* 1ನೆಯ ತರಗತಿಯಿಂದ ಪಿಯುಸಿ ವರೆಗಿನ ಮಕ್ಕಳ ಪಾಲನೆಗೆ ನಿರ್ಧಾರ
* ಮಕ್ಕಳಿಗೆ ಶಿಕ್ಷಣ, ವಸತಿ, ಊಟದ ವ್ಯವಸ್ಥೆ
* ಮಠದಲ್ಲಿಟ್ಟುಕೊಂಡು ಶಿಕ್ಷಣ ಕೊಡಲು ತೀರ್ಮಾನ
ಶಿವಾನಂದ ಗೊಂಬಿ
ಹುಬ್ಬಳ್ಳಿ(ಮೇ.22): ಕೊರೋನಾದಿಂದ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಪಾಲನೆ-ಪೋಷಣೆಗೆ ದತ್ತು ಪಡೆಯಲು ಬಾಲೆಹೊಸೂರಿನ ಶ್ರೀಗಳು ಮುಂದಾಗಿದ್ದಾರೆ. ಈ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.
ಇಡೀ ಜಗತ್ತನ್ನೇ ಕೊರೋನಾ ಎರಡನೆಯ ಅಲೆ ತಲ್ಲಣಗೊಳಿಸಿದೆ. ಹಲವಾರು ಯುವಕರು, ಮಧ್ಯ ವಯಸ್ಕರು ಮೃತರಾಗುವುದರೊಂದಿಗೆ ಮಹಾಮಾರಿ ಕುಟುಂಬದ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ. ಕೊರೋನಾದಿಂದ ತಂದೆತಾಯಿಗಳನ್ನು ಕಳೆದುಕೊಂಡು ಮಕ್ಕಳು ಅನಾಥರಾಗುತ್ತಿದ್ದಾರೆ. ದಿನಂಪ್ರತಿ ಇಂತಹ ಸುದ್ದಿಗಳೇ ಕೇಳಿ ಬರುತ್ತಿವೆ. ಈ ರೀತಿ ಅನಾಥರಾದ ಮಕ್ಕಳ ಪಾಲನೆ-ಪೋಷಣೆಗೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರಿನ ದಿಂಗಾಲೇಶ್ವರ ಮಠ ಮುಂದಾಗಿದೆ. ಕೊರೋನಾದಿಂದ ಅನಾಥರಾದ ಮಕ್ಕಳನ್ನು ದತ್ತು ಪಡೆದು ಅವರ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಿ ಶಿಕ್ಷಣ ಕೊಡಲು ಮಠ ನಿರ್ಧರಿಸಿದೆ.
ಕಳೆದ ನಾಲ್ಕೈದು ದಿನಗಳ ಹಿಂದೆಯಷ್ಟೇ ಈ ಕುರಿತು ನಿರ್ಧರಿಸಿರುವ ಮಠವು, ಅನಾಥರಾಗುವ ಮಕ್ಕಳಿಗೆ 1ರಿಂದ ಪಿಯುಸಿ ವರೆಗೂ ಶಿಕ್ಷಣ ಕೊಡಲು ಮುಂದೆ ಬಂದಿದೆ. ಮಠದಲ್ಲೇ ಇಟ್ಟುಕೊಂಡು ಮಕ್ಕಳಿಗೆ ಶಿಕ್ಷಣ ಕೊಡಿಸಲು ನಿರ್ಧರಿಸಿದೆ. ಹೇಗಾದರೂ ಮಠದ ದಿಂಗಾಲೇಶ್ವರ ಶ್ರೀ ಇಂಗ್ಲಿಷ್ ಮಿಡಿಯಂ ಹೈಸ್ಕೂಲ್ ಇದೆ. ಕನ್ನಡ ಮೀಡಿಯಂ ಪ್ರೌಢಶಾಲೆಯೂ ಇದೆ. ಎಸ್‌ಎಸ್‌ಎಲ್‌ಸಿ ವರೆಗೂ ಮಕ್ಕಳ ವಿದ್ಯಾಭ್ಯಾಸವನ್ನು ಮಠದಲ್ಲೇ ಮಾಡಿಸಬಹುದು. ಪಿಯುಸಿ ಏನಾದರೂ ಇದ್ದರೆ ಮಕ್ಕಳು ಬಯಸಿದ ಕಾಲೇಜಿಗೆ ಸೇರಿಸಿ ಪಿಯುಸಿ ಮಾಡಿಸಲು ನಿರ್ಧರಿಸಲಾಗಿದೆ.
ಧಾರವಾಡದಲ್ಲಿ ಬ್ಲ್ಯಾಕ್ ಫಂಗಸ್‌ಗೆ ಚುಚ್ಚುಮದ್ದು ಕೊರತೆ..!
ಕೊರೋನಾದಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾದವರಿದ್ದರೆ, ದತ್ತು ಪಡೆಯುತ್ತೇವೆ. ಇನ್ನು ತಂದೆ ಅಥವಾ ತಾಯಿ ಹೀಗೆ ಒಬ್ಬರನ್ನು ಕಳೆದುಕೊಂಡಿದ್ದರೂ ಅವರನ್ನು ದತ್ತು ಪಡೆಯುತ್ತೇವೆ. ಆದರೆ ಆ ಮಕ್ಕಳು ಎಲ್ಲರೊಂದಿಗೆ ಮಠದಲ್ಲಿರಬೇಕಾಗುತ್ತದೆ. ಅದಕ್ಕೆ ಆ ತಂದೆ ಅಥವಾ ತಾಯಿ ಒಪ್ಪಿಗೆ ಸೂಚಿಸಬೇಕು. ಇಂತಿಷ್ಟುಮಕ್ಕಳನ್ನು ದತ್ತು ಪಡೆಯಬೇಕೆಂದು ನಿರ್ಧರಿಸಿಲ್ಲ. ಎಷ್ಟೇ ಮಕ್ಕಳು ಬಂದರೂ ಅವರ ವಿದ್ಯಾಭ್ಯಾಸದ ಜವಾಬ್ದಾರಿ ಹೊರುತ್ತೇವೆ. ಒಂದು ವೇಳೆ ನಮ್ಮ ಶಕ್ತಿ ಮೀರಿ ಮಕ್ಕಳು ಬಂದರೆ ನಾವು ಬೇರೆಯ ದಾನಿಗಳ ನೆರವು ಪಡೆದಾದರೂ ಶಿಕ್ಷಣ, ವಸತಿ ಮಾಡಿಸುತ್ತೇವೆ ಎಂದು ಮಠದ ಆಡಳಿತ ಮಂಡಳಿ ತಿಳಿಸುತ್ತದೆ. ಒಟ್ಟಿನಲ್ಲಿ ಕೊರೋನಾದಿಂದ ಅನಾಥರಾದ ಮಕ್ಕಳನ್ನು ದತ್ತು ಪಡೆಯಲು ದಿಂಗಾಲೇಶ್ವರ ಶ್ರೀಗಳ ಕಾರ್ಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಕೊರೋನಾ ಎಲ್ಲರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಎಷ್ಟೋ ಜನ ಮಕ್ಕಳು ತಂದೆ-ತಾಯಿ ಕಳೆದುಕೊಂಡು ಅನಾಥರಾಗಿದ್ದಾರೆ; ಅನಾಥರಾಗುತ್ತಿದ್ದಾರೆ. ಅಂಥ ಮಕ್ಕಳನ್ನು ಮಠದ ವತಿಯಿಂದ ದತ್ತು ಪಡೆದು ಶಿಕ್ಷಣ, ವಸತಿ, ಊಟ ಕಲ್ಪಿಸಲು ನಿರ್ಧರಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳವರು ನನ್ನ ಮೊಬೈಲ್- 9916694100 ನಂಬರ್‌ಗೆ ಕರೆ ಮಾಡಿ ಅನಾಥ ಮಕ್ಕಳ ಬಗ್ಗೆ ತಿಳಿಸಬಹುದು. ಎಷ್ಟೇ ಮಕ್ಕಳಾದರೂ ನಾವು ಅವರ ಜವಾಬ್ದಾರಿ ಹೊರಲು ಸಿದ್ಧ ಎಂದು ಬಾಲೆಹೊಸೂರು ದಿಂಗಾಲೇಶ್ವರ ಶ್ರೀಗಳು ತಿಳಿಸಿದ್ದಾರೆ.