ಸಾಹಿತ್ಯ ಲೋಕದ ಅಶ್ವಿನಿ ನಕ್ಷತ್ರ ಎಂದೇ ಖ್ಯಾತಿಯಾಗಿದ್ದಾರೆ ಈ ಕೃಷ್ಣಶಾಸ್ತ್ರಿ
ಎ.ಆರ್.ಕೃಷ್ಣಶಾಸ್ತ್ರಿ ಜನ್ಮಸ್ಥಳ ಕಾಫಿನಾಡಿನ ಅಂಬಳೆ ಗ್ರಾಮ
ಖಜಾನೆಯಲ್ಲಿಯೇ ಉಳಿದ ಸಾಹಿತಿಯ ಸ್ಮಾರಕ ನಿರ್ಮಾಣಕ್ಕೆ ಬಂದ 1.5 ಕೋಟಿ ರೂ. ಅನುದಾನ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಡಿ.13): ರಾಷ್ಟ್ರಕವಿ ಕುವೆಂಪು ಯಾರಿಗ್ ತಾನೆ ಗೊತ್ತಿಲ್ಲ. ಆದರೆ ಅವರ ಗುರುಗಳು ಯಾರು ಅನ್ನೋದು ಯಾರಿಗೂ ಗೊತ್ತಿಲ್ಲ. ಕುವೆಂಪು ಅವರಂತಹ ಅಸಾಮಾನ್ಯ ಪ್ರತಿಭೆಗೆ ಗುರುಗಳಾಗಿದ್ದೋರು ಕಾಫಿನಾಡಿನ ಅಂಬಳೆ ಗ್ರಾಮದ ಸಾಹಿತಿ ಎ.ಆರ್.ಕೃಷ್ಣಶಾಸ್ತ್ರಿ. ಸಾಹಿತ್ಯ ಲೋಕದ ಅಶ್ವಿನಿ ನಕ್ಷತ್ರ ಎಂದೇ ಖ್ಯಾತಿಯಾಗಿದ್ದಾರೆ ಈ ಕೃಷ್ಣಶಾಸ್ತ್ರಿ. ಇಂತಹಾ ಅಪರೂಪದ ಸಾಹಿತಿ ನೆನಪಿನಾರ್ಥ ಸ್ಮಾರಕ ನಿರ್ಮಿಸೋಕೆ ಬಂದ 1.5 ಕೋಟಿ ರೂ. ಹಣ 10 ವರ್ಷದಿಂದ ಖಜಾನೆಯಲ್ಲೇ ಕೊಳೆಯುತ್ತಿದೆ.
ರಾಷ್ಟ್ರಕವಿ ಕುವೆಂಪುರವರಿಗೆ ಕನ್ನಡದಲ್ಲಿ ಎಂ.ಎ ಮಾಡಲು ಹೇಳಿದ್ದೇ ಚಿಕ್ಕಮಗಳೂರಿನ ಅಂಬಳೆ ಗ್ರಾಮದ ಎ.ಆರ್.ಕೃಷ್ಣಶಾಸ್ತ್ರಿ. ಸಾಹಿತ್ಯ ಲೋಕದಲ್ಲೇ ಅತ್ಯದ್ಭುತ ಲೇಖಕರಾದ ಇವರು ವಚನ ಭಾರತದ ಕತೃ. ಪದ್ಯವನ್ನ ಗದ್ಯದ ರೂಪದಲ್ಲಿಸ ರಚಿಸಿದ ಹೆಗ್ಗಳಿಕೆ ಈ ಕೃಷ್ಣಶಾಸ್ತ್ರಿ ಅವರದ್ದಾಗಿದೆ. ಚಿಕ್ಕಮಗಳೂರಿನ ಅಂಬಳೆ ಗ್ರಾಮ ಕೃಷ್ಣಶಾಸ್ತ್ರಿಯ ಹುಟ್ಟೂರು. ಇವರು ಹುಟ್ಟಿ ಬೆಳೆದ ಮನೆ ಹೊರತಾಗಿ ಕಾಫಿನಾಡಲ್ಲಿ ಇವರ ನೆನಪಿನಾರ್ಥ ಸಣ್ಣದೊಂದು ಸ್ಮಾರಕವೂ ಇಲ್ಲ. ಆದರೆ 2010ರಲ್ಲಿ ಸರ್ಕಾರ ಕೃಷ್ಣಶಾಸ್ತ್ರಿ ಹೆಸರಲ್ಲಿ ಸ್ಮಾರಕ ನಿರ್ಮಿಸೋಕೆ 1.5 ಕೋಟಿ ಹಣ ಬಿಡುಗಡೆ ಮಾಡಿದೆ.
ಕನ್ನಡ ತಂತ್ರಾಂಶಕ್ಕೆ ಸರ್ಕಾರ ಪ್ರತಿ ವರ್ಷ 10 ಕೋಟಿ ಅನುದಾನ ನೀಡಲಿ: ಸಾಹಿತಿಗಳು
ತಕರಾರು ಜಾಗ ನೀಡಿದ್ದ ಗ್ರಾಮ ಪಂಚಾಯಿತಿ: ಕೃಷ್ಣಪ್ಪಶಾಸ್ತ್ರಿ ಅವರ ಸ್ಮಾರಕ ನಿರ್ಮಾಣ ಮಾಡುವ ಜಾಗವು ವಿವಾದದಿಂದ ಕೂಡಿದೆ. ಹೀಗಾಗಿ, ಜಾಗದ ವಿವಾದದಿಂದ 10 ವರ್ಷಗಳು ಕಳೆದರೂ ಕಾಮಗಾರಿ ನಡೆಯದೇ ನೆನೆಗುದಿಗೆ ಬಿದ್ದಿದೆ. ಗ್ರಾಮ ಪಂಚಾಯಿತಿಯ ಕಣ್ಣಾಮುಚ್ಚಾಲೇ ಆಟಕ್ಕೆ ಜಿಲ್ಲಾಡಳಿತವೇ ದುಡ್ ಇಟ್ಕೊಂಡ್ ಅಸಹಾಯಕತೆ ಪ್ರದರ್ಶಿಸ್ತಿದೆ. ಜಿಲ್ಲಾಡಳಿತ ಹಾಗೂ ಗ್ರಾಮ ಪಂಚಾಯತಿಯ ಇಚ್ಛಾ ಶಕ್ತಿಯ ಕೊರತೆಯಿಂದ ಸ್ಮಾರಕ ನಿರ್ಮಾಣವಾಗ್ತಿಲ್ಲ ಅನ್ನೋದು ಯುವಸಾಹಿತಿಗಳ ಅಳಲು ಆಗಿದೆ.
ಸ್ಮಾರಕದ ಜಾಗದಲ್ಲಿ ಮತ್ತೊಂದು ಕಾಮಗಾರಿ: ಕನ್ನಡ ಭಾಷೆ ಬೆಳೆಯಲು ಶ್ರಮಿಸಿದ ಅನೇಕ ಹಿರಿಯರಲ್ಲಿ ಎ.ಆರ್.ಕೃಷ್ಣಶಾಸ್ತ್ರಿ ಕೂಡ ಒಬ್ಬರು. ಕೃಷ್ಣಶಾಸ್ತ್ರಿ ಕುಟುಂಬದವರು ಸ್ಮಾರಕವನ್ನ ಅಂಬಳೆಯಲ್ಲೇ ನಿರ್ಮಿಸಬೇಕು ಎಂದು ಹೇಳಿದರು. ಆದರೆ, ಶಾಸ್ತ್ರಿ ಅವರ ಅಭಿಮಾನಿಗಳು ಚಿಕ್ಕಮಗಳೂರಲ್ಲಿ ಸ್ಮಾರಕ ನಿರ್ಮಿಸಬೇಕೆಂದು ಒತ್ತಾಯಿಸಿದ್ದರು. ಆದರೆ ಕೃಷ್ಣಶಾಸ್ತ್ರಿಯ ಹುಟ್ಟೂರು ಅಂಬಳೆ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಶಾಸ್ತ್ರಿಗಳ ಸ್ಮಾರಕ ಭವನವನ್ನ ಗ್ರಾಮದಲ್ಲೇ ನಿರ್ಮಿಸುವ ಭರವಸೆ ನೀಡಿ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಕುರಿತು ಶೀಘ್ರವೇ ಪ್ರಸ್ತಾವನೆ ತಯಾರಿಸಿ ಕಾಮಗಾರಿ ಪ್ರಾರಂಭಿಸುವ ಭರವಸೆ ನೀಡಿದ್ದರು. ಆದರೆ, 2010ರಲ್ಲಿ ಜಾಗ ನೀಡಿದ್ದ ಗ್ರಾಮ ಪಂಚಾಯಿತಿ ಈಗ ಅದೇ ಜಾಗಕ್ಕೆ ಮತ್ತೊಂದು ಕಾಮಗಾರಿಗೆ ಪೌಂಡೇಶನ್ ನಿರ್ಮಿಸಲು ಮುಂದಾಗಿದೆ.
ಮೊಗೇರಿಯಲ್ಲಿ ಅಡಿಗರ ಪುರಭವನ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ
40 ಲಕ್ಷ ರೂ. ವಾಪಸ್ಸು ಹೋಗಿದೆ: ಈ ಮೂಲಕ ಕೃಷ್ಣಪ್ಪಶಾಸ್ತ್ರಿ ಅವರ ಸ್ಮಾರಕ ನಿರ್ಮಾಣಕ್ಕೆ ಜಾಗ ಇಲ್ಲವೆಂದು ಜಿಲ್ಲಾಡಳಿತದ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿದೆ. ಇದರ ನಡುವೆ ಸರ್ಕಾರದಿಂದ ಬಂದಿರುವ ವಿಶೇಷ ಹಣದಲ್ಲಿ 40 ಲಕ್ಷ ರೂ. ವಾಪಸ್ಸು ಹೋಗಿದೆ. ಒಟ್ಟಾರೆ, ಜಾಗದ ವಿವಾದದಿಂದ ನಾಡಿನ ಹೆಸರಾಂತ ಸಾಹಿತಿ ಎ.ಆರ್.ಕೃಷ್ಣಶಾಸ್ತ್ರಿಯವರ ಸ್ಮಾರಕ ಭವನ ನೆನೆಗುದಿಗೆ ಬಿದ್ದಿದೆ. ಕೃಷ್ಣಶಾಸ್ತ್ರಿಯವರ ನೆನಪುಳಿಯುವಂತಹ ಸ್ಮಾರಕ ನಿರ್ಮಾಣವಾಗುತ್ತಾ ಎಂದು ಜಾತಕ ಪಕ್ಷಿಗಳಂತೆ ಸಾಹಿತ್ಯಾಸ್ತಕರು ಕಾದುಕೂತಿದ್ದಾರೆ.