ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕೋಳಿಕ್ಯಾಂಪ್ ನಲ್ಲಿ 5 ವರ್ಷದ ಬಾಲಕಿಗೆ ಝಿಕಾ ವೈರಸ್ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯಾದ್ಯಂತ ಚಿಕ್ಕ ಮಕ್ಕಳ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಮಕ್ಕಳಲ್ಲಿ ಸಣ್ಣದಾಗಿ ಜ್ವರ ಕಾಣಿಸಿಕೊಂಡರೂ ಪೋಷಕರು ಆಸ್ಪತ್ರೆಗಳಿಗೆ ದೌಡಾಯಿಸುತ್ತಿದ್ದಾರೆ.
ವರದಿ : ಜಗನ್ನಾಥ ಪೂಜಾರ್ ಏಷ್ಯಾನೆಟ್ ಸುವರ್ಣ ನ್ಯೂಸ್
ರಾಯಚೂರು (ಡಿ.13): ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕೋಳಿಕ್ಯಾಂಪ್ ನಲ್ಲಿ 5 ವರ್ಷದ ಬಾಲಕಿಗೆ ಝಿಕಾ ವೈರಸ್ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯಾದ್ಯಂತ ಚಿಕ್ಕ ಮಕ್ಕಳ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಮಕ್ಕಳಲ್ಲಿ ಸಣ್ಣದಾಗಿ ಜ್ವರ ಕಾಣಿಸಿಕೊಂಡರೂ ಪೋಷಕರು ಆಸ್ಪತ್ರೆಗಳಿಗೆ ದೌಡಾಯಿಸುತ್ತಿದ್ದಾರೆ. ಹೀಗಾಗಿ, ರಾಯಚೂರು ಜಿಲ್ಲೆಯಾದ್ಯಂತ ಮಕ್ಕಳ ಆಸ್ಪತ್ರೆಗಳು ಫುಲ್ ಆಗಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಜೀಕಾ ವೈರಸ್ ಹೆಚ್ಚಾಗಿ ಹರಡಂತೆ ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ್ ನಾಯಕ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ಝಿಕಾ ವೈರಸ್‌ಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯ ಮಾನವಿ ತಾಲೂಕಿನ ನೀರಮಾನ್ವಿ ಗ್ರಾಮದ ಕೋಳಿ ಕ್ಯಾಂಪ್ ಎನ್ನುವ ಪ್ರದೇಶದಲ್ಲಿ ಈಗಾಗಲೇ ಒಬ್ಬ ಬಾಲಕಿಯಲ್ಲಿ ಝೀಕಾ ವೈರಸ್ ಕಂಡುಬಂದಿದ್ದು, ಸೊಳ್ಳೆಗಳಿಂದಲೇ ಈ ವೈರಸ್ ಅತ್ಯಂತ ವೇಗವಾಗಿ ಹರಡುವುದರಿಂದ ಗ್ರಾಮದಲ್ಲಿ ಹಾಗೂ ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮಗಳಲ್ಲಿ ಜನರು ಸ್ವಚ್ಛತೆ ಹಾಗೂ ನೀರು ನಿಲ್ಲದಂತೆ ನೋಡಿಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಖಡಕ್ ಎಚ್ಚರಿಕೆಯನ್ನು ನೀಡಿದರು.
Zika Virus In Karnataka: ರೋಗಲಕ್ಷಣಗಳೇನು, ಆರೋಗ್ಯದ ಕಾಳಜಿ ವಹಿಸೋದು ಹೇಗೆ ?
ಸೊಳ್ಳೆ ಬೆಳೆಯದಂತೆ ಫಾಗಿಂಗ್ ಮಾಡಿ: ನೀರಮಾನ್ವಿ ಗ್ರಾಮ, ನೀರಮಾನ್ವಿ ಕೋಳಿ ಕ್ಯಾಂಪ್ ಹಾಗೂ ನೀರಮಾನ್ವಿ ತಾಂಡಾ, ರಾಧಾಕೃಷ್ಣಾ ಕ್ಯಾಂಪ್, ಹರವಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ಗ್ರಾಮಗಳಲ್ಲಿ ಮಕ್ಕಳು ಮತ್ತು ಎಲ್ಲ ಜನರ ರಕ್ತದ ಮಾದರಿಗಳನ್ನು ಸಂಗ್ರಹಿಸಬೇಕು. ಕೋಳಿ ಕ್ಯಾಂಪ್ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯ ಗ್ರಾಮಗಳಲ್ಲಿ ಸೊಳ್ಳೆಗಳು ಹೆಚ್ಚಾಗದಂತೆ ಫಾಗಿಂಗ್ ಮಾಡಬೇಕು. ಗ್ರಾಮ ಪಂಚಾಯಿತಿ ಮತ್ತು ಇತರೆ ಸ್ಥಳೀಯ ಅಧಿಕಾರಿಗಳು ಕಟ್ಟು ನಿಟ್ಟಾಗಿ ಕಾರ್ಯನಿರ್ವಹಿಸಬೇಕು. ಒಂದು ವೇಳೆ ನಿರ್ಲಕ್ಷ್ಯವಹಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೂಚನೆ ನೀಡದರು.
ಗರ್ಭಿಣಿಯರು ಜ್ವರ ಬಂದರೆ ನಿರ್ಲಕ್ಷಿಸಬೇಡಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು ಮಾತನಾಡಿ, ಆರೋಗ್ಯ ಸಚಿವರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರ ಆದೇಶದಂತೆ ಝಿಕಾ ವೈರಸ್ ಹರಡಂತೆ ಜಿಲ್ಲೆಯಲ್ಲಿ ಎಲ್ಲಾ ರೀತಿಯ ಸೂಕ್ತ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಒಂದು ವೇಳೆ ಹೆಚ್ಚಿನ ಜ್ವರ ಕಂಡುಬಂದಲ್ಲಿ ಹಾಗೂ ಗರ್ಭಿಣಿ ಮಹಿಳೆಯರಲ್ಲಿ ಹೆಚ್ಚಿನ ಜ್ವರ ಕಂಡುಬಂದಲ್ಲಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕದಲ್ಲಿ ಝಿಕಾ ವೈರಸ್ ಪತ್ತೆ: ರಾಯಚೂರಿಗೆ ಬಂದ ಕೇಂದ್ರದ ತಜ್ಞರ ತಂಡ
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಜಿಲ್ಲಾ ಆರೋಗ್ಯ ಇಲಾಖೆ ಹಿರಿಯ ಪ್ರಾದೇಶಿಕ ನಿರ್ದೇಶಕಿ ಡಾ.ಸ್ಮಿತಾ, ಎನ್.ಸಿ.ಡಿ.ಸಿ ಉಪನಿರ್ದೇಶಕ ಕೆ.ಶುಭಂಗಿ, ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಡಾ.ಕೆ.ರೇಗು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಕಣ್ಗಾವಲು ಘಟಕದ ಉಪನಿರ್ದೇಶಕ ಮಹ್ಮದ್ ಶರೀಫ್ ಇನ್ನಿತರರು ಉಪಸ್ಥಿತರಿದ್ದರು.