ಅಪಘಾತದ ಹಿಂದಿನ ದಿನ ನಟ ಎಲ್ಲಿದ್ದರು ಗೊತ್ತೆ ?

By Web DeskFirst Published Sep 24, 2018, 8:17 PM IST
Highlights

ದಸರಾ ಆನೆಗಳನ್ನು ನೋಡಿಕೊಂಡು ಹೋಗುವ ಬದಲು ಆನೆಗಳೊಂದಿಗೆ ಆಗಮಿಸಿರುವ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬದವರಿಗೆ ವಿಶೇಷ ಭೋಜನ ಕೂಟ ಏರ್ಪಡಿಸುವ ಮೂಲಕ ನಟ ದರ್ಶನ್ ಮಾನವೀಯತೆ ಮೆರೆದರು.

ಮೈಸೂರು[ಸೆ.24]: ಅಪಘಾತದ ಹಿಂದಿನ ದಿನ ನಟ ದರ್ಶನ್  ಹಾಗೂ  ಹಲವು ಸಿನಿಮಾ ನಟರು ಮೈಸೂರು ಅರಮನೆ ಆವರಣದಲ್ಲಿ ಬಿಡಾರ ಹೂಡಿರುವ ಗಜಪಡೆಯನ್ನು ಕಾಣಲು ಆಗಮಿಸಿದ್ದರು.

ದಸರಾ ಆನೆಗಳನ್ನು ನೋಡಿಕೊಂಡು ಹೋಗುವ ಬದಲು ಆನೆಗಳೊಂದಿಗೆ ಆಗಮಿಸಿರುವ ಮಾವುತರು, ಕಾವಾಡಿಗಳು ಮತ್ತು ಅವರ ಟುಂಬದವರಿಗೆ ವಿಶೇಷ ಭೋಜನ ಕೂಟ ಏರ್ಪಡಿಸುವ ಮೂಲಕ ನಟ ದರ್ಶನ್ ಮಾನವೀಯತೆ ಮೆರೆದರು. ಅಲ್ಲದೆ, ಮಾವುತರು ಮತ್ತು ಕಾವಾಡಿಗಳ ಕುಟುಂಬಕ್ಕೆ ಅಗತ್ಯವಾದ ಬಟ್ಟೆ, ಬೆಡ್ ಶೀಟ್, ಮಕ್ಕಳಿಗೆ ಬ್ಯಾಗ್ ಸಹ ವಿತರಿಸಿದರು.

ನಟರಾದ ದರ್ಶನ್, ಪ್ರಜ್ವಲ್ ದೇವರಾಜ್, ಸೃಜನ್ ಲೋಕೇಶ್, ಪ್ರಣಮ್ ದೇವರಾಜ್, ಮಂಡ್ಯ ರಮೇಶ್, ವಿಶ್ವ, ನಟ ದೇವರಾಜ್ ಪತ್ನಿ ಚಂದ್ರಲೇಖಾ ಮೊದಲಾದವರು ಅರಮನೆ ಆವರಣದ ಆನೆ ಬಿಡಾರಕ್ಕೆ ತೆರಳಿ ಆನೆಗಳೊಂದಿಗೆ ಫೋಟೋ ತೆಗೆದುಕೊಂಡರು. ಬಳಿಕ ಮಾವುತರು, ಕಾವಾಡಿಗಳ ಕುಟುಂಬದವರ ಕುಶಲೋಪರಿ ವಿಚಾರಿಸಿದರು.

ನಟ ದರ್ಶನ್ ತಂಡದೊಂದಿಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಾಥ್ ನೀಡಿದರು. ಮಾವುತರ ಮತ್ತು ಕಾವಾಡಿಗಳಿಗೆ ಬಟ್ಟೆ, ಬೆಡ್‌ಶೀಟ್, ಮಕ್ಕಳಿಗೆ ಬ್ಯಾಗ್‌ಗಳನ್ನು ಯದುವೀರ, ದರ್ಶನ್ ವಿತರಿಸಿದರು. ಬಳಿಕ ಗಜಪಡೆ ಮಾವುತರು, ಕಾವಾಡಿಗಳು ಮತ್ತು ಕುಟುಂಬದವರಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ನಟ ದರ್ಶನ್ ಮತ್ತು ಇತರರು ಸಹ ಮಾವುತರು ಮತ್ತು ಕಾವಾಡಿಗಳೊಂದಿಗೆ ಸೇರಿ ಊಟ ಮಾಡಿದರು. ಈ ವೇಳೆ ವಿಧಾನ ಪರಿಷತ್ತು ಸದಸ್ಯ, ನಿರ್ಮಾಪಕ ಸಂದೇಶ್ ನಾಗರಾಜ್, ಜಿಪಂ ಸದಸ್ಯ ರಾಕೇಶ್ ಪಾಪಣ್ಣ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಮಣ್ಯ, ಡಿಸಿಎಫ್‌ಗಳಾದ ಸಿದ್ರಾಮಪ್ಪ ಚಳಕಾಪುರೆ, ವಿ. ಏಡುಕೊಂಡಲು, ಆನೆ ವೈದ್ಯ ಡಾ.ಡಿ.ಎನ್. ನಾಗರಾಜು ಇತರರು ಇದ್ದರು.


 

click me!