರೆ ಒತ್ತುವರಿ ತೆರವು ಮಾಡಿ, ಚರಂಡಿ ನೀರು ಹರಿದು ಬರುವುದ ತಪ್ಪಿಸುವ ಮಾರ್ಗಗಳ ಹುಡುಕುವ ಬದಲು ಹೊಲಸು ನೀರನ್ನೇ ಮೋಟಾರು ಪಂಪುಗಳ ಮೂಲಕ ಮತ್ತೊಂದು ಕೆರೆಗೆ ತುಂಬಿಸುವ ಹಾಗೂ ಕಾಮಗಾರಿ ಪೂರ್ಣಗೊಂಡ ನಂತರ ಅದೇ ನೀರನ್ನು ಮರಳಿ ತುಂಬಿÓಲು ಯೋಜನೆ ರೂಪಿಸಲಾಗಿದೆ.

ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಅಂತರ್ಜಲ ಪ್ರಮಾಣ ಹೆಚ್ಚಳವಾಗಿದೆ. ಕೆರೆ ನೀರನ್ನು ಖಾಲಿ ಮಾಡಲು ಮುಂದಾಗುವುದು ಕೂಡಾ ದುಸ್ಸಾಹಸದ ಕೆಲಸ. ಮೋಟಾರು ಪಂಪುಗಳ ಮೂಲಕ ಎಷ್ಟೇ ನೀರು ಹೊರ ಹಾಕಿದರೂ ಮತ್ತೆ ಬಸಿನೀರು ಸಂಗ್ರಹವಾಗುವ ಸಾಧ್ಯತೆ ಇರುತ್ತದೆ. ಇಂತಹ ಕನಿಷ್ಠ ಆಲೋಚನೆಗಳು ಪ್ರಾಧಿಕಾರದ ಅಧಿಕಾರಿಗಳಲ್ಲಿ ಮೂಡಿದಂತೆ ಕಾಣಿಸುತ್ತಿಲ್ಲ. ಕೆರೆ ನೀರು ಹೊರ ಹಾಕಲು ಅನಾವಶ್ಯಕವಾಗಿ ಸರ್ಕಾರಿ ಅನುದಾನ ವ್ಯಯ ಮಾಡಲಾಗುತ್ತಿದೆ.

Murugha Mutt Administrator : ಮುರುಘಾ ಮಠ ರಕ್ಷಿಸಲೆಂದೇ ಆಡಳಿತಾಧಿಕಾರಿ: ಸರ್ಕಾರ

ಮಠದ ಮುಂಭಾಗದ ಕೆರೆಯನ್ನು 4.40 ಕೋಟಿ ರುಪಾಯಿ ವೆಚ್ಚದಲ್ಲಿ ಅಭಿವೃದ್ದಿ ಪಡಿಸಲಾಗುತ್ತಿದೆ. 10 ಲಕ್ಷ ರುಪಾಯಿ ಖರ್ಚು ಮಾಡಿ ಕೆರೆ ನೀರು ಖಾಲಿ ಮಾಡಲಾಗುತ್ತಿದೆ. ಕೆರೆ ಸುತ್ತಲೂ ಬೇಲಿ, ವಾಕಿಂಗ್‌ ಪಾಥ್‌, ಮಧ್ಯಭಾಗದಲ್ಲಿ ಸಂಪರ್ಕ ಸೇತುವೆ, ನಾಲ್ಕು ಬಯೋ ಟಾಯ್ಲೆಟ್‌, ಅಲಂಕಾರಿಕ ದೀಪ, ಚಾಟ್‌ ಸೆಂಟರ್‌ಗಳ ನಿರ್ಮಿಸಲಾಗುತ್ತಿದೆ.

-----ಸುರೇಶ್‌ ಸಿದ್ದಾಪುರ, ಅಧ್ಯಕ್ಷ, ನಗರಾಭಿವೃದ್ದಿ ಪ್ರಾಧಿಕಾರ( ಪೋಟೋ ಸುರೇಶ್‌)

click me!