ಅಸೆಂಬ್ಲಿ, ಲೋಕಸಭೆ ಬಳಿಕ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಮೂಲಕ ಬೀಗುತ್ತಿರುವ ಬಿಜೆಪಿಗೆ ಈಗ ಸಾಂಸ್ಥಿಕ ಚುನಾವಣೆ ಸವಾಲು ತಂದೊಡ್ಡಿದೆ. ಇದೇ ನವೆಂಬರ್ ಅಂತ್ಯದೊಳಗೆ ದ.ಕ. ಬಿಜೆಪಿಗೆ ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಆದರೆ ಈ ಬಾರಿ ವಯೋಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸಲೇ ಬೇಕಾಗಿರುವುದರಿಂದ ಅನುಭವ, ಅರ್ಹತೆ ಇದ್ದರೂ ಅಧ್ಯಕ್ಷಗಾದಿಗೆ ಹುಡುಕಾಟ ನಡೆಸಬೇಕಾದ ಪರಿಸ್ಥಿತಿ ಬಂದೊದಗಿದೆ.
ಮಂಗಳೂರು(ನ.18): ಅಸೆಂಬ್ಲಿ, ಲೋಕಸಭೆ ಬಳಿಕ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಮೂಲಕ ಬೀಗುತ್ತಿರುವ ಬಿಜೆಪಿಗೆ ಈಗ ಸಾಂಸ್ಥಿಕ ಚುನಾವಣೆ ಸವಾಲು ತಂದೊಡ್ಡಿದೆ. ಇದೇ ನವೆಂಬರ್ ಅಂತ್ಯದೊಳಗೆ ದ.ಕ. ಬಿಜೆಪಿಗೆ ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಆದರೆ ಈ ಬಾರಿ ವಯೋಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸಲೇ ಬೇಕಾಗಿರುವುದರಿಂದ ಅನುಭವ, ಅರ್ಹತೆ ಇದ್ದರೂ ಅಧ್ಯಕ್ಷಗಾದಿಗೆ ಹುಡುಕಾಟ ನಡೆಸಬೇಕಾದ ಪರಿಸ್ಥಿತಿ ಬಂದೊದಗಿದೆ.
ಆಕಾಂಕ್ಷಿಗಳ ಕಟ್ಟಿಹಾಕಿದ ವಯೋಮಿತಿ:
ಕೇಂದ್ರ, ರಾಜ್ಯವಲ್ಲದೆ ಜಿಲ್ಲೆಯ ಏಳು ಅಸೆಂಬ್ಲಿ ಕ್ಷೇತ್ರ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿಜಯದುಂದುಭಿ ಮೊಳಗಿಸಿದ ಬಿಜೆಪಿಯಲ್ಲಿ ಅಧ್ಯಕ್ಷಗಾದಿ ಏರಲು ಆಕಾಂಕ್ಷಿಗಳ ದಂಡೇ ಕಂಡುಬಂದಿತ್ತು. ಅಧ್ಯಕ್ಷಗಾದಿಗೆ ವಯೋಮಿತಿಯ ಮಾನದಂಡವನ್ನು ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ಕೈಹಿಸುಕಿಕೊಳ್ಳುವಂತೆ ಆಗಿದೆ.
ಬಿಜೆಪಿಯ ಸಾಂಸ್ಥಿಕ ಚುನಾವಣೆಯ ನಿಯಮದ ಪ್ರಕಾರ ಮಂಡಲ(ಕ್ಷೇತ್ರ) ಸಮಿತಿಗೆ 45ರಿಂದ 50 ವರ್ಷದೊಳಗೆ ಹಾಗೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ 50ರಿಂದ 55 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಈ ವಯೋಮಿತಿ ಬಿಜೆಪಿಯಲ್ಲಿ ಬಹಳ ಹಿಂದೆಯೇ ಇತ್ತು. ಆದರೆ ಈ ಬಾರಿ ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವರಿಷ್ಠರು ತಾಕೀತು ಮಾಡಿದ್ದಾರೆ. ಹಾಗಾಗಿ ಮಂಡಲ ಮತ್ತು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅಳೆದುತೂಗಿ ಆಯ್ಕೆ ಮಾಡಬೇಕಾದ ಸಂದರ್ಭ ಎದುರಾಗಿದೆ ಎನ್ನುತ್ತಾರೆ ಪಕ್ಷದ ಹಿರಿಯ ಮುಖಂಡರು.
ಜಿಲ್ಲಾಧ್ಯಕ್ಷ ಸ್ಥಾನ ಸುಳ್ಯಕ್ಕೆ?:
ಬಿಜೆಪಿ ಮೂಲಗಳ ಪ್ರಕಾರ, ಹಾಲಿ ಉಪಾಧ್ಯಕ್ಷ ರವಿಶಂಕರ ಮಿಜಾರ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಲಾಗಿತ್ತು. ಆದರೆ ವಯೋಮಿತಿ ಪಾಲನೆ ಹಿನ್ನೆಲೆಯಲ್ಲಿ ಸುಳ್ಯದ ಎ.ವಿ.ತೀರ್ಥರಾಮರ ಹೆಸರು ಕೇಳಿಬರುತ್ತಿದೆ. ಇವರು ಈ ಹಿಂದೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಪ್ರಸಕ್ತ ಜಿಲ್ಲಾಧ್ಯಕ್ಷರಾಗಿರುವ ಪುತ್ತೂರಿನ ಸಂಜೀವ ಮಠಂದೂರು ಶಾಸಕರಾಗಿದ್ದು, ಅದೇ ಸಮುದಾಯಕ್ಕೆ ಸೇರಿದ ಇನ್ನೊಬ್ಬರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಮಾತು ಪಕ್ಷದ ನಾಯಕರಲ್ಲಿ ಕೇಳಿಬರುತ್ತಿದೆ. ಇವರ ಹೊರತುಪಡಿಸಿ ಬೇರೊಬ್ಬರ ಆಯ್ಕೆ ನಡೆಸಿದರೂ ಅಚ್ಚರಿ ಇಲ್ಲ ಎನ್ನುತ್ತವೆ ಪಕ್ಷ ಮೂಲ.
ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಹಾಲಿ ಜವಾಬ್ದಾರಿಯಲ್ಲಿರುವ ಕ್ಯಾ.ಬ್ರಿಜೇಶ್ ಚೌಟ, ಕಿಶೋರ್ ರೈ ಮುಂದುವರಿಯುವ ಸಾಧ್ಯತೆ ಹೇಳಲಾಗಿದೆ. ಇವರಲ್ಲದೆ, ಜಿ.ಪಂ. ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಹೆಸರು ಸುದ್ದಿಯಲ್ಲಿದೆ.
ಮಂಡಲ ಸಮಿತಿ ಅಂತಿಮ ಹಂತದಲ್ಲಿ:
ಈಗಾಗಲೇ ವಯೋಮಿತಿಯನ್ನು ಅನುಸರಿಸಿ ಸುಳ್ಯ ಮತ್ತು ಪುತ್ತೂರು ಮಂಡಲಗಳಿಗೆ ಅಧ್ಯಕ್ಷರ ನೇಮಕ ನಡೆದಿದೆ. ಸುಳ್ಯಕ್ಕೆ ಹರೀಶ್ ಕಂಜಿಪಿಲಿ ಹಾಗೂ ಪುತ್ತೂರಿಗೆ ಸಾಜ ರಾಧಾಕೃಷ್ಣ ಆಳ್ವ ಅಧ್ಯಕ್ಷರಾಗಿದ್ದಾರೆ. ಉಳಿದ ಮಂಡಲಗಳಿಗೆ ಇಷ್ಟರಲ್ಲೇ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎನ್ನುತ್ತಾರೆ ಚುನಾವಣಾ ಉಸ್ತುವಾರಿಗಳು.
ಲಭ್ಯ ಮಾಹಿತಿ ಪ್ರಕಾರ, ಮೂಡುಬಿದಿರೆಗೆ ಸುದರ್ಶನ್, ಬಂಟ್ವಾಳಕ್ಕೆ ರಾಮದಾಸ್, ಬೆಳ್ತಂಗಡಿಗೆ ಹಾಲಿ ಅಧ್ಯಕ್ಷ ಜಯಂತ ಕೋಟ್ಯಾನ್ ಅಥವಾ ಪ್ರಭಾಕರ ಶೆಟ್ಟಿಇಲ್ಲವೇ ಬೇರೊಬ್ಬರು. ಮಂಗಳೂರು(ಉಳ್ಳಾಲ) ಚಂದ್ರಹಾಸ ಪಂಡಿತ್‌ಹೌಸ್ ಅಥವಾ ನ್ಯಾಯವಾದಿ ಮೋಹನರಾಜ್, ಮಂಗಳೂರು ಉತ್ತರಕ್ಕೆ ಸುಧಾಕರ ಆಚಾರ್ಯ ಅಥವಾ ಸಂದೀಪ್ ಪಚ್ಚನಾಡಿ ಹಾಗೂ ಮಂಗಳೂರು ದಕ್ಷಿಣಕ್ಕೆ ಸುಧೀರ್ ಶೆಟ್ಟಿಕಣ್ಣೂರು, ಭಾಸ್ಕರಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು ಹೆಸರು ಕೇಳಿಬರುತ್ತಿದೆ. ಸುಧೀರ್ ಶೆಟ್ಟಿಅವರು ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿರುವುದರಿಂದ ಬೇರೊಬ್ಬರಿಗೆ ಅವಕಾಶ ನೀಡುವುದನ್ನು ತಳ್ಳಿ ಹಾಕುವಂತಿಲ್ಲ. ನಗರ ಅಧ್ಯಕ್ಷರಾಗಿರುವವವರು ಜಿಲ್ಲಾಧ್ಯಕ್ಷರಂತೆ ಕಾರ್ಯನಿರ್ವಹಿಸಬೇಕಾಗುವುದರಿಂದ ಅಂತಹ ಸಾಮರ್ಥ್ಯವಂತರಿಗೆ ಮಣೆಹಾಕಬೇಕು ಎಂಬ ತೀರ್ಮಾನ ಪಕ್ಷ ನಾಯಕರಲ್ಲಿದೆ.
ಮುಂದೆ ತಾ.ಪಂ, ಜಿ.ಪಂ. ಚುನಾವಣೆ ಗೆಲ್ಲುವ ಸವಾಲು
ಜಿಲ್ಲೆಯಲ್ಲಿ ಬಿಜೆಪಿ ಅಧಿಪತ್ಯ ಸ್ಥಾಪಿಸಿರುವುದನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ. ಜೊತೆಗೆ 2020ರಲ್ಲಿ ನಡೆಯಲಿರುವ ಗ್ರಾಮ ಪಂಚಾಯ್ತಿ ಹಾಗೂ 2021ರಲ್ಲಿ ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಪಕ್ಷವನ್ನು ಗೆಲ್ಲಿಸಿಕೊಡುವ ಜವಾಬ್ದಾರಿಯನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರುವವರು ನಿರ್ವಹಿಸಬೇಕಾಗಿದೆ. ಅಂತಹ ಸಮರ್ಥರ ಆಯ್ಕೆಯ ಮಾಡುವ ಸವಾಲು ಈಗ ಪಕ್ಷ ನಾಯಕರ ಮುಂದಿದೆ ಎನ್ನುತ್ತಾರೆ ಪಕ್ಷದ ಹಿರಿಯರು.
ಪಕ್ಷದ ಎಲ್ಲ ಮಂಡಲ ಸಮಿತಿಗಳಿಗೆ ಅಧ್ಯಕ್ಷರ ಆಯ್ಕೆ ನ.20ರೊಳಗೆ ಹಾಗೂ ಜಿಲ್ಲಾ ಸಮಿತಿಗೆ ಅಧ್ಯಕ್ಷರ ಆಯ್ಕೆ ನ.30ರೊಳಗೆ ಪೂರ್ಣಗೊಳ್ಳಲಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ಪಕ್ಷದ ಸಾಂಸ್ಥಿಕ ಚುನಾವಣೆಯನ್ನು ಕೊನೆಗೊಳಿಸುತ್ತೇವೆ ಎಂದು ದ.ಕ. ಬಿಜೆಪಿ ಸಾಂಸ್ಥಿಕ ಚುನಾವಣಾ ಅಧಿಕಾರಿ ಉದಯ ಕುಮಾರ್ ಶೆಟ್ಟಿ ಹೇಳಿದ್ದಾರೆ.
-ಆತ್ಮಭೂಷಣ್