ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡುತ್ತಿರುವುದಕ್ಕೆ ನೋಟಿಸ್ ಜಾರಿ| ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ರಸಗೊಬ್ಬರ ಅಂಗಡಿಗಳ ಮೇಲೆ ದಾಳಿ| ರೈತರು ಖರೀದಿಸುವಾಗ ಚೀಲದ ಮೇಲೆ ಇರುವ ದರದಲ್ಲಿ ಖರೀದಿಸಬೇಕು. ಒಂದು ವೇಳೆ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಕೃಷಿ ಇಲಾಖೆಗೆ ದೂರು ನೀಡಬೇಕು: ಕೃಷಿ ಅಧಿಕಾರಿ|
ಗಂಗಾವತಿ(ಏ.29): ನಗರದ ವಿವಿಧ ರಸಗೊಬ್ಬರ ಅಂಗಡಿಗಳ ಮೇಲೆ ಕೃಷಿ ಅಧಿಕಾರಿಗಳು ದಾಳಿ ನಡೆಸಿ ದರಪಟ್ಟಿ ಮತ್ತು ಎಂಎರ್‌ಪಿಗಿಂತ ಹೆಚ್ಚಿಗೆ ದರಕ್ಕೆ ಮಾರಾಟ ಮಾಡಿದ್ದಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ.
ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ ಮತ್ತು ಕೊಪ್ಪಳ ಜಂಟಿ ಕೃಷಿ ನಿರ್ದೇಶಕ ಕಚೇರಿಯ ಜಾರಿ ದಳದ ಸಹಾಯಕ ಕೃಷಿ ನಿರ್ದೇಶಕ ನಿಂಗಪ್ಪ ಅವರು, ಶ್ರೀ ಸಂದೀಪ್ ಅಗ್ರೋ, ಶ್ರೀಶೈಲ ಟ್ರೇಡಿಂಗ್ ಕಂಪನಿ, ಶ್ರೀ ಬಸವ ಟ್ರೇಡರ್ಸ್, ಶ್ರೀ ಚೆನ್ನಮಲ್ಲಿಕಾರ್ಜುನ ಅಗ್ರೋ ಏಜೆನ್ಸಿ, ಹನುಮಾನ್ ಅಗ್ರೋ ಏಜೆನ್ಸಿ, ಪ್ರಗತಿ ಏಜೆನ್ಸಿಗಳ ಮೇಲೆ ದಾಳಿ ನಡೆಸಿದರು.
ಹೊಸದರದಲ್ಲಿ ರಸಗೊಬ್ಬರ ಮಾರಿದರೆ ಕ್ರಿಮಿನಲ್ ಕೇಸ್
ಈ ಸಂದರ್ಭದಲ್ಲಿ ಪ್ರತಿಯೊಂದು ಪರಿಕರದ ನಿಖರ ಬೆಲೆಯನ್ನು ಸೂಚನಾ ಫಲಕದಲ್ಲಿ ನಮೂದಿಸಬೇಕು. ಕಂಪನಿ ನಿರ್ದಿಷ್ಟಪಡಿಸಿದ ದರದಲ್ಲಿ ಪರಿಕರಗಳನ್ನು ಮಾರಾಟ ಮಾಡಬೇಕೆಂದು ಅಂಗಡಿ ಮಾಲೀಕರಿಗೆ ಸೂಚನೆ ನೀಡಿದರು.
ದರಪಟ್ಟಿ ನಮೂದಿಸದ ಮತ್ತು ರೈತರಿಗೆ ಬಿಲ್ ನೀಡದ ಮಾರಾಟಗಾರರಿಗೆ ನೋಟಿಸ್ ಜಾರಿ ಮಾಡಿ ರಸಗೊಬ್ಬರ ಮಾಲೀಕರು ಏ. 1ರಿಂದ ರಸಗೊಬ್ಬರ ಬೆಲೆ ಏರಿಕೆಯಾಗಿದೆ ಎಂಬ ನೆಪವೊಡ್ಡಿ ಹಾಲಿ ಲಭ್ಯವಿರುವ ಹಳೆ ದಾಸ್ತಾನಿನನ ರಸಗೊಬ್ಬರಗಳನ್ನು ಚೀಲದ ಮೇಲೆ ಮುದ್ರಿತ ಎಂಆರ್‌ಪಿ ದರಗಳಿಗಿಂತ ಹೆಚ್ಚಿನ ದರಕ್ಕೆ ರೈತರಿಗೆ ಮಾರಾಟ ಮಾಡುವಂತಿಲ್ಲ. ಹಳೆ ದಾಸ್ತಾನನ್ನು ಹಳೆ ದರದಲ್ಲಿ ಮಾರಾಟ ಮಾಡಬೇಕೆಂದು ಸೂಚನೆ ನೀಡಿದರು.
ರೈತರು ಖರೀದಿಸುವಾಗ ಚೀಲದ ಮೇಲೆ ಇರುವ ದರದಲ್ಲಿ ಖರೀದಿಸಬೇಕು. ಒಂದು ವೇಳೆ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಕೃಷಿ ಇಲಾಖೆಗೆ ದೂರು ನೀಡಬೇಕೆಂದು ತಿಳಿಸಿದ್ದಾರೆ. ಕೋವಿಡ್-19 ಸೋಂಕು ಹರುಡುವಿಕೆ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ನೀತಿ ನಿಯಮಗಳನ್ನು ಪಾಲಿಸಬೇಕು. ಒಂದು ವೇಳೆ ಉಲ್ಲಂಘಿಸಿದರೆ ಅಂಗಡಿಗಳ ಪರವಾನಿಗೆ ರದ್ದುಪಡಿಸಲಾಗುತ್ತದೆ ಎಂದು ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.