ದಾರಿಯಯಲ್ಲಿ ಸಿಕ್ಕ ಹಣ, ಚಿನ್ನಾಭರಣ ಮಾಲೀಕರಿಗೆ ತಲುಪಿಸಿದ ಯುವಕ/ ಕೊಡಗಿನ ಯುವಕನ ಪ್ರಾಮಾಣಿಕತೆಗೆ ಎಲ್ಲಡೆಯಿಂದ ಪ್ರಶಂಸೆ/ ಯುವಕರಿಗೆ ಮಾದರಿಯಾಗಿ ನಿಲ್ಲುವ ವ್ಯಕ್ತಿತ್ವ
ಮಡಿಕೇರಿ, ಮರಗೋಡು(ಸೆ.05) ರಸ್ತೆಯಲ್ಲಿ ಬಿದ್ದಿದ್ದ ಸುಮಾರು 1.5 ಲಕ್ಷ ರೂ ಮೌಲ್ಯದ ಚಿನ್ನಾಭರಣ ಮತ್ತು 17 ಸಾವಿರ ರೂ . ನಗದು ಹಣವನ್ನು ಅದರ ಮಾಲೀಕರಿಗೆ ಹಿಂದಿರುಗಿಸಿ ಮರಗೋಡು ಗ್ರಾಮದ ಯುವಕ ಬಡುವಂಡ್ರ ಸುಜಯ್ ಪ್ರಾಮಾಣಿಕತೆ ಮೆರೆದಿದ್ದಾರೆ.
ಹೊಸ್ಕೇರಿ ಸಮೀಪ ತೆರಳುತ್ತಿದ್ದ ಇವರಿಗೆ ಮುಖ್ಯ ರಸ್ತೆಯಲ್ಲಿ ಬ್ಯಾಗೊಂದು ಸಿಕ್ಕಿದೆ. ತೆಗೆದು ನೋಡಿದಾಗ ನಗದು ಹಣ, ಅಮೂಲ್ಯ ದಾಖಲಾತಿಗಳು ಮತ್ತು ಚಿನ್ನದ ಆಭರಣಗಳು ಕಂಡಿವೆ. ತಕ್ಷಣವೇ ಬ್ಯಾಗಿನಲ್ಲಿ ತಡಕಾಡಿ ಅದರಲ್ಲಿ ದೊರೆತ ದೂರವಾಣಿ ಸಂಖ್ಯೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಇಳಿಕೆಯಾಗಿದೆ ಚಿನ್ನ: ದರಪಟ್ಟಿ ನೋಡ್ಕೊಳ್ಳಿ ಕೊಳ್ಳುವ ಮುನ್ನ!
ಹಣ ಕಳೆದುಕೊಂಡಿದ್ದ ಮಣಿಕಂಠ: ನಾಪೋಕ್ಲು ನಿವಾಸಿಯಾಗಿರುವ ಮಣಿಕಂಠ, ಭಾರೀ ಮಳೆಗೆ ಬೆದರಿ ಮನೆಯಲ್ಲಿದ್ದ ಹಣ, ಚಿನ್ನಾಭರಣ ಮತ್ತು ದಾಖಲಾತಿಗಳನ್ನು ತೆಗೆದುಕೊಂಡು ಆಟೋರಿಕ್ಷಾದಲ್ಲಿ ತಮ್ಮ ಸಂಬಂಧಿಕರ ಮನೆಗೆ ಹೊರಟಿದ್ದಾರೆ. ಆದರೆ ಮಾರ್ಗಮಧ್ಯೆ ಅವರ ಈ ಬ್ಯಾಗ್ ಬಿದ್ದುಹೋಗಿದ್ದು ಅರಿವಿಗೆ ಬಂದಿರಲಿಲ್ಲ. ಅದೃಷ್ಟವಶಾತ್ ಈ ಬ್ಯಾಗ್ ಸುಜಯ್ ಅವರಿಗೆ ದೊರೆತು ಅದನ್ನು ಅವರು ಪ್ರಾಮಾಣಿಕವಾಗಿ ಹಿಂದಿರುಗಿಸಿದ್ದಾರೆ.
ಮರಗೋಡು ವೈಷ್ಣವಿ ಫುಟ್ಬಾಲ್ ತಂಡದ ನಾಯಕನಾಗಿರುವ ಸುಜಯ್, ರಾಜ್ಯಮಟ್ಟದ ಕಾಲ್ಚೆಂಡು ಆಟಗಾರನೂ ಹೌದು. ಪ್ರಾಮಾಣಿಕತೆ ಮೆರೆದ ಈ ಯುವಕನಿಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.