ಕರ್ನಾಟಕದಲ್ಲಿ ಝಿಕಾ ವೈರಸ್ ಪತ್ತೆ: ರಾಯಚೂರಿಗೆ ಬಂದ ಕೇಂದ್ರದ ತಜ್ಞರ ತಂಡ

ಮೂವರು ಜನರು ಒಳಗೊಂಡ ಕೇಂದ್ರ ತಜ್ಞರ ತಂಡ ರಾಯಚೂರಿಗೆ ಆಗಮಿಸಿದ್ದು ಝಿಕಾ ವೈರಸ್ ಪಾಸಿಟಿವ್ ಬಂದಿದ್ದರ ಬಗ್ಗೆ ಮಾಹಿತಿಯನ್ನ ಪಡೆದುಕೊಳ್ಳಲಿದೆ. 

Central Government Experts Team Arrive to Raichur For Zika Fever Case grg

ರಾಯಚೂರು(ಡಿ.13):  ಜಿಲ್ಲೆಯ ಐದು ವರ್ಷದ ಮಗುವಿಗೆ ಝಿಕಾ ವೈರಸ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕೇಂದ್ರದ ತಜ್ಞರ ತಂಡ ಇಂದ(ಮಂಗಳವಾರ) ರಾಯಚೂರಿಗೆ ಆಗಮಿಸಿದೆ. ಮೂವರು ಜನರು ಒಳಗೊಂಡ ಕೇಂದ್ರ ತಜ್ಞರ ತಂಡ ರಾಯಚೂರಿಗೆ ಆಗಮಿಸಿದ್ದು ಝಿಕಾ ವೈರಸ್ ಪಾಸಿಟಿವ್ ಬಂದಿದ್ದರ ಬಗ್ಗೆ ಮಾಹಿತಿಯನ್ನ ಪಡೆದುಕೊಳ್ಳಲಿದೆ.  ಇಬ್ಬರು ಬೆಂಗಳೂರಿನಿಂದ, ಒಬ್ಬರು ಕೇರಳದಿಂದ ತಜ್ಞರು ರಾಯಚೂರಿಗೆ ಆಗಮಿಸಿದ್ದಾರೆ. ಇಂದು ಡಿಎಚ್‌ಒ ಕಚೇರಿಯಲ್ಲಿ ವೈದ್ಯರ ಜೊತೆಗೆ ಕೇಂದ್ರ ತಂಡ ಸಭೆ ನಡೆಸಲಿದೆ. 

ಝಿಕಾ ವೈರಸ್ ಕುರಿತು ಕೇಂದ್ರದ ತಜ್ಞರ ತಂಡಕ್ಕೆ ವೈದ್ಯರ ತಂಡ ಮಾಹಿತಿ ನೀಡಲಿದೆ. ಬಳಿಕ ಕೇಂದ್ರದ ತಂಡ ರಾಯಚೂರು ಜಿಲ್ಲಾಧಿಕಾರಿ ಮತ್ತು ಜಿ‌.ಪಂ‌. ಸಿಇಒ ಅವರನ್ನು ಭೇಟಿ ಮಾಡಲಿದೆ. 

Raichur : 5 ವರ್ಷದ ಮಗುವಿಗೆ ಝಿಕಾ ವೈರಸ್‌ ಪತ್ತೆ: ಮಕ್ಕಳ ಆರೋಗ್ಯ ಮಾರ್ಗಸೂಚಿ ರಚನೆ

ಕರ್ನಾಟಕಕ್ಕೂ ವಕ್ಕರಿಸಿದ ಝೀಕಾ ವೈರಸ್‌..!

ರಾಜ್ಯದಲ್ಲಿ ಝೀಕಾ ವೈರಸ್‌ ಸೋಂಕಿನ ಮೊದಲ ಪ್ರಕರಣ ಪತ್ತೆಯಾಗಿದ್ದು, ರಾಯಚೂರಿನ ಐದು ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ. ಆರೋಗ್ಯ ಸೌಧದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆ ಪ್ರಯೋಗಾಲಯದ ವರದಿ ಪ್ರಕಾರ ರಾಜ್ಯದಲ್ಲಿ 5 ವರ್ಷದ ಒಂದು ಹೆಣ್ಣು ಮಗುವಿಗೆ ಝೀಕಾ ವೈರಸ್‌ ಇರುವುದು ಖಚಿತವಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ರಾಜ್ಯದಲ್ಲಿ ಇದು ಮೊದಲ ಪ್ರಕರಣವಾಗಿದ್ದು, ಸರ್ಕಾರ ಇದನ್ನು ಬಹಳ ಎಚ್ಚರದಿಂದ ಗಮನಿಸುತ್ತಿದೆ ಮತ್ತು ಅದನ್ನು ನಿರ್ವಹಿಸಲು ಸಜ್ಜಾಗಿದೆ ಎಂದರು.

ಸೋಂಕಿತ ಬಾಲಕಿಯ ಬಗ್ಗೆ ತೀವ್ರ ನಿಗಾ ವಹಿಸಿದ್ದೇವೆ. ಆಕೆಯ ಟ್ರಾವೆಲ್‌ ಹಿಸ್ಟರಿ ಈವರೆಗೂ ಲಭ್ಯವಾಗಿಲ್ಲ. ಹೀಗಾಗಿ, ರಾಯಚೂರು ಜಿಲ್ಲಾಡಳಿತ ಬಾಲಕಿ ಟ್ರಾವೆಲ್‌ ಹಿಸ್ಟರಿ ಪತ್ತೆ ಮಾಡುತ್ತಿದೆ. ರಾಯಚೂರು ಹಾಗೂ ನೆರೆಯ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಝೀಕಾ ವೈರಸ್‌ ಸೋಂಕಿನ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು. 

ಒಂದು ತಿಂಗಳಿಂದ ಜ್ವರ?:

ಸೋಂಕು ದೃಢಪಟ್ಟ ಬಾಲಕಿಗೆ ನವೆಂಬರ್‌ 13ರಂದು ಜ್ವರ ಕಾಣಿಸಿಕೊಂಡಿತ್ತು. ಪೋಷಕರು ಮೊದಲು ಸಿಂಧನೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಅಲ್ಲಿ ಡೆಂಘೀ ಜ್ವರ ದೃಢಪಟ್ಟು ವಿಜಯನಗರದ ವಿಮ್ಸ್‌ ಆಸ್ಪತ್ರೆಗೆ ವರ್ಗಾಯಿಸಿ ನ.15 ರಿಂದ 18 ರವರೆಗೆ ಚಿಕಿತ್ಸೆ ನೀಡಲಾಗಿತ್ತು. ಅಲ್ಲಿನ ವೈದ್ಯರು ಬಾಲಕಿಯ ರಕ್ತ ಮತ್ತು ಮೂತ್ರ ಮಾದರಿಯನ್ನು ಪುಣೆಯ ಎನ್‌ಐವಿಗೆ ಕಳಿಸಿದ್ದರು. ಡಿಸೆಂಬರ್‌ 9ರಂದು ಬಾಲಕಿಗೆ ಝೀಕಾ ಸೋಂಕು ಇರುವುದು ಪತ್ತೆಯಾಗಿದೆ. ಬಾಲಕಿಯ ಕುಟುಂಬಸ್ಥರ ರಕ್ತ ಹಾಗೂ ಮೂತ್ರ ಮಾದರಿ ಸಂಗ್ರಹಿಸಲಾಗಿದ್ದು, ಐದು ಜನರ ವರದಿ ನೆಗೆಟಿವ್‌ ಬಂದಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಏನಿದು ಸೋಂಕು?

ಫ್ಲವಿವಿರಿಡೆ ಕುಟುಂಬಕ್ಕೆ ಸೇರಿದ ವೈರಸ್‌ ಇದಾಗಿದ್ದು, 1952ರಲ್ಲಿ ಉಗಾಂಡ ಹಾಗೂ ತಾಂಜೇನಿಯಾದಲ್ಲಿ ಮೊದಲ ಬಾರಿಗೆ ಮನುಷ್ಯರಲ್ಲಿ ಕಂಡುಬಂದಿತು. 2013ರ ಬಳಿಕ ಫ್ರಾನ್ಸ್‌ ಸೇರಿದಂತೆ ಹಲವು ದೇಶದಲ್ಲಿ ಪತ್ತೆಯಾಗಿದೆ. 2020ರಲ್ಲಿ ಕೇರಳದಲ್ಲಿ ಭಾರತದ ಮೊದಲ ಪ್ರಕರಣ ವರದಿಯಾಗಿತ್ತು.

ಮಹಾರಾಷ್ಟ್ರದ ಏಳು ವರ್ಷದ ಬಾಲಕಿಯಲ್ಲಿ ಝಿಕಾ ವೈರಸ್ ಪತ್ತೆ

ಹೇಗೆ ಹರಡುತ್ತದೆ?

ಡೆಂಘೀ, ಹಳದಿ ಜ್ವರ, ಮೆದುಳು ಜ್ವರ ಹರಡುವ ಈಡಿಸ್‌ ಜಾತಿಯ ಸೊಳ್ಳೆಗಳ ಕಡಿತದಿಂದ ಝೀಕಾ ವೈರಸ್‌ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುತ್ತವೆ. ಕೇವಲ ಸೊಳ್ಳೆಗಳ ಕಡಿತದಿಂದ ಹರಡುವುದಲ್ಲದೆ ಸೋಂಕಿತರ ರಕ್ತದ ವರ್ಗಾವಣೆ, ಅಸುರಕ್ಷಿತ ಲೈಂಗಿಕತೆ ಮುಂತಾದ ದೇಹದ ದ್ರವಗಳ ವಿನಿಮಯದ ಮೂಲಕವೂ ಹರಡುತ್ತದೆ. ಸದ್ಯ ರಾಜ್ಯದಲ್ಲಿ ಚಳಿಗಾಲ, ಮಳೆ ಇದ್ದು ಈ ವೈರಸ್‌ ಹರಡಲು ಅನುಕೂಲವಾದ ವಾತಾವರಣ ಸೃಷ್ಟಿಯಾಗಿದೆ.

ರೋಗ ಲಕ್ಷಣಗಳು?

ತೀವ್ರ ತರವಾದ ಜ್ವರ, ಮೈ-ಕೈ ನೋವು, ಕೀಲುಗಳಲ್ಲಿ ನೋವು, ದೇಹದ ಮೇಲೆ ಕೆಂಪು ರಕ್ತ ಮಿಶ್ರಿತ ಗುಳ್ಳೆಗಳು ಕಾಣಿಸಿಕೊಳ್ಳುವುದು ಪ್ರಮುಖ ಲಕ್ಷಣವಾಗಿದೆ. ರಕ್ತ ಹಾಗೂ ಮೂತ್ರವನ್ನು ಪರೀಕ್ಷಿಸಿದಾಗ ಸೋಂಕು ಇರುವುದು ಕಂಡುಬರುತ್ತದೆ.
 

Latest Videos
Follow Us:
Download App:
  • android
  • ios