ಹುಬ್ಬಳ್ಳಿ ಇನ್ವೆಸ್ಟ್ ಕರ್ನಾಟಕದಲ್ಲಿ ಯಾದಗಿರಿ ಬಿಟ್ಟು ಕಲ್ಯಾಣ ಕರ್ನಾಟಕದ ಜಿಲ್ಲೆಗಳದ್ದು ಶೂನ್ಯ ಸಾಧನೆ| ಶೇ.93 ರಷ್ಟು ಹೂಡಿಕೆ ಬಂಡವಾಳ ಧಾರವಾಡ ಪಾಲಾದರೆ, ಉಳಿದಂತೆ ಶೇ.2 ರಷ್ಟು ಬೆಳಗಾವಿ, ವಿಜಯಪುರ, ಯಾದಗಿರಿಗೆ ದಕ್ಕಿದೆ| ಪ್ರತ್ಯೇಕ ಇನ್ವೆಸ್ಟ್ ಕಲ್ಯಾಣ ಕರ್ನಾಟಕ ಸಮಾವೇಶ ನಡೆಸಲು ಆಗ್ರಹ|
ಶೇಷಮೂರ್ತಿ ಅವಧಾನಿ
ಕಲಬುರಗಿ(ಫೆ.17): ಉತ್ತರ ಕರ್ನಾಟಕದಲ್ಲಿ ಕೈಗಾರಿಕೆ ಸ್ಥಾಪನೆ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ನಡೆದಂತಹ ‘ಇನ್ವೆಸ್ಟ್ ಕರ್ನಾಟಕ- 2020’ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳತ್ತ ಬಿಡಿಗಾಸಿನ ಬಂಡವಾಳ ಹರಿದು ಬಂದಿಲ್ಲ.
ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶವೇನೋ ಆಯ್ತು: ಇಲ್ಲಿಗೆ ಕೈಗಾರಿಕೆಗಳು ಬರ್ತಾವಾ?
ಹುಬ್ಬಳ್ಳಿ ಸಮಾವೇಶದಲ್ಲಿ ಉದ್ದಿಮೆದಾರರಿಂದ 72 ಸಾವಿರ ಕೋಟಿ ಬಂಡವಾಳ ಹೂಡುವ ಒಲವು ವ್ಯಕ್ತವಾಗಿದೆ. ಆದರೆ ಅದೆಲ್ಲವೂ ಧಾರವಾಡ, ಹುಬ್ಬಳ್ಳಿ ಸೇರಿದಂತೆ ಕಿತ್ತೂರ ಕರ್ನಾಟಕದ ಜಿಲ್ಲೆಗಳ ಪಾಲು ಸೇರಿದೆ. ಹುಬ್ಬಳ್ಳಿ ಹೂಡಿಕೆದಾರರ ಸಮಾವೇಶದಲ್ಲಿ ಶೇ.93 ರಷ್ಟು ಹೂಡಿಕೆ ಬಂಡವಾಳ ಧಾರವಾಡ ಪಾಲಾದರೆ, ಉಳಿದಂತೆ ಶೇ.2 ರಷ್ಟು ಬೆಳಗಾವಿ, ವಿಜಯಪುರ, ಯಾದಗಿರಿಗೆ ದಕ್ಕಿದೆ.
ಉಳಿದಂತೆ ಯಾವ ಜಿಲ್ಲೆಗಳಿಗೂ ಬಂಡವಾಳ ಹರಿದು ಬರಲೇ ಇಲ್ಲ. ಹೀಗಾಗಿ ಪ್ರತ್ಯೇಕ ಇನ್ವೆಸ್ಟ್ ಕಲ್ಯಾಣ ಕರ್ನಾಟಕ ಸಮಾವೇಶ ನಡೆಯಲಿ, ಆ ಮೂಲಕ ಇಲ್ಲಿ ಕಾಡುತ್ತಿರುವ ಕೈಗಾರಿಕೆ ಬರ ನೀಗಿಸುವಲ್ಲಿ ರಾಜ್ಯ ಸರ್ಕಾರ ಮುಂದಾಗಲಿ ಎಂದು ಈ ಭಾಗದ ಜನತೆ ಆಗ್ರಹಿಸುತ್ತಿದ್ದಾರೆ.
ಕಲ್ಯಾಣ ಕರ್ನಾಟಕ ಅಲಕ್ಷಿಸಿದ್ದು ಯಾಕೆ?
ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲಾಯ್ತಾದರೂ ಉತ್ತರ ಕರ್ನಾಟಕದಲ್ಲಿ ಬರುವ 6 ಜಿಲ್ಲೆಗಳ ವ್ಯಾಪ್ತಿಯ 1.25 ಕೋಟಿ ಜನ ವಸತಿ ಹೊಂದಿರುವ ಕಲ್ಯಾಣ ಕರ್ನಾಟಕವನ್ನೇ ಈ ಸಮಾವೇಶದಲ್ಲಿ ಅಲಕ್ಷಸಿದ್ದು ಯಾಕೆ? ಎಂಬುದೇ ಉತ್ತರ ಸಿಗದ ಪ್ರಶ್ನೆ. ಮೊದಲೇ ಕೈಗಾರಿಕೆ ಬರ ಕಾಡುತ್ತಿರುವ ಕಲ್ಯಾಣ ಕರ್ನಾಟಕದಲ್ಲಿ ಬಂಡವಾಳ ಹರಿದು ಬಂದರೆ ತಾನೆ ಈ ಸಮಸ್ಯೆಗೆ ಪರಿಹಾ ದೊರಕೋದು? ಬಂಡವಾಳ ಹೂಡಿಕೆದಾರರು ಈ ನೆಲದತ್ತ ಕಣ್ಣು ಹಾಯಿಸಿಲಿ ಎಂಬ ಕಾರಣಕ್ಕಾಗಿ ಕಲಬುರಗಿಯಲ್ಲಿ ವಿಮಾನಯಾನ ಸೇವೆ ಶುರುವಾಗಿದೆ. ಇದಲ್ಲದೆ ಬೀದರ್‌ನ ರಕ್ಷಣಾ ಉದ್ದೇಶದ ವಿಮಾನ ನಿಲ್ದಾಣ ನಾಗರಿಕ ವಿಮಾನಯಾನಕ್ಕೆ ಅನುಮತಿ ನೀಡಿದ್ದರ ಹಿಂದಿನ ಉದ್ದೇಶ ಇದೇ ಆಗಿದೆ. ವಿಮಾನಯಾನ ಸೇವೆ ಆರಂಭದ ನಂತರ ನಡೆದ ಹುಬ್ಬಳ್ಳಿ ಹೂಡಿಕೆದಾರರ ಸಮಾವೇಶದಲ್ಲಿ ಒಬ್ಬ ಹೂಡಿಕೆದಾರರರಿಗೆ ಕಲ್ಯಾಣ ಕರ್ನಾಟಕ ಕಾಣದೆ ಹೋಗಿರೋದು ದುರಂತವಲ್ಲದೆ ಮತ್ತೇನು? ಎಂಬ ಶಂಕೆ ಕಲಬುರಗಿ ಸೀಮೆ ಜನಮನ ಕಾಡುತ್ತಿದೆ.
ಇನ್ವೆಸ್ಟ್ ಕರ್ನಾಟಕ: 72000 ಕೋಟಿ ರೂ ಹೂಡಿಕೆ ಒಪ್ಪಂದ!
ರಾಜಕೀಯ ಇಚ್ಛಾಶಕ್ತಿಗೆ ಬರ:
ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳ ವ್ಯಾಪ್ತಿಯ 5 ಸಂಸದರು ಬಿಜೆಪಿಯವರು. ಇದು ಇತಿಹಾಸದಲ್ಲೇ ದಾಖಲಾದಂತಹ ಬೆಳವಣಿಗೆ. ಆದರೆ ನಮ್ಮ ಭಾಗದ ಸಂಸದರು ಈ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡು ತಮ್ಮ ಪ್ರಭಾವ ಬೀರಿ ಬಂಡವಾಳ ಕಲ್ಯಾಣ ನೆಲಕ್ಕೂ ಹರಿದು ಬರುವಂತೆ ಮಾಡುವಲ್ಲಿ ಸಂಪೂರ್ಣ ವಿಫಲರಾದರು ಎನ್ನಲಾಗುತ್ತಿದೆ. ಏಕೆಂದರೆ ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಸೇರಿದಂತೆ ಕಲ್ಯಾಣ ನೆಲದ ಸಂಸದರು ಅನೇಕರು ಹುಬ್ಬಳ್ಳಿ ಹೂಡಿಕೆದಾರರ ಸಮಾವೇಶದ ಸುತ್ತಮುತ್ತ ಗೋಚರಿಸಲೇ ಇಲ್ಲ ಎಂಬುದು ಗಮನಾರ್ಹ ಸಂಗತಿ.
ಹುಬ್ಬಳ್ಳಿ, ಧಾರವಾಡ, ಬೆಳಗಾವಿ ತ್ರಿವಳಿ ನಗರಗಳ ಅಭವೃದ್ಧಿಗೆ ಬದ್ಧ: ಶೆಟ್ಟರ್
ಜಿಲ್ಲಾವಾರು ಹರಿದು ಬಂದ ಬಂಡವಾಳ
ಧಾರವಾಡ- 59.375.07 ಕೋಟಿ
ದಾವಣಗೆರೆ- 4800ಕೋಟಿ
ಬೆಳಗಾವಿ- 1482.56 ಕೋಟಿ
ವಿಜಯಪುರ- 1200 ಕೋಟಿ
ಯಾದಗಿರಿ- 985.90 ಕೋಟಿ
ಹಾವೇರಿ- 620 ಕೋಟಿ
ಬೀದರ್- 115 ಕೋಟಿ
ಕಲಬುರಗಿ- 0
ರಾಯಚೂರು- 0
ಬಾಗಲಕೋಟೆ- 0
ಬಳ್ಳಾರಿ- 0
ಕೊಪ್ಪಳ- 0
News In 100 Seconds: ಪ್ರಮುಖ ಸುದ್ದಿಗಳು