ಸಾಲಬಾಧೆಯಿಂದ ಕಂಗೆಟ್ಟ ರೈತನೋರ್ವ ಆತ್ಮಹತ್ಯೆಗೆ ಶರಣಾಗಿದ್ದು ಆತನ ಕುಟುಂಬವೀಗ ಸಂಕಟಪಡುತ್ತಿದೆ. ಆತ್ಮಹತ್ಯೆಗೆ ನೀಡುವ ಪರಿಹಾರದ ನಿಯಮಾವಳಿಗಳೇ ಇದಕ್ಕೆ ಕಾರಣವಾಗಿದೆ.
ಆನಂದ್ ಎಂ. ಸೌದಿ
ಯಾದಗಿರಿ [ಸೆ.05] : ಯಾದಗಿರಿ ಸಮೀಪದ ನಾಯ್ಕಲ್ ಗ್ರಾಮದ ಪರಮಣ್ಣ ಕೊಂಬಿನ್ ಎಂಬ ರೈತ ಆತ್ಮಹತ್ಯೆಗೆ ಶರಣಾಗಿದ್ದು, ಆತನ ಕುಟುಂಬವೀಗ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ.
ಮಕ್ಕಳಾದ 9 ವರ್ಷದ ತಾಯಪ್ಪ, ಆರು ವರ್ಷದ ಮೋನಿಕಾ ಹಾಗೂ ನಾಲ್ಕು ವರ್ಷದ ಭಾಗ್ಯಳ ಬದುಕು ಕಟ್ಟಲು ಪತ್ನಿ ಪಾರ್ವತಿ ದಿನನಿತ್ಯ ಕೂಲಿನಾಲಿ ಮಾಡಿ ಸಂಸಾರದ ನೊಗ ಸಾಗಿಸುತ್ತಿದ್ದಾರೆ. ಪರಮಣ್ಣ ಆತ್ಮಹತ್ಯೆಯ ನಂತರ, ಇಡೀ ಕುಟುಂಬ ಕಂಗಾಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡ ಪಾರ್ವತಿ, ಮಕ್ಕಳ ಭವಿಷ್ಯದ ಚಿಂತೆಯಲ್ಲಿದ್ದಾರೆ. ಅಲ್ಲಿಯೇ ಇದ್ದ ಬಂದ ದನದ ಕೊಟ್ಟಿಗೆಯಲ್ಲೇ ಮಕ್ಕಳ ಜೊತೆ ವಾಸ ಮಾಡುತ್ತಿದ್ದಾಳೆ.
ತಂದೆ ತಾಯಪ್ಪ ತೀರಕೊಂಡ ನಂತರ, ತಾಯಪ್ಪನ ಹೆಸರಲ್ಲಿ ಹಾಗೂ ಅಣ್ಣ ಮರೆಪ್ಪನ ಹೆಸರಲ್ಲಿದ್ದ ಜಮೀನಲ್ಲಿ ಒಂದಿಷ್ಟು ತನ್ನ ಪಾಲಿಗೆ ಮಾಡಿಕೊಂಡು ಉಳುಮೆ ಮಾಡುತ್ತಿದ್ದ ಪರಮಣ್ಣನಿಗೆ ಆಘಾತ ಮೂಡಿಸಿದ್ದು ತನ್ನ ಕುಟುಂಬಕ್ಕೆ ಆಸರೆಯಾಗಿದ್ದ ಮರೆಪ್ಪನ ಸಾವು
ಅನಾರೋಗ್ಯಪೀಡಿತ ಮರೆಪ್ಪ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದಾಗ, ಇಡೀ ಜಮೀನು ಹಾಗೂ ಅದರ ಮೇಲಿದ್ದ ಸಾಲದ ಹೊರೆಯೂ ಈತನಿಗೆ ವರ್ಗವಾಯಿತು. ಅಣ್ಣ ತೀರಿಕೊಂಡ ನಂತರ ಬ್ಯಾಂಕ್ ಗಳಿಂದ ಸಾಲ ಕಟ್ಟಲು ಒತ್ತಡ ಬಂದು ಆತಂಕಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾದ.
ಇತ್ತ, ಮನೆ ಯಜಮಾನ ಕಳೆದುಕೊಂಡ ನಂತರ, ಕುಟುಂಬದ ಹೊಟ್ಟೆಪಾಡಿಗಾಗಿ ಪತ್ನಿ ಪಾರ್ವತಿ ಕೂಲಿಗೆ ತೆರಳುವ ಅನಿವಾರ್ಯತೆ ಬಂದೊದಗಿತು. ಅವಿಭಕ್ತ ಕುಟುಂಬದ ಸದಸ್ಯನಲ್ಲ ಎನ್ನುವ ಕಾರಣಕ್ಕೆ ಸರ್ಕಾರದ ಪರಿಹಾರ ಪರಮಣ್ಣನಿಗೆ ತಿರಸ್ಕೃತಗೊಂಡಿತ್ತು. ಕುಟುಂಬಕ್ಕೆ ಸರ್ಕಾರದ ಪರಿಹಾರ ತಿರಸ್ಕೃತಗೊಂಡ ಬಗ್ಗೆ ಸಹಾಯಕ ಆಯುಕ್ತರ ನೇತೃತ್ವದ ಕಮೀಟಿ ಷರಾ ಬರೆದಿಟ್ಟಿತ್ತು.
ಜಮೀನು ಅಥವಾ ಆಸ್ತಿ ಇದ್ದವರಿಗೆ ಮಾತ್ರ ಸಾಲ ಕೊಡುವ ಬ್ಯಾಂಕುಗಳು, ಏನೂ ಇಲ್ಲದ ಪರಮಣ್ಣನಿಗೆ ಸಹಜವಾಗಿ ಸಾಲ ನಿರಾಕರಿಸಿ, ಸಹೋದರನ ಹೆಸರಲ್ಲಿ ಸಾಲ ನೀಡಿತ್ತು. ಆದರೆ, ಸರ್ಕಾರದ ನಿಯಮಾವಳಿ ಮಾತ್ರ ಇಡೀ ಕುಟುಂಬಕ್ಕೆ ಸಿಗಬೇಕಾಗಿದ್ದ ಪರಿಹಾರದಿಂದ ವಂಚಿತರನ್ನಾಗಿಸಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕುಟುಂಬಕ್ಕೆ ನೆರವಾಗುವಂತೆ ಹಾಗೂ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಸೇರಿದಂತೆ ಮುಖ್ಯಮಂತ್ರಿ ಕಚೇರಿವರೆಗೆ ಇಡೀ ಕುಟುಂಬ ಅಲೆದಾಡಿದರೂ ಪ್ರಯೋಜನವಾಗಿಲ್ಲ.