ಧಾರವಾಡ (ಡಿ.25) : ಕಿತ್ತೂರು ನಾಡಿನ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಕಿತ್ತೂರು ಕೋಟೆಯ ಪುನರ್ ನಿರ್ಮಾಣ, ದಾಖಲೆ ಸಂರಕ್ಷಣೆಗೆ ಸರ್ಕಾರ ಅಗತ್ಯ ಕ್ರಮವಹಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಸಂಜೆ ಕೆಸಿಡಿ ಆವರಣದಲ್ಲಿ ಧಾರವಾಡ ರಂಗಾಯಣ ಹಾಗೂ ಜಿಲ್ಲಾಡಳಿತ ಆಯೋಜಿಸಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮ ಮೆಗಾ ನಾಟಕ ಉದ್ಘಾಟಿಸಿ ಅವರು ಮಾತನಾಡಿದರು. ಧಾರವಾಡ ರಂಗಾಯಣ ಚೆನ್ನಮ್ಮ ಮೆಗಾ ನಾಟಕದ ಮೂಲಕ ಇತಿಹಾಸವನ್ನು ಮರುಸೃಷ್ಟಿಸಿ, ಅಭಿಮಾನ ಮೂಡಿಸಿದೆ ಎಂದರು.
\ಕಿತ್ತೂರು, ಕಲ್ಯಾಣ ಕರ್ನಾಟಕದ 13 ಜಲಯೋಜನೆಗಳಿಗೆ ಅಸ್ತು: ಸಚಿವ ಸಂಪುಟ ಒಪ್ಪಿಗೆ
ಚೆನ್ನಮ್ಮಳನ್ನು ನೆನೆಸಿದರೆ ರೋಮಾಂಚನವಾಗುತ್ತದೆ. ಝಾನ್ಸಿರಾಣಿ ಲಕ್ಷ್ಮೀಬಾಯಿಗಿಂತ ಮೊದಲು ಸ್ವಾತಂತ್ರ್ಯದ ಕಹಳೆ ಮೊಳಗಿಸಿ, ಬ್ರಿಟಿಷರ ವಿರುದ್ಧ ಹೋರಾಡಿದಳು. ಸಣ್ಣ ಸೈನ್ಯ ಕಟ್ಟಿಕೊಂಡು ಕೆಚ್ಚೆದೆಯಿಂದ ಪರಕೀಯರ ವಿರುದ್ಧ ಯುದ್ಧ ಸಾರಿದ್ದಳು. ಇಂತಹ ನಾಟಕವನ್ನು ರಮೇಶ ಪರವಿನಾಯ್ಕರ್ ಅವರು ಶ್ರದ್ಧೆಯಿಂದ ರೂಪಿಸಿದ್ದಾರೆ ಎಂದು ಮುಖ್ಯಮಂತ್ರಿ ರಮೇಶ ಬೆನ್ನುತಟ್ಟಿಮೆಚ್ಚುಗೆ ಸೂಚಿಸಿದರು. ಧಾರವಾಡ ರಂಗಾಯಣದಿಂದ ಈ ನಾಟಕವನ್ನು ರಾಜ್ಯಾದ್ಯಂತ ಪ್ರದರ್ಶನ ಆಯೋಜಿಸಿ, ಚೆನ್ನಮ್ಮಳ ಇತಿಹಾಸವನ್ನು ಪಸರಿಸುವಂತೆ ತಿಳಿಸಿದರು.
ಕಿತ್ತೂರು ಕೋಟೆ ಪುನರ್ ನಿರ್ಮಾಣಕ್ಕೆ ಸರ್ಕಾರ ಕ್ರಮಕೈಗೊಂಡಿದೆ. ಕಿತ್ತೂರು ಅಭಿವೃದ್ಧಿಗೆ . 100 ಕೋಟಿ ಖರ್ಚು ಮಾಡಲಾಗುತ್ತಿದೆ. ಚೆನ್ನಮ್ಮ ಮೆಗಾ ನಾಟಕಕ್ಕೆ ಈಗ ಸರ್ಕಾರ ನೀಡಿರುವ ಅನುದಾನವನ್ನು ದ್ವಿಗುಣಗೊಳಿಸಿ, ಎರಡುಪಟ್ಟು ಅನುದಾನ ನೀಡಲು ನಿರ್ಧರಿಸಿದೆ. ಈ ಮೂಲಕ ಮೆಗಾ ನಾಟಕ ಪ್ರದರ್ಶನವನ್ನು ಪ್ರೋತ್ಸಾಹಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅರವಿಂದ ಬೆಲ್ಲದ, ಮರಾಠಿಯಲ್ಲಿ ಪ್ರದರ್ಶನವಾದ ಜನತಾರಾಜಾ ನಾಟಕದ ಮೂಲಕ ಶಿವಾಜಿ ಮಹಾರಾಜರ ಸಾಹಸಗಾಥೆ ತೆರೆಗೆ ತರಲಾಗಿತ್ತು. ಅದಕ್ಕೆ ಪೂರಕವಾಗಿ ಕಿತ್ತೂರು ಚೆನ್ನಮ್ಮನ ಕುರಿತು ಮೆಗಾ ನಾಟಕ ಧಾರವಾಡ ರಂಗಾಯಣದಿಂದ ರೂಪುಗೊಂಡಿದೆ ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ನಾಟಕದ ತಯಾರಿ, ಶ್ರಮ ಮತ್ತು ನಿರ್ದೇಶಕ ರಮೇಶ ಅವರ ಸಾಹಸ ಸ್ಮರಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಅರುಣ ಜೋಶಿ ಸ್ವಾಗತಿಸಿದರು. ರಮೇಶ ಪರವಿನಾಯ್ಕರ ಪ್ರಾಸ್ತಾವಿಕ ಮಾತನಾಡಿದರು. ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧಾರವಾಡ ರಂಗಾಯಣ ನಿರ್ದೇಶಕ ಹಾಗೂ ವೀರರಾಣಿ ಕಿತ್ತೂರು ಚೆನ್ನಮ್ಮ ನಾಟಕದ ಪ್ರಧಾನ ನಿರ್ದೇಶಕ ರಮೇಶ ಪರವಿನಾಯ್ಕರ ಅವರಿಗೆ ರಂಗ ಜ್ಯೋತಿ ಅಭಿದಾನ ನೀಡಿ ಸನ್ಮಾನಿಸಿದರು.
ಗದಗ-ಡಂಬಳ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ, ಕಿತ್ತೂರು ಚೆನ್ನಮ್ಮ ರಾಜಗುರು ಸಂಸ್ಥಾನ ಕಲ್ಲಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಮುರಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕಿತ್ತೂರು ಬಳಿ ಕೈಗಾರಿಕೆ ಟೌನ್‌ಶಿಪ್, 50 ಸಾವಿರ ನೌಕರಿ: ಸಿಎಂ ಬೊಮ್ಮಾಯಿ ಘೋಷಣೆ
ಶಾಸಕರಾದ ಅಮೃತ ದೇಸಾಯಿ, ರಾಜಕುಮಾರ ಪಾಟೀಲ, ಮೇಯರ್ ಈರೇಶ ಅಂಚಟಗೇರಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಕವಿವಿ ಕುಲಪತಿ ಡಾ. ಕೆ.ಬಿ. ಗುಡಸಿ, ಕುಲಸಚಿವ ಯಶಪಾಲ…, ಆರ್‌ಎಸ್‌ಎಸ್ ಪ್ರಮುಖರಾದ ಅರವಿಂದರಾವ್ ದೇಶಪಾಂಡೆ ಕ್ಷೀರಸಾಗರ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ತವಣಪ್ಪ ಅಷ್ಟಗಿ, ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ ಇತರರು ಇದ್ದರು.