ಬಿಬಿಎಂಪಿಯಿಂದ ಮತ್ತೆ ರಸ್ತೆ ಗುಂಡಿ ಸರ್ವೇ ಕಾರ್ಯ ಶುರು, ನಿರಂತರ ಮಳೆಯಿಂದ ಮತ್ತೆ ಗುಂಡಿ ಸೃಷ್ಟಿ
ಬೆಂಗಳೂರು(ಆ.12): ನಗರದಲ್ಲಿ ಕಳೆದ ಹಲವು ದಿನಗಳಿಂದ ನಗರದಲ್ಲಿ ನಿರಂತರವಾಗಿ ಸುರಿದ ಭಾರಿ ಮಳೆಯಿಂದ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ ಮತ್ತೆ ಸರ್ವೇ ಕಾರ್ಯ ಆರಂಭಿಸಿ ಗುಂಡಿ ಮುಚ್ಚುವ ಕೆಲಸಕ್ಕೆ ಚಾಲನೆ ನೀಡಲಾಗುವುದು ಎಂದು ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೇ ತಿಂಗಳಿಂದ ಜುಲೈ ಅಂತ್ಯದವರೆಗೆ 17,595 ರಸ್ತೆ ಗುಂಡಿಗಳನ್ನು ಪತ್ತೆ ಮಾಡಿ 16,739 ಗುಂಡಿಗಳನ್ನು ಮುಚ್ಚಿದೆ. ಇನ್ನೂ 856 ಗುಂಡಿಗಳನ್ನು ಮುಚ್ಚುವುದು ಬಾಕಿಯಿದೆ. ಈ ನಡುವೆ ಭಾರಿ ಮಳೆ ಸುರಿದಿದೆ. ಇದರಿಂದ ಬಿಬಿಎಂಪಿ ಗುಂಡಿ ಮುಚ್ಚುವ ಕಾರ್ಯ ಸ್ಥಗಿತಗೊಳಿಸಲಾಗಿದೆ. ಜತೆಗೆ ರಸ್ತೆ ಗುಂಡಿ ಸಮಸ್ಯೆ ಮತ್ತೆ ಹೆಚ್ಚಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಹೀಗಾಗಿ ಆ.5ರಿಂದ ರಸ್ತೆ ಗುಂಡಿಗಳ ಸರ್ವೇ ಕಾರ್ಯ ಆರಂಭಿಸಿದ್ದು, ಸರ್ವೇ ಪೂರ್ಣಗೊಂಡ ನಂತರ ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ವಾರದೊಳಗೆ ರಸ್ತೆಗುಂಡಿ ಮುಚ್ಚಿ: ಹೆದ್ದಾರಿ ಪ್ರಾಧಿಕಾರಕ್ಕೆ ಹೈಕೋರ್ಟ್ ಆದೇಶ
ಮಳೆಯ ಪ್ರಮಾಣ ಹೆಚ್ಚಳದಿಂದಾಗಿ ಹಾಟ್ ಬಿಟುಮಿನ್ ಮಿಕ್ಸ್ ಹಾಕಿ ರಸ್ತೆ ಮುಚ್ಚುವುದು ಅಸಾಧ್ಯ. ಹೀಗಾಗಿ ಕೋಲ್ಡ್ ಬಿಟುಮಿನ್ ಮಿಕ್ಸ್ ಮೂಲಕ ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ನಿರ್ಧರಿಸಿದೆ. ಅದಕ್ಕಾಗಿ ಕಣ್ಣೂರಿನಲ್ಲಿನ ಹಾಟ್ ಬಿಟುಮಿನ್ ಮಿಕ್ಸ್ ಘಟಕದಲ್ಲಿಯೇ ಕೋಲ್ಡ್ ಬಿಟುಮಿನ್ ಮಿಕ್ಸ್ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ ಹಾಟ್ ಬಿಟುಮಿನ್ ಮಿಕ್ಸ್ ಯಂತ್ರಕ್ಕೆ ಪ್ರತ್ಯೇಕ ಯಂತ್ರವನ್ನು ಅಳವಡಿಸಿ ಕೋಲ್ಡ್ ಬಿಟುಮಿನ್ ಮಿಕ್ಸ್ ತಯಾರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ವಿವರಿಸಿದರು.