ಮೇ 30ರಂದು 45 ಪ್ರಕರಣಗಳಿದ್ದು, 28 ದಿನಗಳಲ್ಲಿ 250ಕ್ಕೂ ಹೆಚ್ಚು ಪ್ರಕರಣಗಳು|ಗ್ರಾಮೀಣದಲ್ಲೂ ಕೊರೋನಾ ತಾಂಡವ, ಮೊರಬ 40ಕ್ಕೂ ಹೆಚ್ಚು ಪ್ರಕರಣಗಳು|ಕೊರೋನಾ ವೈರಸ್ ಹಾವಳಿ ಶುರುವಾದಾಗಿನಿಂದ ತುಂಬ ಎಚ್ಚರಿಕೆಯ ಹೆಜ್ಜೆಗಳನ್ನಿಟ್ಟರೂ ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮಿತಿ ಮೀರುತ್ತಿದೆ|
ಧಾರವಾಡ(ಜೂ.29): ಜಿಲ್ಲೆಯಲ್ಲಿ ಭಾನುವಾರ 18 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 311ಕ್ಕೆ ಏರಿದೆ. ಇದುವರೆಗೆ 166 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 139 ಪ್ರಕರಣಗಳು ಸಕ್ರಿಯವಾಗಿವೆ. ಆರು ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ತಿಳಿಸಿದ್ದಾರೆ.
ಪಿ- 12121 (36 ವರ್ಷ, ಪುರುಷ ) ನವಲಗುಂದ ತಾಲೂಕು ಶಿರಕೋಳ ನಿವಾಸಿ. ಪಿ- 12122 (40 ವರ್ಷ ಪುರುಷ ) ಹಳೆಹುಬ್ಬಳ್ಳಿ ನಿವಾಸಿ. ಪಿ-12123 (49 ವರ್ಷ, ಪುರುಷ) ಹುಬ್ಬಳ್ಳಿಯ ಬಾರಾನಾ ಪ್ಲಾಟ್, ಮಂಟೂರ ರಸ್ತೆ ನಿವಾಸಿ. ಪಿ -12124 (49 ವರ್ಷ, ಪುರುಷ). ಪಿ -12125 (47 ವರ್ಷ, ಮಹಿಳೆ) ಇವರಿಬ್ಬರೂ ಹುಬ್ಬಳ್ಳಿ ಕೇಶ್ವಾಪುರ ನಿವಾಸಿಗಳು. ಪಿ -12126 (50 ವರ್ಷ,ಪುರುಷ ) ಹುಬ್ಬಳ್ಳಿ ಕೋಟಿಲಿಂಗನಗರ, ವಾಸವಿ ಲೇಔಟ್ ನಿವಾಸಿ.
ಪಿ -12127 (45 ವರ್ಷ, ಮಹಿಳೆ), 301 ಪಿ -12128 (34 ವರ್ಷ, ಪುರುಷ) ಇವರಿಬ್ಬರೂ ಹುಬ್ಬಳ್ಳಿ ಕರ್ಕಿಬಸವೇಶ್ವರ ನಗರ 9ನೇ ಕ್ರಾಸ್ ನಿವಾಸಿಗಳು.
12129 (23 ವರ್ಷ, ಮಹಿಳೆ), ಪಿ -12130 (30 ವರ್ಷ, ಪುರುಷ ), ಪಿ -12131 (31 ವರ್ಷ, ಮಹಿಳೆ), ಪಿ -12132 (10 ವರ್ಷ, ಬಾಲಕಿ ), ಪಿ -12133 (35 ವರ್ಷ, ಮಹಿಳೆ ) ಈ ಐದು ಜನರು ಹುಬ್ಬಳ್ಳಿ ಅಂಚಟಗೇರಿಯ ಗಾಣಿಗೇರ ಓಣಿ ನಿವಾಸಿಗಳು.
ಹುಬ್ಬಳ್ಳಿ: ಕೊರೋನಾ ಪಾಸಿಟಿವ್ ತುಂಬು ಗರ್ಭಿಣಿಗೆ ಶಸ್ತ್ರಚಿಕಿತ್ಸೆ, ಮುದ್ದಾದ ಮಗುವಿಗೆ ಜನ್ಮ ನೀಡಿದ ತಾಯಿ..!
ಪಿ -12134 (57 ವರ್ಷ ಮಹಿಳೆ) ಧಾರವಾಡ ಮಿಚಗನ್ ಕಂಪೌಂಡ್ ಲೋಬೋ ಅಪಾರ್ಟ್‌ಮೆಂಟ್ ನಿವಾಸಿ. ಪಿ -12135 (50 ವರ್ಷ, ಪುರುಷ) ಧಾರವಾಡ ಮಾಳಮಡ್ಡಿ ಉಳವಿ ಬಸವೇಶ್ವರ ಹಿಲ್ ನಿವಾಸಿ. ಪಿ -12136 (24 ವರ್ಷ ಪುರುಷ) ಧಾರವಾಡ ಹಳಿಯಾಳ ರಸ್ತೆ ಬಸವನಗರ ಭಾಗ 1ರ ನಿವಾಸಿ. ಪಿ -12137 (63 ವರ್ಷ, ಮಹಿಳೆ) ಹಾವೇರಿ ಜಿಲ್ಲೆಯ ಹಾನಗಲ್ ನಿವಾಸಿ. ಪಿ -12138 (82 ವರ್ಷ, ಪುರುಷ ) ಬಳ್ಳಾರಿ ಜಿಲ್ಲೆಯ ವ್ಯಕ್ತಿ.
ಧಾರವಾಡದಲ್ಲಿ ಮಿತಿ ಮೀರುತ್ತಿದೆ ಕೋವಿಡ್ ಪ್ರಕರಣಗಳು!
ಕಳೆದ ಮೇ ತಿಂಗಳ 30ರಂದು ಜಿಲ್ಲೆಯಲ್ಲಿ 45 ಪ್ರಕರಣಗಳಿದ್ದು, ಒಂದು ಸಾವಾಗಿತ್ತು. ಇದೀಗ ಬರೀ 28 ದಿನಗಳಲ್ಲಿ 250ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದಲ್ಲದೇ ಆರು ಜನರು ಕೊರೋನಾ ಸೋಂಕಿತರು ಇಹಲೋಕ ತ್ಯಜಿಸಿದ್ದಾರೆ. ಸುರಕ್ಷತೆಯ ಊರು ಎಂದುಕೊಂಡಿದ್ದ ಧಾರವಾಡ ಇದೀಗ ಹಾಟ್‌ಸ್ಪಾಟ್ ಆಗಿ ಪರಿವರ್ತನೆಯಾಗಿದೆ. ಜೂನ್ ತಿಂಗಳ ಪ್ರತಿ ದಿನವೂ ಆರೋಗ್ಯ ಇಲಾಖೆಯ ಬುಲೆಟಿನ್‌ನಲ್ಲಿ ಧಾರವಾಡದ ಮೊದಲ ಐದು ಸ್ಥಾನಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಅಂದರೆ, ನಿತ್ಯವೂ ಹತ್ತಿಪ್ಪತ್ತು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ನಿಧಾನವಾಗಿ ಹುಬ್ಬಳ್ಳಿ-ಧಾರವಾಡದ ಬಹುತೇಕ ಪ್ರದೇಶಗಳು ಸೀಲ್‌ಡೌನ್ ಆಗುತ್ತಿವೆ.
ಗ್ರಾಮೀಣಕ್ಕೂ ವಕ್ಕರಿಸಿದ ಕೊರೋನಾ...
ಆರಂಭದಲ್ಲಿ ಬರೀ ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಮಾತ್ರ ಸೀಮಿತವಾಗಿದ್ದ ಕೋವಿಡ್-19, ಇದೀಗ ಜಿಲ್ಲೆಯ ಗ್ರಾಮೀಣ ಪ್ರದೇಶಕ್ಕೂ ಹಬ್ಬಿಕೊಂಡಿದೆ. ಅತೀವ ಬೇಸರ ಎಂದರೆ, ನವಲಗುಂದ ತಾಲೂಕು ಮೊರಬ ಗ್ರಾಮವೊಂದರಲ್ಲಿಯೇ ಅತೀ ಹೆಚ್ಚು 44 ಪಾಸಿಟಿವ್ ಪ್ರಕರಣಗಳಿವೆ. ಇದರೊಂದಿಗೆ ಅಣ್ಣಿಗೇರಿ, ಕಲಘಟಗಿ, ಕುಂದಗೋಳ ಸೇರಿದಂತೆ ಗ್ರಾಮೀಣ ಜನರಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ.
ತಪ್ಪಿದ ನಿಯಂತ್ರಣ...
ಮಾರ್ಚ್ ಕೊನೆಯ ವಾರದಲ್ಲಿ ಜಿಲ್ಲೆಯ ಪೈಕಿ ಧಾರವಾಡದಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ನಂತರದಲ್ಲಿ ಏಪ್ರಿಲ್ ತಿಂಗಳಲ್ಲಿ ಸೋಂಕು ಪತ್ತೆಯಾಗಿ ಮೇ ತಿಂಗಳ ವರೆಗೂ ತುಂಬಾ ನಿಯಂತ್ರಣದಲ್ಲಿತ್ತು. ಯಾವಾಗ ಹೊರ ರಾಜ್ಯಗಳಿಂದ ತವರೂರಿಗೆ ಮರಳಿದರೋ ಅಲ್ಲಿಂದ ಧಾರವಾಡ ಸಹ ಕೊರೋನಾ ವೈರಸ್‌ನ ಹಾಟ್‌ಸ್ಪಾಟ್ ಆಗಿ ಪರಿವರ್ತನೆಯಾಗಿದೆ. ಇದರೊಂದಿಗೆ ಆರು ಜನ ಸಹ ಕೊರೋನಾದಿಂದ ಮೃತರಾಗಿದ್ದು ಇನ್ನೂ ಹತ್ತು ಜನ ಐಸಿಯುದಲ್ಲಿದ್ದಾರೆ ಎಂಬ ಮಾಹಿತಿ ಇದೆ.
ನವಲಗುಂದ: ಕೊರೋನಾ ಹಾಟ್‌ಸ್ಪಾಟ್ ಮೊರಬದಲ್ಲಿ ಕಟ್ಟುನಿಟ್ಟಿನ ಕ್ರಮ
ಒಟ್ಟಾರೆ ಜಿಲ್ಲೆಯಲ್ಲಿ ತ್ರಿಶತಕದತ್ತ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಜನತೆ ಒಳಗೊಳಗೆ ತೀವ್ರ ಭಯದಲ್ಲಿದ್ದಾರೆ. ಇಷ್ಟಾಗಿಯೂ ಲಾಕ್‌ಡೌನ್ ಸಡಿಲಿಕೆ ಇರುವ ಕಾರಣ ಕೊರೋನಾ ಭಯಬಿಟ್ಟು ನಿತ್ಯ ತಮ್ಮ ಕೆಲಸ-ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಶಾಲಾ-ಕಾಲೇಜುಗಳು ಆರಂಭವಾಗದೇ ಇದ್ದರೂ ಕೆಲವರ ಸಂಪರ್ಕದಿಂದ ಮಕ್ಕಳಿಗೂ ಕೊರೋನಾ ವಕ್ಕರಿಸಿದ ಉದಾಹರಣೆಗಳಿವೆ. ಇದರೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಹ ನಡೆಯುತ್ತಿದ್ದು, ಬೇರೆ ಬೇರೆ ಜಿಲ್ಲೆಗಳಲ್ಲಿ ಪರೀಕ್ಷಾ ವಿದ್ಯಾರ್ಥಿಗಳಿಗೆ ಕೋವಿಡ್ ಅಂಟಿಕೊಂಡ ಪರಿಣಾಮ ಇಲ್ಲಿಯ ವಿದ್ಯಾರ್ಥಿಗಳು ತೀವ್ರ ಭಯದಲ್ಲಿದ್ದಾರೆ.
ಸ್ವಯಂ ನಿಯಂತ್ರಣವೇ ಮದ್ದು...
ಧಾರವಾಡ ಜಿಲ್ಲೆಯಲ್ಲಿ ಒಂದು ರೀತಿಯಲ್ಲಿ ಕೋವಿಡ್ ಸಮುದಾಯಕ್ಕೆ ಹಬ್ಬಿರುವ ರೀತಿಯಲ್ಲಿ ಕಾಣುತ್ತಿದ್ದು, ಯಾವಾಗ, ಯಾರಿಂದ, ಹೇಗೆ ಅಂಟಿಕೊಳ್ಳುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಹೀಗಾಗಿ ಜನರು ಸ್ವಯಂ ಪ್ರೇರಿತರಾಗಿ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಮಾರುಕಟ್ಟೆ, ಕೆಲಸದ ಸ್ಥಳ ಹಾಗೂ ಇತರ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಮಾಡಿಕೊಳ್ಳುವುದು, ಅನವಶ್ಯಕವಾಗಿ ಹೊರಗೆ ಹೋಗದಿರುವುದು ಅಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲದೇ ಹೋದಲ್ಲಿ ಕೋವಿಡ್‌ಗೆ ತುತ್ತಾಗುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ.
ರಾಜ್ಯ ಸರ್ಕಾರ ಸರ್ಕಾರಿ ಆಸ್ಪತ್ರೆ ಹೊರತುಪಡಿಸಿ ಖಾಸಗಿ ಆಸ್ಪತ್ರೆಗಳಿಗೂ ಚಿಕಿತ್ಸೆಗೆ ಅವಕಾಶ ಮಾಡಿಕೊಟ್ಟಿದೆ. ಆದರೆ, ದಿನವೊಂದಕ್ಕೆ ಸಾವಿರಾರು ರುಪಾಯಿ ವೆಚ್ಚವಾಗಲಿದೆ. ಒಟ್ಟಾರೆ ಕೊರೋನಾ ರೋಗಿ ಸಂಪೂರ್ಣ ಗುಣಮುಖರಾಗುವುದರೊಳಗೆ ಲಕ್ಷಾಂತರ ರುಪಾಯಿ ವೆಚ್ಚವಾಗುವುದರಲ್ಲಿ ಸಂಶಯವೇ ಇಲ್ಲ. ಹೀಗಾಗಿ ಸಾಮಾನ್ಯ ಜನರು ತುಂಬ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಿದೆ.
ಧಾರವಾಡದಲ್ಲಿ ಕೋವಿಡ್‌ಗೆ 6ನೇ ಬಲಿ
ದಿನದಿಂದ ದಿನಕ್ಕೆ ಅಟ್ಟಹಾಸ ಮೆರೆಯುತ್ತಿರುವ ಕೋವಿಡ್ ಸೋಂಕು ಧಾರವಾಡದಲ್ಲಿ ಭಾನುವಾರದ ವರೆಗೆ ಆರು ಜನರನ್ನು ಬಲಿ ಪಡೆದಿದೆ. ಮೇ ತಿಂಗಳಲ್ಲಿ ಬರೀ ಒಂದೇ ಸಾವಾಗಿತ್ತು. ಇದೀಗ ಜೂನ್ ತಿಂಗಳ 28 ದಿನಗಳಲ್ಲಿ ಐವರು ಮೃತರಾಗಿದ್ದಾರೆ. ಭಾನುವಾರ ಹುಬ್ಬಳ್ಳಿಯ ಉಣಕಲ್ ನಿವಾಸಿಯಾಗಿದ್ದ ಪಿ-6257 ಮೃತ ಸೋಂಕಿತ ಮಹಿಳೆ. 71 ವರ್ಷದ ಈ ಮಹಿಳೆಯು ತೀವ್ರ ಜ್ವರ, ನೆಗಡಿಯಿಂದ ಬಳಲುತ್ತಿದ್ದರು. ಕುಟುಂಬದ ಆರು ಜನರಿಗೂ ಸೋಂಕು ತಗುಲಿದ್ದು, ಗುಣಮುಖರಾಗಿ ಬಿಡುಗಡೆಯಾಗಿದ್ದರು. ಆದರೆ, ಮೃತ ಮಹಿಳೆ ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.