ಜಿಲ್ಲೆಯಾಗಿ 25 ವರ್ಷ ಕಳೆದಿದ್ದೇವೆ, ಈ ರಜತ ಸಂಭ್ರಮಕ್ಕೆ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಜೆ.ಎಚ್.ಪಟೇಲ್‌ರ ಶ್ರಮವೇ ಕಾರಣ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಹೇಳಿದರು.
ದಾವಣಗೆರೆ (ಡಿ.25) : ಜಿಲ್ಲೆಯಾಗಿ 25 ವರ್ಷ ಕಳೆದಿದ್ದೇವೆ, ಈ ರಜತ ಸಂಭ್ರಮಕ್ಕೆ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಜೆ.ಎಚ್.ಪಟೇಲ್‌ರ ಶ್ರಮವೇ ಕಾರಣ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಹೇಳಿದರು.
ನಗರದ ಪಿ.ಬಿ.ರಸ್ತೆಯಲ್ಲಿರುವ ಪೂಜಾ ಇಂಟರ್ ನ್ಯಾಷನಲ್ ಹೋಟೆಲ್‌ನಲ್ಲಿ ದಾವಣಗೆರೆ ಜಿಲ್ಲೆಯಾಗಿ 25 ವರ್ಷ ಕಳೆದ ಹಿನ್ನೆಲೆಯಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಸಹಯೋಗದಲ್ಲಿ ನಡೆದ ದಾವಣಗೆರೆ ಜಿಲ್ಲೆ ರಜತ ಸಂಭ್ರಮದ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು. ಈ 25 ವರ್ಷದಲ್ಲಿ ಜಿಲ್ಲೆಯಲ್ಲಿ ಸಾಕಷ್ಟುಕೆಲಸಗಳು ಆಗಿವೆ. ದಾವಣಗೆರೆ ವಿಶ್ವವಿದ್ಯಾಲಯ, ಸುಸಜ್ಜಿತವಾದ ರೈಲ್ವೇ ನಿಲ್ದಾಣ ನಿರ್ಮಾಣ, ಭದ್ರಾ ನಾಲಾ ಆಧುನೀಕರಣ ಮಾಡಿಸಿದ್ದೇವೆ. ತುಂಗಾಗೂ ಕೂಡಾ ಆಧುನೀಕರಣ ಕೆಲಸ ನಡೀತಿದೆ. ಸ್ಮಾರ್ಚ್‌ಸಿಟಿ ಯೋಜನೆಯಡಿ 1ಸಾವಿರ ಕೋಟಿ ರು.ಗಳನ್ನು ಜಿಲ್ಲೆಯ ಅಭಿವೃದ್ಧಿಗೆ ತರಲಾಗಿದೆ. ಬಹಳ ಮುಖ್ಯವಾಗಿ ಬೇಕಾಗಿದ್ದ ಸಿಆರ್‌ಸಿ ಸೆಂಟರ್‌ನ್ನು ದೇವರಾಜ ಅರಸ್ ಬಡಾವಣೆಯಲ್ಲಿ ನಿರ್ಮಿಸಲಾಗಿದೆ. ಪಾಸ್‌ಪೋರ್ಚ್ ಕಚೇರಿ, ಕೌಶಲ್ಯ ತರಬೇತಿಗಳು ನಡೆದವು. ಈ ಎಲ್ಲ ಕೆಲಸಗಳಾಗಲು ಕಾರಣ ನಾವು ಜೆ.ಎಚ್.ಪಟೇಲ್‌ರನ್ನು ನೆನೆಸಬೇಕು. ಜಿಲ್ಲೆಯಾಗಿದಾಗಿನಿಂದ ಇಂತಹ ಅನೇಕ ಕೆಲಸಗಳು ಆಗಿವೆ ಎಂದರು.
ದಾವಣಗೆರೆ ಕೃಷಿ ಮಾರುಕಟ್ಟೆಯಲ್ಲಿ ರೌಡಿ ಕಾಟ; ಮಟ್ಟಹಾಕುವಂತೆ ರೈತರ ಆಗ್ರಹ
25ರ ಸಂಭ್ರಮ ಜಿಲ್ಲಾಡಳಿತ ಮಾಡಬೇಕಿತ್ತು:
ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಜಿಲ್ಲೆಯಲ್ಲಿ ರಾಜಕೀಯ ಮತ್ತು ರಾಜಕಾರಣಿಗಳು ಪರಸ್ಪರ ಎಷ್ಟುವಿರೋಧ ಇದ್ದರು. ಜೆ.ಎಚ್.ಪಟೇಲ್ ಅವರ ಧೈರ್ಯದಿಂದ 7 ಜಿಲ್ಲೆಗಳನ್ನು ಘೋಷಿಸಿ ಸ್ವತಃ ಅವರೇ ಉದ್ಘಾಟಿಸಿದರು. ಇವತ್ತು 25 ವರ್ಷ ಕಳೆದಿದ್ದೇವೆ ಈ ಸಂಭ್ರಮವನ್ನು ಜಿಲ್ಲಾಡಳಿತ ಮಾಡಬೇಕಿತ್ತು. ಅಥವಾ ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಒತ್ತಡ ತಂದು ಹಬ್ಬದೋಪಾದಿಯಲ್ಲಿ ಆಚರಿಸಬೇಕಿತ್ತು ಆದರೆ ಆಚರಿಸಿಲ್ಲ ಇದು ವಿಷಾದದ ಸಂಗತಿ ಎಂದರು.
ಆದರೆ ಕನ್ನಡಪ್ರಭ ಪತ್ರಿಕೆ ಈ ಸಂಭ್ರಮಾಚರಣೆ ಮಾಡಿರುವುದು ಅಭಿನಂದನಾರ್ಹ. ಒಂದು ಕಡೆ ಸಂತೋಷ ಮತ್ತೊಂದು ಕಡೆ ದುಃಖ. ದಾವಣಗೆರೆ ಜಿಲ್ಲೆಯಾದ ಕೀರ್ತಿ ಜೆ.ಎಚ್.ಪಟೇಲ್‌ರವರಿಗೆ ಸಲ್ಲಬೇಕು. ಈ ಜಿಲ್ಲೆಗೆ ಯಾರಾರಯರು ಕಾರಣರೆಂದು ಗುರುತಿಸಬೇಕು. ಸಿಮೆಂಟ್ ರಸ್ತೆ, ರಿಂಗ್ ರಸ್ತೆ, ವಿದ್ಯುತ್ ದೀಪ ಕಂಬಗಳು ಯಾರ ಕಾಲದಲ್ಲಿ ಆದವು, ಮಳೆ ನೀರು ಹೋಗಲು ಒಳಚರಂಡಿ ನಿರ್ಮಿಸಿ ಮನೆಗಳಿಗೆ ನೀರು ನುಗ್ಗದಂತೆ ನೋಡಿ ಕಂಡವರು ಇಂತಹ ಅಭಿವೃದ್ಧಿಯ ಕಾರ್ಯ ಯಾರಿಗೆ ಹೋಗಬೇಕೆಂಬುದನ್ನು ಬಿಜೆಪಿಯವರು ಹಿಂತಿರುಗಿ ನೋಡಬೇಕು. ನಾವು ಅಧಿಕಾರದಲ್ಲಿರುವವರು ಏನೇ ಹೇಳಿದರು ನಡೆಯುತ್ತೆ ಎನ್ನುವ ಮನೋಭಾವ ಬಿಡಬೇಕು. ಸ್ಮಾರ್ಚ್ ಸಿಟಿ ಯಾರಿಂದ ಆಯಿತು. ಅದಕ್ಕೆ ಮೂಲ ಕಾರಣ ಯಾರು? ಎಂಬುದನ್ನು ತಿಳಿದುಕೊಳ್ಳದೆ ಮಾತನಾಡಬಾರದು ಎಂದರು.
ದಾವಣಗೆರೆಗೆ ಕೃಷಿ ವಿಶ್ವವಿದ್ಯಾನಿಲಯ ಆಗಬೇಕಿತ್ತು. ವಿಮಾನ ನಿಲ್ದಾಣ ಆಗಬೇಕಿತ್ತು. ಇಂತಹ ಕೆಲಸಗಳನ್ನು ಬಿಜೆಪಿಯವರು ಯಾಕೆ ಮಾಡಲಿಲ್ಲ? ಸ್ಮಾರ್ಚ್ ಸಿಟಿ ಏನಾಗಿದೆ ಬರೀ ಕಮಿಷನ್ ತೆಗೆದುಕೊಳ್ಳುತ್ತಾ ಕೆಲಸ ಮಾಡದಂತೆ ಇದ್ದಾರೆ ಎಂದು ಈ ಬಗ್ಗೆ ಪತ್ರಿಕೆಗಳು ಮತ್ತು ಟಿವಿ ಮಾಧ್ಯಮದವರು ನಿಷ್ಪಕ್ಷಪಾತವಾಗಿ ಕಣ್ಣು ತೆರೆಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಮೂಲಭೂತ ಸೌಕರ್ಯ ಒದಗಿಸಿ:
ಕನ್ನಡಪ್ರಭ-ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ದಾವಣಗೆರೆ ಜಿಲ್ಲೆಯಾಗಿ 25 ವರ್ಷವಾಗಿದೆ. ಮ್ಯಾಂಚೆಸ್ಟರ್ ಸಿಟಿ ಅಂತ ಹಿಂದೆ ಕೇಳಿಕೊಂಡಿದ್ದೆವು ಈಗ ಶಿಕ್ಷಣ ಕಾಶಿ ಅಂತ ಹೆಸರು ಪಡೆದಿದೆ. ಜಿಲ್ಲೆಗೆ ವಿಮಾನ ನಿಲ್ದಾಣ ಆಗಬೇಕು.ಕೈಗಾರಿಕೆಗಳು ಮರೆಯಾಗಿವೆ ದಾವಣಗೆರೆಯಿಂದ ಪುನಃ ಬರುವಂತೆ ಮಾಡಬೇಕು. ಇದಕ್ಕೆ ಜನ ಪ್ರತಿನಿಧಿಗಳು ಅಧಿಕಾರಿಗಳು ಶ್ರಮಿಸಬೇಕು. ಈ ವರದಿ ಮಾಡಲು ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ಸಿದ್ಧವಾಗಿವೆ. ಎಂದ ಅವರು, ದಾವಣಗೆರೆಗೆ ಅನೇಕ ಕೈಗಾರಿಕೆಗಳು ಬರಲು ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಹೇಳಿದರು.
ಜಗಳೂರು ಕ್ಷೇತ್ರದ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಕನ್ನಡಪ್ರಭ ನನ್ನನ್ನು ಬೆಳೆಸಿದೆ. ತಪ್ಪು ಮಾಡಿದಾಗ ತಿದ್ದಿದೆ. ಒಬ್ಬ ವ್ಯಕ್ತಿಯನ್ನು ಬೆಳೆಸುವ ಶಕ್ತಿ ಮಾಧ್ಯಮಕ್ಕಿದೆ. ನಾನು ಈ ಮಟ್ಟಕ್ಕೆ ಬೆಳೆಸಲು ಪತ್ರಿಕೆಗಳೇ ಕಾರಣ ಖಾದ್ರಿ ಶಾಮಣ್ಣನವರ ಕಾಲದಿಂದಲೂ ಸಹಾ ಕನ್ನಡಪ್ರಭ ಪತ್ರಿಕೆಯ ಓದುಗನಾಗಿದ್ದೇನೆ. ನನ್ನ ಜೀವನದಲ್ಲಿ ಪತ್ರಿಕೆಗಳು ಹಾಸುಹೊಕ್ಕಾಗಿವೆ ಎಂದರು.
ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ದಾವಣಗೆರೆ ಶಿಕ್ಷಣ ಕಾಶಿಯಾಗಿದೆ, ಇಲ್ಲಿ ವೈದ್ಯರು, ಇಂಜಿನಿಯತುಗಳನ್ನು ಕೊಟ್ಟಜಿಲ್ಲೆ. ಈ ಜಿಲ್ಲೆ ಅಭಿವೃದ್ಧಿ ಹೊಂದಿರುವ ಜಿಲ್ಲೆಯಾಗಿದ್ದು ಇತರೆ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಎಂ.ಇ.ರವಿರಾಜ್, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ದೂಡಾ ಅಧ್ಯಕ್ಷ ಎ.ವೈ. ಪ್ರಕಾಶ್, ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಮಾಜಿ ಮೇಯರ್ ಎಸ್.ಟಿ.ವೀರೇಶ್, ಎಂ.ಟಿ.ಶುಭಾಶ್ಚಂದ್ರ, ಮಾಜಿ ಮೇಯರ್ ಉಮಪ್ರಕಾಶ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸೋಗಿ ಶಾಂತಕುಮಾರ್, ಹಿರಿಯ ವಕೀಲ ಎಲ್.ಎಚ್.ಅರುಣ ಕುಮಾರ, ಬಿ.ವೀರಣ್ಣ, ಬಿ.ಎಂ.ಸತೀಶ್ ಕೊಳೇನಹಳ್ಳಿ, ನಂದಿಗಾವಿ, ಜಿ.ಎಸ್.ಶಾಮ್, ಡಿ.ಎಸ್.ಜಯಂತ್, ಚಂದ್ರಶೇಖರ್ ಪೂಜಾರ್, ನಿಂಚನ ಸ್ಕೂಲ್ ನಿಂಗಪ್ಪ, ಹಿರಿಯ ಪತ್ರಕರ್ತ ವೀರಪ್ಪ ಎಂ.ಭಾವಿ, ಮಹಾಂತೇಶ ಒಣರೊಟ್ಟಿ, ರೈತ ಮುಖಂಡ ಕಲ್ಲಿಂಗಪ್ಪ, ಆಲೂರು ನಿಂಗರಾಜ್, ಬಿ.ಟಿ.ಸಿದ್ದಪ್ಪ, ಕಡತಿ ಆಂಜಿನಪ್ಪ, ಶಿವನಗೌಡ ಪಾಟೀಲ್, ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ, ಬಂಕಾಪುರದ ಚನ್ನಬಸಪ್ಪ, ಶೇಷಾಚಲ, ಜಿಲ್ಲಾ ಪ್ರಧಾನ ವರದಿಗಾರ ನಾಗರಾಜ ಬಡದಾಳ್, ವಿವಿಧ ತಾಲೂಕುಗಳ ವರದಿಗಾರರು, ಸ್ನೇಹಿತರು, ರಾಜಕೀಯ ಮುಖಂಡರು, ಕನ್ನಡ ಪರ ಹೋರಾಟಗಾರರು, ರೈತ ಮುಖಂಡರು, ಪತ್ರಿಕಾ ಅಭಿಮಾನಿಗಳು, ಇತರರಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕನ್ನಡ ಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್‌ನವರು ಒಳ್ಳೆಯ ನೈಜ ಸುದ್ದಿಗಳನ್ನು ಬಿತ್ತರಿಸುತ್ತಾರೆ. ನೈಜ ಪ್ರಾಮಾಣಿಕವಾಗಿ, ಸತ್ಯ, ಅಸತ್ಯಗಳನ್ನು ಬಿತ್ತರಿಸುವ ಕೆಲಸ ಮಾಡುತ್ತಿದ್ದಾರೆ. ಇದು ಬಹಳ ಹೆಮ್ಮೆಯ ವಿಷಯ. ಯಾರ ಹಂಗು ಇಲ್ಲದೇ ತಪ್ಪನ್ನು ತಪ್ಪು, ಸರಿ ಎನ್ನುವುದನ್ನು ಸರಿ ಎಂದು ತೋರಿಸುವ ಶಕ್ತಿ ಇದೆ. ಇದಕ್ಕೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಡಾ.ಜಿ.ಎಂ.ಸಿದ್ದೇಶ್ವರ, ಸಂಸದ
ದಾವಣಗೆರೆ ನಗರವನ್ನು ಅಡ್ಡಾದಿಡ್ಡಿ ಬೆಳೆಯದಂತೆ ನೋಡಿಕೊಳ್ಳಬೇಕು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ದೂರಾಲೋಚನೆ ಮಾಡಿ ಅಭಿವೃದ್ಧಿ ಮಾಡಬೇಕಿದೆ. ಇವತ್ತು ಬೆಂಗಳೂರು ಸಿಕ್ಕಾಪಟ್ಟೆಬೆಳೆದಿದೆ. ಅದು ಬೆಳೆದಿದೆ ಅಂದರೆ ಅಭಿವೃದ್ಧಿ ಕಾಣುತ್ತಿಲ್ಲ. ಇಂತಹ ಅಭಿವೃದ್ಧಿಗಳಿಗೆ ದಾವಣಗೆರೆ ಜಿಲ್ಲೆ ಮಾದರಿಯಾಗಬೇಕು.
ರವಿ ಹೆಗಡೆ, ಕನ್ನಡಪ್ರಭ-ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ