Haveri News: 5 ತಿಂಗಳ ಬಳಿಕ ಜಾನುವಾರು ಸಂತೆ ಆರಂಭ, ರೈತರಲ್ಲಿ ಸಂತಸ

Published : Feb 03, 2023, 01:09 PM IST
Haveri News: 5 ತಿಂಗಳ ಬಳಿಕ ಜಾನುವಾರು ಸಂತೆ ಆರಂಭ, ರೈತರಲ್ಲಿ ಸಂತಸ

ಸಾರಾಂಶ

ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ತಡೆಗಟ್ಟಲು ಕಳೆದ ಸೆಪ್ಟೆಂಬರ್‌ನಿಂದ ಜಿಲ್ಲೆಯಲ್ಲಿ ಜಾನುವಾರು ಸಂತೆ, ಜಾತ್ರೆ, ಸಾಗಾಣಿಕೆ ನಿಷೇಧಿಸಿ ಹೊರಡಿಸಿದ್ದ ನಿಷೇಧಾಜ್ಞೆಯನ್ನು ಜಿಲ್ಲಾಡಳಿ ಹಿಂದಕ್ಕೆ ಪಡೆದಿದೆ. ಇದರಿಂದ 5 ತಿಂಗಳ ಬಳಿಕ ಜಾನುವಾರು ಸಂತೆ ಆರಂಭಗೊಂಡಿದ್ದು, ದನಕರುಗಳ ಖರೀದಿ ಮತ್ತು ವ್ಯಾಪಾರಕ್ಕೆ ಅವಕಾಶ ಸಿಕ್ಕಿದ್ದಕ್ಕೆ ರೈತರು ಸಂತಸಗೊಂಡಿದ್ದಾರೆ.

ನಾರಾಯಣ ಹೆಗಡೆ

ಹಾವೇರಿ (ಫೆ.3) : ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ತಡೆಗಟ್ಟಲು ಕಳೆದ ಸೆಪ್ಟೆಂಬರ್‌ನಿಂದ ಜಿಲ್ಲೆಯಲ್ಲಿ ಜಾನುವಾರು ಸಂತೆ, ಜಾತ್ರೆ, ಸಾಗಾಣಿಕೆ ನಿಷೇಧಿಸಿ ಹೊರಡಿಸಿದ್ದ ನಿಷೇಧಾಜ್ಞೆಯನ್ನು ಜಿಲ್ಲಾಡಳಿ ಹಿಂದಕ್ಕೆ ಪಡೆದಿದೆ. ಇದರಿಂದ 5 ತಿಂಗಳ ಬಳಿಕ ಜಾನುವಾರು ಸಂತೆ ಆರಂಭಗೊಂಡಿದ್ದು, ದನಕರುಗಳ ಖರೀದಿ ಮತ್ತು ವ್ಯಾಪಾರಕ್ಕೆ ಅವಕಾಶ ಸಿಕ್ಕಿದ್ದಕ್ಕೆ ರೈತರು ಸಂತಸಗೊಂಡಿದ್ದಾರೆ.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಮುಂಗಾರು ಮತ್ತು ಹಿಂಗಾರು ಬೆಳೆ ಹಾನಿ ಅನುಭವಿಸಿದ್ದರ ನಡುವೆಯೇ ರೈತರು ಜಾನುವಾರುಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಅನುಭವಿಸಿದ್ದಾರೆ. ಲಕ್ಷಾಂತರ ರು. ಮೌಲ್ಯದ ಖಿಲಾರಿ ತಳಿಯ ಉಳುಮೆ ಎತ್ತುಗಳು, ಹತ್ತಾರು ಲೀಟರ್‌ ಹಾಲು ಹಿಂಡುತ್ತಿದ್ದ ಆಕಳುಗಳು, ಕರುಗಳು ಸೇರಿದಂತೆ ಚರ್ಮ ಗಂಟು ರೋಗದಿಂದ 3000 ಜಾನುವಾರುಗಳು ಮೃತಪಟ್ಟಿವೆ. ಜಾನುವಾರುಗಳ ಮೈಮೇಲೆ ಗಂಟು ಗಂಟಾಗಿ, ಅದರಿಂದ ರಕ್ತ ಸೋರುತ್ತಿದ್ದವು. ಮೇವು, ನೀರು ಬಿಟ್ಟು ಜಾನುವಾರುಗಳು ಮಲಗಿದಲ್ಲಿಂದ ಮೇಲೇಳುತ್ತಲೇ ಇರಲಿಲ್ಲ. ಸಾಂಕ್ರಾಮಿಕ ರೋಗವಾದ್ದರಿಂದ ಜಿಲ್ಲಾದ್ಯಂತ ವ್ಯಾಪಿಸಿ ರೈತರು ಕಂಗಾಲಾಗಿದ್ದರು. ರೋಗ ಹತೋಟಿಗೆ ತರಲೆಂದು ಕಳೆದ ಸೆಪ್ಟೆಂಬರ್‌ನಲ್ಲಿ ಜಿಲ್ಲಾಡಳಿತ ಜಾನುವಾರು ಸಂತೆ, ಜಾತ್ರೆ, ಸಾಗಾಣಿಕೆಗೆ ನಿಷೇಧಿಸಿ ಆದೇಶಿಸಿತ್ತು. ಇದೀಗ ರೋಗ ನಿಯಂತ್ರಣಕ್ಕೆ ಬಂದಿರುವುದರಿಂದ ಸಂತೆ ಪುನಾರಂಭಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ರೈತರಲ್ಲಿ ಮಡುಗಟ್ಟಿದ್ದ ಆತಂಕ ದೂರವಾಗಿ ಎತ್ತು, ಆಕಳು ವ್ಯಾಪಾರಕ್ಕೆ ಮುಂದಾಗುತ್ತಿದ್ದಾರೆ.

625 ಗ್ರಾಮಗಳಲ್ಲಿ ಉಲ್ಬಣಿಸಿದ ರೋಗ: ಮುಂದವರೆದ ಜಾನುವಾರು ಸಂತೆ ನಿಷೇಧ

ಅತ್ಯಧಿಕ ಸಾವು

ಲಂಪಿ ಸ್ಕಿನ್‌ ತೀವ್ರಗೊಂಡ ಸಂದರ್ಭದಲ್ಲಿ ರಾಜ್ಯದಲ್ಲೇ ಅತ್ಯಧಿಕ ಜಾನುವಾರುಗಳ ಸಾವು ಜಿಲ್ಲೆಯಲ್ಲಿ ಸಂಭವಿಸಿತ್ತು. ಇದುವರೆಗೆ ಸುಮಾರು 3 ಸಾವಿರ ಜಾನುವಾರುಗಳು ರೋಗದಿಂದ ಸಾವನ್ನಪ್ಪಿವೆ. ಸುಮಾರು 26 ಸಾವಿರ ಜಾನುವಾರುಗಳಲ್ಲಿ ಲಂಪಿ ಸ್ಕಿನ್‌ ರೋಗ ಕಾಣಿಸಿಕೊಂಡಿತ್ತು. ರೋಗ ನಿಯಂತ್ರಣಕ್ಕಾಗಿ

ಜಿಲ್ಲೆಯಲ್ಲಿರುವ 306982 ಜಾನುವಾರುಗಳ ಪೈಕಿ 304434 ಜಾನುವಾರುಗಳಿಗೆ ಪಶು ಪಾಲನೆ ಮತ್ತು ಪಶುವೈದ್ಯ ಇಲಾಖೆ ಲಸಿಕೆ ಹಾಕಿದೆ. ಇದರಿಂದ ಜಾನುವಾರುಗಳಲ್ಲಿ ರೋಗದ ತೀವ್ರತೆ ಕಡಿಮೆಯಾಗಿದ್ದು, ರೋಗಗ್ರಸ್ಥ ಜಾನುವಾರುಗಳು ಸಂಖ್ಯೆ ಮತ್ತು ಮರಣ ಪ್ರಮಾಣವೂ 5 ತಿಂಗಳ ಬಳಿಕ ಗಣನೀಯವಾಗಿ ಇಳಿಕೆಯಾಗಿದೆ. ಪ್ರಸ್ತುತ ಸುಮಾರು 1200 ಜಾನುವಾರುಗಳಲ್ಲಿ ಕಾಯಿಲೆಯಿದ್ದರೂ ಗುಣಮುಖವಾಗುತ್ತಿವೆ. ಮೃತ ಜಾನುವಾರುಗಳಿಗೆ ಸರ್ಕಾರದಿಂದ ಪರಿಹಾರವನ್ನು ನೀಡಲಾಗಿದೆ.

ರಸ್ತೆಯಲ್ಲೇ ನಡೆಯುತ್ತಿದ್ದ ಸಂತೆ

ಕಳೆದ ಒಂದೆರಡು ತಿಂಗಳಿಂದ ಚರ್ಮ ಗಂಟು ರೋಗ ನಿಯಂತ್ರಣಕ್ಕೆ ಬಂದಿದ್ದರೂ ಜಾನುವಾರು ಸಂತೆ, ಜಾತ್ರೆಗೆ ಹೇರಿದ್ದ ನಿಷೇಧ ತೆರವುಗೊಳಿಸಿರಲಿಲ್ಲ. ರೈತರಿಗೆ ಎತ್ತು, ಆಕಳುಗಳ ಖರೀದಿ ಮತ್ತು ಮಾರಾಟ ಅನಿವಾರ್ಯವಾದ್ದರಿಂದ ಎಪಿಎಂಸಿ ಮಾರುಕಟ್ಟೆಬಿಟ್ಟು ಬೇರೆಡೆ ರಸ್ತೆ ಅಕ್ಕಪಕ್ಕದಲ್ಲೇ ಜಾನುವಾರು ವ್ಯಾಪಾರ ನಡೆಯುತ್ತಿತ್ತು. ಹಾವೇರಿಯ ಹಾನಗಲ್ಲ ರಸ್ತೆಯಲ್ಲೇ ಎರಡು ತಿಂಗಳಿಂದ ದನದ ಸಂತೆ ನಡೆಯುತ್ತಿತ್ತು. ಜ. 27ರಂದು ಜಿಲ್ಲಾಡಳಿತ ಸಂತೆ ನಿಷೇಧಾಜ್ಞೆ ಆದೇಶ ಹಿಂದಕ್ಕೆ ಪಡೆದಿದೆ. ಇದಾದ ಬಳಿಕ ಗುರುವಾರ ಮೊದಲ ಬಾರಿಗೆ ಇಲ್ಲಿಯ ಎಪಿಎಂಸಿ ಜಾನುವಾರು ಮಾರುಕಟ್ಟೆಬಾಗಿಲು ತೆರೆಯಲಾಗಿದೆ. ಸುತ್ತಮುತ್ತಲಿನ ಊರು, ಜಿಲ್ಲೆಗಳಿಂದ ಬುಧವಾರ ರಾತ್ರಿಯಿಂದಲೇ ರೈತರು ವ್ಯಾಪಾರಕ್ಕೆ ಆಗಮಿಸಿದ್ದರು. ಇದರಿಂದ ಗುರುವಾರ ಬೆಳಗ್ಗೆಯೇ ಜಾನುವಾರು ಸಂತೆ ತುಂಬಿ ಹೋಗಿತ್ತು. 5 ತಿಂಗಳ ಬಳಿಕ ವ್ಯಾಪಾರಕ್ಕೆ ಅವಕಾಶ ಸಿಕ್ಕಿರುವ ಸಂತಸದಲ್ಲಿ ರೈತರಿದ್ದರು. ಬೇಸಿಗೆ ಬಂದಿರುವುದರಿಂದ ಅನೇಕರು ಎತ್ತು, ಆಕಳುಗಳನ್ನು ಮಾರಾಟ ಮಾಡುತ್ತಿದ್ದರೆ, ಈಗಲೇ ಮುಂಗಾರು ಹಂಗಾಮಿಗಾಗಿ ಎತ್ತುಗಳನ್ನು ಖರೀದಿಸಲು ಆಗಮಿಸಿದ್ದರು. ಇದರೊಂದಿಗೆ ಎಮ್ಮೆ, ಕುರಿ ವ್ಯಾಪಾರವೂ ಜೋರಾಗಿ ನಡೆದಿತ್ತು. ಎಲ್ಲೆಡೆ ಜಾತ್ರೆ ಸೀಸನ್‌ ಶುರುವಾಗಿರುವುದರಿಂದ ಕುರಿಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು.

ಕಳೆದ ಕೆಲವು ತಿಂಗಳಿಂದ ಎತ್ತುಗಳನ್ನು ಮಾರಾಟ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಸಂತೆ ಆರಂಭವಾಗಿರುವುದು ಅನುಕೂಲವಾಗಿದೆ. ಬೇಸಿಗೆಯಲ್ಲಿ ಸಾಕಿ ಸಲಹುವುದು ಕಷ್ಟವೆಂದು ಮಾರಾಟಕ್ಕೆ ಖಿಲಾರಿ ತಳಿಯ ಎತ್ತುಗಳನ್ನು ತಂದಿದ್ದೇನೆ.

-ಗಣೇಶ ಎಣ್ಣಿಯವರ, ಕೋಡಿಹಳ್ಳಿ ಗ್ರಾಮದ ರೈತ

Lumpy skin disease: ನಿಷೇಧದ ನಡುವೆಯೂ ಬೆಟ್ಟದಪುರದಲ್ಲಿ ಜಾನುವಾರ ಜಾತ್ರೆ! 

ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ತೀವ್ರಗೊಂಡಿದ್ದರಿಂದ ಜಿಲ್ಲಾದ್ಯಂತ ಜಾನುವಾರು ಸಂತೆ, ಜಾತ್ರೆ ನಿಷೇಧಿಸಲಾಗಿತ್ತು. ರೋಗ ಹತೋಟಿಗೆ ಬಂದಿರುವುದರಿಂದ 5 ತಿಂಗಳ ಬಳಿಕ ಜಿಲ್ಲಾಡಳಿತ ಸಂತೆ ಆರಂಭಕ್ಕೆ ಅವಕಾಶ ಕಲ್ಪಿಸಿದೆ. ಆದರೂ ರೈತರು ಮುಂಜಾಗ್ರತಾ ಕ್ರಮ ಅನುಸರಿಸಬೇಕು. ರೋಗ ಇರುವ ಜಾನುವಾರುಗಳನ್ನು ಸಂತೆಗೆ ತರಬಾರದು.

-ಸತೀಶ ಸಂತಿ, ಉಪನಿರ್ದೇಶಕರು,ಪಶು ಇಲಾಖೆ

PREV
Read more Articles on
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ