ಮಂಗ್ಳೂರು ಸಹಜಸ್ಥಿತಿ : ಹಗಲು ಹೊತ್ತು ಕರ್ಫ್ಯೂ ಸಡಿಲ

By Kannadaprabha NewsFirst Published Dec 22, 2019, 7:32 AM IST
Highlights

ಮಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಇದ್ದ ಸ್ಥಿತಿ ಈಗ ಸುಧಾರಿಸಿದೆ. ಮಂಗಳೂರು ಸಹಜ ಸ್ಥಿತಿಗೆ ಮರಳಿದ್ದು ಇದದೀಗ ಕರ್ಫ್ಯೂ ಕೂಡ ಸಡಿಲಿಕೆ ಮಾಡಲಾಗಿದೆ. 

ಮಂಗಳೂರು [ಡಿ.22]:  ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆಯಿಂದ ಉದ್ವಿಗ್ನಗೊಂಡಿದ್ದ ಮಂಗಳೂರು ಈಗ ಸಹಜ ಸ್ಥಿತಿಯತ್ತ ಮರಳುತ್ತಿದೆ. ಕರ್ಫ್ಯೂ ಜಾರಿಯಲ್ಲಿದ್ದ ಮಂಗಳೂರು ಮಾತ್ರವಲ್ಲದೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಯಾವುದೇ ಅಹಿತಕರ ಘಟನೆಗಳಿಲ್ಲದೆ ಪರಿಸ್ಥಿತಿ ಬಹುತೇಕ ಶಾಂತವಾಗಿತ್ತು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕೂಡ ಮಂಗಳೂರಿಗೆ ಆಗಮಿಸಿ ಅಧಿಕಾರಿಗಳ ಜತೆಗೆ ಸಭೆ ನಡೆಸಿದ್ದು, ಅವರ ಸೂಚನೆಯಂತೆ ಭಾನುವಾರ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕರ್ಫ್ಯೂ ಸಡಿಲಿಸಲು ನಿರ್ಧರಿಸಲಾಗಿದೆ. ಸೋಮವಾರದಿಂದ ಮಂಗಳೂರು ನಗರದಲ್ಲಿ ನಾಲ್ಕು ದಿನಗಳಿಂದ ಹೇರಲಾಗಿರುವ ಕರ್ಪೂ್ಯ ತೆರವಾಗಲಿದೆ.

ಸಭೆಯ ಮೇಲೆ ಸಭೆ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧ ಹೋರಾಟ ಹಿಂಸಾಚಾರಕ್ಕೆ ತಿರುಗಿ ಪೊಲೀಸರ ಗುಂಡೇಟಿಗೆ ಇಬ್ಬರು ಬಲಿಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಗಳೂರಿಗೆ ಆಗಮಿಸಿ ಪರಿಸ್ಥಿತಿ ಅವಲೋಕನ ನಡೆಸಿದರು. ಮೂರು ಪ್ರತ್ಯೇಕ ಸಭೆ ನಡೆಸಿದ ಅವರು ಘಟನೆಗೆ ಸಂಬಂಧಿಸಿ ಅಧಿಕಾರಿಗಳು, ಜನಪ್ರತಿನಿಧಿಗಳ ಜತೆಗೆ ಚರ್ಚೆ ನಡೆಸಿದರು. ಪೊಲೀಸ್‌ ಕಮಿಷನರ್‌ ಡಾ.ಹರ್ಷ ಅವರ ಜತೆಗೂ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡರು. ಏತನ್ಮಧ್ಯೆ, ಗೋಲಿಬಾರ್‌ನಲ್ಲಿ ಮೃತಪಟ್ಟವರಿಬ್ಬರ ಕುಟುಂಬದವರನ್ನೂ ಭೇಟಿಯಾದರು.

ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ: ಉ.ಪ್ರದಲ್ಲಿ 15 ಜನರ ಸಾವು!...

ಕರ್ಫ್ಯೂ ಸಡಿಲಿಕೆ ಮಾಹಿತಿಯೇ ಇಲ್ಲ: ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಶನಿವಾರ ಬೆಳಗ್ಗೆ 6ರಿಂದ 8 ಗಂಟೆಯವರೆಗೆ ಮಂಗಳೂರಲ್ಲಿ ಕರ್ಫ್ಯೂ ಸಡಿಲಿಕೆ ಮಾಡಲಾಗಿತ್ತು. ಆದರೆ ಈ ಕುರಿತ ಮಾಹಿತಿ ಇಲ್ಲದೆ ಜನ ಗೊಂದಲಕ್ಕೀಡಾಗಬೇಕಾಯಿತು. 8 ಗಂಟೆ ನಂತರವೂ ರಸ್ತೆಯಲ್ಲಿದ್ದ ಜನ ಪೊಲೀಸರ ಲಾಠಿ ಏಟಿನ ರುಚಿ ಅನುಭವಿಸಬೇಕಾಯಿತು. ಈ ವೇಳೆ, ಮಂಗಳೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜನಪ್ರತಿನಿಧಿಗಳು, ಸಾರ್ವಜನಿಕರ ಬೇಡಿಕೆಯಂತೆ ಮಧ್ಯಾಹ್ನ 3ರಿಂದ ಸಂಜೆ 6ರ ವರೆಗೆ ಕರ್ಫ್ಯೂ ಸಡಿಲಿಸಿದ ಹಿನ್ನೆಲೆಯಲ್ಲಿ ಈ ಸಮಯದಲ್ಲಿ ಅಂಗಡಿ-ಮುಂಗಟ್ಟುಗಳು ತೆರೆದಿದ್ದವು. ಎರಡು ದಿನಗಳಿಂದ ಮನೆಯಲ್ಲೇ ಉಳಿದಿದ್ದ ಜನ ಅಗತ್ಯವಸ್ತುಗಳನ್ನು ಖರೀದಿಸಲು ಅಂಗಡಿಗಳ ಮುಂದೆ ಮುಗಿಬಿದ್ದರು. ಆದರೆ ಆಟೋ ರಿಕ್ಷಾಗಳನ್ನು ಹೊರತುಪಡಿಸಿ ಯಾವುದೇ ಬಸ್ಸುಗಳು ರಸ್ತೆಗಿಳಿಯಲಿಲ್ಲ.

ಮಡಿಕೇರಿಯಲ್ಲಿ ಬಂದ್‌: ಮಂಗಳೂರಲ್ಲಿ ಗೋಲಿಬಾರ್‌ ಖಂಡಿಸಿ ಶನಿವಾರವೂ ಕೊಡಗು ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ವರ್ತಕರು ಬಂದ್‌ ಆಚರಿಸಿದರು. ಈ ಹಿನ್ನೆಲೆಯಲ್ಲಿ ಮಡಿಕೇರಿ ಸೇರಿದಂತೆ ಕೊಡಗು ಜಿಲ್ಲೆಯ ವಿವಿಧೆಡೆ ಮುಸ್ಲಿಂ ಸಮುದಾಯದವರು ಅಂಗಡಿ-ಮುಂಗಟ್ಟು ಬಂದ್‌ ಮಾಡಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

click me!